SUDDILIVE || SHIVAMOGGA
೬೫ ವರ್ಷ ಕಳೆದರೂ ಹಕ್ಕುಪತ್ರವಿಲ್ಲ: ತುಂಗಾ-ಭದ್ರಾ ಸಂತ್ರಸ್ತರಿಂದ ಹೋರಾಟದ ಎಚ್ಚರಿಕೆ-No title deed even after 65 years: Tunga-Bhadra victims warn of struggle
ಶಿವಮೊಗ್ಗ: ತುಂಗಾ ಮತ್ತು ಭದ್ರಾ ಆಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಸ್ಥಳಾಂತರಗೊಂಡ ಶಿವಮೊಗ್ಗ ತಾಲೂಕಿನ ೨೫ ಗ್ರಾಮಗಳ ಸಂತ್ರಸ್ತರಿಗೆ ೬೫ ವರ್ಷ ಕಳೆದರೂ ಆಸ್ತಿ ಹಕ್ಕುಪತ್ರ ದೊರೆತಿಲ್ಲ. ಕೂಡಲೇ ಹಕ್ಕುಪತ್ರ ನೀಡದಿದ್ದರೆ ಬೃಹತ್ ಪ್ರತಿಭಟನೆ, ಪಾದಯಾತ್ರೆ ಹಾಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಕೂಡಲಿ ಶ್ರೀನಿವಾಸ ಅಯ್ಯರ್ ಎಚ್ಚರಿಕೆ ನೀಡಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೬೦ರಿಂದ ೧೯೬೫ರ ಅವಧಿಯಲ್ಲಿ ತುಂಗಾ-ಭದ್ರಾ ಯೋಜನೆಗಾಗಿ ನದಿತೀರದಲ್ಲಿದ್ದ ೨೫ ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿತ್ತು. ತಲೆತಲಾಂತರಗಳಿಂದ ವಾಸವಿದ್ದ ಸ್ಥಳಗಳನ್ನು ತೊರೆದು ಬಂದ ಸಂತ್ರಸ್ತರಿಗೆ ಇಂದಿಗೂ ತಮ್ಮ ಆಸ್ತಿಯ ಹಕ್ಕುಪತ್ರ ಪಡೆಯಲು ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ ಎಂದು ಆರೋಪಿಸಿದರು.
ಕಂದಾಯ ಇಲಾಖೆ ಹಾಗೂ ಪಂಚಾಯತ್ ರಾಜ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಮುಂದುವರಿದಿದೆ. ಈ ಕುರಿತು ಹಿಂದೆ ಶಾಸಕರಾಗಿದ್ದ ಎಸ್.ಆರ್. ನಾಗಪ್ಪ ಶೆಟ್ಟಿ, ಭದ್ರಾವತಿ ಶಾಸಕ ಟಿ.ಡಿ. ದೇವೇಂದ್ರಪ್ಪ ಹಾಗೂ ಶಿವಮೊಗ್ಗ ಶಾಸಕಿ ರತ್ನಮ್ಮ ಮಾಧವರಾವ್ ಅವರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಉತ್ತರ ಪಡೆದಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಹೇಳಿದರು.
ಮುಖ್ಯವಾಗಿ ಹೊಳಲೂರು ಹೋಬಳಿಯ ಚಿಕ್ಕೂಡ್ಲಿ, ಅಬ್ಬರಘಟ್ಟ, ಜಾವಳ್ಳಿ, ಪಿಳ್ಳಂಗಿರಿ, ಹೊಯ್ಸನಹಳ್ಳಿ, ಹೊಳೆಬೆನವಳ್ಳಿ, ಶೆಟ್ಟಿಹಳ್ಳಿ, ಹಾರೋಬೆನವಳ್ಳಿ, ಬುಳ್ಳಾಪುರ, ಗೋಂದಿಚಟ್ನಳ್ಳಿ, ಹೊಳೆಹಟ್ಟಿ, ಮಡಿಕೆಚೀಲೂರು, ಹೊಳೆಹನಸವಾಡಿ, ಕಾಟಿಕೆರೆ ಹಾಗೂ ಗುಡುಕೊಪ್ಪ ಸೇರಿದಂತೆ ಹಲವು ಗ್ರಾಮಗಳ ಸಂತ್ರಸ್ತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿವರಿಸಿದರು.
ಕಳೆದ ಮಾರ್ಚ್ ೨೭ರಂದು ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳೊಂದಿಗೆ ಲಿಖಿತ ಮನವಿ ಸಲ್ಲಿಸಲಾಗಿತ್ತು. ಮನವಿ ಸಲ್ಲಿಸಿ ಆರು ತಿಂಗಳು ಕಳೆದರೂ ಜಿಲ್ಲಾಡಳಿತದಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಯ್ಯರ್ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮೊದಲ ಹಂತದಲ್ಲಿ ಚಿಕ್ಕೂಡ್ಲಿ ಗ್ರಾಮದಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು. ಇದಕ್ಕೂ ಸ್ಪಂದಿಸದಿದ್ದರೆ ಚಿಕ್ಕೂಡ್ಲಿ, ಅಬ್ಬರಘಟ್ಟ, ಜಾವಳ್ಳಿ, ಪಿಳ್ಳಂಗಿರಿ, ಹೊಳೆಬೆನವಳ್ಳಿ ಹಾಗೂ ಕಾಟೀಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರನ್ನು ಒಳಗೊಂಡು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.
ಅಂತಿಮವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಕ್ಕುಪತ್ರ ದೊರೆಯುವವರೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಕೂಡಲಿ ಶ್ರೀನಿವಾಸ ಅಯ್ಯರ್ ಎಚ್ಚರಿಕೆ ನೀಡಿದರು.
No title deed even after 65 years: Tunga-Bhadra victims warn of struggle

