ಜಯ ಕರ್ನಾಟಕ ಸಂಘಟನೆಯ ಹೋರಾಟಕ್ಕೆ ಮೊದಲ ಯಶಸ್ಸು: ದುರ್ಗಾಂಬಾ ಮೋಟಾರ್ಸ್ ಸಿಬ್ಬಂದಿ ವಿರುದ್ಧ ಇಲಾಖಾ ಕ್ರಮ- First success for Jaya Karnataka organization's struggle: Departmental action against Durgamba Motors staff

 SUDDILIVE || SHIVAMOGGA

ಜಯ ಕರ್ನಾಟಕ ಸಂಘಟನೆಯ ಹೋರಾಟಕ್ಕೆ ಮೊದಲ ಯಶಸ್ಸು: ದುರ್ಗಾಂಬಾ ಮೋಟಾರ್ಸ್ ಸಿಬ್ಬಂದಿ ವಿರುದ್ಧ ಇಲಾಖಾ ಕ್ರಮ- First success for Jaya Karnataka organization's struggle: Departmental action against Durgamba Motors staff   



ತೀರ್ಥಹಳ್ಳಿ: ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ದುರ್ಗಾಂಬಾ ಮೋಟಾರ್ಸ್ ಬಸ್‌ನ ಚಾಲಕರು, ನಿರ್ವಾಹಕರು ಹಾಗೂ ಏಜೆಂಟರ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ಜಯ ಕರ್ನಾಟಕ ಸಂಘಟನೆಯ ತೀರ್ಥಹಳ್ಳಿ ತಾಲ್ಲೂಕು ಘಟಕ ತಿಳಿಸಿದೆ.

ಜಯ ಕರ್ನಾಟಕ ಸಂಘಟನೆಯ ತೀರ್ಥಹಳ್ಳಿ ತಾಲ್ಲೂಕು ಅಧ್ಯಕ್ಷ ಕುರುವಳ್ಳಿ ನಾಗರಾಜ್ ಅವರ ನೇತೃತ್ವದಲ್ಲಿ ಪ್ರಯಾಣಿಕರ ಸಮಸ್ಯೆಗಳ ವಿರುದ್ಧ ಅಕ್ಟೋಬರ್ 19ರಂದು ಹೋರಾಟಕ್ಕೆ ಕರೆ ನೀಡಲಾಗಿತ್ತು. ಆದರೆ, ಹೋರಾಟ ನಡೆಯುವ ಮುನ್ನವೇ ಶಿವಮೊಗ್ಗದಿಂದ ರಾತ್ರಿ 10 ಗಂಟೆಗೆ ಹೊರಡುವ ದುರ್ಗಾಂಬಾ ಮೋಟಾರ್ಸ್ ಬಸ್‌ನ ಸಿಬ್ಬಂದಿ ವಿರುದ್ಧ ಇಲಾಖೆಯ ನಿಯಮಾನುಸಾರ ಕ್ರಮ ಕೈಗೊಂಡಿರುವುದು ಸಂಘಟನೆಯ ಹೋರಾಟಕ್ಕೆ ದೊರೆತ ಮೊದಲ ಯಶಸ್ಸು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದನೆ

ರಾತ್ರಿ ವೇಳೆ ಪ್ರಯಾಣಿಸುವ ವಿದ್ಯಾರ್ಥಿಗಳು, ರೈತರು, ಹಿರಿಯ ನಾಗರಿಕರು, ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರಿಗೆ ಬಸ್ ಸೇವೆಯಲ್ಲಿ ಎದುರಾಗುತ್ತಿದ್ದ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಘಟನೆ ಹೋರಾಟಕ್ಕೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮುರುಗೇಶ್ ಬಿ. ಶಿರೋಳ್ಕರ್ ಅವರ ನೇತೃತ್ವದಲ್ಲಿ ಕೈಗೊಂಡಿರುವ ಕ್ರಮವು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಮಹತ್ವದ ಬೆಳವಣಿಗೆಯಾಗಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ ದೊರೆಯಬೇಕು. ನಿಗದಿತ ನಿಲ್ದಾಣಗಳಲ್ಲಿ ಬಸ್‌ಗಳು ಕಡ್ಡಾಯವಾಗಿ ನಿಲ್ಲಿಸಬೇಕು ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ.

ಜನಪರ ಹೋರಾಟ ಮುಂದುವರಿಕೆ

ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಿ, ಜನರ ಹಿತದೃಷ್ಟಿಯಿಂದ ಹೋರಾಟ ನಡೆಸುವುದು ಜಯ ಕರ್ನಾಟಕ ಸಂಘಟನೆಯ ಉದ್ದೇಶವಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾರಿಗೆ ಸೇವೆಗಳನ್ನು ಸುಧಾರಿಸಲು ಸಂಘಟನೆ ಮುಂದೆಯೂ ಹೋರಾಟ ಮುಂದುವರಿಸಲಿದೆ ಎಂದು ತಾಲ್ಲೂಕು ಅಧ್ಯಕ್ಷ ಕುರುವಳ್ಳಿ ನಾಗರಾಜ್ ಮಾಧ್ಯಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close