ಕೆರೆ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೊಲೀಸರು ರಕ್ಷಣೆ-Police rescue engineering student who attempted suicide near lake

SUDDILIVE || SHIVAMOGGA

ಕೆರೆ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೊಲೀಸರು ರಕ್ಷಣೆ-Police rescue engineering student who attempted suicide near lake

Engineering, student

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಯವರಿಗೆ ದೂರವಾಣಿ ಮೂಲಕ ತಿಳಿಸಿ ಮನೆಯಿಂದ ಹೊರಟಿದ್ದ 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೊಲೀಸರು ಹಾಗೂ ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಸುರಕ್ಷಿತವಾಗಿ ರಕ್ಷಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಕೆಂಚಪ್ಪ ಲೇಔಟ್ ನಿವಾಸಿಯಾಗಿರುವ ವಿದ್ಯಾರ್ಥಿಯೊಬ್ಬರು, ತಾನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿರುವುದಾಗಿ ಹಾಗೂ ತನ್ನನ್ನು ಕ್ಷಮಿಸುವಂತೆ ಮನೆಯವರಿಗೆ ಫೋನ್ ಮೂಲಕ ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ಕುಟುಂಬದವರು ತಕ್ಷಣವೇ ವಿನೋಬನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂತೋಷ್ ಅವರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಕೂಡಲೇ ವಿನೋಬನಗರ ಪೊಲೀಸ್ ಠಾಣೆಯ ಸಿಬ್ಬಂದಿ ಯೋಗೇಶ್ ಹೆಚ್‌ಸಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಗುರುರಾಜ್ ಹೆಚ್‌ಸಿ ಅವರ ಸಹಕಾರದೊಂದಿಗೆ ವಿದ್ಯಾರ್ಥಿಯ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ವೇಳೆ ವಿದ್ಯಾರ್ಥಿಯು ಸೋಮಿನಕೊಪ್ಪದ ಕೆರೆ ಸಮೀಪ ಇರುವುದಾಗಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸ್ ಅಧಿಕಾರಿಗಳು, ಸೋಮಿನಕೊಪ್ಪದ ಗ್ರಾಮಸ್ಥರ ಸಹಕಾರದೊಂದಿಗೆ ವಿದ್ಯಾರ್ಥಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಳಿಕ ವಿದ್ಯಾರ್ಥಿಯನ್ನು ಆತನ ತಂದೆಯವರೊಂದಿಗೆ ಕಳುಹಿಸಿಕೊಡಲಾಗಿದೆ.

ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ವಿದ್ಯಾರ್ಥಿಯ ಜೀವ ರಕ್ಷಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕರ್ತವ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಐಪಿಎಸ್ ಅವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

ಸಂಕಷ್ಟದಲ್ಲಿರುವವರು ಒಂಟಿಯಾಗಿರದೆ ಕುಟುಂಬದವರು, ಸ್ನೇಹಿತರು ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯುವುದು ಅತ್ಯಂತ ಮುಖ್ಯವಾಗಿದೆ.

Police rescue engineering student who attempted suicide near lake

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close