SUDDILIVE || SHIVAMOGGA
ಶಿವಮೊಗ್ಗ ದಸರಾ ಜಂಬೂಸವಾರಿ ಮೊಟಕು: ಸೋಮಣ್ಣ ಆನೆ ದಾಂಧಲೆ, ಅಂಬಾರಿಗೆ ಹಾನಿ- Shivamogga Dasara Jambu Savari cut short: Somanna elephant rampage, damage to barn
ಶಿವಮೊಗ್ಗ: ಶಿವಮೊಗ್ಗದ ದಸರಾ ಜಂಬೂಸವಾರಿ ಮೆರವಣಿಗೆ ವೇಳೆ ಸೋಮಣ್ಣ ಆನೆ ದಾರಿ ತಪ್ಪಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಚಾಮುಂಡೇಶ್ವರಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ವಾಪಸ್ ತೆರಳಿದ್ದು, ಈ ವೇಳೆ ಅಂಬಾರಿ ಕೆಳಗೆ ಬಿದ್ದು ಸಂಪೂರ್ಣ ಹಾನಿಯಾಗಿದೆ. ಘಟನೆಯಿಂದಾಗಿ ದಸರಾ ಜಂಬೂಸವಾರಿ ಮೆರವಣಿಗೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು.
ಆನೆ ಏಕಾಏಕಿ ದಿಕ್ಕು ಬದಲಿಸಿ ಸಾಗಿದ ಪರಿಣಾಮ ಸಾರ್ವಜನಿಕರು ಚಲ್ಲಾಪಿಲ್ಲಿಯಾಗಿ ಓಡಿದರು. ಈ ವೇಳೆ ಒಂದು ಕಾರು ಹಾಗೂ ಎರಡು-ಮೂರು ಬೈಕ್‌ಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಎಸ್ಪಿಎಂ ರಸ್ತೆಯ ಪಾಂಡುರಂಗ ವಿಠಲ ದೇವಸ್ಥಾನದ ಬಳಿ ಆನೆ ದಿಗಿಲು ಹತ್ತಿ ಅಂಬಾರಿ ಬೀಳಿಸಿದೆ
ಸೋಮಣ್ಣ ಆನೆ ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಹರಸಾಹಸ
ಆನೆ ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು. ಪರಿಸ್ಥಿತಿಯನ್ನು ನಿಯಂತ್ರಿಸಲು ಅರಣ್ಯ ಅಧಿಕಾರಿಗಳು ಸೋಮಣ್ಣ ಆನೆಗೆ ಅರವಳಿಕೆ ಮದ್ದು ನೀಡಿದರು. ಅಲ್ಲದೆ, ಸಾಗರ ಮತ್ತು ಬಹದ್ದೂರ್ ಆನೆಗಳ ನೆರವಿನಿಂದ ಸೋಮಣ್ಣನನ್ನು ಹತೋಟಿಗೆ ತರಲು ಪ್ರಯತ್ನಿಸಲಾಯಿತು. ಕೊನೆಗೂ ಆನೆ ನಿಯಂತ್ರಣಕ್ಕೆ ಬಂದಿದ್ದರಿಂದ ಅರಣ್ಯ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.
ಅಂಬಾರಿ ಹೊರುವ ಆನೆ ಬದಲಾವಣೆ ಕಾರಣವೇ?
ಶಿವಮೊಗ್ಗ ದಸರಾ ಅಂಬಾರಿ ಮೆರವಣಿಗೆಯಲ್ಲಿ ಈ ಬಾರಿ ನಡೆದ ಘಟನೆ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಅಂಬಾರಿ ಹೊರುವ ಆನೆಗೆ ಸಂಬಂಧಿಸಿದಂತೆ ಹಲವು ಸಂದರ್ಭಗಳಲ್ಲಿ ಸಮಸ್ಯೆಗಳು ಎದುರಾಗಿದ್ದವು ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ. ಈ ಬಾರಿ ಅಂಬಾರಿ ಹೊರುತ್ತಿದ್ದ ಆನೆ ಬದಲಾವಣೆಯೇ ಘಟನೆಗೆ ಕಾರಣವಾಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಘಟನೆಗೆ ನಿಖರ ಕಾರಣವೇನು ಎಂಬುದು ಅಧಿಕೃತವಾಗಿ ಸ್ಪಷ್ಟವಾಗಬೇಕಿದೆ. ದಸರಾ ಸಂಭ್ರಮದ ನಡುವೆ ನಡೆದ ಈ ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದ್ದು, ಜಂಬೂಸವಾರಿ ಮೊಟಕುಗೊಂಡಿದೆ. ಸೋಮಣ್ಣ ಮತ್ತು ಬಹದ್ದೂರ್ ದಿಗಿಲುಗೊಂಡು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿದೆ. ಸಾಗರ ಆನೆ ವಾಪಾಸಾಗಿದೆ
ಶಿವಮೊಗ್ಗ ದಸರಾ ಅವಾಂತರ: ದೇವಿಯ 6 ಚಿನ್ನದ ಬಳೆಗಳು ನಾಪತ್ತೆ!
ಶಿವಮೊಗ್ಗ: ನಗರದ ದಸರಾ ಜಂಬೂಸವಾರಿ ವೇಳೆ ಸೋಮಣ್ಣ ಆನೆ ಸೃಷ್ಟಿಸಿದ ಅವಾಂತರದಿಂದ ಮಹಾನಗರ ಪಾಲಿಕೆಯ ತಾಯಿ ಚಾಮುಂಡೇಶ್ವರಿ ದೇವಿಯ ಚಿನ್ನದ ಬಳೆಗಳು ನಾಪತ್ತೆಯಾಗಿವೆ.
ತಾಯಿ ಚಾಮುಂಡೇಶ್ವರಿಯ ಕೈಗೆ ಒಟ್ಟು 8 ಚಿನ್ನದ ಬಳೆಗಳನ್ನು ತೊಡಿಸಲಾಗಿತ್ತು. ಜಂಬೂಸವಾರಿ ವೇಳೆ ನಡೆದ ಅವಘಡದ ಬಳಿಕ ಈ ಬಳೆಗಳ ಪೈಕಿ ಎರಡು ಬಳೆಗಳು ಮಾತ್ರ ಪತ್ತೆಯಾಗಿದ್ದು, ಉಳಿದ ಆರು ಬಳೆಗಳು ಕಾಣೆಯಾಗಿವೆ.
ಆನೆ ಸೃಷ್ಟಿಸಿದ ಅವಾಂತರದಿಂದ ಅಂಬಾರಿ ಕೆಳಗೆ ಬಿದ್ದು ಹಾನಿಯಾಗಿತ್ತು. ಇದೀಗ ದೇವಿಯ ಚಿನ್ನದ ಬಳೆಗಳು ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕಾಣೆಯಾದ ಆರು ಬಳೆಗಳ ಪತ್ತೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ
