ಶಿವಮೊಗ್ಗ: ₹5 ಲಕ್ಷ ನಗದು, ಚಿನ್ನಕ್ಕೆ ಒತ್ತಾಯ; ಪತಿ ಸೇರಿ ಐವರ ವಿರುದ್ಧ ಪ್ರಕರಣ-Shivamogga: Extortion of ₹5 lakh cash, gold; Case against five including husband

SUDDILIVE || SHIVAMOGGA

ಶಿವಮೊಗ್ಗ: ₹5 ಲಕ್ಷ ನಗದು, ಚಿನ್ನಕ್ಕೆ ಒತ್ತಾಯ; ಪತಿ ಸೇರಿ ಐವರ ವಿರುದ್ಧ ಪ್ರಕರಣ-Shivamogga: Extortion of ₹5 lakh cash, gold; Case against five including husband    

Dowry, harrassment


ಶಿವಮೊಗ್ಗ:
₹5 ಲಕ್ಷ ನಗದು ಹಾಗೂ ಚಿನ್ನ ತರುವಂತೆ ಒತ್ತಾಯಿಸಿ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಪತಿ ಸೇರಿದಂತೆ ಐವರ ವಿರುದ್ಧ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಳೆಹಟ್ಟಿ ಗ್ರಾಮದ ಹೆಚ್.ಎಂ. ನಾಗರತ್ನ (36) ನೀಡಿದ ದೂರಿನ ಮೇರೆಗೆ ಹೊಳಲೂರು ಗ್ರಾಮದ ನಾಗರಾಜ, ಶಾಂತಮ್ಮ ಹಾಗೂ ಮಡಿಕೆ ಚೀಲೂರು ಗ್ರಾಮದ ಲೀಲಾವತಿ, ಮಂಜುನಾಥ ಮತ್ತು ಕುಬೇರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.

ನಾಗರಾಜ ಅವರೊಂದಿಗೆ 2012ರ ಫೆಬ್ರವರಿ 2ರಂದು ಶಿವಮೊಗ್ಗದ ವೀರಶೈವ ಕಲ್ಯಾಣ ಮಂಟಪದಲ್ಲಿ ವಿವಾಹವಾಗಿತ್ತು. ಮದುವೆ ಸಂದರ್ಭದಲ್ಲಿ ತವರು ಮನೆಯವರು ₹1.20 ಲಕ್ಷ ನಗದು, 20 ಗ್ರಾಂ ಚಿನ್ನದ ಬ್ರಾಸ್ಲೆಟ್‌, 12 ಗ್ರಾಂ ಉಂಗುರ, 16 ಗ್ರಾಂ ಚಿನ್ನದ ಸರ ಹಾಗೂ ಬಟ್ಟೆಬರೆ ಸೇರಿದಂತೆ ಸುಮಾರು ₹15 ಲಕ್ಷ ಖರ್ಚು ಮಾಡಿದ್ದರು ಎಂದು ನಾಗರತ್ನ ದೂರಿನಲ್ಲಿ ತಿಳಿಸಿದ್ದಾರೆ.

ವಿವಾಹವಾದ ಮೂರು ತಿಂಗಳ ಬಳಿಕ ಪತಿ ಹಾಗೂ ಕುಟುಂಬದವರು ಸಣ್ಣಪುಟ್ಟ ವಿಚಾರಗಳಿಗೆ ಬೈದು, ಹಲ್ಲೆ ಮಾಡುತ್ತಿದ್ದರು. ತವರು ಮನೆಯಿಂದ ₹5 ಲಕ್ಷ ನಗದು ಹಾಗೂ 10 ತೊಲ ಚಿನ್ನ ತರುವಂತೆ ಒತ್ತಾಯಿಸಿ, ಹಣ ಮತ್ತು ಚಿನ್ನ ನೀಡದಿದ್ದರೆ ವಿಚ್ಛೇದನ ನೀಡುವುದಾಗಿ ಬೆದರಿಸಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

2014ರಲ್ಲಿ ಹೆಣ್ಣು ಮಗು ಜನಿಸಿದ ಬಳಿಕವೂ ಕಿರುಕುಳ ಮುಂದುವರಿದಿತ್ತು. ಬಳಿಕ ₹5 ಲಕ್ಷ ನಗದು ಹಾಗೂ 5 ತೊಲ ಚಿನ್ನ ತರುವಂತೆ ಒತ್ತಾಯಿಸಿ ಮನೆಯಿಂದ ಹೊರಹಾಕಿದ್ದರು. ಈ ಕುರಿತು ಪೋಷಕರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪತಿ 2016ರಲ್ಲಿ ಶಿವಮೊಗ್ಗದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ತಮ್ಮ ಪರವಾಗಿ ಆದೇಶವಾಗಿದ್ದು, ಬಳಿಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ವಿಚಾರಣೆ ನಡೆಯುತ್ತಿದೆ ಎಂದು ನಾಗರತ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸುಮಾರು 15 ದಿನಗಳ ಹಿಂದೆ ಪಂಚಾಯಿತಿಗಾಗಿ ಆರೋಪಿಗಳ ಮನೆಗೆ ತೆರಳಿದ್ದ ಸಂದರ್ಭದಲ್ಲಿ, ವರದಕ್ಷಿಣೆ ಹಾಗೂ ಹಣ ನೀಡಿದರೆ ಮಾತ್ರ ಮನೆಗೆ ಬರುವಂತೆ ಹೇಳಿ, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಪತಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಹಲವು ಬಾರಿ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗಲೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Shivamogga: Extortion of ₹5 lakh cash, gold; Case against five including husband    


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close