ಶಿಕಾರಿಪುರದಲ್ಲಿ ಮೂಡಿದ ಹೆಜ್ಜೆಗಳು ಮುಂದೇನು?padayathre took place, what next?

 SUDDILIVE || SHIVAMOGGA

ಶಿಕಾರಿಪುರದಲ್ಲಿ ಮೂಡಿದ ಹೆಜ್ಜೆಗಳು ಮುಂದೇನು?padayathre took place, what next?
Shikaripura, padayathre


ಶಿಕಾರಿಪುರ: 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ ರಾಜ್ಯದ ರಾಜಕೀಯ ಪಕ್ಷಗಳು ಈಗಿನಿಂದಲೇ ತಮ್ಮದೇ ರೀತಿಯಲ್ಲಿ ಚುನಾವಣಾ ಅಖಾಡವನ್ನು ಸಜ್ಜುಗೊಳಿಸಲು ಆರಂಭಿಸಿವೆ. ಅದರಲ್ಲೂ ಬಿಜೆಪಿ ಭದ್ರಕೋಟೆ ಎಂದು ಗುರುತಿಸಿಕೊಂಡಿರುವ ಶಿಕಾರಿಪುರ ಇದೀಗ ಮತ್ತೊಮ್ಮೆ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ.

ಕಳೆದ 10-15 ದಿನಗಳ ಹಿಂದೆ ರೈತರ ಬೇಡಿಕೆ ಇಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ನಡೆಸಿದ ಪಾದಯಾತ್ರೆಯಲ್ಲಿ, ವೇದಿಕೆಯ ಮೇಲೆಯೇ ಬಿವೈ ಸಹೋದರರು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಿದ ಸಂದೇಶ, ಅದಕ್ಕೂ ಮೊದಲು ಜಿಲ್ಲಾ ಉಸ್ತುವರಿ ಸಚಿವ ಶಿಕಾರಿಪುರದಲ್ಲಿ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಮತ ನೀಡಿ 'ಶಿಕಾರಿಪುರದವರು ಮಂಗನ ಕೈಯಲ್ಲಿ ಮಾಣಿಕ್ಯ' ನೀಡಬೇಡಿ ಎಂದು ಹೇಳಿದ ಹೇಳಿಕೆಗಳು ರಾಜಕೀಯ ವಾಗ್ದಾಳಿಗಳು ಎನಿಸಿಕೊಂಡರೂ, ಇದು ಮುಂದಿನ ಚುನಾವಣೆಯ ತಯಾರಿಕೆಯಾಗಿ ರಾಜ್ಯಾದ್ಯಂತ ಸದ್ದು ಮಾಡಲು ಆರಂಭಿಸಿದೆ. 

ಪರಿಣಾಮ ನಿನ್ನೆ ಕಾಂಗ್ರೆಸ್ ನ ಬೃಹತ್ ಪಾದಯಾತ್ರೆ ಭಾರತ್ ಜೋಡೋ 2.0 ಯಶಸ್ವಿಯಾಗಿ ನಡೆದಿದೆ. ಈಗ ಶಿಕಾರಿಪುರದಲ್ಲಿ ಪ್ರಮುಖ ಚುನಾವಣ ಪಕ್ಷಗಳ ನಾಯಕರ ಹೆಜ್ಜೆಗಳು ಮೂಡಿದೆ. ಮುಂದೇನು? ಚುನಾವಣ ಅಂಕಿ ಅಂಶಗಳನ್ನ ಚರ್ಚಿಸುವುದಾದರೆ ಅಂಕಿ ಅಂಶಗಳು ಇದುವರೆಗೂ ಬಿಜೆಪಿಯ ಪರವಾಗಿಯೇ ಇದೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 66 ಮತ್ತು ಜೆಡಿಎಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ನಂತರ ಮತ್ತೆರಡು ಉಪಚುನಾವಣೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಎರಡು ಮೂರು ಕ್ಷೇತ್ರ ಸೋತು ಅದು ಕಾಂಗ್ರೆಸ್ ಗೆ ಅನುಕೂಲವಾಗಿದೆ. ಮೈತ್ರಿ ಪಕ್ಷಗಳು ಗೆದ್ದ ಕ್ಷೇತ್ರಗಳಲ್ಲೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ನೆಲೆ ವಿಸ್ತರಿಸಿಕೊಳ್ಳಬೇಕು ಎಂಬ ರಾಜಕೀಯ ಗುರಿಯೊಂದಿಗೆ ‘ಭಾರತ್ ಜೋಡೋ 2.0’ ಸೇರಿದಂತೆ ಸಂಘಟನಾ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಕೈಗೆತ್ತಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಶಿಕಾರಿಪುರದಲ್ಲಿ ನಡೆದ ಬೃಹತ್ ಪಾದಯಾತ್ರೆ ಗಮನ ಸೆಳೆದಿದೆ. ಕಾಂಗ್ರೆಸ್‌ನ ಹಲವು ಸಚಿವರು, ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿ ಬಿಜೆಪಿ ವಿರುದ್ಧ ರಾಜಕೀಯ ವಾಗ್ದಾಳಿ ನಡೆಸಿದರು. 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತದಾರರನ್ನು ತಲುಪುವ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಂದಿಟ್ಟಿದೆ. ಆದರೆ ಶಿಕಾರಿಪುರದ ರಾಜಕೀಯ ಇತಿಹಾಸವನ್ನು ನೋಡಿದಾಗ ಕಾಂಗ್ರೆಸ್ ಮುಂದಿರುವ ಸವಾಲು ಕೂಡ ಸ್ಪಷ್ಟವಾಗುತ್ತದೆ.

27 ವರ್ಷಗಳ ರಾಜಕೀಯ ಲೆಕ್ಕ

ಶಿಕಾರಿಪುರ ಕ್ಷೇತ್ರದಲ್ಲಿ 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಎನ್. ಮಹಾಲಿಂಗಪ್ಪ ಗೆಲುವು ಸಾಧಿಸಿದ್ದರು. ಆದರೆ ನಂತರದ ಚುನಾವಣೆಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. 2004, 2008ರಲ್ಲಿ ಬಿ.ಎಸ್. ಯಡಿಯೂರಪ್ಪ, 2013ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಯಡಿಯೂರಪ್ಪ, 2014ರ ಉಪಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ, 2018ರಲ್ಲಿ ಮತ್ತೆ ಯಡಿಯೂರಪ್ಪ ಹಾಗೂ 2023ರಲ್ಲಿ ಬಿ.ವೈ. ವಿಜಯೇಂದ್ರ ಗೆಲುವು ಸಾಧಿಸಿದ್ದಾರೆ.

ಅಂದರೆ ಶಿಕಾರಿಪುರದಲ್ಲಿ ಕಾಂಗ್ರೆಸ್‌ಗೆ ಸವಾಲು ಕೇವಲ ಒಂದು ಚುನಾವಣೆಯದ್ದಲ್ಲ. ದೀರ್ಘಕಾಲದಿಂದ ಬೆಳೆದು ಬಂದಿರುವ ರಾಜಕೀಯ ಸಂಘಟನೆ, ವೈಯಕ್ತಿಕ ರಾಜಕೀಯ ಪ್ರಭಾವ ಹಾಗೂ ಮತದಾರರೊಂದಿಗೆ ಇರುವ ನಿರಂತರ ಸಂಪರ್ಕವನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ.

2023ರ ಚುನಾವಣೆಯಲ್ಲೂ ಬಿ.ವೈ. ವಿಜಯೇಂದ್ರ 81,810 ಮತಗಳನ್ನು ಪಡೆದು 11,008 ಮತಗಳ ಅಂತರದಿಂದ ಗೆದ್ದಿದ್ದರು. ಅವರ ಎದುರಾಳಿ ಸ್ವತಂತ್ರ ಅಭ್ಯರ್ಥಿ ಎಸ್.ಪಿ. ನಾಗರಾಜಗೌಡ 70,802 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ 8,101 ಮತಗಳನ್ನು ಪಡೆದಿದ್ದರು. ಇದು2023 ರ ಶಿಕಾರಿಪುರದ ಚುನಾವಣಾ ಫಲಿತಾಂಶವಾಗಿದೆ. 

ಪಾದಯಾತ್ರೆ ಯಶಸ್ಸು... ಆದರೆ ಮುಂದಿನ ಪ್ರಶ್ನೆ ಏನು?

ನಿನ್ನೆ ನಡೆದ ಪಾದಯಾತ್ರೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂಬುದಕ್ಕೆ ಎರಡು ಮಾತಿಲ್ಲ. ಕಾಂಗ್ರೆಸ್ ನಾಯಕರು ಇದನ್ನು ತಮ್ಮ ಸಂಘಟನಾ ಶಕ್ತಿಯ ಪ್ರದರ್ಶನವಾಗಿ ಬಳಸಿಕೊಂಡರು. ವೇದಿಕೆಯಿಂದ ಬಿಜೆಪಿ, ಯಡಿಯೂರಪ್ಪ ಕುಟುಂಬ ಹಾಗೂ ಸ್ಥಳೀಯ ರಾಜಕೀಯ ನಾಯಕತ್ವದ ವಿರುದ್ಧ ಟೀಕೆಗಳು ಕೇಳಿಬಂದವು.

ಆದರೆ ರಾಜಕೀಯ ಪಾದಯಾತ್ರೆಯ ಯಶಸ್ಸನ್ನು ಕೇವಲ ಸೇರಿರುವ ಜನರ ಸಂಖ್ಯೆಯಿಂದ ಅಳೆಯಬಹುದೇ? ಇಲ್ಲಿಯೇ ಶಿಕಾರಿಪುರದ ಮುಂದಿನ ರಾಜಕೀಯ ಕುತೂಹಲ ಆರಂಭವಾಗುತ್ತದೆ.

ಪಾದಯಾತ್ರೆಗೆ ಬಂದಿರುವ ಜನರಲ್ಲಿ ಎಷ್ಟು ಮಂದಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಮತದಾರರು? ಹೊರಗಿನಿಂದ ಬಂದಿರುವ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಸಂಖ್ಯೆ ಎಷ್ಟು? ಕಾರ್ಯಕ್ರಮದ ಉತ್ಸಾಹ ಮತಗಟ್ಟೆ ಮಟ್ಟದ ಸಂಘಟನೆಯಾಗಿ ರೂಪಾಂತರವಾಗುತ್ತದೆಯೇ? ಮತ್ತು ಮುಖ್ಯವಾಗಿ, ಪಾದಯಾತ್ರೆಯ ಮೂಲಕ ಕಾಂಗ್ರೆಸ್ ತಲುಪಿಸಲು ಬಯಸಿರುವ ರಾಜಕೀಯ ಸಂದೇಶ ಮುಂದಿನ ಒಂದೂವರೆ ವರ್ಷದಲ್ಲಿ ಮತದಾರರ ಮನಸ್ಸಿನಲ್ಲಿ ಎಷ್ಟು ಉಳಿಯಲಿದೆಯೇ? ಇವೆಲ್ಲಕ್ಕೂ ಉತ್ತರವನ್ನು ಈಗಲೇ ಹೇಳಲು ಸಾಧ್ಯವಿಲ್ಲ.

‘ಜನಸಾಗರ’ ಮತಪೆಟ್ಟಿಗೆಯವರೆಗೆ ಸಾಗುತ್ತದೆಯೇ?

ರಾಜಕೀಯ ಪಕ್ಷಗಳ ಬೃಹತ್ ಸಮಾವೇಶಗಳು ಮತ್ತು ಪಾದಯಾತ್ರೆಗಳಲ್ಲಿ ಜನ ಸೇರುವುದು ಒಂದು ವಿಚಾರವಾದರೆ,  ಚುನಾವಣೆಯ ದಿನ ಮತಗಟ್ಟೆಗೆ ತೆರಳಿ ಅದೇ ರಾಜಕೀಯ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವುದು ಮತ್ತೊಂದು ವಿಚಾರ. ಈ ಎರಡರ ನಡುವಿನ ಅಂತರವೇ ಶಿಕಾರಿಪುರದಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ಪ್ರಮುಖ ರಾಜಕೀಯ ಪ್ರಶ್ನೆ.

2018ರಲ್ಲಿ ಯಡಿಯೂರಪ್ಪ 86,983 ಮತಗಳನ್ನು ಪಡೆದು 35,397 ಮತಗಳ ಅಂತರದಿಂದ ಗೆದ್ದಿದ್ದರು. 2014ರ ಉಪಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ 71,547 ಮತಗಳನ್ನು ಪಡೆದು ಕಾಂಗ್ರೆಸ್‌ನ ಎಚ್.ಎಸ್. ಶಾಂತವೀರಪ್ಪಗೌಡರ ವಿರುದ್ಧ 6,430 ಮತಗಳ ಅಂತರದಿಂದ ಗೆದ್ದಿದ್ದರು. 2023ರಲ್ಲಿ ವಿಜಯೇಂದ್ರ ಗೆಲುವಿನ ಅಂತರ 11,008ಕ್ಕೆ ಇಳಿದಿದ್ದರೂ ಬಿಜೆಪಿ ಕ್ಷೇತ್ರವನ್ನು ಉಳಿಸಿಕೊಂಡಿದೆ.

ಹೀಗಾಗಿ ಕಾಂಗ್ರೆಸ್‌ಗೆ ಶಿಕಾರಿಪುರದಲ್ಲಿ ಇರುವ ಸವಾಲು ಒಂದು ಪಾದಯಾತ್ರೆಯ ಮೂಲಕ ಮುಗಿಯುವಂಥದ್ದಲ್ಲ. ಮತಗಟ್ಟೆ ಮಟ್ಟದಲ್ಲಿ ಸಂಘಟನೆ, ಸ್ಥಳೀಯ ನಾಯಕತ್ವ, ಅಭ್ಯರ್ಥಿ ಆಯ್ಕೆ, ಕಾರ್ಯಕರ್ತರ ನಿರಂತರ ಚಟುವಟಿಕೆ ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಪಕ್ಷದ ನಿಲುವು—ಇವೆಲ್ಲವೂ ಮುಂದಿನ ಚುನಾವಣಾ ಸಮೀಕರಣವನ್ನು ರೂಪಿಸುವ ಅಂಶಗಳಾಗಬಹುದು.

2028ರ ಅಖಾಡ ಈಗಲೇ ಸಿದ್ಧ!

ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ರಾಜಕೀಯ ಪಕ್ಷಗಳೂ ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಘಟನಾ ಚಟುವಟಿಕೆಗಳನ್ನು ಚುರುಕುಗೊಳಿಸುತ್ತಿವೆ. ಇದೀಗ ನಡೆಯುತ್ತಿರುವ ಪಾದಯಾತ್ರೆಗಳು, ಸಮಾವೇಶಗಳು, ಜನಜಾಗೃತಿ ಕಾರ್ಯಕ್ರಮಗಳು ಮತ್ತು ಕ್ಷೇತ್ರ ಪ್ರವಾಸಗಳನ್ನು ಆ ಹಿನ್ನೆಲೆಯಲ್ಲಿ ನೋಡಬಹುದು.

ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಈ ಅವಧಿಯಲ್ಲಿ ರಾಜಕೀಯ ಪರಿಸ್ಥಿತಿ ಹಲವು ಬಾರಿ ಬದಲಾಗಬಹುದು. ನಾಯಕತ್ವದಲ್ಲಿ ಬದಲಾವಣೆ, ಸ್ಥಳೀಯ ಸಮಸ್ಯೆಗಳು, ಸರ್ಕಾರದ ಕಾರ್ಯವೈಖರಿ, ಪಕ್ಷಗಳ ಸಂಘಟನೆ, ಅಭ್ಯರ್ಥಿಗಳ ಆಯ್ಕೆ ಮತ್ತು ಮತದಾರರ ಆದ್ಯತೆಗಳು—ಎಲ್ಲವೂ ಚುನಾವಣಾ ಸಮಯದಲ್ಲಿ ಹೊಸ ಸಮೀಕರಣಕ್ಕೆ ಕಾರಣವಾಗಬಹುದು.

ಆದ್ದರಿಂದ ನಿನ್ನೆಯ ಶಿಕಾರಿಪುರದ ಪಾದಯಾತ್ರೆಯನ್ನು 2028ರ ಚುನಾವಣೆಯ ಫಲಿತಾಂಶದ ಮುನ್ಸೂಚನೆ ಎಂದು ನೋಡುವುದಕ್ಕಿಂತ, ಕಾಂಗ್ರೆಸ್ ತನ್ನ ರಾಜಕೀಯ ನೆಲೆಯನ್ನು ವಿಸ್ತರಿಸಿಕೊಳ್ಳಲು ಆರಂಭಿಸಿರುವ ಒಂದು ಪ್ರಮುಖ ಸಂಘಟನಾ ಹೆಜ್ಜೆ ಎಂದು ನೋಡುವುದು ಹೆಚ್ಚು ಸೂಕ್ತ.

ಈಗಿನಿಂದಲೇ ಆರಂಭವಾದ ‘ಶಿಕಾರಿಪುರದ ಫೈಟ್’

ಒಂದು ಕಡೆ ದೀರ್ಘಕಾಲದ ಬಿಜೆಪಿ ಪ್ರಾಬಲ್ಯ. ಮತ್ತೊಂದು ಕಡೆ 2028ರಲ್ಲಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಕಾಂಗ್ರೆಸ್‌ನ ಸಂಘಟನಾ ಪ್ರಯತ್ನ ನಡೆಸಿದೆ. ಹೀಗಾಗಿ ಶಿಕಾರಿಪುರದ ರಾಜಕೀಯ ಕದನ 2028ರ ಚುನಾವಣಾ ಅಧಿಸೂಚನೆ ಹೊರಬಂದ ನಂತರ ಆರಂಭವಾಗುವುದಿಲ್ಲ. ಅದರ ಮುನ್ನುಡಿ ಈಗಲೇ ಬರೆಯಲಾಗುತ್ತಿದೆ.

ನಿನ್ನೆ ಪಾದಯಾತ್ರೆಯಲ್ಲಿ ಕಂಡ ಜನಸಮೂಹ ಕಾಂಗ್ರೆಸ್‌ಗೆ ಆತ್ಮವಿಶ್ವಾಸ ನೀಡಿರಬಹುದು. ಆದರೆ ಆ ಜನಸಮೂಹ ಎಷ್ಟು ಮತಗಳಾಗಿ ಪರಿವರ್ತನೆಯಾಗುತ್ತದೆ ಎಂಬುದನ್ನು ಹೇಳಲು ಇನ್ನೂ ಕಾಲಾವಕಾಶವಿದೆ.

ಪಾದಯಾತ್ರೆಯ ಹೆಜ್ಜೆಗಳು ಈಗ ಶಿಕಾರಿಪುರದ ರಸ್ತೆಗಳಲ್ಲಿ ಮೂಡಿವೆ. ಇದೇ ಹೆಜ್ಜೆಗಳು ಮುಂದಿನ ಚುನಾವಣೆಯಲ್ಲಿ ಮತಗಟ್ಟೆಗಳವರೆಗೆ ತಲುಪುತ್ತವೆಯೇ ಎಂಬುದೇ ಕುತೂಹಲ.

2028ರ ಚುನಾವಣೆಗೆ ಮುನ್ನ ಶಿಕಾರಿಪುರದಲ್ಲಿ ನಡೆಯಲಿರುವ ಪ್ರತಿಯೊಂದು ರಾಜಕೀಯ ಹೆಜ್ಜೆಯೂ ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವಾಗಲಿದೆಯೆ? ಕಾದುನೋಡಬೇಕಿದೆ. 

padayathre took place, what next?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close