ಸಿಡಿಲಿಗೆ 8 ಕುರಿ ಬಲಿ; ಚಿರತೆ ದಾಳಿಗೆ ಕರು ಸಾವು: ಶಿವಮೊಗ್ಗ ಜಿಲ್ಲೆಯಲ್ಲಿ ಜಾನುವಾರುಗಳ ಮೇಲೆ ದುರ್ಘಟನೆ-8 sheep killed by lightning; calf killed by leopard attack: Cattle tragedy in Shivamogga district

 SUDDILIVE || HOSANAGARA || SORABA

ಸಿಡಿಲಿಗೆ 8 ಕುರಿ ಬಲಿ; ಚಿರತೆ ದಾಳಿಗೆ ಕರು ಸಾವು: ಶಿವಮೊಗ್ಗ ಜಿಲ್ಲೆಯಲ್ಲಿ ಜಾನುವಾರುಗಳ ಮೇಲೆ ದುರ್ಘಟನೆ-8 sheep killed by lightning; calf killed by leopard attack: Cattle tragedy in Shivamogga district
Lightning, cattle



ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸೊರಬ ಹಾಗೂ ಹೊಸನಗರ ತಾಲೂಕುಗಳಲ್ಲಿ ಜಾನುವಾರುಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಘಟನೆಗಳು ನಡೆದಿದ್ದು, ಸೊರಬದಲ್ಲಿ ಸಿಡಿಲು ಬಡಿದು ಎಂಟು ಕುರಿಗಳು ಮೃತಪಟ್ಟಿದ್ದರೆ, ಹೊಸನಗರದಲ್ಲಿ ಚಿರತೆ ದಾಳಿಗೆ ಎರಡು ವರ್ಷದ ಕರು ಮೃತಪಟ್ಟಿದೆ.

ಸೊರಬ ತಾಲೂಕಿನ ಉಳವಿ ಹೋಬಳಿ ವ್ಯಾಪ್ತಿಯ ಕಾನಹಳ್ಳಿ ಗ್ರಾಮದಲ್ಲಿ ಶನಿವಾರ ಸಿಡಿಲು ಬಡಿದು ಎಂಟು ಕುರಿಗಳು ಮೃತಪಟ್ಟಿವೆ. ಗ್ರಾಮದ ದೊಡ್ಡಗುಂಡಿ ಬಸಪ್ಪ ಅವರಿಗೆ ಸೇರಿದ ಕುರಿಗಳನ್ನು ಎಂದಿನಂತೆ ದೊಡ್ಡಗುಂಡಿ ಬಳಿ ಮೇಯಿಸಲಾಗಿತ್ತು. ಸಂಜೆ ವೇಳೆ ಕುರಿಗಳಿಗೆ ಮೇವು ಹಾಕಿ ಮಾಲೀಕರು ಮನೆಗೆ ತೆರಳಿದ ಬಳಿಕ ಸಿಡಿಲು ಬಡಿದಿದ್ದು, ಎಂಟು ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ.

ಜೀವನಾಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡಿರುವ ಬಸಪ್ಪ ಅವರಿಗೆ ಸುಮಾರು ₹2 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕರು ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಳವಿ ಪಶು ಆಸ್ಪತ್ರೆಯ ವೈದ್ಯ ಶೈಲೇಶ್ ಅವರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಕುರಿತು ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸನಗರ ತಾಲೂಕಿನ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆಯಲ್ಲಿ ಚಿರತೆ ದಾಳಿಗೆ ಎರಡು ವರ್ಷದ ಕರು ಮೃತಪಟ್ಟಿದೆ. ಹಿಂಡ್ಲೆಮನೆಯ ಶ್ರೀಮತಿ ಅವರಿಗೆ ಸೇರಿದ ಕರುವನ್ನು ಮೇಯಲು ಬಿಟ್ಟಿದ್ದ ವೇಳೆ ಚಿರತೆ ದಾಳಿ ಮಾಡಿದೆ ಎನ್ನಲಾಗಿದೆ.

ಚಿರತೆ ಕರುವಿನ ಗಂಟಲಿನ ಭಾಗಕ್ಕೆ ಗಂಭೀರವಾಗಿ ಗಾಯಗೊಳಿಸಿದ್ದು, ದಾಳಿಯಿಂದ ತಪ್ಪಿಸಿಕೊಂಡ ಕರು ಹೇಗೋ ಮನೆ ಕಡೆಗೆ ಮರಳಿದೆ. ಆದರೆ ತೀವ್ರ ಗಾಯಗೊಂಡಿದ್ದರಿಂದ ಕೆಲವೇ ಸಮಯದಲ್ಲಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ಹಿಂಡ್ಲೆಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಇದೀಗ ಕರುವಿನ ಮೇಲೆ ದಾಳಿ ನಡೆದಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಜನರು ಹಾಗೂ ಜಾನುವಾರುಗಳ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಚಲನವಲನ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ಚಿರತೆಯನ್ನು ಸೆರೆಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಾನುವಾರುಗಳನ್ನು ಮೇಯಿಸಲು ಕರೆದೊಯ್ಯುವಾಗ ಹಾಗೂ ಮನೆ ಸುತ್ತಮುತ್ತ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಗ್ರಾಮಸ್ಥರು ಪರಸ್ಪರ ಸೂಚಿಸುತ್ತಿದ್ದಾರೆ.

8 sheep killed by lightning; calf killed by leopard attack: Cattle tragedy in Shivamogga district

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close