ಗೋವರ್ಧನ ಟ್ರಸ್ಟ್‌ನಿಂದ ಅ.7ರಂದು ‘ಗೋ ಸಂಜೀವಿನಿ ಧಾಮ’ಕ್ಕೆ ಶಂಕುಸ್ಥಾಪನೆ-Foundation stone laid for 'Go Sanjeevini Dham' by Govardhan Trust on October 7th

 SUDDILIVE || SHIVAMOGGA

ಗೋವರ್ಧನ ಟ್ರಸ್ಟ್‌ನಿಂದ ಅ.7ರಂದು ‘ಗೋ ಸಂಜೀವಿನಿ ಧಾಮ’ಕ್ಕೆ ಶಂಕುಸ್ಥಾಪನೆ-Foundation stone laid for 'Go Sanjeevini Dham' by Govardhan Trust on October 7th

ಅ.8ರಂದು ‘ಗೋ ಸೇವಾ ಸಂಭ್ರಮ–2026’: ಕೆ.ಈ.ಕಾಂತೇಶ್

ಶಿವಮೊಗ್ಗ: ಗೋವರ್ಧನ ಟ್ರಸ್ಟ್‌ನ ಒಂದು ವರ್ಷದ ಗೋಸೇವಾ ಪಯಣದ ಅಂಗವಾಗಿ ಅ.7ರಂದು ಅಬ್ಬಲಗೆರೆಯ ನವ್ಯಶ್ರೀ ಈಶ್ವರ ವನದಲ್ಲಿ ಅಶಕ್ತ ಗೋವುಗಳ ಆರೈಕೆಗಾಗಿ ‘ಗೋ ಸಂಜೀವಿನಿ ಧಾಮ’ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಅ.8ರಂದು ಶುಭಮಂಗಳ ಸಮುದಾಯ ಭವನದಲ್ಲಿ ‘ಗೋ ಸೇವಾ ಸಂಭ್ರಮ–2026’ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೆ.ಈ.ಕಾಂತೇಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಸಾವಿರಾರು ಮಂದಿ ಪ್ರತಿ ತಿಂಗಳು ₹100ರಂತೆ ಕೊಡುಗೆ ನೀಡುವ ಮೂಲಕ ಗೋಸೇವಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಗೋವುಗಳ ರಕ್ಷಣೆ, ಪೋಷಣೆ, ಗೋಶಾಲೆಗಳಿಗೆ ನೆರವು, ಮೇವು ಪೂರೈಕೆ, ಸಾವಯವ ಕೃಷಿ ಹಾಗೂ ಗೋ ಉತ್ಪನ್ನಗಳ ಪ್ರಚಾರ ಸೇರಿದಂತೆ ಹಲವು ಕಾರ್ಯಗಳನ್ನು ಟ್ರಸ್ಟ್ ಕೈಗೊಂಡಿದೆ ಎಂದರು.

ಗಾಯಗೊಂಡ ಹಾಗೂ ಅನಾರೋಗ್ಯಕ್ಕೊಳಗಾದ ಗೋವುಗಳಿಗೆ ಗೋ ಅಂಬುಲೆನ್ಸ್ ಮೂಲಕ ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ನೀಡಲಾಗಿದೆ. ಅಪಘಾತಕ್ಕೊಳಗಾದ ಅಥವಾ ರಕ್ಷಿಸಲ್ಪಟ್ಟ ಗೋವುಗಳನ್ನು ಮಾಲೀಕರು ವಾಪಸ್ ಪಡೆಯದ ಸಂದರ್ಭಗಳಲ್ಲಿ ಅವುಗಳ ಆರೈಕೆ ಹಾಗೂ ಚಿಕಿತ್ಸೆಗೆ ‘ಗೋ ಸಂಜೀವಿನಿ ಧಾಮ’ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಅ.7ರಂದು ಮಧ್ಯಾಹ್ನ 1ರಿಂದ 2ರವರೆಗೆ ನಡೆಯುವ ಶಂಕುಸ್ಥಾಪನೆಯನ್ನು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನೆರವೇರಿಸಲಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಅ.8ರಂದು ಬೆಳಿಗ್ಗೆ 10.30ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ನಡೆಯುವ ‘ಗೋ ಸೇವಾ ಸಂಭ್ರಮ–2026’ರಲ್ಲಿ ಉಪನ್ಯಾಸ, ಸಂವಾದ, ವಿವಿಧ ಗೋ ತಳಿಗಳ ಪ್ರದರ್ಶನ, ಗೋ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಇರಲಿದೆ. ‘ಅಶ್ವಶಕ್ತಿ’ ಹಾಗೂ ವಿಶ್ವಬಂಧು ಗೋಶಾಲೆಯಲ್ಲಿ ತಯಾರಿಸಿದ ಸಾವಯವ ಗೊಬ್ಬರವನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.

ಕುದುರೆಗಳ ಸಗಣಿಯಿಂದ ವೈಜ್ಞಾನಿಕವಾಗಿ ತಯಾರಿಸಲಾಗುತ್ತಿರುವ ‘ಅಶ್ವಶಕ್ತಿ’ ಗೊಬ್ಬರದ ಮಾರುಕಟ್ಟೆಯನ್ನು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ವಿಸ್ತರಿಸಲು ಯೋಜಿಸಲಾಗಿದೆ. ವಿಶ್ವಬಂಧು ಗೋಶಾಲೆಯಲ್ಲಿ ಗೋವುಗಳ ಸಗಣಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಬಳಸಿ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ರೈತರೊಂದಿಗೆ ಸಂವಾದ ನಡೆಯಲಿದೆ. ಸಾವಯವ ಕೃಷಿ, ಮಣ್ಣಿನ ಫಲವತ್ತತೆ, ಗೊಬ್ಬರ ಬಳಕೆ ಹಾಗೂ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು ಎಂದರು.

ಗೋವರ್ಧನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಉಮೇಶ್ ಆರಾಧ್ಯ, ಕಾರ್ಯದರ್ಶಿಗಳಾದ ರಮೇಶ್ ಬಾಬು, ನಾಗೇಶ್ ಎಂ., ಖಜಾಂಚಿ ಎಸ್.ಕೆ.ಶೇಷಾಚಲ, ಸೀತಾರಾಂ, ನಾಗರಾಜ್, ಜಯಸ್ವಾಮಿ, ಉದಯ್ ಕುಮಾರ್, ಶ್ರೀಕಾಂತ್, ಶುಭ ರಾಘವೇಂದ್ರ ಹಾಗೂ ಉಷಾ ಅರುಣ್ ಉಪಸ್ಥಿತರಿದ್ದರು.

ಗೋವುಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ: ನವ್ಯಶ್ರೀ ನಾಗೇಶ್

ಶಿವಮೊಗ್ಗದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ಪಶುವೈದ್ಯಕೀಯ ಪಾಲಿಟೆಕ್ನಿಕ್ ಇದ್ದರೂ ಗೋವುಗಳಿಗೆ ಅಗತ್ಯ ಪ್ರಮಾಣದಲ್ಲಿ ಚಿಕಿತ್ಸಾ ಸೌಲಭ್ಯ ದೊರೆಯುತ್ತಿಲ್ಲ. ಗೋವುಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಟ್ರಸ್ಟ್ ಕಾರ್ಯದರ್ಶಿ ನವ್ಯಶ್ರೀ ನಾಗೇಶ್ ಒತ್ತಾಯಿಸಿದರು.

ಗೋವುಗಳ ಸಾವಿಗೆ ಪ್ಲಾಸ್ಟಿಕ್ ಸೇವನೆಯೂ ಪ್ರಮುಖ ಕಾರಣವಾಗಿದೆ. ಸಾರ್ವಜನಿಕರು ಉಳಿದ ಹಾಗೂ ಹಳಸಿದ ಆಹಾರವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ ರಸ್ತೆಬದಿಯಲ್ಲಿ ಎಸೆಯಬಾರದು. ಗೋವುಗಳಿಗೆ ಆಹಾರ ನೀಡುವಾಗಲೂ ಪ್ಲಾಸ್ಟಿಕ್ ಕವರ್ ಸಮೇತ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ವಿಶ್ವಬಂಧು ಗೋಶಾಲೆಯಲ್ಲಿ ಸಾವಯವ ಗೊಬ್ಬರ

ರಾಸಾಯನಿಕ ಗೊಬ್ಬರದ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಗೋವರ್ಧನ ಟ್ರಸ್ಟ್‌ನ ಮಾರ್ಗದರ್ಶನದಲ್ಲಿ ವಿಶ್ವಬಂಧು ಗೋಶಾಲೆಯಲ್ಲಿ ಸಾವಯವ ಗೊಬ್ಬರ ತಯಾರಿಕೆ ಆರಂಭಿಸಲಾಗಿದೆ ಎಂದು ಗೋಶಾಲೆಯ ಉದಯಕುಮಾರ್ ಹಾಗೂ ಜಯಸ್ವಾಮಿ ತಿಳಿಸಿದರು.

ಗೋವುಗಳಿಂದ ದೊರೆಯುವ ಸಗಣಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಬಳಸಿ ಗೊಬ್ಬರ ತಯಾರಿಸಲಾಗುತ್ತಿದೆ. ಕನ್ನೇರಿ ಮಠದಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ಪಡೆದ ಬಳಿಕ ಸುಮಾರು 2.5ರಿಂದ 3 ಎಕರೆ ಪ್ರದೇಶದಲ್ಲಿ ಗೋಶಾಲೆ ಆರಂಭಿಸಲಾಗಿದೆ ಎಂದು ಹೇಳಿದರು.

“ಅಪಘಾತಕ್ಕೊಳಗಾದ ಹಾಗೂ ಅಶಕ್ತ ಗೋವುಗಳನ್ನು ಮಾಲೀಕರು ವಾಪಸ್ ಪಡೆಯದ ಸಂದರ್ಭಗಳಲ್ಲಿ ಅವುಗಳ ಆರೈಕೆ ಮತ್ತು ಚಿಕಿತ್ಸೆಗೆ ‘ಗೋ ಸಂಜೀವಿನಿ ಧಾಮ’ ಆರಂಭಿಸಲಾಗುತ್ತಿದೆ.”
— ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ

Foundation stone laid for 'Go Sanjeevini Dham' by Govardhan Trust on October 7th

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close