SUDDILIVE || SHIVAMOGGA
ವಿಐಎಸ್ಎಲ್ ಡಿಜಿಎಂ ಗೋವಿಂದರಾಜ್ ಸಾವು: ಕೊಲೆ ಶಂಕೆ ವ್ಯಕ್ತಪಡಿಸಿದ ಪುತ್ರಿ, ಸಮಗ್ರ ತನಿಖೆಗೆ ಆಗ್ರಹ- VISL DGM Govindaraj's death: Daughter suspects murder, demands thorough investigation
ಭದ್ರಾವತಿ: ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್ಎಲ್)ಯಲ್ಲಿ ಡಿಜಿಎಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋವಿಂದರಾಜ್ (52) ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಭದ್ರಾವತಿಯ ವಿಐಎಸ್ಎಲ್ ಕ್ವಾಟರ್ಸ್‌ನಲ್ಲಿ ಸೋಮವಾರ ಬೆಳಗ್ಗೆ ಗೋವಿಂದರಾಜ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಗೋವಿಂದರಾಜ್ ಅವರ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿತ್ತು. ಈ ವೇಳೆ ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಪತ್ನಿ ಹಾಗೂ ಮಕ್ಕಳು ತಂದೆಯ ಸಾವಿನಿಂದ ತೀವ್ರ ದುಃಖ ವ್ಯಕ್ತಪಡಿಸಿದರು.
ಈ ನಡುವೆ ಗೋವಿಂದರಾಜ್ ಅವರ ಪುತ್ರಿ ಜೀವ ದರ್ಶಿನಿ ಅವರು ತಂದೆಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ಇದು ಆತ್ಮಹತ್ಯೆಯೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಸಂಭವಿಸಿದ ಸಾವೇ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ತಂದೆಯ ಸಾವಿನ ಹಿಂದೆ ಕೊಲೆ ನಡೆದಿರುವ ಸಾಧ್ಯತೆಯ ಬಗ್ಗೆಯೂ ಅನುಮಾನವಿದೆ ಎಂದು ಅವರು ಹೇಳಿದ್ದಾರೆ. ವಿಐಎಸ್ಎಲ್‌ನಲ್ಲಿ ಹಿರಿಯ ಅಧಿಕಾರಿಗಳಿಂದ ಕಿರುಕುಳವಿತ್ತು ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ಇದಲ್ಲದೆ, ಕಾರ್ಖಾನೆಯಲ್ಲಿ ನಡೆಯುತ್ತಿದ್ದ ಎನ್ನಲಾದ ಕೆಲವು ನಕಲಿ ಬಿಲ್‌ಗಳಿಗೆ ಸಹಿ ಮಾಡುವಂತೆ ಗೋವಿಂದರಾಜ್ ಅವರ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿತ್ತು ಎಂಬ ಆರೋಪವನ್ನು ಕುಟುಂಬಸ್ಥರು ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಾವಿನ ಹಿಂದೆ ಒತ್ತಡ ಅಥವಾ ಇತರೆ ಕಾರಣಗಳಿದ್ದವೆಯೇ ಎಂಬುದನ್ನು ತನಿಖೆ ಮೂಲಕ ಬಹಿರಂಗಪಡಿಸಬೇಕಾಗಿದೆ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಕ್ವಾಟರ್ಸ್‌ನಲ್ಲಿ ಗೋವಿಂದರಾಜ್ ಅವರು ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕುಟುಂಬಸ್ಥರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವರ ಸಾವಿನ ನಿಖರ ಕಾರಣವೇನು, ಘಟನೆಯ ಸಂದರ್ಭ ಏನು ಹಾಗೂ ಸಾವಿಗೂ ಮುನ್ನ ಯಾವುದೇ ಒತ್ತಡ ಅಥವಾ ಬೆದರಿಕೆ ಇತ್ತೇ ಎಂಬುದರ ಕುರಿತು ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸಬೇಕಿದೆ.
ತಂದೆಯ ಸಾವಿನ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿ ಸತ್ಯಾಂಶವನ್ನು ಹೊರತರುವಂತೆ ಜೀವ ದರ್ಶಿನಿ ಒತ್ತಾಯಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ, ಪೊಲೀಸ್ ತನಿಖೆ ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಗೋವಿಂದರಾಜ್ ಅವರ ಸಾವಿನ ನಿಖರ ಕಾರಣ ಸ್ಪಷ್ಟವಾಗಬೇಕಿದೆ. ಕುಟುಂಬಸ್ಥರು ಮಾಡಿರುವ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಬಹಿರಂಗವಾಗಬೇಕಿದೆ.
