SUDDILIVE || SHIVAMOGGA
ಶಿವಮೊಗ್ಗ ದಸರಾ ಉತ್ಸವದಲ್ಲಿ ಕಾರ್ಮಿಕ ದಸರಾಕ್ಕೆ ಅವಕಾಶ ನೀಡದ ಆರೋಪ: ಅಸಂಘಟಿತ ಕಾರ್ಮಿಕರ ಪ್ರತಿಭಟನೆ-Unorganized workers protest against allegations of not allowing workers to celebrate Dasara at Shivamogga Dasara festival
ಶಿವಮೊಗ್ಗ: 2026ನೇ ಸಾಲಿನ ಶಿವಮೊಗ್ಗ ದಸರಾ ಉತ್ಸವದಲ್ಲಿ ಕಾರ್ಮಿಕ ದಸರಾವನ್ನು ಸೇರ್ಪಡೆ ಮಾಡದಿರುವುದನ್ನು ಖಂಡಿಸಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು, ದಸರಾ ಉತ್ಸವದಲ್ಲಿ ಕಾರ್ಮಿಕ ದಸರಾ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಚಾಲಕರು, ಆಟೋ ಚಾಲಕರು, ಹಮಾಲಿಗಳು, ಕುಂಬಾರರು, ಮಡಿವಾಳರು, ಮನೆ ಕೆಲಸಗಾರರು, ಟೈಲರ್‌ಗಳು, ಅಡುಗೆ ಕಾರ್ಮಿಕರು, ಅಕ್ಕಸಾಲಿಗರು, ಫೋಟೋಗ್ರಾಫರ್‌ಗಳು, ಪತ್ರಿಕೆ ವಿತರಕರು, ಸಿನಿಮಾ ಮಂದಿರ ಹಾಗೂ ಹೋಟೆಲ್ ಕಾರ್ಮಿಕರು, ಗಿಗ್ ಕಾರ್ಮಿಕರು, ಬ್ಯೂಟಿಷಿಯನ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರನ್ನು ದಸರಾ ಸಂದರ್ಭದಲ್ಲಿ ಗೌರವಿಸಬೇಕು ಎಂದು ಸಂಘ ಆಗ್ರಹಿಸಿದೆ.
ಈ ಹಿಂದೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ಪಕ್ಷಗಳ ಜಿಲ್ಲಾಧ್ಯಕ್ಷರು, ಮಾಜಿ ಸಂಸದರು ಹಾಗೂ ಮಾಜಿ ಶಾಸಕರಿಗೂ ಕಾರ್ಮಿಕ ದಸರಾವನ್ನು ದಸರಾ ಉತ್ಸವದಲ್ಲಿ ಸೇರ್ಪಡೆಗೊಳಿಸುವಂತೆ ಮನವಿ ಮಾಡಲಾಗಿತ್ತು. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಮಹಾನಗರ ಪಾಲಿಕೆಯಿಂದ ಕಾರ್ಮಿಕ ದಸರಾಕ್ಕೆ ಅವಕಾಶ ನೀಡದಿರುವುದು ಖಂಡನೀಯ ಎಂದು ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆಯ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿಯೇ ಪ್ರತಿಭಟನೆ ನಡೆಸಲು ಸಂಘ ನಿರ್ಧರಿಸಿತ್ತು. ಆದರೆ ನಾಡಹಬ್ಬ ದಸರಾ ಕಾರ್ಯಕ್ರಮಕ್ಕೆ ಯಾವುದೇ ಗೊಂದಲ ಉಂಟಾಗಬಾರದು ಎಂಬ ಉದ್ದೇಶದಿಂದ ಆಯುಕ್ತರ ಕಚೇರಿ ಆವರಣದಲ್ಲಿ ಪ್ರತಿಭಟನೆ ದಾಖಲಿಸಲಾಗಿದೆ ಎಂದು ಸಂಘ ತಿಳಿಸಿದೆ.
ದಸರಾ ಉತ್ಸವದಲ್ಲಿ ಕಾರ್ಮಿಕ ದಸರಾವನ್ನು ಸೇರ್ಪಡೆಗೊಳಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಎಚ್ಚರಿಕೆ ನೀಡಿದೆ.
Unorganized workers protest against allegations of not allowing workers to celebrate Dasara at Shivamogga Dasara festival
