ಸಕ್ರೆಬೈಲು ಆನೆಗಳನ್ನು ದಸರಾ ಮೆರವಣಿಗೆಗೆ ಕಳುಹಿಸದಂತೆ ಆಗ್ರಹ: ವನ್ಯಜೀವಿ ಪ್ರಿಯರಿಂದ ಅರಣ್ಯ ಇಲಾಖೆಗೆ ಮನವಿ-Wildlife lovers appeal to the Forest Department not to send Sakrebailu elephants to the Dasara procession

SUDDILIVE || SHIVAMOGGA

ಸಕ್ರೆಬೈಲು ಆನೆಗಳನ್ನು ದಸರಾ ಮೆರವಣಿಗೆಗೆ ಕಳುಹಿಸದಂತೆ ಆಗ್ರಹ: ವನ್ಯಜೀವಿ ಪ್ರಿಯರಿಂದ ಅರಣ್ಯ ಇಲಾಖೆಗೆ ಮನವಿ-Wildlife lovers appeal to the Forest Department not to send Sakrebailu elephants to the Dasara procession    

Sakrebailu, elephants


ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆಯಲಿರುವ ದಸರಾ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ಸಕ್ರೆಬೈಲು ಆನೆ ಬಿಡಾರದ ಆನೆಗಳನ್ನು ಮೆರವಣಿಗೆಯಲ್ಲಿ ಬಳಸಬಾರದು ಎಂದು ಆಗ್ರಹಿಸಿ ವನ್ಯಜೀವಿ ಮತ್ತು ಪರಿಸರ ಹೋರಾಟಗಾರರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಶಿವಮೊಗ್ಗದಲ್ಲಿ ಚಾಮುಂಡೇಶ್ವರಿ ದೇವಿಯ ದಸರಾ ಮೆರವಣಿಗೆಗೆ ಸಕ್ರೆಬೈಲು ಆನೆ ಬಿಡಾರದಿಂದ ಮೂರು ಆನೆಗಳು ನಗರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಸಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. 

ಮಲೆನಾಡು ವನ್ಯಜೀವಿ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸ್ಥಾಪಕ ಟ್ರಸ್ಟಿ ದಿಲೀಪ್ ನಾಡಿಗ್ ಹಾಗೂ ಪರಿಸರ ಹೋರಾಟಗಾರ ಶ್ರೀರಮೇಶ್, ಕರ್ನಾಟಕ ರಕ್ಷಣವೇದಿಕೆ ಸಿಂಹಸೇನೆಯ ಮಧುಸೂಧನ್ ಅವರು ಶಿವಮೊಗ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ವನ್ಯಜೀವಿ ಸಂರಕ್ಷಣಾ ವಿಭಾಗದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ದಸರಾ ಮೆರವಣಿಗೆಗಾಗಿ ಸಕ್ರೆಬೈಲು ಆನೆಗಳನ್ನು ನೀಡದಂತೆ ಒತ್ತಾಯಿಸಿದ್ದಾರೆ.

Sakrebailu, elephant

ಮನವಿಯಲ್ಲಿ ಸಕ್ರೆಬೈಲು ಆನೆ ಬಿಡಾರದಲ್ಲಿ ಇತ್ತೀಚೆಗೆ ಸಂಭವಿಸಿರುವ ಆನೆಗಳ ಸಾವಿನ ಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ. 32 ವರ್ಷ ವಯಸ್ಸಿನ ಶೌರ್ಯ ಆನೆ ಸೆಪ್ಟೆಂಬರ್ 30ರಂದು ಮೃತಪಟ್ಟಿರುವುದು ವನ್ಯಜೀವಿ ಪ್ರಿಯರು ಹಾಗೂ ಪರಿಸರ ಹೋರಾಟಗಾರರಲ್ಲಿ ತೀವ್ರ ನೋವುಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸಕ್ರೆಬೈಲು ಆನೆ ಬಿಡಾರದಲ್ಲಿ ವಿಕ್ರಾಂತ್, ಬಾಲಣ್ಣ ಸೇರಿದಂತೆ ಆನೆಗಳಿಗೆ ಗಾಯಗಳಾಗಿವೆ. ಈ ಹಿಂದೆ ಭಾಗಿಯಾಗಿದ್ದ ಕುಂತಿಗೆ ಇದೇ ವಿಜಯ ದಶಮಿ ಮೆರವಣಿಗೆ ದಿಬದ ಎರಡು ದಿನಗಳ ಹಿಂದೆ ಮರಿಆನೆಗೆ ಜನ್ಮನೀಡಿತ್ತು. ಕಳೆದ ವರ್ಷ ಬಾಲಣ್ಣ ಇದೇ ವಿಜಯದಶಮಿಯ ವೇಳೆ ಕಾಲುನೋವು ಬಂದ ವೇಳೆ ಪೇನ್ ಕಿಲ್ಲರ್ ಕೊಟ್ಟ ಕಾರಣ ಅದರ ಕಿವಿಯೇ ಕೊಳೆತು ಹೋಗಿ ಜೀವನ್ಮರಣದಿಂದ ಹೋರಾಡಿ ಈಗ ಸಾವಿನ ದವಡೆಯಿಂದ ಬಜಾವ್ ಆಗಿರುವ ಘಟನೆಗಳು ನಡೆದಿದ್ದು, ಕಡಿಮೆ ಅವಧಿಯಲ್ಲಿ ಆನೆಗಳ ಸಾವು ಪುನರಾವರ್ತನೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅನಾರೋಗ್ಯ, ದೈಹಿಕ ದುರ್ಬಲತೆ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿರುವ ಆನೆಗಳನ್ನು ದಸರಾ ವಿಜಯದಶಮಿ ಮೆರವಣಿಗೆಯಲ್ಲಿ ಬಳಸುವುದು ಸೂಕ್ತವಲ್ಲ ಎಂದು ವನ್ಯಜೀವಿ ಪ್ರಿಯರು ಅಭಿಪ್ರಾಯಪಟ್ಟಿದ್ದಾರೆ. ಆನೆಗಳ ಆರೋಗ್ಯ ಮತ್ತು ಕಲ್ಯಾಣಕ್ಕೆ ಮೊದಲ ಆದ್ಯತೆ ನೀಡಬೇಕು. ಸಕ್ರೆಬೈಲಿನಲ್ಲಿ ವೈದ್ಯರೂ ಇಲ್ಲದ ಕಾರಣ ಮೊದಲು ವೈದ್ಯರನ್ನ ನೇಮಿಸಿ ನಂತರ ದಸರಾಗೆ ಆನೆ ಕಳುಹಿಸಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಲಾಗಿದೆ.

ದಸರಾ ಹಬ್ಬದ ಸಂದರ್ಭದಲ್ಲಿ ಆನೆಗಳನ್ನು ಮೆರವಣಿಗೆಗೆ ಕಳುಹಿಸುವ ನಿರ್ಧಾರವನ್ನು ಮರುಪರಿಶೀಲಿಸಿ, ಸಕ್ರೆಬೈಲು ಬಿಡಾರದ ಆನೆಗಳನ್ನು ಜಾಥಾದಲ್ಲಿ ಬಳಸುವುದನ್ನು ತಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ತಮ್ಮ ಮನವಿಯನ್ನು ಪುರಸ್ಕರಿಸದೆ ಆನೆಗಳೊಂದಿಗೆ ದಸರಾ ಮೆರವಣಿಗೆ ನಡೆಸಿದಲ್ಲಿ, ಮುಂದಿನ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಪರಿಸ್ಥಿತಿ ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯಕ್ರಮದ ಆಯೋಜಕರೇ ಹೊಣೆಗಾರರಾಗಬೇಕಾಗುತ್ತದೆ ಎಂದು ದಿಲೀಪ್ ನಾಡಿಗ್ ಮತ್ತು ಶ್ರೀರಮೇಶ್ ಎಚ್ಚರಿಕೆ ನೀಡಿದ್ದಾರೆ.

ಆನೆಗಳ ಆರೋಗ್ಯ, ಸುರಕ್ಷತೆ ಹಾಗೂ ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಇಲಾಖೆಯು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. 

Wildlife lovers appeal to the Forest Department not to send Sakrebailu elephants to the Dasara procession

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close