SUDDILIVE || SHIVAMOGGA
ಝೆನ್ ಜೀ ಗಳನ್ನ ಎತ್ತಿಕಟ್ಟಿ ಮಜಾನೋಡುವವರಿಗೆ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ತಕ್ಕ ಉತ್ತರ-ಶಾಸಕ ಚನ್ನಬಸಪ್ಪ- Hindu Mahasabha's Ganapati Rajabeedi festival is a fitting answer for those who enjoy hanging out with Zenjis - MLA Channabasappa
ಶಿವಮೊಗ್ಗ: ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಹಿಂದೂ ಸಂಘಟನಾ ಮಹಾಮಂಡಳಿಯ ಗಣೇಶೋತ್ಸವದ ರಾಜಬೀದಿ ಉತ್ಸವವು ಯುವಕರ ಸಕಾರಾತ್ಮಕ ಶಕ್ತಿ, ಸಂಘಟನೆಯ ಒಗ್ಗಟ್ಟು ಹಾಗೂ ಸಮಾಜದ ಸಹಭಾಗಿತ್ವಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದಿನ ಯುವಜನತೆ ಯಾವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಶಿವಮೊಗ್ಗದ ಗಣೇಶೋತ್ಸವವನ್ನು ನೋಡಿದಾಗ ಯುವಕರಲ್ಲಿರುವ ಶಕ್ತಿ ಮತ್ತು ಭಾವನೆಗಳು ಯಾವ ರೀತಿಯಲ್ಲಿ ವ್ಯಕ್ತವಾಗುತ್ತಿವೆ ಎಂಬುದು ಗೋಚರಿಸುತ್ತದೆ. ಝೆನ್ ಜೀಗಳನ್ನ ಎತ್ತಿಕಟ್ಟಿ ಮಜಾನೋಡುತ್ತಿದ್ದವರಿಗೆ ಶಿವಮೊಗ್ಗದ ಹಿಂದೂ ಮಹಾಸಭಗಣಪತಿ ರಾಜಬೀದಿ ಉತ್ಸವ ತಕ್ಕ ಉತ್ತರ ಎಂದು ಹೇಳಿದರು.
ಹಿಂದೂ ಸಂಘಟನಾ ಮಹಾಮಂಡಳಿಯ ಗಣೇಶೋತ್ಸವದ ಅಲಂಕಾರದಲ್ಲಿ 2018ರಿಂದ ವಿಶೇಷ ಪರಿಕಲ್ಪನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ಬಾರಿ ಗರುಡ ವಾಹನ ಸೇರಿದಂತೆ ವಿವಿಧ ಅಲಂಕಾರಗಳು ಸಾರ್ವಜನಿಕರ ಗಮನ ಸೆಳೆದಿದ್ದು, ದೇಶ-ವಿದೇಶಗಳಲ್ಲಿರುವವರು ಸಾಮಾಜಿಕ ಜಾಲತಾಣಗಳ ಮೂಲಕ ಮೆರವಣಿಗೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಚನ್ನಬಸಪ್ಪ ಹೇಳಿದರು.
ವಿವಿಧ ಜಿಲ್ಲೆಗಳಿಂದ ಭಕ್ತರ ಆಗಮನ
ಹಿಂದೂ ಸಂಘಟನಾ ಮಹಾಮಂಡಳಿಯ ಗಣೇಶೋತ್ಸವವನ್ನು ವೀಕ್ಷಿಸಲು ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಷ್ಟೇ ಅಲ್ಲದೆ ಭದ್ರಾವತಿ, ದಾವಣಗೆರೆ, ಚಿತ್ರದುರ್ಗ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಿಂದ ಜನರು ಆಗಮಿಸಿದ್ದರು. ಮುಂಬೈನಿಂದಲೂ ಒಂದು ತಂಡ ಶಿವಮೊಗ್ಗಕ್ಕೆ ಬಂದು ಗಣೇಶ ವಿಸರ್ಜನಾ ಕಾರ್ಯಕ್ರಮವನ್ನು ವೀಕ್ಷಿಸಿರುವುದು ವಿಶೇಷ ಎಂದು ಅವರು ಹೇಳಿದರು.
ಅನಂತನ ಚತುರ್ದಶಿಯಂದು ಶಿವಮೊಗ್ಗದ ಮಹಾಗಣಪತಿ ವಿಸರ್ಜನೆಯಾಗುತ್ತದೆ ಎಂಬುದು ರಾಜ್ಯದ ಹಲವು ಭಾಗಗಳ ಜನರಿಗೆ ತಿಳಿದಿದೆ. ಈ ಕಾರಣದಿಂದಲೇ ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಪಕ್ಷಭೇದ ಮರೆತು ಒಗ್ಗಟ್ಟಿನ ಕಾರ್ಯ
ಗಣೇಶೋತ್ಸವದ ಯಶಸ್ಸಿಗೆ ಸರ್ಕಾರ, ವಿವಿಧ ಸಂಘ-ಸಂಸ್ಥೆಗಳು, ಅಲಂಕಾರ ಸಮಿತಿ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಧ್ಯಮ ಸೇರಿದಂತೆ ಹಲವರ ಸಹಕಾರ ಕಾರಣವಾಗಿದೆ ಎಂದು ಶಾಸಕ ಚನ್ನಬಸಪ್ಪ ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಕ್ಷಭೇದ ಮರೆತು ಎಲ್ಲರೂ ಭಾಗವಹಿಸಿದ್ದಾರೆ. ಯಾವುದೇ ರಾಜಕೀಯ ಲೇಪನವಿಲ್ಲದೆ ಎಲ್ಲರೂ ಒಟ್ಟಾಗಿ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಇದು ಉತ್ತಮ ಟೀಮ್‌ವರ್ಕ್‌ಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಲಕ್ಷಾಂತರ ಜನರಿಗೆ ಆಹಾರ, ನೀರಿನ ವ್ಯವಸ್ಥೆ
ಗಣೇಶೋತ್ಸವದ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವುದರಿಂದ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಪ್ರಮುಖವಾಗುತ್ತದೆ. ಈ ಬಾರಿ ವಿವಿಧ ಸಮಾಜಗಳು, ಸಂಘ-ಸಂಸ್ಥೆಗಳು ಹಾಗೂ ನಾಗರಿಕರು ಮುಂದೆ ಬಂದು ಭಕ್ತರಿಗೆ ಊಟ, ತಿಂಡಿ, ಪ್ರಸಾದ, ನೀರು, ಮಜ್ಜಿಗೆ, ಜ್ಯೂಸ್, ಹಣ್ಣು ಹಾಗೂ ಕಾಳು ಸೇರಿದಂತೆ ವಿವಿಧ ರೀತಿಯ ಸೇವೆಗಳನ್ನು ಒದಗಿಸಿದ್ದಾರೆ ಎಂದು ಚನ್ನಬಸಪ್ಪ ಹೇಳಿದರು.
ಯುವಕರು ಮತ್ತು ಯುವತಿಯರು ಕುಟುಂಬ ಸಮೇತರಾಗಿ ಮೆರವಣಿಗೆಯಲ್ಲಿ ಭಾಗವಹಿಸಿರುವುದು ಗಣೇಶೋತ್ಸವದ ವಿಶೇಷತೆಯಾಗಿದೆ ಎಂದರು.
ಪೌರಕಾರ್ಮಿಕರ ಕಾರ್ಯಕ್ಕೆ ಮೆಚ್ಚುಗೆ
ಗಣೇಶೋತ್ಸವದ ಮೆರವಣಿಗೆ ಮುಗಿದ ಬಳಿಕ ರಸ್ತೆಗಳು ಸ್ವಚ್ಛವಾಗಿರುವಂತೆ ನೋಡಿಕೊಂಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಕಾರ್ಯವನ್ನು ಶಾಸಕ ಚನ್ನಬಸಪ್ಪ ವಿಶೇಷವಾಗಿ ಶ್ಲಾಘಿಸಿದರು.
ಹಬ್ಬಗಳ ಸಂದರ್ಭದಲ್ಲಿ ಪೌರಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಾರೆ. ಅದರಲ್ಲೂ ವಿಜಯದಶಮಿ ಮತ್ತು ಗಣೇಶೋತ್ಸವದಂತಹ ದೊಡ್ಡ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಕೆಲಸವಿರುತ್ತದೆ. ಮೆರವಣಿಗೆ ಮುಗಿದ ಬಳಿಕ ರಸ್ತೆಯಲ್ಲಿ ಕಸ ಕಾಣದಂತೆ ಸ್ವಚ್ಛತೆ ಕಾಪಾಡಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು.
ಗಣೇಶೋತ್ಸವದ ಯಶಸ್ಸಿಗೆ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದ ಎಲ್ಲರೂ ಕಾರಣೀಭೂತರು. ಎಲ್ಲರಿಗೂ ಮಂಡಳಿಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಗೋಪಿ ಸರ್ಕಲ್‌ನಲ್ಲಿ ‘ವಂದೇ ಮಾತರಂ’ ಗಾಯನ
ಗೋಪಿ ಸರ್ಕಲ್‌ನಲ್ಲಿ ನಡೆದ ‘ವಂದೇ ಮಾತರಂ’ ಗಾಯನದ ಕುರಿತು ಮಾತನಾಡಿದ ಚನ್ನಬಸಪ್ಪ, ಇದು ಪೂರ್ವನಿಯೋಜಿತವಾಗಿ ಆಯೋಜಿಸಿದ ಕಾರ್ಯಕ್ರಮವಲ್ಲ, ಅಲ್ಲಿದ್ದ ಕಲಾವಿದರು ಮತ್ತು ಯುವಕರ ಭಾವನೆಯಿಂದ ಸ್ವಯಂಪ್ರೇರಿತವಾಗಿ ನಡೆದದ್ದು ಎಂದು ಹೇಳಿದರು.
ಗಣೇಶೋತ್ಸವದ ಸಂದರ್ಭದಲ್ಲಿ ನಾದಸ್ವರ ಮತ್ತು ಸ್ಯಾಕ್ಸೋಫೋನ್ ವಾದನ ಮಾಡುತ್ತಿದ್ದ ಕಲಾವಿದರು ‘ವಂದೇ ಮಾತರಂ’ ನುಡಿಸುವ ಬಗ್ಗೆ ತಮ್ಮೊಂದಿಗೆ ಮಾತನಾಡಿದ್ದರು. ತಮಗೆ ಅನಿಸಿದಂತೆ ನುಡಿಸುವಂತೆ ತಾವು ತಿಳಿಸಿದ್ದಾಗಿ ಹೇಳಿದರು.
ನಂತರ ಸಂಗೀತ ಶಾಲೆಯವರು ಮೈಕ್ ಮೂಲಕ ‘ವಂದೇ ಮಾತರಂ’ ಗಾಯನ ನಡೆಸಿದರು. ಗೋಪಿ ಸರ್ಕಲ್‌ನಲ್ಲಿ ಸಾವಿರಾರು ಜನರು ಒಟ್ಟಾಗಿ ‘ವಂದೇ ಮಾತರಂ’ ಹಾಡಿದರು. ಇದು ತಮ್ಮ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಜನರ ಭಾವನೆಯ ಅಭಿವ್ಯಕ್ತಿಯಾಗಿ ಮೂಡಿಬಂದಿತು ಎಂದು ಚನ್ನಬಸಪ್ಪ ಹೇಳಿದರು.
“ಗಣೇಶೋತ್ಸವ ದೇಶದ ಉತ್ಸವವಾಗಿ ಮೂಡಿಬಂದಿದೆ”
ಗಣೇಶೋತ್ಸವ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲದೆ, ದೇಶದ ಉತ್ಸವದ ರೂಪದಲ್ಲಿಯೂ ಜನರ ಭಾವನೆಗಳ ಅಭಿವ್ಯಕ್ತಿಗೆ ವೇದಿಕೆಯಾಗಿದೆ ಎಂಬ ಅಭಿಪ್ರಾಯವನ್ನು ಶಾಸಕ ಚನ್ನಬಸಪ್ಪ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯೊಂದಿಗೆ ಗಣೇಶೋತ್ಸವಕ್ಕೆ ಐತಿಹಾಸಿಕ ಮಹತ್ವವಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಆ ಹಿನ್ನೆಲೆಯಲ್ಲಿ ‘ವಂದೇ ಮಾತರಂ’ ಗಾಯನ ನಡೆದಿರುವುದು ಜನರ ಸ್ವಯಂಪ್ರೇರಿತ ಭಾವನೆಯ ಅಭಿವ್ಯಕ್ತಿ ಎಂದು ಹೇಳಿದರು.
ಗೋಪಿ ಸರ್ಕಲ್‌ನಲ್ಲಿ ಸಾವಿರಾರು ಜನರು ಒಟ್ಟಾಗಿ ‘ವಂದೇ ಮಾತರಂ’ ಹಾಡಿದ ಕ್ಷಣ ತಮ್ಮಲ್ಲಿ ಭಾವನಾತ್ಮಕ ಅನುಭವ ಮೂಡಿಸಿತು. ಈ ರೀತಿಯ ಕಾರ್ಯಕ್ರಮಕ್ಕೆ ಧ್ವನಿಯಾದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ಒಟ್ಟಾರೆ ಈ ಬಾರಿಯ ಗಣೇಶೋತ್ಸವವು ಸಂಘಟನೆಗಳ ಸಮನ್ವಯ, ಸಾರ್ವಜನಿಕರ ಸಹಕಾರ, ಯುವಕರ ಪಾಲ್ಗೊಳ್ಳುವಿಕೆ, ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಕಾರಣೀಭೂತರಾದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
