ಶಿವಮೊಗ್ಗದಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟ - ಸಚಿವ ಮಧು ಬಂಗಾರಪ್ಪ ವಿರುದ್ಧವೇ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ವಾಗ್ದಾಳಿ-Congress dissent explodes in Shivamogga - Suda President H.S. Sundaresh attacks Minister Madhu Bangarappa
ಶಿವಮೊಗ್ಗ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ತಾರಕಕ್ಕೇರಿದೆ. ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಹೆಚ್.ಎಸ್.ಸುಂದರೇಶ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಅವರ ಆಪ್ತ ಬಳಗದ ವಿರುದ್ಧ ಬಹಿರಂಗವಾಗಿಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಆಪ್ತ ಸಹಾಯಕ ಜಿ.ಡಿ.ಮಂಜುನಾಥ್ ಅವರು ಸೂಡಾ ಕಚೇರಿಗೆ ಬಂದು ಅಧಿಕಾರಿಗಳಿಗೆ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
"25 ಲಕ್ಷ, 5 ಲಕ್ಷ ಹೀಗೆ ಅಧಿಕಾರಿಗಳನ್ನು ರೂಮಿನಲ್ಲಿ ಕೂರಿಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಿಗೆ ತೆರಳಿ ವಸೂಲಿ ಮಾಡುತ್ತಿದ್ದಾರೆ. ಇದು ಸಚಿವರ ಅರಿವಿಗೆ ಬಾರದೇ ನಡೆಯಲು ಸಾಧ್ಯವಿಲ್ಲ," ಎಂದು ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಕವಚನದಲ್ಲಿ ವಾಗ್ದಾಳಿ, ಪಕ್ಷದ ವಿರುದ್ಧವೇ ಅಸಮಾಧಾನ
ಸುಂದರೇಶ್ ಅವರು ತಮ್ಮ ಹೇಳಿಕೆಯಲ್ಲಿ ಅತ್ಯಂತ ಕಟುವಾದ ಶಬ್ದಗಳನ್ನು ಬಳಸಿದ್ದಾರೆ.
1. ಜಿಲ್ಲಾಧ್ಯಕ್ಷರ ನೇಮಕ ವಿವಾದ: ತಮಗೆ ಬೇಕಾದವರನ್ನು ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಕೂರಿಸಲಾಗಿದೆ. ಹಿಂದೆ ಇದ್ದ ಜಿಲ್ಲಾಧ್ಯಕ್ಷ ಒಬ್ಬ ದಡ್ಡ. ಕೆಲವು ಬಿಜೆಪಿ ಇನ್ಫಾರ್ಮರ್‌ಗಳನ್ನು ಕೂಡ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಕಿಡಿಕಾರಿದರು.
2. ಸಚಿವರ ವಿರುದ್ಧ ನೇರ ವಾಗ್ದಾಳಿ: "ಜೆಡಿಎಸ್ ನಿಂದ ಬಂದ ಮಧು ಬಂಗಾರಪ್ಪ ಈಗ ಕಾಂಗ್ರೆಸ್ ಪಕ್ಷವನ್ನು ಆಳ್ವಿಕೆ ಮಾಡುತ್ತಿದ್ದಾರೆ. ಅವರಿಗೆ ಗಂಧ-ಗಾಳಿ ಗೊತ್ತಿಲ್ಲ. ಇಡಿಯಟ್‌ಗಳು ಹಾಗೂ ದಡ್ಡರ ಸಂತೆಯಿಂದ ಕಾಂಗ್ರೆಸ್ ಪಕ್ಷ ತಳಮಟ್ಟಕ್ಕೆ ಹೋಗುತ್ತಿದೆ. ಇಲ್ಲಿ ಪಕ್ಷಕ್ಕಾಗಿ ದುಡಿದವರಿಗೆ ಅವಕಾಶವೇ ಇಲ್ಲ," ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
*3. ಹಿರಿಯ ನಾಯಕರ ಕಡೆಗಣನೆ:* "ಕಾಂಗ್ರೆಸ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ಮಂತ್ರಿ ಮಾಡಿದ್ದಾರೆ. ಜಮೀರ್ ಅಹ್ಮದ್ ಒಳ್ಳೆಯ ನಾಯಕ, ಅವರನ್ನು ಕಡೆಗಣಿಸಬಾರದು. ಕೇವಲ 1000 ಮತ ಗಳಿಸಿದ ನಾಯಕನಿಗಾಗಿ ಜಮೀರ್ ಅವರನ್ನು ಕಡೆಗಣಿಸಲಾಗಿದೆ. ದಿನೇಶ್ ಗುಂಡೂರಾವ್ ಅವರನ್ನೂ ಕಡೆಗಣಿಸಲಾಗುತ್ತಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದರು.
4. ಕಿಮ್ಮನೆ ರತ್ನಾಕರ್ ವಿರುದ್ಧ:"ಕಿಮ್ಮನೆ ರತ್ನಾಕರ್ ಕಳೆದ ಬಾರಿಯೇ ಇದು ಕೊನೆಯ ಚುನಾವಣೆ ಎಂದು ಟಿಕೆಟ್ ಪಡೆದಿದ್ದರು. ಈಗ ಉಲ್ಟಾ ಹೊಡೆದು ಮತ್ತೆ ಟಿಕೆಟ್ ಕೇಳಲು ಮುಂದಾಗಿದ್ದಾರೆ. ಜಿಲ್ಲಾ ಮಂತ್ರಿಗೆ ಬಕೆಟ್ ಹಿಡಿಯಲು ಹೊರಟಿದ್ದಾರೆ," ಎಂದು ಲೇವಡಿ ಮಾಡಿದರು.
40 ವರ್ಷ ದುಡಿದಿದ್ದೇನೆ, ಕಣ್ಣೀರಿಟ್ಟ ಸುಂದರೇಶ್
ಸುದ್ದಿಗೋಷ್ಠಿಯಲ್ಲಿ ಭಾವುಕರಾದ ಸುಂದರೇಶ್, ಕಣ್ಣೀರು ಹಾಕಿದರು."ನಾನು ಕಳೆದ 40 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಕೋಟಿಗಟ್ಟಲೆ ಮನೆಯ ದುಡ್ಡನ್ನು ಪಕ್ಷಕ್ಕಾಗಿ ತಂದು ಹಾಕಿದ್ದೇನೆ. ನಮ್ಮ ಮನೆಯಲ್ಲಿ ನನಗೆ ಮೆಟ್ಟಲ್ಲಿ ಹೊಡೆಯುವುದು ಬಾಕಿ ಇದೆ, ಆ ಮಟ್ಟಿಗೆ ದುಡಿದಿದ್ದೇನೆ. ಈ ಹಿಂದೆ ಬಂಗಾರಪ್ಪ ಅವರು ಏಳು ಬಾರಿ ಪಕ್ಷ ಬಿಟ್ಟಾಗ ಅವರ ವಿರುದ್ಧ ನಾನು ಮಾತನಾಡಿದ್ದೆ. ನಾನು ಪ್ರಾಮಾಣಿಕವಾಗಿ ದುಡಿದಿದ್ದೇನೆ. ಈಗ ನಮ್ಮನ್ನೇ ಕಡೆಗಣಿಸಲಾಗುತ್ತಿದೆ," ಎಂದು ಬೇಸರ ವ್ಯಕ್ತಪಡಿಸಿದರು.
"ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಅವರು ಶಿವಮೊಗ್ಗದವರೆಂದು ಹೇಳಿಕೊಂಡು ಇಲ್ಲಿ ಬಂದು ರಾಜಕೀಯ ಮಾಡಲು ಹೊರಟಿದ್ದಾರೆ. ಅವರ ಛೇಲಾಗಳಿಗೆ ನಿಗಮ ಮಂಡಳಿ ಕೊಡಲಾಗಿದೆ. ನಾನು ಯಾವುದೇ ರೌಡಿಗಳಿಗೆ ಹೆದರುವುದಿಲ್ಲ, ಅವರನ್ನು ಶಿವಮೊಗ್ಗದಿಂದ ಒದ್ದು ಓಡಿಸುತ್ತೇನೆ," ಎಂದು ಗುಡುಗಿದರು.
ಎಚ್ಚರಿಕೆ
ಮುಂದಿನ ಚುನಾವಣೆಯಲ್ಲಿ ಶಿವಮೊಗ್ಗದಿಂದ ತಮಗೆ, ಸಾಗರದಿಂದ ಬೇಳೂರು ಗೋಪಾಲಕೃಷ್ಣ ಅವರಿಗೆ ಮತ್ತು ತೀರ್ಥಹಳ್ಳಿಯಿಂದ ಆರ್.ಎಂ.ಮಂಜುನಾಥಗೌಡ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ ಅವರು,
"ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷ ಅಧೋಗತಿಗೆ ತಲುಪಿದೆ. ಕೆಲ ಈಡಿಯಟ್‌ಗಳಿಂದ ಪಕ್ಷ ಸಂಪೂರ್ಣ ಕೆಳಮಟ್ಟಕ್ಕೆ ಇಳಿದಿದೆ. ಹೀಗೆ ಮುಂದುವರೆದರೆ ಪಕ್ಷ ನಾಶವಾಗಲಿದೆ. ಪಕ್ಷದಲ್ಲಿರುವ ಗೊಂದಲಗಳನ್ನು ಸಿಎಂ ಬಳಿ ಹೇಳುತ್ತೇವೆ. ಒಂದು ತಿಂಗಳು ಕಾಲಾವಕಾಶ ಕೊಡುತ್ತೇವೆ, ಸರಿಯಾಗದಿದ್ದರೆ ಕೆಲ ಕಾಂಗ್ರೆಸ್ ನಾಯಕರು ಪಕ್ಷ ತೊರೆಯುವುದು ನಿಶ್ಚಿತ," ಎಂದು ಎಚ್ಚರಿಕೆ ನೀಡಿದ್ದಾರೆ.ಈ ಹೇಳಿಕೆಗಳು ಶಿವಮೊಗ್ಗ ಕಾಂಗ್ರೆಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
Congress dissent explodes in Shivamogga - Suda President H.S. Sundaresh attacks Minister Madhu Bangarappa
