SUDDILIVE || SAGARA
ಹುಲಿ ದೇವರಬವನ ಬಳಿ ಭೀಕರ ರಸ್ತೆ ಅಪಘಾತ: ಗಾಯಾಳುಗಳ ರಕ್ಷಣೆಗೆ ಧಾವಿಸಿದ ಶಾಸಕ ರಾಜೇಗೌಡ-Terrible road accident near Huli Devarabhavan: MLA Rajegowda rushes to rescue injured
ಶಿವಮೊಗ್ಗ/ಸಾಗರ: ಸಾಗರ ತಾಲೂಕಿನ ಹುಲಿ ದೇವರಬವನ ಸಮೀಪ ಓಮನಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬ್ರೇಕ್ ಫೇಲ್ ಆದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿವೆ.
ಈ ವೇಳೆ ತುಮರಿಯಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ವಾಪಸಾಗುತ್ತಿದ್ದ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು ಅಪಘಾತವನ್ನು ಗಮನಿಸಿ ತಕ್ಷಣವೇ ಗಾಯಾಳುಗಳ ರಕ್ಷಣೆಗೆ ಧಾವಿಸಿದ್ದಾರೆ.
ಅಪಘಾತ ಸ್ಥಳಕ್ಕೆ ಆಂಬುಲೆನ್ಸ್ ಬರಲು ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ಶಾಸಕ ರಾಜೇಗೌಡ ಅವರು ತಮ್ಮ ಬೆಂಗಾವಲು ವಾಹನದಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದಾರೆ. ಶಾಸಕರ ಸಮಯಪ್ರಜ್ಞೆಯಿಂದ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿದೆ.
ಈ ಸಂದರ್ಭದಲ್ಲಿ ಯುವ ಮುಖಂಡ ತಾರಾ ಮೂರ್ತಿ ಅವರು ಶಾಸಕ ರಾಜೇಗೌಡರೊಂದಿಗೆ ಸಂಪೂರ್ಣವಾಗಿ ಸಾಥ್ ನೀಡಿ ಗಾಯಾಳುಗಳ ರಕ್ಷಣಾ ಕಾರ್ಯದಲ್ಲಿ ನೆರವಾಗಿದ್ದಾರೆ.
ಅಪಘಾತದ ಸಂದರ್ಭದಲ್ಲಿ ಗಾಯಾಳುಗಳಿಗೆ ತಕ್ಷಣ ನೆರವು ನೀಡಿದ ಶಾಸಕ ಟಿ.ಡಿ. ರಾಜೇಗೌಡ ಅವರ ಮಾನವೀಯ ನಡೆ ಹಾಗೂ ಸಮಯಪ್ರಜ್ಞೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಹಾಗೂ ಗಾಯಾಳುಗಳ ಸ್ಥಿತಿ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.

