SUDDILIVE || SHIVAMOGGA
ಗೋಪಾಲಗೌಡ ಬಡಾವಣೆಯಲ್ಲಿ ಕಳಪೆ ಚರಂಡಿ ಕಾಮಗಾರಿ ಆರೋಪ: ನಾಗರಿಕ ಹಿತರಕ್ಷಣಾ ವೇದಿಕೆ ಪ್ರತಿಭಟನೆ- Allegations of poor drainage work in Gopalagowda Layout: Civil Protection Forum protests
ಶಿವಮೊಗ್ಗ: ನಗರದ ಗೋಪಾಲಗೌಡ ಬಡಾವಣೆಯ 60 ಅಡಿ ಮುಖ್ಯ ರಸ್ತೆಯ ‘ಇ’ ಬ್ಲಾಕ್ನಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ವಿಕಾಸ ಯೋಜನೆಯಡಿ ₹132 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಚರಂಡಿ ಕಾಮಗಾರಿಯ ಗುಣಮಟ್ಟದ ಬಗ್ಗೆ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಮುಖರಾದ ಕೆ.ವಿ. ವಸಂತ್ ಕುಮಾರ್ ಹಾಗೂ ಡಾ. ಎ. ಸತೀಶ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿಗೆ ಸಂಬಂಧಿಸಿದ ಡಿಪಿಆರ್, ಟೆಂಡರ್ ಸೇರಿದಂತೆ ಹಲವು ಪ್ರಕ್ರಿಯೆಗಳು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಶಿವಮೊಗ್ಗದಲ್ಲಿ ಕಾಮಗಾರಿ ಮಾತ್ರ ನಡೆಯುತ್ತಿದೆ. ಕಾಮಗಾರಿಯ ಗುಣಮಟ್ಟದ ಮೇಲ್ವಿಚಾರಣೆ ನಡೆಸಬೇಕಾದ ಮಹಾನಗರ ಪಾಲಿಕೆಯ ಇಂಜಿನಿಯರ್ಗಳು ಹಾಗೂ ಗುಣಮಟ್ಟ ಪರೀಕ್ಷಾ ಇಂಜಿನಿಯರ್ಗಳು ಕಾಮಗಾರಿ ನಡೆಯುವ ವೇಳೆ ಸ್ಥಳದಲ್ಲಿ ಸಮರ್ಪಕವಾಗಿ ಹಾಜರಿರುವುದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾಮಗಾರಿ ಆರಂಭದಲ್ಲೇ ವೇದಿಕೆಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದರು.
ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಕಾಮಗಾರಿ ಕಳಪೆಯಾಗಿರುವುದು ಕಂಡುಬಂದರೆ ಸಂಪೂರ್ಣವಾಗಿ ಹೊಸದಾಗಿ ಮಾಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ವೇದಿಕೆಯ ಪ್ರಮುಖರು ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಸ್ಥಳಕ್ಕೆ ಹಾಜರಾದ ಮಹಾನಗರ ಪಾಲಿಕೆಯ ಇಂಜಿನಿಯರ್ಗಳಾದ ತೇಜ್ ಪ್ರಸಾದ್, ಜ್ಯೋತಿ ಹಾಗೂ ಸಂತೋಷ್ ಅವರು ಕಾಮಗಾರಿಯಲ್ಲಿ ಗುಣಮಟ್ಟದ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಕೆ.ವಿ. ವಸಂತ್ ಕುಮಾರ್, ಡಾ. ಎ. ಸತೀಶ್ ಕುಮಾರ್ ಶೆಟ್ಟಿ, ಜಿ.ಡಿ. ಮಂಜುನಾಥ್, ಮಹೇಶ್, ಟಿ.ಆರ್. ಅಶ್ವಥ್ ನಾರಾಯಣ ಶೆಟ್ಟಿ, ಅಶೋಕ್ ಕುಮಾರ್, ಜಿತೇಂದ್ರ, ಸೀತಾರಾಮ್, ವಿನೋದ್ ಪೈ, ಜನಾರ್ದನ ಪೈ, ನಾಗರಾಜ್, ನಾಗರಾಜ್ ಶೆಟ್ಟಿ, ವೆಂಕಟೇಶ್, ಜನಾರ್ದನ್, ಗಿರೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
