SUDDILIVE || SHIVAMOGGA
ಚಿನ್ನದ ಪಾದುಕೆ ಕಳವು ಆರೋಪ: ಮಾನನಷ್ಟ ಮೊಕದ್ದಮೆಗೆ ಚಿಂತನೆ-Accused of stealing gold sandals: Defamation suit contemplated
ಶಿವಮೊಗ್ಗ: ಕೂಡಲಿ ಶೃಂಗೇರಿ ಮಠದ ಚಿನ್ನದ ಪಾದುಕೆಗಳು ಕಳುವಾಗಿವೆ ಎಂದು ದೂರು ನೀಡಿ, ತಮ್ಮನ್ನು ಪ್ರಕರಣದಲ್ಲಿ ಅನುಮಾನಕ್ಕೆ ಗುರಿಪಡಿಸುವ ರೀತಿಯಲ್ಲಿ ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲು ಚಿಂತಿಸಲಾಗುತ್ತಿದೆ ಎಂದು ಮಠದ ಭಕ್ತ ಶ್ರೀನಿವಾಸ ಅಯ್ಯರ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ವ್ಯವಸ್ಥಾಪಕರೆಂದು ಹೇಳಿಕೊಂಡ ರಮೇಶ್ ಹುಲಿಮನಿ ಅವರು 2024ರ ಆಗಸ್ಟ್ 19ರಂದು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ₹70 ಲಕ್ಷ ಮೌಲ್ಯದ ಚಿನ್ನದ ಪಾದುಕೆಗಳು ಕಳುವಾಗಿವೆ ಎಂದು ದೂರು ನೀಡಿದ್ದರು ಎಂದು ಹೇಳಿದರು.
ಬಳಿಕ ಮಠದ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳು, ತಮ್ಮ ಸೂಚನೆಯಂತೆ ದೂರು ದಾಖಲಾಗಿಲ್ಲ ಎಂದು ಆರೋಪಿಸಿ ಆಗಸ್ಟ್ 28ರಂದು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿಐಜಿಗೆ ಪತ್ರ ಬರೆದಿದ್ದರು. ಈ ದೂರಿನಲ್ಲಿ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಹಾಗೂ ತಮ್ಮ ಬಗ್ಗೆಯೂ ಆರೋಪ ಮಾಡಲಾಗಿತ್ತು ಎಂದು ಶ್ರೀನಿವಾಸ ಅಯ್ಯರ್ ತಿಳಿಸಿದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಕಳುವಾಗಿವೆ ಎಂದು ದೂರು ನೀಡಲಾಗಿದ್ದ ಚಿನ್ನದ ಪಾದುಕೆಗಳು ಮಠದ ಬ್ಯಾಂಕ್ ಲಾಕರ್‌ನಲ್ಲಿಯೇ ಇರುವುದನ್ನು ಪತ್ತೆಹಚ್ಚಿದ್ದಾರೆ. ಲಾಕರ್ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳ ಉಸ್ತುವಾರಿಯಲ್ಲಿತ್ತು ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.
ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಲಾಕರ್‌ನಿಂದ ವಶಪಡಿಸಿಕೊಂಡಿದ್ದ ಚಿನ್ನದ ಪಾದುಕೆಗಳನ್ನು ಮಠಕ್ಕೆ ಹಿಂದಿರುಗಿಸಲಾಗಿದೆ ಎಂದು ತಿಳಿಸಿದರು.
ಎಸ್‌ಪಿ ಹಾಗೂ ಡಿಐಜಿಗೆ ಸಲ್ಲಿಸಿದ್ದ ದೂರಿನಲ್ಲಿ ತಮ್ಮನ್ನು ಪ್ರಕರಣದಲ್ಲಿ ಅನುಮಾನಕ್ಕೆ ಗುರಿಪಡಿಸುವ ರೀತಿಯಲ್ಲಿ ಆರೋಪ ಮಾಡಲಾಗಿತ್ತು. ತನಿಖೆಯಲ್ಲಿ ಪಾದುಕೆಗಳು ಕಳುವಾಗಿಲ್ಲ ಎಂಬುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲು ಚಿಂತಿಸಲಾಗುತ್ತಿದೆ ಎಂದು ಶ್ರೀನಿವಾಸ ಅಯ್ಯರ್ ಹೇಳಿದರು.
ಮಠದಲ್ಲಿ ನಡೆಯುತ್ತಿದ್ದ ಕೆಲವು ವಿಚಾರಗಳ ಕುರಿತು ತಾವು ಹೊಂದಿದ್ದ ನಿಲುವಿನ ಹಿನ್ನೆಲೆಯಲ್ಲಿ ಈ ಆರೋಪ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಮೇಶ್ವರಪ್ಪ, ಶ್ರೀನಿವಾಸ ಹಾಗೂ ರಂಗನಾಥ ಉಪಸ್ಥಿತರಿದ್ದರು.
Accused of stealing gold sandals: Defamation suit contemplated

