ಸಂಘಟನಾ ಸೃಜನ್ ಅಭಿಯಾನ-2ಕ್ಕೆ ಚಾಲನೆ: ಪಕ್ಷ ಸಂಘಟನೆ ಬಲಪಡಿಸುವ ಗುರಿ – ಹರೀಶ್ ಕುಮಾರ್-Organizational Creation Campaign-2 launched: Aim to strengthen party organization – Harish Kumar

 SUDDILIVE || SHIVAMOGGA

ಸಂಘಟನಾ ಸೃಜನ್ ಅಭಿಯಾನ-2ಕ್ಕೆ ಚಾಲನೆ: ಪಕ್ಷ ಸಂಘಟನೆ ಬಲಪಡಿಸುವ ಗುರಿ – ಹರೀಶ್ ಕುಮಾರ್-Organizational Creation Campaign-2 launched: Aim to strengthen party organization – Harish Kumar 
Sanghatan, srujan

ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯದಲ್ಲಿ ಸಂಘಟನಾ ಸೃಜನ್ ಅಭಿಯಾನ–2 ಪ್ರಾರಂಭಿಸಲಾಗಿದ್ದು, ಇದರ ಭಾಗವಾಗಿ ಶಿವಮೊಗ್ಗ ಜಿಲ್ಲೆಯ 14 ಬ್ಲಾಕ್ ಕಾಂಗ್ರೆಸ್ ಘಟಕಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿ, ಬ್ಲಾಕ್ ಅಧ್ಯಕ್ಷರು ಹಾಗೂ ಜಿಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರ ನೇಮಕಾತಿಗೆ ಶಿಫಾರಸುಗಳನ್ನು ಕೆಪಿಸಿಸಿಗೆ ಸಲ್ಲಿಸಲಾಗುವುದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಮೆಸ್ಕಾಂ ಅಧ್ಯಕ್ಷ, ಶಿವಮೊಗ್ಗ ಜಿಲ್ಲಾ ಸಂಘಟನಾ ಸೃಜನ್ ಅಭಿಯಾನ–2ರ ಉಸ್ತುವಾರಿ ಹರೀಶ್ ಕುಮಾರ್ ಹೇಳಿದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನಾ ಸೃಜನ್ ಅಭಿಯಾನ–1ರ ಮೂಲಕ ರಾಜ್ಯದ ಹಲವು ಜಿಲ್ಲೆಗಳಿಗೆ ನೂತನ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಅದರಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಎಚ್.ಸಿ. ಯೋಗೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಮತ್ತು ಬ್ಲಾಕ್ ಘಟಕಗಳನ್ನು ಇನ್ನಷ್ಟು ಸಕ್ರಿಯಗೊಳಿಸುವುದು ಸಂಘಟನಾ ಸೃಜನ್ ಅಭಿಯಾನ–2ರ ಪ್ರಮುಖ ಉದ್ದೇಶವಾಗಿದೆ. ಐದು ವರ್ಷ ಪೂರ್ಣಗೊಳಿಸಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅಥವಾ ನಿಷ್ಕ್ರಿಯವಾಗಿರುವ ಅಧ್ಯಕ್ಷರಿರುವ ಕಡೆ ಹೊಸ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 14 ಬ್ಲಾಕ್ ಕಾಂಗ್ರೆಸ್ ಘಟಕಗಳಿದ್ದು, ಪ್ರತಿಯೊಂದು ಬ್ಲಾಕ್‌ಗೂ ಭೇಟಿ ನೀಡಿ ಅಲ್ಲಿನ ಕಾಂಗ್ರೆಸ್ ಮುಖಂಡರು, ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಎಐಸಿಸಿ ಹಾಗೂ ಕೆಪಿಸಿಸಿ ಸದಸ್ಯರು, ಜಿಲ್ಲಾ ಪದಾಧಿಕಾರಿಗಳು, ಶಾಸಕರು, ಮಾಜಿ ಶಾಸಕರು, ಸಂಸದರು ಹಾಗೂ ಮಾಜಿ ಸಂಸದರ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಸಂಬಂಧಪಟ್ಟ ಶಾಸಕರಿಗೆ ಬ್ಲಾಕ್ ಅಧ್ಯಕ್ಷರ ಹುದ್ದೆಗೆ ತಲಾ ಮೂರು ಹೆಸರುಗಳನ್ನು ಸೂಚಿಸಲು ಅವಕಾಶ ನೀಡಲಾಗಿದೆ. ಈ ಶಿಫಾರಸುಗಳಲ್ಲಿ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುವುದರ ಜೊತೆಗೆ ಮಹಿಳೆ ಮತ್ತು ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶವಿದೆ ಎಂದು ಹರೀಶ್ ಕುಮಾರ್ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕದ ಜೊತೆಗೆ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಪದಾಧಿಕಾರಿಗಳ ಆಯ್ಕೆ, ಜಿಲ್ಲಾ ಮಟ್ಟದ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರ ನೇಮಕ ಹಾಗೂ ಸಮಿತಿ ರಚನೆಗೆ ಸಂಬಂಧಿಸಿದಂತೆ ಕೂಡ ಅಭಿಪ್ರಾಯ ಸಂಗ್ರಹಿಸಲಾಗುವುದು. ಬೂತ್ ಸಮಿತಿ ಮತ್ತು ಬಿಎಲ್‌ಎ–2ಗೆ ಸಂಬಂಧಿಸಿದಂತೆ ಏನಾದರೂ ವ್ಯತ್ಯಾಸಗಳಿದ್ದರೆ ಅವುಗಳ ಮಾಹಿತಿಯನ್ನೂ ಕೆಪಿಸಿಸಿಗೆ ಸಲ್ಲಿಸಲಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಹೆಚ್ಚಿನ ಜವಾಬ್ದಾರಿ

ಮುಂದಿನ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್‌ನ ಉದ್ದೇಶವಾಗಿದೆ. ಪಕ್ಷದ ಚುನಾವಣಾ ಸಮಿತಿಗಳಲ್ಲೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅವರ ಅಭಿಪ್ರಾಯಕ್ಕೂ ಮಹತ್ವ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ರಾಜಕೀಯ ಪರಿಸ್ಥಿತಿ, ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಚಟುವಟಿಕೆಗಳ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ನೇರ ಮಾಹಿತಿ ಇರುವುದರಿಂದ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಅವರ ಅಭಿಪ್ರಾಯ ಪ್ರಮುಖವಾಗಲಿದೆ ಎಂದರು.

ಕಾಂಗ್ರೆಸ್ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಗೆಲುವು ಸಾಧ್ಯ

ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ. ಎಲ್ಲ ಹಿರಿಯ ಮುಖಂಡರು, ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಎಲ್ಲಾ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಸಾಧ್ಯವಾಗಲಿದೆ ಎಂದು ಹರೀಶ್ ಕುಮಾರ್ ಹೇಳಿದರು.

“ನಮ್ಮಲ್ಲಿರುವ ಸಂಘಟನಾ ಕೊರತೆಗಳನ್ನು ಬಿಜೆಪಿ ಬಂಡವಾಳ ಮಾಡಿಕೊಂಡು ಕೆಲವು ಕಡೆ ಗೆಲುವು ಸಾಧಿಸಿದೆ. ಕಾಂಗ್ರೆಸ್ ಪಕ್ಷ ಸಂಘಟಿತವಾಗಿ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಯಾರಿಗೂ ನಮ್ಮನ್ನು ಸೋಲಿಸಲು ಸಾಧ್ಯವಾಗುವುದಿಲ್ಲ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳಾದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಗಳು ಎದುರಾಗಲಿದ್ದು, ಅವುಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ಈಗಿನಿಂದಲೇ ಬಲಪಡಿಸಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ಪ್ರಮುಖ ಗುರಿಯಾಗಿದೆ ಎಂದರು.

ಸೆಪ್ಟೆಂಬರ್ 28ರಿಂದ ಒಂದು ತಿಂಗಳ ಅಭಿಯಾನ

ಸಂಘಟನಾ ಸೃಜನ್ ಅಭಿಯಾನ–2ರ ಪ್ರಕ್ರಿಯೆ ಸೆಪ್ಟೆಂಬರ್ 28ರಿಂದ ಆರಂಭವಾಗಿದ್ದು, ಅಕ್ಟೋಬರ್ 30ರೊಳಗೆ ಪೂರ್ಣಗೊಳಿಸಿ ಒಂದು ವಾರದೊಳಗೆ ಕೆಪಿಸಿಸಿಗೆ ವರದಿ ಸಲ್ಲಿಸಲಾಗುವುದು ಎಂದು ಹರೀಶ್ ಕುಮಾರ್ ತಿಳಿಸಿದರು.

ಶಿವಮೊಗ್ಗ ದಕ್ಷಿಣ ಮತ್ತು ಉತ್ತರ ಬ್ಲಾಕ್‌ಗಳಲ್ಲಿ ಅಕ್ಟೋಬರ್ 6ರಂದು ಸಭೆ ನಡೆಯಲಿದ್ದು, ಅಕ್ಟೋಬರ್ 7ರಂದು ಸೊರಬ ಮತ್ತು ಆನವಟ್ಟಿ ಬ್ಲಾಕ್‌ಗಳಲ್ಲಿ ಸಭೆ ನಡೆಯಲಿದೆ. ಅಕ್ಟೋಬರ್ 13ರಂದು ಸಾಗರ ಮತ್ತು ಹೊಸನಗರ, 14ರಂದು ಶಿಕಾರಿಪುರ ಮತ್ತು ಶಿರಾಳಕೊಪ್ಪ, 15ರಂದು ಭದ್ರಾವತಿ ನಗರ, ಹೊಳೆಹೊನ್ನೂರು ಹಾಗೂ ಶಿವಮೊಗ್ಗ ಗ್ರಾಮಾಂತರ ಮತ್ತು 16ರಂದು ಭದ್ರಾವತಿ ಗ್ರಾಮಾಂತರ, ತೀರ್ಥಹಳ್ಳಿ ಗ್ರಾಮಾಂತರ ಹಾಗೂ ತೀರ್ಥಹಳ್ಳಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಅವರು ವಿವರಿಸಿದರು.

ಈ ಅಭಿಯಾನದಲ್ಲಿ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ನ್ಯಾಯಸಮ್ಮತತೆ, ಪ್ರಾಮಾಣಿಕತೆ ಮತ್ತು ಯಾವುದೇ ಪಕ್ಷಪಾತವಿಲ್ಲದೆ ಕಾರ್ಯನಿರ್ವಹಿಸುವಂತೆ ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಅದರಂತೆ ನಾಲ್ವರು ವೀಕ್ಷಕರು ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹರೀಶ್ ಕುಮಾರ್ ಹೇಳಿದರು.

ಸಂಘಟನಾ ಸೃಜನ್ ಅಭಿಯಾನ–2 ಯಶಸ್ವಿಯಾಗಲು ಪತ್ರಕರ್ತರು ಹಾಗೂ ಮಾಧ್ಯಮಗಳ ಸಹಕಾರವೂ ಅಗತ್ಯವಾಗಿದೆ. ಪಕ್ಷದ ಹೊರಗಿನ ಬೆಳವಣಿಗೆಗಳನ್ನು ಗಮನಿಸುವ ಮಾಧ್ಯಮದವರಿಗೆ ಸಂಘಟನೆಯ ವಾಸ್ತವ ಸ್ಥಿತಿಯ ಬಗ್ಗೆ ಉತ್ತಮ ಅರಿವು ಇರುವುದರಿಂದ ಅವರ ಅಭಿಪ್ರಾಯವೂ ಮುಖ್ಯವಾಗಿದೆ ಎಂದು ಅವರು ಹೇಳಿದರು.

Organizational Creation Campaign-2 launched: Aim to strengthen party organization – Harish Kumar 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close