ಕೂಡಲಿ ಮಠದ 'ಬಂಗಾರದ ಪಾದುಕೆ'-The golden sandals of the Kudali monastery

 SUDDILIVE || SHIVAMOGGA

ಕೂಡಲಿ ಮಠದ ಬಂಗಾರದ ಪಾದುಕೆ-The golden sandals of the Kudali monastery
Koodli, mtha


ಶಿವಮೊಗ್ಗ:
ಜಿಲ್ಲೆಯ ಕೂಡಲಿ ಮಠದಲ್ಲಿದ್ದ ಬಂಗಾರದ ಪಾದುಕೆಗಳು ಕಳ್ಳತನವಾಗಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ವಿಚಾರಣೆಗೆ ಇದೀಗ ತೆರೆ ಬಿದ್ದಿದೆ. ಪಾದುಕೆಗಳು ಕಳ್ಳತನವಾಗಿಲ್ಲ, ಅವು ಶಿವಮೊಗ್ಗದ ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ಕೂಡಲಿ ಮಠದಲ್ಲಿದ್ದ ಬಂಗಾರದ ಪಾದುಕೆಗಳು ಕಾಣೆಯಾಗಿವೆ ಎಂದು ಸುಮಾರು ಎರಡು ವರ್ಷಗಳ ಹಿಂದೆ ದೂರು ನೀಡಲಾಗಿತ್ತು. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಹಾಗೂ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಮಠದ ಹಿರಿಯ ಸ್ವಾಮೀಜಿಗಳಾದ ವಿದ್ಯಾರಣ್ಯ ಭಾರತಿಯವರ ಆರ್ಥಿಕ ವ್ಯವಹಾರಗಳು ಸೇರಿದಂತೆ ವಿವಿಧ ಕಾರಣಗಳಿಂದ ಭಕ್ತರೊಂದಿಗೆ ಉಂಟಾದ ಘರ್ಷಣೆ ಮತ್ತು ಮರ್ಯಾದೆಗೆ ಧಕ್ಕೆಯಾಗದಂತೆ ಪೀಠತ್ಯಾಗ ಮಾಡಲು ಒಪ್ಪಿಕೊಂಡಿದ್ದರು ಎಂಬ ಹಿನ್ನೆಲೆಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಂತರ ಮಠದ ಭಕ್ತರು ಆರ್‌ಎಸ್‌ಎಸ್ ಸಹಾಯ ಪಡೆದು ಯೋಗ್ಯ ಉತ್ತರಾಧಿಕಾರಿಗಳನ್ನು ಹುಡುಕಿ ಅವರಿಗೆ ದೀಕ್ಷೆ ಕೊಡಿಸಿದ್ದರು. ಆದರೆ ದೀಕ್ಷೆಯ ಸಂದರ್ಭದಲ್ಲಿ ಪೀಠತ್ಯಾಗ ಮಾಡದೇ ಹೆಬ್ಬಳ್ಳಿ ಅವಧೂತರ ಹಿಂದೆ ಬಚ್ಚಿಟ್ಟುಕೊಂಡು ದೊಣ್ಣೆಯಿಂದ ತಪ್ಪಿಸಿಕೊಂಡರು ಎಂಬ ಅಂಶವೂ ದಾಖಲಾಗಿದೆ.

ಇದಾದ ಬಳಿಕ ಒತ್ತಡದ ಪರಿಸ್ಥಿತಿಯಲ್ಲಿ ಸನ್ಯಾಸ ದೀಕ್ಷೆ ನೀಡಿದ್ದವರು ಕೂಡಲೆಯನ್ನು ತ್ಯಜಿಸಲು ಕಾರಣಗಳನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ಬಂಗಾರದ ಪಾದುಕೆ ಕಳ್ಳತನದ ಆರೋಪ ಕೇಳಿಬಂದಿತ್ತು. ಮಠದ ಭಂಡಾರದಲ್ಲಿದ್ದ ಬಂಗಾರದ ಪಾದುಕೆಗಳು ಕಳ್ಳತನವಾಗಿವೆ ಎಂದು ದೂರು ನೀಡಲಾಗಿದ್ದು, ಈ ಕುರಿತು ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಆರೋಪ-ಪ್ರತ್ಯಾರೋಪಗಳು ಹರಿದಾಡಿದ್ದವು.

ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದು ಬಂದಿದ್ದ ಕಿರಿಯ ಸ್ವಾಮೀಜಿಗಳು ಹಾಗೂ ಮಠದ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಅಯ್ಯರ್ ಅವರೇ ಪಾದುಕೆಗಳನ್ನು ಕದ್ದಿದ್ದಾರೆ ಎಂಬ ರೀತಿಯ ಅಪಪ್ರಚಾರವೂ ನಡೆದಿತ್ತು. ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ಗೂಗಲ್ ಲೆನ್ಸ್ ಮೂಲಕ ಅನುವಾದಿಸಿ ತಮಿಳುನಾಡಿನಲ್ಲಿಯೂ ಹರಿಬಿಡಲಾಗಿತ್ತು ಎಂದು ವರದಿ ಹೇಳುತ್ತದೆ. ಇದರಿಂದ ಕೂಡಲಿ ಮಠ ಹಾಗೂ ಕಿರಿಯ ಸ್ವಾಮೀಜಿಗಳ ಕುರಿತು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳನ್ನು ಮಾಡಿದ್ದರು.

ಆದರೆ ಸತ್ಯಾಂಶ ಇದೀಗ ಬಹಿರಂಗಗೊಂಡಿದೆ. ಸುಮಾರು ಎರಡು ವರ್ಷಗಳ ಕಾಲ ಈ ಕುರಿತು ವಿಚಾರಣೆ ನಡೆಸಿದ ಹೊಳೆಹೊನ್ನೂರು ಪೊಲೀಸರು, ಬಂಗಾರದ ಪಾದುಕೆಗಳು ಶಿವಮೊಗ್ಗದ ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿವೆ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಪಾದುಕೆಗಳು ಮಠದ ಖಾತೆಗೆ ಸಂಬಂಧಿಸಿದ ಬ್ಯಾಂಕ್ ಲಾಕರ್‌ನಲ್ಲಿಯೇ ಇದ್ದವು ಎಂಬ ಮಾಹಿತಿಯೂ ವರದಿಯಲ್ಲಿ ದಾಖಲಾಗಿದೆ.

ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಯದಂತೆ ಮುಚ್ಚಿಟ್ಟುಕೊಂಡು, ಕೇವಲ ಕಿರಿಯ ಸ್ವಾಮೀಜಿಗಳ ವಿರುದ್ಧ ಆರೋಪ ಹೊರಿಸಿ ಅವರನ್ನು ಮಠದಿಂದ ಓಡಿಸುವ ಉದ್ದೇಶದಿಂದ ದೂರು ನೀಡಲಾಗಿತ್ತು. ಇದರ ಆಧಾರದ ಮೇಲೆ ಅಪಪ್ರಚಾರ ನಡೆಸಲಾಗುತ್ತಿತ್ತು ಎಂಬ ಅಂಶವೂ ಪೊಲೀಸರ ಬಿ-ರಿಪೋರ್ಟ್‌ನಲ್ಲಿ ಹೊರಬಿದ್ದಿದೆ.

ಹೀಗಾಗಿ ಕೂಡಲಿ ಮಠದ ಬಂಗಾರದ ಪಾದುಕೆ ಕಳ್ಳತನವಾಗಿದೆ ಎಂಬ ಆರೋಪಕ್ಕೆ ಯಾವುದೇ ಕಳ್ಳತನ ನಡೆದಿಲ್ಲ ಎಂಬ ಪೊಲೀಸರ ತನಿಖಾ ವರದಿ ಸ್ಪಷ್ಟನೆ ನೀಡಿದೆ. ಪ್ರಕರಣದ ತನಿಖೆಯ ಬಳಿಕ ಬಂಗಾರದ ಪಾದುಕೆಗಳು ಸುರಕ್ಷಿತವಾಗಿರುವುದು ದೃಢಪಟ್ಟಿದ್ದು, ಈ ಮೂಲಕ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ವಿವಾದಕ್ಕೆ ಅಂತ್ಯ ಕಂಡಂತಾಗಿದೆ.

The golden sandals of the Kudali monastery

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close