SHIVAMOGGA || SHIVAMOGGA
ಎಸ್‌ಐಆರ್ ಕುರಿತು ರಾಹುಲ್ ಗಾಂಧಿ ಅಪಪ್ರಚಾರ ಮಾಡುತ್ತಿದ್ದಾರೆ: ಧನಂಜಯ ಸರ್ಜಿ- Rahul Gandhi is spreading misinformation about SIR: Dhananjay Sarji
ಶಿವಮೊಗ್ಗ: ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದು, ತಮ್ಮ ಪಕ್ಷದ ಲೋಪಗಳನ್ನು ಚುನಾವಣಾ ಆಯೋಗದ ಮೇಲೆ ಹೊರಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಆರೋಪಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ತಮ್ಮನ್ನು ತಾವು ‘ಬೃಹಸ್ಪತಿ’ ಹಾಗೂ ‘ಹೈಡ್ರೋಜನ್ ಬಾಂಬ್’ ಎಂದು ಭಾವಿಸಿಕೊಂಡಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯನ್ನು ಬಿಜೆಪಿ ನಡೆಸುತ್ತಿದೆ ಎಂಬ ರೀತಿಯಲ್ಲಿ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಇದು ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿ ನಡೆಯುವ ಪ್ರಕ್ರಿಯೆಯಾಗಿದ್ದು, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
‘ಮತ ಕಳವು’ ಹಾಗೂ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಜೆಪಿ ಏಜೆಂಟ್ ಎಂಬ ರೀತಿಯಲ್ಲಿ ರಾಹುಲ್ ಗಾಂಧಿ ಆರೋಪಿಸುತ್ತಿದ್ದಾರೆ. ಆದರೆ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚುನಾವಣಾ ಆಯುಕ್ತರಾಗಿದ್ದ ಕೆಲವರಿಗೆ ನಿವೃತ್ತಿಯ ನಂತರ ಉನ್ನತ ಪುರಸ್ಕಾರಗಳು ಹಾಗೂ ಕೆಲವರಿಗೆ ಪ್ರಮುಖ ಹುದ್ದೆಗಳು ದೊರೆತಿದ್ದವು. ಹಾಗಾದರೆ ಆ ಅಧಿಕಾರಿಗಳೆಲ್ಲರೂ ಕಾಂಗ್ರೆಸ್ ಏಜೆಂಟರಾಗಿದ್ದರೇ ಎಂಬುದನ್ನು ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಸರ್ಜಿ ಪ್ರಶ್ನಿಸಿದರು.
ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್ ಮೇಲೂ ನಂಬಿಕೆ ಇಲ್ಲವೇ?
ರಾಹುಲ್ ಗಾಂಧಿಗೆ ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ಚುನಾವಣೆ ಮತ್ತು ಸಂವಿಧಾನದ ಮೇಲೆಯೇ ನಂಬಿಕೆ ಇಲ್ಲದಂತಾಗಿದೆ ಎಂದು ಧನಂಜಯ ಸರ್ಜಿ ಟೀಕಿಸಿದರು.
ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್ ಹಾಗೂ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ದೀರ್ಘಕಾಲ ಅಧಿಕಾರದಲ್ಲಿಲ್ಲ. ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದಾಗಲೆಲ್ಲಾ ಅದರ ಹೊಣೆಯನ್ನು ಚುನಾವಣಾ ವ್ಯವಸ್ಥೆ ಅಥವಾ ಇತರ ಸಂಸ್ಥೆಗಳ ಮೇಲೆ ಹಾಕುವುದು ಸರಿಯಲ್ಲ ಎಂದು ಹೇಳಿದರು.
ಡಿಲೀಷನ್ ಕುರಿತು ಅಪಪ್ರಚಾರ: ಸರ್ಜಿ
ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂಬ ವಿಚಾರದಲ್ಲಿ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಮತದಾರರ ಪಟ್ಟಿಯಿಂದ ಅನರ್ಹರು, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ತೆಗೆದುಹಾಕುವುದು ತಪ್ಪೇ ಎಂಬುದಕ್ಕೆ ರಾಹುಲ್ ಗಾಂಧಿ ಉತ್ತರಿಸಬೇಕು. ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಪರಿಷ್ಕರಿಸುವುದು ಚುನಾವಣಾ ಪ್ರಕ್ರಿಯೆಯ ಭಾಗವಾಗಿದ್ದು, ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ಪ್ರಕ್ರಿಯೆ ನಡೆಯಬೇಕು ಎಂದು ಹೇಳಿದರು.
ಕೇರಳದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆ ಸರಿಯಾಗಿರಲಿಲ್ಲವೇ? ಪಶ್ಚಿಮ ಬಂಗಾಳದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರುಗಳ ಡಿಲೀಷನ್ ನಡೆದಿದ್ದರೂ, ಆ ಕ್ಷೇತ್ರಗಳಲ್ಲಿ ಟಿಎಂಸಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಅಂಶವನ್ನು ರಾಹುಲ್ ಗಾಂಧಿ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಧನಂಜಯ ಸರ್ಜಿ ಹೇಳಿದರು.
ವಿದೇಶಗಳಲ್ಲಿ ಭಾರತದ ಬಗ್ಗೆ ಅಪಪ್ರಚಾರ ಆರೋಪ
ರಾಹುಲ್ ಗಾಂಧಿ ವಿದೇಶಗಳಿಗೆ ತೆರಳಿ ಭಾರತದ ಕುರಿತು ಹಾಗೂ ದೇಶದ ಸಂವಿಧಾನಾತ್ಮಕ ಸಂಸ್ಥೆಗಳ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಧನಂಜಯ ಸರ್ಜಿ ಆರೋಪಿಸಿದರು.
ಚುನಾವಣಾ ಆಯೋಗದಂತಹ ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಜನರಲ್ಲಿ ಅನುಮಾನ ಮೂಡಿಸುವ ರೀತಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ. ಚುನಾವಣಾ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಉಳಿಸುವ ಜವಾಬ್ದಾರಿ ಎಲ್ಲ ರಾಜಕೀಯ ಪಕ್ಷಗಳಿಗೂ ಇದೆ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಸಂವಿಧಾನಾತ್ಮಕ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುವ ರೀತಿಯಲ್ಲಿ ಆರೋಪ ಮಾಡಬಾರದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಹರಿಕೃಷ್ಣ, ಮಾಧ್ಯಮ ಪ್ರಮುಖರಾದ ಚಂದ್ರಶೇಖರ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.
