ಕಾಂಗ್ರೆಸ್ ಸೋಲಿಗೆ ಜ್ಞಾನೇಶ್ ಕುಮಾರ್ ಕಾರಣರಲ್ಲ, ರಾಹುಲ್ ಗಾಂಧಿ ಕಾರಣ: ಸುರೇಶ್ ಕುಮಾರ್- Gyanesh Kumar is not responsible for Congress' defeat, it is Rahul Gandhi: Suresh Kumar

 SUDDILIVE || SHIVAMOGGA

ಕಾಂಗ್ರೆಸ್ ಸೋಲಿಗೆ ಜ್ಞಾನೇಶ್ ಕುಮಾರ್ ಕಾರಣರಲ್ಲ, ರಾಹುಲ್ ಗಾಂಧಿ ಕಾರಣ: ಸುರೇಶ್ ಕುಮಾರ್- Gyanesh Kumar is not responsible for Congress' defeat, it is Rahul Gandhi: Suresh Kumar  
Suresh, kumar


ಶಿವಮೊಗ್ಗ:
ಕಾಂಗ್ರೆಸ್ ಪಕ್ಷದ ಚುನಾವಣಾ ಸೋಲಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕಾರಣರಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಾಯಕತ್ವವೇ ಸೋಲಿನ ಸರಣಿಗೆ ಕಾರಣ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಅದರ ನಾಯಕರಾದ ರಾಹುಲ್ ಗಾಂಧಿ ಅವರು ತಮ್ಮ ವಿಚಾರಗಳನ್ನು ಸಂಸತ್ತಿನ ಒಳಗೆ ಪ್ರಸ್ತಾಪಿಸುವ ಬದಲು ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

“ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುವುದಿಲ್ಲ. ಸಂಸತ್ತಿನಲ್ಲಿ ಮಾತನಾಡುವುದಿಲ್ಲ, ಚರ್ಚೆ ಮಾಡುವುದಿಲ್ಲ ಅಥವಾ ಚರ್ಚೆಗೆ ಉತ್ತರ ಕೊಡುವಾಗ ನಿಂತುಕೊಳ್ಳುವುದಿಲ್ಲ. ಈ ರೀತಿ ಬೀದಿಗೆ ಬಂದು ಗಲಾಟೆ ಮಾಡುತ್ತಾರೆ” ಎಂದು ಸುರೇಶ್ ಕುಮಾರ್ ಹೇಳಿದರು.

ಸೋಲಿಗೆ ಚುನಾವಣಾ ಆಯೋಗ ಕಾರಣವಲ್ಲ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಜ್ಞಾನೇಶ್ ಕುಮಾರ್ ಅಧಿಕಾರಕ್ಕೆ ಬರುವುದಕ್ಕೂ ಮುನ್ನವೇ ಕಾಂಗ್ರೆಸ್ ಪಕ್ಷದ ಸೋಲಿನ ಸರಣಿ ಆರಂಭವಾಗಿತ್ತು ಎಂದು ಹೇಳಿದರು.

“ತಮ್ಮ ಸೋಲಿಗೆ ಒಂದು ಕಾರಣ ಬೇಕಾಗಿದೆ. ಅದಕ್ಕಾಗಿ ಇವಿಎಂ ವಿರುದ್ಧ ಗಲಾಟೆ ಮಾಡುತ್ತಾರೆ, ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತಾರೆ. ಜ್ಞಾನೇಶ್ ಕುಮಾರ್ ಬರುವುದಕ್ಕಿಂತ ಮುಂಚೆಯೇ ಕಾಂಗ್ರೆಸ್ ಸೋಲಿನ ಸರಣಿ ಆರಂಭವಾಗಿತ್ತು. ಹೀಗಾಗಿ ಕಾಂಗ್ರೆಸ್ ಸೋಲಿಗೆ ಜ್ಞಾನೇಶ್ ಕುಮಾರ್ ಕಾರಣರಲ್ಲ” ಎಂದು ಅವರು ಹೇಳಿದರು.

ಚುನಾವಣೆ, ಇವಿಎಂ, ಆಪರೇಷನ್ ಸಿಂಧೂರ್ ಹಾಗೂ ಲಸಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಕಾಂಗ್ರೆಸ್ ಅನುಮಾನಗಳನ್ನು ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿದ ಅವರು, ದೇಶದ ವ್ಯವಸ್ಥೆಯ ಬಗ್ಗೆ ಜನರಲ್ಲಿ ನಂಬಿಕೆ ಮೂಡಿಸುವ ಬದಲು ಅಪನಂಬಿಕೆ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದರು.

ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ಅಗತ್ಯ

ರಾಜ್ಯದಲ್ಲಿನ ಶಿಕ್ಷಣ ವ್ಯವಸ್ಥೆಯ ಕುರಿತು ಮಾತನಾಡಿದ ಸುರೇಶ್ ಕುಮಾರ್, ಯಾವುದೇ ಸರ್ಕಾರವಿದ್ದರೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.


“ಇಂದು ಆರೋಗ್ಯ ಮತ್ತು ಶಿಕ್ಷಣಕ್ಕೆ ಸಿಗಬೇಕಾದ ಆದ್ಯತೆ ಸಿಗುತ್ತಿಲ್ಲ ಎಂಬುದು ಎಲ್ಲರ ಕೊರಗು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಕಳಪೆ ಗುಣಮಟ್ಟದ ಶೂಗಳನ್ನು ನೀಡಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ” ಎಂದು ಹೇಳಿದರು.

ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ಆಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸಮಸ್ಯೆಗಳನ್ನು ಪಕ್ಷಾತೀತವಾಗಿ ಗಂಭೀರವಾಗಿ ಚರ್ಚಿಸಿ ಪರಿಹರಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸೈಕ್ಲಿಂಗ್ ಜೀವನದ ಭಾಗವಾಗಲಿ

ಶಿವಮೊಗ್ಗದಲ್ಲಿ ಪಕ್ಷದ ಕರೆಯಂತೆ ನಡೆಯುತ್ತಿರುವ ಒಂದು ತಿಂಗಳ ‘ಸೇವಾ ಸಂಕಲ್ಪ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸೈಕ್ಲಿಂಗ್ ಕಾರ್ಯಕ್ರಮದಲ್ಲಿ ಸುರೇಶ್ ಕುಮಾರ್ ಭಾಗವಹಿಸಿದರು.

ಈ ಕುರಿತು ಮಾತನಾಡಿದ ಅವರು, ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ, ಉದ್ಘಾಟನೆ ಮಾಡಲು ಬರುವುದಿಲ್ಲ, ಬದಲಿಗೆ ಸೈಕಲ್ ತುಳಿಯಲು ಬರುತ್ತೇನೆ ಎಂದು ಹೇಳಿದ್ದಾಗಿ ತಿಳಿಸಿದರು.

“ಸೈಕ್ಲಿಂಗ್ ಕೇವಲ ಒಂದು ಕಾರ್ಯಕ್ರಮವಾಗಬಾರದು. ಅದು ನಮ್ಮ ಜೀವನದ ಒಂದು ಭಾಗವಾಗಬೇಕು. ಶಿವಮೊಗ್ಗ ನಗರ ಸೈಕ್ಲಿಂಗ್‌ಗೆ ಬಹಳ ಯೋಗ್ಯವಾದ ನಗರ. ಇಲ್ಲಿನ ರಸ್ತೆಗಳು ಮತ್ತು ಭೂಪ್ರದೇಶ ಸೈಕ್ಲಿಂಗ್‌ಗೆ ಅನುಕೂಲಕರವಾಗಿವೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳು ಸೇರಿದಂತೆ ವಿವಿಧ ವಯೋಮಾನದವರು ಉತ್ಸಾಹದಿಂದ ಭಾಗವಹಿಸಿರುವುದು ಸಂತೋಷ ತಂದಿದೆ ಎಂದ ಅವರು, ಈ ಹಿಂದೆ ಮೈಸೂರು, ಚನ್ನಪಟ್ಟಣ ಹಾಗೂ ವಿಜಯಪುರ ಸೇರಿದಂತೆ ವಿವಿಧ ನಗರಗಳಲ್ಲಿ ಸೈಕ್ಲಿಂಗ್ ಮಾಡಿರುವುದಾಗಿ ತಿಳಿಸಿದರು.

“76 ವರ್ಷದ ಯುವಕನಿಂದ ಹಿಡಿದು ಆರನೇ ತರಗತಿ ಓದುತ್ತಿರುವ ಬಾಲಕನವರೆಗೂ ವಿವಿಧ ವಯೋಮಾನದವರು ಸೈಕ್ಲಿಂಗ್‌ನಲ್ಲಿ ಭಾಗವಹಿಸಿರುವುದು ವಿಶೇಷ. ಇಂತಹ ಕಾರ್ಯಕ್ರಮಗಳು ಆರೋಗ್ಯಕರ ಜೀವನಶೈಲಿಗೆ ಪ್ರೇರಣೆ ನೀಡಬೇಕು” ಎಂದು ಸುರೇಶ್ ಕುಮಾರ್ ಹೇಳಿದರು.

ಸೈಕಲ್ ಜಾಥವು ವಿನೋಬನಗರದ ಪೊಲೀಸ್ ಚೌಕಿಯಿಂದ ಆರಂಭವಾಗಿ ಕೋಟೆ ಭೀಮೇಶ್ವರ ದೇವಸ್ಥಾನದ ಮುಂಭಾಗದ ಬಯಲು ರಂಗಮಂದಿರದಲ್ಲಿ ಕೊನೆಗೊಂಡಿತು. ಖುದ್ದು ಮಾಜಿ ಸಚಿವ ಸುರೇಶ್ ಕುಮಾರ್ ಅವರೆ ಬಿಜೆಪಿ ಕಾರ್ಯಕರ್ತರ ಜೊತೆ ಸೈಕಲ್ ತುಳಿದುಕೊಂಡು ಮೂರು-ನಾಲ್ಕು ಕಿಲೋಮೀಟರ್ ದೂರ ಕ್ರಮಸಿರುವುದು ಪ್ರೇರಣೆಯಾಗಿದೆ. 

Gyanesh Kumar is not responsible for Congress' defeat, it is Rahul Gandhi: Suresh Kumar  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close