ಯೋಧರಿಬ್ಬರಿಗೆ ತವರಿನ ಊರಿನಲ್ಲಿ ಅದ್ಧೂರಿ ಸ್ವಾಗತ-Two soldiers receive grand welcome in their hometown


SUDDILIVE || SHIVAMOGGA

ಯೋಧರಿಬ್ಬರಿಗೆ ತವರಿನ ಊರಿನಲ್ಲಿ ಅದ್ಧೂರಿ ಸ್ವಾಗತ-Two soldiers receive grand welcome in their hometown   

Sena, seva

ಶಿವಮೊಗ್ಗ: ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಇಬ್ಬರು ಯೋಧರು ತವರಿಗೆ ಮರಳಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಮಾಜಿ ಯೋಧರು ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದರು.

ಬೆಂಗಳೂರು–ತಾಳಗುಪ್ಪ ರೈಲಿನಲ್ಲಿ ಶುಕ್ರವಾರ ರಾತ್ರಿ ಶಿವಮೊಗ್ಗಕ್ಕೆ ಆಗಮಿಸಿದ ಹವಾಲ್ದಾರ್‌ ವಿಜಯ್‌ ಕುಮಾರ್‌ ಹಾಗೂ ಶಿವಾಜಿನಾಯ್ಕ್‌ ಅವರನ್ನು ರೈಲ್ವೆ ನಿಲ್ದಾಣದಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಬರಮಾಡಿಕೊಂಡರು. ಯೋಧರು ರೈಲಿನಿಂದ ಇಳಿಯುತ್ತಿದ್ದಂತೆ ಘೋಷಣೆಗಳನ್ನು ಕೂಗಿ, ಡೊಳ್ಳು ಬಾರಿಸಿ, ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹವಾಲ್ದಾರ್‌ ವಿಜಯ್‌ ಕುಮಾರ್‌, ಸೇನೆಗೆ ಆಯ್ಕೆಯಾದ ಬಳಿಕ ಭೋಪಾಲ್‌ನಲ್ಲಿ ತರಬೇತಿ ಪೂರ್ಣಗೊಳಿಸಿದ್ದು, ಬಳಿಕ ಪಂಜಾಬ್‌, ಅಸ್ಸಾಂನ ಗುವಾಹಟಿ, ಉತ್ತರ ಪ್ರದೇಶದ ಬಬೀನಾ, ಜಮ್ಮುವಿನ ಮೆಂಧರ್‌ ಸೆಕ್ಟರ್‌, ದೆಹಲಿ, ಅರುಣಾಚಲ ಪ್ರದೇಶ, ಜಾನ್ಸಿ ಹಾಗೂ ಜಮ್ಮುವಿನ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿರುವುದಾಗಿ ತಿಳಿಸಿದರು.

ಆಪರೇಷನ್‌ ಸಿಂಧೂರ್‌ ಸಂದರ್ಭದಲ್ಲಿ ಜಮ್ಮುವಿನ ಕಥುವಾ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದೆ. ಅಲ್ಲಿ ಡ್ರೋನ್‌ ಕಾರ್ಯಾಚರಣೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದೆ. ಒಟ್ಟು 24 ವರ್ಷಗಳ ಸೇವೆ ಪೂರ್ಣಗೊಳಿಸಿ ಹವಾಲ್ದಾರ್‌ ಹುದ್ದೆಯಿಂದ ನಿವೃತ್ತಿಯಾಗಿದ್ದೇನೆ ಎಂದು ವಿಜಯ್‌ ಕುಮಾರ್‌ ತಿಳಿಸಿದರು.

ನ್ಯಾಮತಿ ತಾಲೂಕಿನ ಮೂಲದ ಶಿವಾಜಿನಾಯ್ಕ್‌ ಅವರು ಶಿವಮೊಗ್ಗದಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ್ದರು. 2002ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದಲ್ಲಿ ನಡೆದ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ, ಮಂಗಳೂರಿನಲ್ಲಿ ನೇಮಕಾತಿ ಪೂರ್ಣಗೊಳಿಸಿ ಸಿಕಂದರಾಬಾದ್‌ನಲ್ಲಿ ಎರಡು ವರ್ಷ ತರಬೇತಿ ಪಡೆದಿದ್ದರು.

ಬಳಿಕ ಪಂಜಾಬ್‌, ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್‌ (RR) ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದು, ಬಾಂಬೆ, ರಾಜಸ್ಥಾನದಲ್ಲಿ ನಡೆದ ರಷ್ಯನ್‌ ಸಮರಾಭ್ಯಾಸ, ಉತ್ತರ ಪ್ರದೇಶ, ಪಠಾಣ್‌ಕೋಟ್‌ ಸೇರಿದಂತೆ ವಿವಿಧ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕೊನೆಯದಾಗಿ ಗುವಾಹಟಿ ಹಾಗೂ ಅಸ್ಸಾಂ ಭಾಗದಲ್ಲಿ ಸೇವೆ ಸಲ್ಲಿಸಿ, ನಾನ್‌-ಕಮಿಷನ್ಡ್‌ ಆಫೀಸರ್‌ ಆಗಿ 24 ವರ್ಷಗಳ ಸೇವೆ ಪೂರ್ಣಗೊಳಿಸಿ ನಿವೃತ್ತರಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ.ಮಧುಸೂದನ್‌, “ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ಇಬ್ಬರು ಯೋಧರು ತವರಿಗೆ ಮರಳಿದ್ದಾರೆ. ಯೋಧರು ನಮ್ಮ ಹೆಮ್ಮೆ. ಇವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ” ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರಭಕ್ತರ ಬಳಗದ ಕಾಂತೇಶ್‌ ಈಶ್ವರಪ್ಪ, ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಶಿವಕುಮಾರ್‌ ಡಿ.ಎಸ್., ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌, ಕಾರ್ಯದರ್ಶಿ ನಾಗರಾಜ್‌ ನೇರಿಗೆ, ಹಿರಿಯ ಪತ್ರಕರ್ತರಾದ ಜೇಸುದಾಸ್‌, ಗಣೇಶ್‌ ನಾವುಡ, ಗಂಗಾಧರ್‌ ಎ., ಶಿವಮೊಗ್ಗ ನಾಗರಾಜ್‌, ರಘು, ನವೀನ್‌ ಪುರದಾಳ್‌, ಸಾವಂತ್‌, ಕೊಟ್ರೇಶ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Two soldiers receive grand welcome in their hometown   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close