ಸಮಸ್ತ ಆ್ಯಪ್ ಕೆಲಸ ಬಹಿಷ್ಕರಿಸಲು ಆಶಾ ಕಾರ್ಯಕರ್ತೆಯರ ನಿರ್ಧಾರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ-ASHA workers decide to boycott all app work: Demand fulfillment of various demands

 SUDDILIVE || SHIVAMOGGA

ಸಮಸ್ತ ಆ್ಯಪ್ ಕೆಲಸ ಬಹಿಷ್ಕರಿಸಲು ಆಶಾ ಕಾರ್ಯಕರ್ತೆಯರ ನಿರ್ಧಾರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ-ASHA workers decide to boycott all app work: Demand fulfillment of various demands    

Asha, worker


ಶಿವಮೊಗ್ಗ:
ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ಅಕ್ಟೋಬರ್ 5ರಿಂದ 11ರವರೆಗೆ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನಾ ಸಪ್ತಾಹದ ಅಂಗವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ‘ಸಮಸ್ತ’ ಆ್ಯಪ್‌ನಲ್ಲಿ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿರುವುದರಿಂದ ಹಲವು ಸಮಸ್ಯೆಗಳು ಎದುರಾಗಿವೆ ಎಂದು ಸಂಘ ಆರೋಪಿಸಿದೆ. ಆ್ಯಪ್‌ನಲ್ಲಿ ಕೆಲಸ ಮಾಡಲು ಅಗತ್ಯವಿರುವ ಗುಣಮಟ್ಟದ ಮೊಬೈಲ್ ಅಥವಾ ಟ್ಯಾಬ್ಲೆಟ್‌ಗಳನ್ನು ಇಲಾಖೆಯಿಂದ ಒದಗಿಸಿಲ್ಲ. ಅಲ್ಲದೆ, ಸ್ವಂತ ಮೊಬೈಲ್ ಬಳಕೆಗೆ ನೀಡಲಾಗುತ್ತಿದ್ದ ಮಾಸಿಕ ₹280 ಬಾಡಿಗೆ ಹಣವನ್ನೂ ನಿಲ್ಲಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

‘ಸಮಸ್ತ’ ಆ್ಯಪ್‌ನಲ್ಲಿ ಡೇಟಾ ದಾಖಲಿಸುವ ಕೆಲಸಕ್ಕೆ ಪ್ರತ್ಯೇಕ ಪ್ರೋತ್ಸಾಹಧನ ನಿಗದಿಪಡಿಸಬೇಕು. ವೈಯಕ್ತಿಕ ಮೊಬೈಲ್‌ನಲ್ಲಿ ಇಲಾಖೆಯ ಆ್ಯಪ್ ಬಳಕೆಯಿಂದ ಮೆಮೊರಿ ಸಮಸ್ಯೆ, ವೈಯಕ್ತಿಕ ಗೌಪ್ಯತೆ ಮತ್ತು ಮೊಬೈಲ್ ಬಾಳಿಕೆ ಮೇಲೆ ಪರಿಣಾಮ ಬೀರುತ್ತಿದೆ. ಹಲವಾರು ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ಮತ್ತು ಡಿಜಿಟಲ್ ಆ್ಯಪ್ ಬಳಕೆಯ ಕುರಿತು ಸೂಕ್ತ ತರಬೇತಿ ನೀಡಿಲ್ಲ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಟೈಪ್ ಮಾಡಲು ಸಾಧ್ಯವಾಗದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಕ್ಷೇತ್ರ ಕಾರ್ಯದ ಜೊತೆಗೆ ಹೆಚ್ಚುವರಿ ಡಿಜಿಟಲ್ ದಾಖಲಾತಿ ಕೆಲಸದಿಂದ ಆಶಾ ಕಾರ್ಯಕರ್ತೆಯರ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ. ಆದ್ದರಿಂದ ಬೇಡಿಕೆಗಳನ್ನು ಈಡೇರಿಸುವವರೆಗೆ ‘ಸಮಸ್ತ’ ಆ್ಯಪ್‌ನಲ್ಲಿ ಕೆಲಸ ಮಾಡದಿರಲು ಸಂಘ ನಿರ್ಧರಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಮುಖ ಬೇಡಿಕೆಗಳು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೀಡಲಾಗುವ ಪ್ರೋತ್ಸಾಹಧನ ಹಾಗೂ ಗೌರವಧನವನ್ನು ಸೇರಿಸಿ ಪ್ರತಿ ತಿಂಗಳು ₹15,000 ಗೌರವಧನ ನೀಡಬೇಕು. ಕೆಲಸಕ್ಕೆ ಅನುಗುಣವಾದ ಪ್ರೋತ್ಸಾಹಧನ ಹಾಗೂ ಗೌರವಧನವನ್ನು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಪಾವತಿಸಬೇಕು ಎಂದು ಒತ್ತಾಯಿಸಲಾಗಿದೆ.

ಎನ್‌ಎಚ್‌ಎಂ ಮಾರ್ಗಸೂಚಿಯಂತೆ ‘ನಿಕ್ಷಯ್’ ಆ್ಯಪ್‌ನ ಕೆಲಸ ಆಶಾ ಕಾರ್ಯಕರ್ತೆಯರದ್ದಲ್ಲ ಎಂದು ಹೇಳಿರುವ ಸಂಘ, ಆ ಕೆಲಸ ಮಾಡಲು ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ. ಜಿಲ್ಲೆಯ ಬಾಕಿ ಇರುವ ಎರಡು ತಿಂಗಳ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದೆ.

ಆರ್‌ಸಿಎಚ್ ಪೋರ್ಟಲ್ ಮೂಲಕ ಆಶಾ ಕಾರ್ಯಕರ್ತೆಯರು ನಿರ್ವಹಿಸಿದ ಕೆಲಸಕ್ಕೆ ಅನುಗುಣವಾಗಿ ಕೇಂದ್ರದ ಪ್ರೋತ್ಸಾಹಧನ ಪಾವತಿಯಾಗುತ್ತಿಲ್ಲ. ಹಲವು ವರ್ಷಗಳಿಂದ ಬಾಕಿ ಇರುವ ವಿವಿಧ ಪ್ರೋತ್ಸಾಹಧನ, ಟಿಬಿ, ಟಿಬಿಐ, ಎನ್‌ಸಿಡಿ ಸೇರಿದಂತೆ ವಿವಿಧ ಕಾಂಪೋನೆಂಟ್‌ಗಳ ಹಣವನ್ನು ಪಾವತಿಸಬೇಕು ಎಂದು ಒತ್ತಾಯಿಸಲಾಗಿದೆ.

10 ವರ್ಷ ಸೇವೆ ಸಲ್ಲಿಸಿ ಕೆಲಸ ತೊರೆದ ಅಥವಾ ನಿವೃತ್ತರಾದ ಆಶಾ ಕಾರ್ಯಕರ್ತೆಯರಿಗೆ ನಿಯಮಾನುಸಾರ ಬಾಕಿ ಇರುವ ಇಡಿಗಂಟು ಪಾವತಿಸಬೇಕು. ಸ್ಫೂಟಂ/ಕಫ ತರುವಂತೆ ಆಶಾ ಕಾರ್ಯಕರ್ತೆಯರಿಗೆ ಒತ್ತಡ ಹೇರುವುದನ್ನು ತಡೆಯಬೇಕು. ಆಶಾಗಳಿಗೆ ಜಿಪಿಎಸ್ ಲೊಕೇಶನ್ ಹಾಕುವಂತೆ ಒತ್ತಡ ಹೇರಬಾರದು ಎಂದು ಸಂಘ ಆಗ್ರಹಿಸಿದೆ.

ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ವೇತನ/ಪ್ರೋತ್ಸಾಹಧನಕ್ಕೆ ಸಂಬಂಧಿಸಿದ ಕ್ಲೇಮ್ ಮತ್ತು ರಿಲೀಸ್ ಕಾಪಿ ನೀಡಬೇಕು. ಪಾವತಿಯಾಗಿರುವ ಪ್ರೋತ್ಸಾಹಧನ ಯಾವ ತಿಂಗಳದ್ದೆಂದು ಪಾಸ್‌ಬುಕ್‌ನಲ್ಲಿ ಸ್ಪಷ್ಟವಾಗಿ ನಮೂದಿಸುವ ವ್ಯವಸ್ಥೆ ಮಾಡಬೇಕು. ಕಳೆದ ಒಂದು ವರ್ಷದ ಗೌರವಧನ ಮತ್ತು ವಿವಿಧ ಪ್ರೋತ್ಸಾಹಧನಗಳ ವಿವರಗಳನ್ನು ಒಳಗೊಂಡ ಸಾಫ್ಟ್ ಕಾಪಿಯನ್ನು ಆಶಾ ಸಂಘಕ್ಕೆ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತಾ ವ್ಯವಸ್ಥೆಯೊಂದಿಗೆ ಸುಸಜ್ಜಿತ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿಯಿಂದ ಆಶಾ ಕಾರ್ಯಕರ್ತೆಯರಿಗೆ ಅನಗತ್ಯ ಒತ್ತಡ ಹೇರುವುದನ್ನು ತಡೆಯಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಸ್ಯೆಗಳನ್ನು ಮಾತುಕತೆ ಮೂಲಕ ಪರಿಹರಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಆಶಾ ಕುಂದುಕೊರತೆ ಸಭೆ ನಡೆಸಬೇಕು ಎಂದು ಸಂಘ ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಚಂದ್ರಕಲಾ, ಜಿಲ್ಲಾ ಆಶಾ ಮುಖಂಡರಾದ ರಾಜೇಶ್ವರಿ ಸೇರಿದಂತೆ ಸಂಘದ ಮುಖಂಡರು ಮನವಿ ಸಲ್ಲಿಸಿದ್ದಾರೆ.

ASHA workers decide to boycott all app work: Demand fulfillment of various demands

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close