ಅನಾಹುತಗಳ ನಡುವೆಯೂ ಬನ್ನಿ ಕಡಿಯುವ ಮೂಲಕ ಶಿವಮೊಗ್ಗ ದಸರಾ ಸಂಪನ್ನ- Shivamogga Dasara auspicious by killing bunnies despite disasters

 SUDDILIVE || SHIVAMOGGA

ಅನಾಹುತಗಳ ನಡುವೆಯೂ ಬನ್ನಿ ಕಡಿಯುವ ಮೂಲಕ ಶಿವಮೊಗ್ಗ ದಸರಾ ಸಂಪನ್ನ- Shivamogga Dasara auspicious by cutting bunnies despite disasters   
Dasara, disaster

ಶಿವಮೊಗ್ಗ: ಜಂಬೂ ಸವಾರಿ ವೇಳೆ ಸಂಭವಿಸಿದ ಅನಾಹುತಗಳ ನಡುವೆಯೂ ಶಿವಮೊಗ್ಗದ ದಸರಾ ಹಬ್ಬ ಬನ್ನಿ ಕಡಿಯುವ ಮೂಲಕ ಸಂಪನ್ನಗೊಂಡಿದೆ. ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದೊಂದಿಗೆ ಹತ್ತು ದಿನಗಳ ದಸರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.

ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಅಂಬಾರಿ ಮೆರವಣಿಗೆ ಫ್ರೀಡಂ ಪಾರ್ಕ್ ತಲುಪುತ್ತಿದ್ದಂತೆ ಸಂಪ್ರದಾಯದಂತೆ ಶಿವಮೊಗ್ಗ ತಹಸೀಲ್ದಾರ್ ರಾಜೀವ್ ಅವರು ಬನ್ನಿ ಕಡಿಯುವ ಮೂಲಕ ವಿಜಯದಶಮಿಯ ವಿಧಿವಿಧಾನ ನೆರವೇರಿಸಿದರು. ಜಂಬೂ ಸವಾರಿ ವೇಳೆ ಸಂಭವಿಸಿದ ಅನಾಹುತದ ಹಿನ್ನೆಲೆಯಲ್ಲಿ ಅಂಬಾರಿಯಲ್ಲಿದ್ದ ನಾಡದೇವಿ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಲಾರಿಯಲ್ಲಿ ಫ್ರೀಡಂ ಪಾರ್ಕ್‌ಗೆ ತರಲಾಯಿತು.

ಬನ್ನಿ ಪಡೆಯಲು ಜನರ ನೂಕುನುಗ್ಗಲು

ಎತ್ತರದ ವೇದಿಕೆಯಲ್ಲಿ ಬನ್ನಿ ಕಡಿಯುವ ಕಾರ್ಯಕ್ರಮ ನಡೆಯುತ್ತಿದ್ದಂತೆ ನೆರೆದಿದ್ದ ಜನರು ಜಯಘೋಷ ಮೊಳಗಿಸುತ್ತಾ ಬನ್ನಿ ಪಡೆಯಲು ವೇದಿಕೆಯತ್ತ ಧಾವಿಸಿದರು. ಬನ್ನಿ ಪ್ರಸಾದ ಪಡೆಯಲು ಜನರು ಮುಗಿಬಿದ್ದಿದ್ದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಈ ವೇಳೆ ಸಾವಿರಾರು ಜನರು ವಿಜಯದಶಮಿಯ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದರು.

ಮಾಜಿ ಸಿಎಂ‌ ಯಡಿಯೂರಪ್ಪ, ಸಂಸದ ರಾಘವೇಂದ್ರ ಶಾಸಕ ಎಸ್.ಎನ್. ಚನ್ನಬಸಪ್ಪ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸಿದ ದೇವತೆಗಳ ಮೆರವಣಿಗೆ

ನಾಡದೇವಿ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಹೊತ್ತು ಸಾಗರ್ ಆನೆ ಫ್ರೀಡಂ ಪಾರ್ಕ್‌ಗೆ ಆಗಮಿಸುತ್ತಿದ್ದಂತೆ, ನಗರದ ವಿವಿಧ ದೇವಾಲಯಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಹಿಂಬಾಲಿಸಿ ಬಂದವು. ಝಗಮಗಿಸುವ ವಿದ್ಯುತ್ ದೀಪಾಲಂಕಾರದೊಂದಿಗೆ ದೇವತೆಗಳ ಮೆರವಣಿಗೆ ಕಂಗೊಳಿಸಿತು.

ಬನ್ನಿ ಕಡಿಯುವ ಕಾರ್ಯಕ್ರಮದ ಮತ್ತೊಂದೆಡೆ ಪಟಾಕಿಗಳ ಮೂಲಕ ರಾವಣನ ಪ್ರತಿಕೃತಿಯನ್ನು ದಹಿಸಲಾಯಿತು. ಈ ದೃಶ್ಯವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.

ಬನ್ನಿ ಹಂಚಿಕೊಂಡು ಶುಭ ಹಾರೈಸಿದ ಜನರು

ವಿಜಯದಶಮಿಯ ಸಂಪ್ರದಾಯದಂತೆ ಜನರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭ ಹಾರೈಸಿದರು. ಬನ್ನಿ ಮುಡಿದು ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ ಜನರು, ಪರಸ್ಪರ ಸುಖ, ಸಮೃದ್ಧಿ ಮತ್ತು ನೆಮ್ಮದಿಯ ಬದುಕು ಸಿಗಲಿ ಎಂದು ಹಾರೈಸಿಕೊಂಡರು.

ಜಂಬೂ ಸವಾರಿ ವೇಳೆ ಉಂಟಾದ ಅನಾಹುತದ ಕಹಿ ನೆನಪಿನ ನಡುವೆಯೂ ಸಂಪ್ರದಾಯಬದ್ಧ ಬನ್ನಿ ಕಡಿಯುವ ಕಾರ್ಯಕ್ರಮದೊಂದಿಗೆ ಶಿವಮೊಗ್ಗದ ಹತ್ತು ದಿನಗಳ ದಸರಾ ಮಹೋತ್ಸವ ಮುಕ್ತಾಯಗೊಂಡಿತು.

Shivamogga Dasara auspicious by killing bunnies despite disasters   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close