11 ದಿನಗಳ ವೈಭವ ದಸರಾ ಈ ಬಾರಿ ದೇವಿಗೆ ಚಿನ್ನದ ಮುಖವಾಡ- 11-day Vaibhav Dussehra: This time, the goddess gets a golden mask

SUDDILIVE || SHIVAMOGGA

11 ದಿನಗಳ ವೈಭವ ದಸರಾ ಈ ಬಾರಿ ದೇವಿಗೆ ಚಿನ್ನದ ಮುಖವಾಡ- 11-day Vaibhav Dussehra: This time, the goddess gets a golden mask  

Shivamogga, dasara





ಶಿವಮೊಗ್ಗ: ಶಿವಮೊಗ್ಗದ ನಾಡಹಬ್ಬ ದಸರಾವನ್ನು ಈ ಬಾರಿ ಅತ್ಯಂತ ವೈಭವ ಹಾಗೂ ವಿಜೃಂಭಣೆಯಿಂದ ಆಚರಿಸಲು ಮಹಾನಗರ ಪಾಲಿಕೆ ನೇತೃತ್ವದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಹಾಗೂ 14 ದಸರಾ ಸಮಿತಿಗಳ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ತಿಳಿಸಿದ್ದಾರೆ.

ನಗರದಲ್ಲಿ ಆಯೋಜಿಸಿರುವ ದಸರಾ ಕಾರ್ಯಕ್ರಮಗಳ ಕುರಿತು ಮಾತನಾಡಿದ ಅವರು, ಪಕ್ಷಭೇದ ಮರೆತು ಶಿವಮೊಗ್ಗದ ನಾಡಹಬ್ಬವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಚಾಮುಂಡೇಶ್ವರಿ ವಿಗ್ರಹಕ್ಕೆ ಹಂತ ಹಂತವಾಗಿ ವೈಭವದ ಅಲಂಕಾರ

ಇದೇ ವೇಳೆ ಚಾಮುಂಡೇಶ್ವರಿ ವಿಗ್ರಹದ ಅಲಂಕಾರದ ಕುರಿತು ಮಾತನಾಡಿದ ಶಾಸಕರು, ಇದು ನಾಗರಿಕರ ಶ್ರದ್ಧೆಗೆ ಸಂಬಂಧಿಸಿದ ವಿಚಾರವಾಗಿದ್ದು, ಮಹಾನಗರ ಪಾಲಿಕೆ ವತಿಯಿಂದ ಹಂತ ಹಂತವಾಗಿ ಅಲಂಕಾರಕ್ಕೆ ಹೆಚ್ಚಿನ ವೈಭವ ನೀಡಲಾಗುತ್ತಿದೆ ಎಂದರು.

ಆರಂಭದಲ್ಲಿ ವಿಗ್ರಹ ಸ್ಥಾಪನೆಗೆ ಮುಂದಾದ ಬಳಿಕ, ಚಾಮುಂಡೇಶ್ವರಿ ವಿಗ್ರಹಕ್ಕೆ ಬಳೆ, ಒಲೆ, ಹಾರ, ಬಟ್ಟೆ ಹಾಗೂ ಮೂಗುತಿ ಸೇರಿದಂತೆ ವಿವಿಧ ಆಭರಣಗಳನ್ನು ಹಂತ ಹಂತವಾಗಿ ಸಿದ್ಧಪಡಿಸಲಾಗಿದೆ. ಈಗಾಗಲೇ ಆರು ಬಳೆಗಳನ್ನು ಮಾಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಣ್ಣಪುಟ್ಟ ಅಲಂಕಾರಗಳನ್ನು ಸೇರ್ಪಡೆಗೊಳಿಸುವ ಚಿಂತನೆಯಿದೆ ಎಂದು ತಿಳಿಸಿದರು.

ಪ್ರತಿಬಾರಿ ಬೆಳ್ಳಿ ವಿಗ್ರಹ ಚಾಮುಂಡೇಶ್ವರಿಯನ್ನ ಅಂಬಾರಿಯಲ್ಲಿ ಕೂರಿಸಲಾಗುತ್ತಿತ್ತು.‌ ಈ ಬಾರಿ ಚಿನ್ನದ ಮುಖವಾಡದೊಂಡಿದೆ ಅಂಬಾರಿ ಏರಲಿದ್ದಾರೆ ಎಂದರು. 

ದಸರಾ ವೆಚ್ಚಕ್ಕೆ ₹2.10 ಕೋಟಿ ಬಜೆಟ್

ಪಾಲಿಕೆ ಆಯುಕ್ತ ಮಾಯಣ್ಣಗೌಡ ಮಾತನಾಡಿ ಚಾಮುಂಡೇಶ್ವರಿ ಅಲಂಕಾರ ಸೇರಿದಂತೆ ದಸರಾ ಕಾರ್ಯಕ್ರಮಗಳಿಗೆ ಒಟ್ಟು ₹2.10 ಕೋಟಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಇದರಲ್ಲಿ ಕರ್ನಾಟಕ ಸರ್ಕಾರದಿಂದ ₹50 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಉಳಿದ ₹1.60 ಕೋಟಿ ಪಾಲಿಕೆ ಅನುದಾನ ಎಂದು ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇನ್ನಷ್ಟು ಅನುದಾನ ಪಡೆಯಲು ಪ್ರಯತ್ನ ನಡೆಯುತ್ತಿದ್ದು, ಹೆಚ್ಚುವರಿ ಅನುದಾನ ಬಂದರೆ ಮಹಾನಗರ ಪಾಲಿಕೆಯ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದರು. ಇದಲ್ಲದೆ, ಮಂಡಳಿಯ ವತಿಯಿಂದಲೂ ಸುಮಾರು ₹25 ಲಕ್ಷ ನೆರವು ನೀಡಲಾಗಿದೆ ಎಂದು ತಿಳಿಸಲಾಯಿತು.

ಸ್ವಚ್ಛತೆಗೆ ವಿಶೇಷ ಆದ್ಯತೆ

ಶಾಸಕ ಚೆನ್ನಿ ಮಾತನಾಡಿ ದಸರಾ ಸಂದರ್ಭದಲ್ಲಿ ಶಿವಮೊಗ್ಗ ನಗರದಲ್ಲಿ ಸ್ವಚ್ಛತೆಗೆ ಯಾವುದೇ ಸಮಸ್ಯೆಯಾಗದಂತೆ ಪೌರಸೇವಾ ನೌಕರರು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ತಂಡದಲ್ಲಿ 10ರಿಂದ 15 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಕ್ರಮದ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪೌರಸೇವಾ ನೌಕರರ ಸಂಘದ ಅಧ್ಯಕ್ಷರು ಸೇರಿದಂತೆ ಸಿಬ್ಬಂದಿ ತಂಡವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಲಾಯಿತು.

ಒಟ್ಟಾರೆ ಈ ಬಾರಿಯ ದಸರಾ ಹಾಗೂ ವಿಜಯದಶಮಿ ಆಚರಣೆಯನ್ನು ವೈಭವಯುತ ಮತ್ತು ಅರ್ಥಪೂರ್ಣವಾಗಿ ನಡೆಸಲು ಮಹಾನಗರ ಪಾಲಿಕೆ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಯಿತು.

11 ದಿನಗಳ ಕಾಲ ದಸರಾ ಆಚರಣೆ

ಈ ಬಾರಿ ಶಿವಮೊಗ್ಗ ದಸರಾ ವಿಶೇಷವಾಗಿ 11 ದಿನಗಳ ಕಾಲ ನಡೆಯಲಿದೆ. ಅ.11ರಂದು ಬೆಳಗ್ಗೆ 10.30ಕ್ಕೆ ಖ್ಯಾತ ಹಿರಿಯ ಚಲನಚಿತ್ರ ನಟ ಶ್ರೀನಾಥ್ ಅವರು ದಸರಾ ಉದ್ಘಾಟಿಸಲಿದ್ದಾರೆ. ವಿವಿಧ ಸಮಿತಿಗಳ ಮೂಲಕ ಮಹಿಳಾ ದಸರಾ, ಮಕ್ಕಳ ದಸರಾ, ಸಾಂಸ್ಕೃತಿಕ ದಸರಾ, ಯುವ ದಸರಾ, ರಂಗ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಚನ್ನಬಸಪ್ಪ ಹೇಳಿದರು.

ಮಕ್ಕಳ ದಸರಾವನ್ನು ಈಗಾಗಲೇ ಉದ್ಘಾಟಿಸಲಾಗಿದ್ದು, ಅ.18ರಂದು ಹಿರಿಯ ನಟಿ ಪದ್ಮಾವಾಸಂತಿ ಅವರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ದಸರಾ ಕಾರ್ಯಕ್ರಮ ನಡೆಯಲಿದೆ. ಅ.20ರಂದು ಖ್ಯಾತ ನಟ ರವಿಚಂದ್ರನ್ ಅವರು ಯುವ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ದಸರಾ ಕಾರ್ಯಕ್ರಮಗಳ ಆಯೋಜನೆಗೆ ವಿಶೇಷ ಆಸಕ್ತಿ ವಹಿಸಿದ್ದು, ರವಿಚಂದ್ರನ್ ಅವರ ಕಾರ್ಯಕ್ರಮದ ದಿನಾಂಕ ಹೊಂದಾಣಿಕೆ ಸೇರಿದಂತೆ ಅಗತ್ಯ ಸಹಕಾರ ನೀಡಿದ್ದಾರೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದರು.

ಚಾಮುಂಡೇಶ್ವರಿ ಉತ್ಸವಕ್ಕೆ ಮೂರು ಆನೆಗಳು

ಈ ಬಾರಿಯ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಚಾಮುಂಡೇಶ್ವರಿ ಉತ್ಸವವೂ ಒಂದಾಗಿದೆ. ಸಕ್ರೆಬೈಲು ಆನೆ ಶಿಬಿರದಿಂದ ಮೂರು ಆನೆಗಳು—ಬಹದ್ದೂರ್, ಸೋಮಣ್ಣ ಹಾಗೂ ಸಾಗರ್—ದಸರಾ ಉತ್ಸವದಲ್ಲಿ ಭಾಗವಹಿಸಲಿವೆ.

ಅ.11ರಂದು ಮಹಾನಗರ ಪಾಲಿಕೆ ಆವರಣದಿಂದ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ನಡೆಯಲಿದ್ದು, ಬಳಿಕ 11 ದಿನಗಳ ಕಾಲ ಪುರಾಣೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ದೇವಿಗೆ ವಿಶೇಷ ಆಭರಣಗಳನ್ನು ಸಮರ್ಪಿಸುವ ಸಂಪ್ರದಾಯ ಮುಂದುವರಿದಿದ್ದು, ಈ ಬಾರಿ ಚಾಮುಂಡೇಶ್ವರಿ ದೇವಿಯ ಚಿನ್ನದ ಮುಖವಾಡವನ್ನು ಸಿದ್ಧಪಡಿಸಲಾಗಿದೆ. ಬೆಳ್ಳಿ ಮಂಟಪ ಹಾಗೂ ಬೆಳ್ಳಿಯ ವಿಗ್ರಹದೊಂದಿಗೆ ಚಾಮುಂಡೇಶ್ವರಿ ಉತ್ಸವಕ್ಕೆ ಮತ್ತಷ್ಟು ವೈಭವ ನೀಡಲಾಗಿದೆ ಎಂದು ಅವರು ವಿವರಿಸಿದರು.

ಆನೆಗಳ ವ್ಯವಸ್ಥೆಗೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ ಸಹಕಾರ ದೊರೆತಿದ್ದು, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಆನೆಗಳನ್ನು ಒದಗಿಸಲು ವಿಶೇಷವಾಗಿ ಅನುಮತಿ ನೀಡಿದ್ದಾರೆ ಎಂದು ಚನ್ನಬಸಪ್ಪ ಹೇಳಿದರು.

200ಕ್ಕೂ ಹೆಚ್ಚು ದೇವತೆಗಳ ಉತ್ಸವ

ಅ.21ರಂದು ಶಿವಪ್ಪನಾಯಕ ಅರಮನೆ ಆವರಣದಿಂದ ಶಿವಮೊಗ್ಗ ನಗರದ 200ಕ್ಕೂ ಹೆಚ್ಚು ದೇವಾತಿದೇವತೆಗಳ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಚಿವರು ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ದಸರಾ ಸಂದರ್ಭದಲ್ಲಿ ಲಕ್ಷಾಂತರ ಜನರು ನಗರಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭದ್ರತೆ, ಸಂಚಾರ ಹಾಗೂ ಅಗತ್ಯ ಮೂಲಸೌಕರ್ಯಗಳ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

25 ದಿನಗಳ ರಂಗ ದಸರಾ, ಕಲಾ ದಸರಾ

ಈ ಬಾರಿ ರಂಗ ದಸರಾವನ್ನು 25 ದಿನಗಳ ಚಟುವಟಿಕೆಗಳೊಂದಿಗೆ ಆಯೋಜಿಸಲು ಯೋಜಿಸಲಾಗಿದೆ. ಶಿವಪ್ಪನಾಯಕ ಅರಮನೆ ಆವರಣದಲ್ಲಿ ವಿವಿಧ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಶಿವಪ್ಪನಾಯಕ ಅರಮನೆಯಲ್ಲಿಯೇ ದಸರಾ ಮೆರವಣಿಗೆಗಳು ಹಾಗೂ ದೇವತೆಗಳ ಉತ್ಸವಗಳಿಗೆ ಚಾಲನೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಮಹಾನಗರ ಪಾಲಿಕೆ ಕಟ್ಟಡದಲ್ಲಿ ಲೇಸರ್ ಶೋ

ದಸರಾ ಪ್ರಯುಕ್ತ ಶಿವಮೊಗ್ಗ ಮಹಾನಗರ ಪಾಲಿಕೆ ಕಟ್ಟಡಕ್ಕೆ ವಿಶೇಷ ಅಲಂಕಾರ ಮಾಡಲಾಗಿದ್ದು, 11 ದಿನಗಳ ಕಾಲ ಲೇಸರ್ ಲೈಟಿಂಗ್ ಶೋ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ಸಾರ್ವಜನಿಕರು ಪಾಲಿಕೆ ಆವರಣಕ್ಕೆ ಆಗಮಿಸಿ ಲೇಸರ್ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.

ವಿಜಯದಶಮಿ ದಿನ ಅಲ್ಲಮ್ಮಪ್ರಭು ಮೈದಾನ ಹಾಗೂ ಫ್ರೀಡಂ ಪಾರ್ಕ್‌ನಲ್ಲಿ 3D ಲೇಸರ್ ಶೋ ಆಯೋಜಿಸಲಾಗಿದೆ. ಬನ್ನಿ ಮುಡಿಯುವ ಕಾರ್ಯಕ್ರಮ ಹಾಗೂ ಪಟಾಕಿ ಪ್ರದರ್ಶನದ ಬಳಿಕ ನಡೆಯಲಿರುವ ಈ ಲೇಸರ್ ಶೋ ದಸರಾ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಲಿದೆ ಎಂದು ಚನ್ನಬಸಪ್ಪ ಹೇಳಿದರು.

ನಾಣ್ಯ ಪ್ರದರ್ಶನಕ್ಕೆ ವಿಶೇಷ ಅವಕಾಶ

ದಸರಾ ಅಂಗವಾಗಿ ನಾಣ್ಯ ಸಂಗ್ರಹಕರ ಸಂಘದ ಸಹಯೋಗದಲ್ಲಿ ಐತಿಹಾಸಿಕ ನಾಣ್ಯಗಳ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಈ ಪ್ರದರ್ಶನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಹಳೆಯ ನಾಣ್ಯಗಳ ಮೂಲಕ ನಾಡಿನ ಇತಿಹಾಸ ಮತ್ತು ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ

ಶಿವಮೊಗ್ಗ ದಸರಾ ಕೇವಲ ಒಂದು ಕಾರ್ಯಕ್ರಮವಲ್ಲ, ಇದು ನಗರದ ನಾಡಹಬ್ಬವಾಗಿದ್ದು, ಜಿಲ್ಲೆಯಾದ್ಯಂತದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಚನ್ನಬಸಪ್ಪ ಮನವಿ ಮಾಡಿದರು.

“ಈ ಬಾರಿ ದಸರಾ ನಾಡಹಬ್ಬ ಅತ್ಯಂತ ವಿಜೃಂಭಣೆಯಿಂದ ಹಾಗೂ ವೈಭವಯುತವಾಗಿ ನಡೆಯಲಿದೆ. ಯಾವುದೇ ರೀತಿಯ ಅಡೆತಡೆಗಳಿಲ್ಲದೆ ಕಾರ್ಯಕ್ರಮ ಯಶಸ್ವಿಯಾಗಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಿವಮೊಗ್ಗ ನಗರದ ನಾಗರಿಕರು ಹಾಗೂ ಜಿಲ್ಲೆಯ ಜನರು ಎಲ್ಲ ಕಾರ್ಯಕ್ರಮಗಳಲ್ಲೂ ಸಡಗರ-ಸಂಭ್ರಮದಿಂದ ಪಾಲ್ಗೊಂಡು ದಸರಾವನ್ನು ಯಶಸ್ವಿಗೊಳಿಸಬೇಕು” ಎಂದು ಅವರು ಮನವಿ ಮಾಡಿದರು.

11-day Vaibhav Dussehra: This time, the goddess gets a golden mask 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close