ಶಿವಮೊಗ್ಗ ಜಿಲ್ಲೆಯ ಎಲ್ಲಾ 7 ತಾಲ್ಲೂಕುಗಳು ಬರಪೀಡಿತ ಘೋಷಣೆ- All 7 taluks of Shivamogga district declared drought-hit

 SUDDILIVE || SHIVAMOGGA

ಶಿವಮೊಗ್ಗ ಜಿಲ್ಲೆಯ ಎಲ್ಲಾ 7 ತಾಲ್ಲೂಕುಗಳು ಬರಪೀಡಿತ ಘೋಷಣೆ- All 7 taluks of Shivamogga district declared drought-hit   
Shivamogga, draught


ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಇದರೊಂದಿಗೆ ಜಿಲ್ಲೆಯ ಎಲ್ಲಾ ಏಳು ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾದಂತಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಡೆಸಿದ ವೈಜ್ಞಾನಿಕ ಪರಿಶೀಲನೆಯ ಆಧಾರದ ಮೇಲೆ ಕಂದಾಯ ಇಲಾಖೆ ಈ ಆದೇಶ ಹೊರಡಿಸಿದೆ. ಹೊಸದಾಗಿ ಬರಪೀಡಿತ ಪಟ್ಟಿಗೆ ಸೇರ್ಪಡೆಯಾದ ಒಂಬತ್ತು ತಾಲ್ಲೂಕುಗಳ ಪೈಕಿ ಸಾಗರ ಮತ್ತು ಹೊಸನಗರ ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ.

ಈ ಹಿಂದೆ ಅಕ್ಟೋಬರ್ 7ರಂದು ರಾಜ್ಯ ಸರ್ಕಾರ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸೊರಬ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಈ ಪೈಕಿ ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಎಂದು ಗುರುತಿಸಲಾಗಿತ್ತು. ಉಳಿದ ಮೂರು ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿತ್ತು.

ಈಗ ಸಾಗರ ಮತ್ತು ಹೊಸನಗರ ತಾಲ್ಲೂಕುಗಳೂ ಪಟ್ಟಿಗೆ ಸೇರ್ಪಡೆಯಾಗಿರುವುದರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಪೀಡಿತ ವ್ಯಾಪ್ತಿಗೆ ಬಂದಿವೆ.

ರೈತರ ಮನವಿಗೆ ಸ್ಪಂದನೆ

ಸಾಗರ ಮತ್ತು ಹೊಸನಗರ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕೆಂದು ರೈತರು ಹಾಗೂ ರೈತ ಸಂಘಟನೆಗಳು ಒತ್ತಾಯಿಸಿದ್ದವು. ಈ ಕುರಿತು ಪ್ರತಿಭಟನೆಗಳನ್ನೂ ನಡೆಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರು ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಸಾಗರದಲ್ಲಿ ನಡೆದ ಪ್ರಜಾಸೇವೆ ಆಂದೋಲನದ ಸಂದರ್ಭ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಎರಡೂ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಮನವಿ ಮಾಡಿದ್ದರು.

ಈ ವಿಚಾರವನ್ನು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಗಮನಕ್ಕೆ ತಂದಿದ್ದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಬೆಳೆ ಹಾನಿ ಸಮೀಕ್ಷೆಗೆ ಸೂಚನೆ

ಬರಪೀಡಿತ ತಾಲ್ಲೂಕುಗಳಲ್ಲಿ ಎಸ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಅಗತ್ಯ ಪರಿಹಾರ ಮತ್ತು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ, ಬೆಳೆ ಹಾನಿಯ ನಿಖರ ವರದಿಯನ್ನು ತಕ್ಷಣ ಸರ್ಕಾರಕ್ಕೆ ಸಲ್ಲಿಸುವಂತೆ ರಾಜ್ಯ ಪರಿಹಾರ ಆಯುಕ್ತರು ಸೂಚಿಸಿದ್ದಾರೆ.

ಸಚಿವ ಮಧು ಬಂಗಾರಪ್ಪ ಹೇಳಿಕೆ

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವ ಮಧು ಬಂಗಾರಪ್ಪ, ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಪ್ರತಿ ತಾಲ್ಲೂಕಿನ ಜನರು ಮತ್ತು ರೈತರು ಬರಪರಿಸ್ಥಿತಿಯ ಬಗ್ಗೆ ಮನವಿ ಸಲ್ಲಿಸಿದ್ದರು. ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಮನವಿ ಮಾಡಿದ್ದೆ ಎಂದು ತಿಳಿಸಿದ್ದಾರೆ.

ಈಗ ಹಂತ ಹಂತವಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿವೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಮತ್ತು ನೆರವು ದೊರೆಯಲಿದ್ದು, ಸ್ವಲ್ಪಮಟ್ಟಿಗಾದರೂ ನೆಮ್ಮದಿ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಸಚಿವರು ಹೇಳಿದ್ದಾರೆ.

All 7 taluks of Shivamogga district declared drought-hit

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close