SUDDILIVE || SHIVAMOGGA
ಗಾಂಧಿ ಪಾರ್ಕ್‌ಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ದಿಢೀರ್ ಭೇಟಿ -Shivamogga DC Prabhulinga Kavalikatti Visits Gandhi Park
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಶನಿವಾರ ಸಂಜೆ ನಗರದ ಹೃದಯ ಭಾಗದಲ್ಲಿರುವ ಗಾಂಧಿ ಪಾರ್ಕ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ನವೆಂಬರ್ 8, 2025 ರಂದು ಗಾಂಧಿ ಪಾರ್ಕ್‌ನ ಪ್ರಮುಖ ಆಕರ್ಷಣೆಯಾಗಿರುವ ಮಕ್ಕಳ ರೈಲಿನ ಇಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆಯಿಂದಾಗಿ ಮಕ್ಕಳ ರೈಲು ಸೇವೆಯನ್ನು ಸುಮಾರು ಮೂರು ತಿಂಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಬಳಿಕ ದುರಸ್ತಿ ಕಾರ್ಯ ಕೈಗೊಂಡು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಮಕ್ಕಳ ರೈಲು ಪುನರಾರಂಭಗೊಂಡಿತ್ತು.
ಇದರ ಜೊತೆಗೆ ಗಾಂಧಿ ಪಾರ್ಕ್‌ನ ಸಮಗ್ರ ಅಭಿವೃದ್ಧಿಗಾಗಿ ಸುಮಾರು 1.09 ಕೋಟಿ ರೂ. ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಪಾರ್ಕ್‌ನ ಸೌಂದರ್ಯೀಕರಣ, ಆಟಿಕೆಗಳ ದುರಸ್ತಿ, ಹಸಿರೀಕರಣ ಹಾಗೂ ಮಕ್ಕಳ ಜ್ಞಾನಾಭಿವೃದ್ಧಿಗಾಗಿ ಸೈನ್ಸ್ ಪಾರ್ಕ್ ಅನ್ನು ಸಹ ಆಧುನಿಕವಾಗಿ ಅಭಿವೃದ್ಧಿಪಡಿಸಲಾಗಿದೆ.
ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ನಂತರ ಜಿಲ್ಲಾಧಿಕಾರಿಗಳು ಖುದ್ದು ಪಾರ್ಕ್‌ಗೆ ಭೇಟಿ ನೀಡಿ ಕಾಮಗಾರಿಗಳ ಗುಣಮಟ್ಟ, ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಈ ಭೇಟಿಗೆ ಹೆಚ್ಚಿನ ಮಹತ್ವ ಬಂದಿದೆ.
ಆದರೆ ಜಿಲ್ಲಾಧಿಕಾರಿಗಳ ಈ ದಿಢೀರ್ ಭೇಟಿಯ ಹಿಂದಿನ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೇವಲ ಗಾಂಧಿ ಪಾರ್ಕ್‌ಗೆ ಮಾತ್ರವಲ್ಲದೆ, ನಗರದ ಇತರೆ ಸಾರ್ವಜನಿಕ ಸ್ಥಳಗಳಾದ ಜಿಲ್ಲಾ ಆಸ್ಪತ್ರೆ, ಸರ್ಕಾರಿ ಹಾಸ್ಟೆಲ್‌ಗಳು, ವಸತಿ ನಿಲಯಗಳಿಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಈ ಭೇಟಿಯ ಕುರಿತು ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ.
Shivamogga DC Prabhulinga Kavalikatti Visits Gandhi Park
