SUDDILIVE || SHIVAMOGGA
ಶಿವಮೊಗ್ಗದಲ್ಲಿ ನ.16ರಂದು ‘ಬಾಯ್ಬಡ್ಕಿ’ ಹಾಸ್ಯ ನಾಟಕ ಪ್ರದರ್ಶನ- Comedy play 'Bayibudki' to be performed in Shivamogga on November 16
ಶಿವಮೊಗ್ಗ: ಬೆಂಗಳೂರಿನ ಅಂತರಂಗ ಬಹಿರಂಗ ರಂಗತಂಡದ ಜನಪ್ರಿಯ ಹಾಸ್ಯ ನಾಟಕ ‘ಬಾಯ್ಬಡ್ಕಿ’ ಇದೇ ನವೆಂಬರ್ 16ರಂದು ಸಂಜೆ 6.45ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ನೇಟಿವ್ ಥಿಯೇಟರ್ ತಂಡ ಈ ನಾಟಕ ಪ್ರದರ್ಶನವನ್ನು ಆಯೋಜಿಸಿದೆ.
ಅಂತರಂಗ ಬಹಿರಂಗ ರಂಗತಂಡ ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಈ ಅವಧಿಯಲ್ಲಿ ‘ಸ್ನಿಗ್ಧ’, ‘ಬಾಯ್ಬಡ್ಕಿ’, ‘Mr. ರಾವ್ & ಅಸೋಸಿಯೇಟ್ಸ್’, ‘ಹಿಂಗ್ ಮಾಡಿದ್ರೆ ಹೆಂಗೆ’, ‘ಅನುಗ್ರಹ’, ‘ಅನುಮಾನದ ಅವಾಂತರ’, ‘ಬಾಯ್ ತುಂಬ ನಕ್ಬಿಡಿ’ ಹಾಗೂ ‘Crazzzy ಕುಟುಂಬ’ ಸೇರಿದಂತೆ ಎಂಟು ಪೂರ್ಣಾವಧಿ ನಾಟಕಗಳನ್ನು ರಂಗಭೂಮಿಗೆ ಪರಿಚಯಿಸಿದೆ.
ರಂಗಾಯಣ, ಚಂದನ ದೂರದರ್ಶನ, ದಸರಾ ಮಹೋತ್ಸವ ಸೇರಿದಂತೆ ರಾಜ್ಯದ ವಿವಿಧೆಡೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಾಗೂ ಚಾರಿಟಿ ಕಾರ್ಯಕ್ರಮಗಳಲ್ಲಿ 300ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಹೆಗ್ಗಳಿಕೆ ತಂಡದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ತಂಡಗಳಲ್ಲಿ ಅಂತರಂಗ ಬಹಿರಂಗವೂ ಒಂದಾಗಿದೆ.
59ನೇ ಪ್ರದರ್ಶನಕ್ಕೆ ಶಿವಮೊಗ್ಗದಲ್ಲಿ ವೇದಿಕೆ
‘ಬಾಯ್ಬಡ್ಕಿ’ ಹಾಸ್ಯ ನಾಟಕ ಈಗಾಗಲೇ ಕರ್ನಾಟಕದ ವಿವಿಧ ಭಾಗಗಳಲ್ಲಿ 58 ಯಶಸ್ವಿ ಪ್ರದರ್ಶನಗಳನ್ನು ಕಂಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ 59ನೇ ಪ್ರದರ್ಶನಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸುತ್ತಿದೆ.
ನಾಟಕದ ರಚನೆ ಮತ್ತು ನಿರ್ದೇಶನವನ್ನು ಭೀಷ್ಮ ರಾಮಯ್ಯ ನಿರ್ವಹಿಸಿದ್ದಾರೆ.
ಗಂಡ-ಹೆಂಡತಿಯ ಸಂಬಂಧದ ಸುತ್ತ ಹಾಸ್ಯದ ಕಥೆ
ಮನುಷ್ಯ ಸಂಬಂಧಗಳಲ್ಲೇ ಅತ್ಯಂತ ಹತ್ತಿರವಾದ ಮತ್ತು ಆಳವಾದ ಸಂಬಂಧವೆಂದರೆ ಗಂಡ-ಹೆಂಡತಿಯ ದಾಂಪತ್ಯ ಸಂಬಂಧ. ಈ ಸಂಬಂಧದಲ್ಲಿ ಸಣ್ಣ ವ್ಯತ್ಯಾಸ ಉಂಟಾದರೂ ದಾಂಪತ್ಯ ಜೀವನದಲ್ಲಿ ಏರುಪೇರುಗಳು ಎದುರಾಗಬಹುದು. ಇದೇ ವಿಚಾರವನ್ನು ಹಾಸ್ಯದ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ನಾಟಕ ಮಾಡಿದೆ.
ನಾಟಕದ ಪ್ರಮುಖ ಪಾತ್ರಗಳಾದ ಸ್ವಾತಿ ಮತ್ತು ಸೂರಜ್ ಅವರ ದಾಂಪತ್ಯ ಜೀವನದಲ್ಲಿ ಏನಾಗುತ್ತದೆ? ಅವರ ಬದುಕಿನಲ್ಲಿ ಎದುರಾಗುವ ಸನ್ನಿವೇಶಗಳು ಯಾವ ತಿರುವು ಪಡೆದುಕೊಳ್ಳುತ್ತವೆ? ಎಂಬುದನ್ನು ಪ್ರೇಕ್ಷಕರು ನಾಟಕದಲ್ಲಿ ಕಣ್ತುಂಬಿಕೊಳ್ಳಬಹುದು.
ನಾಟಕ ಪ್ರದರ್ಶನಕ್ಕೂ ಮುನ್ನ ಯಾವುದೇ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಪ್ರವೇಶ ಟಿಕೆಟ್ ದರ 100 ರೂ. ಆಗಿದ್ದು, ಆಸಕ್ತರು BookMyShow ಮೂಲಕ ಟಿಕೆಟ್ ಖರೀದಿಸಬಹುದು. ಪ್ರದರ್ಶನದ ದಿನದಂದು ಕುವೆಂಪು ರಂಗಮಂದಿರದಲ್ಲಿಯೂ ಟಿಕೆಟ್ ಲಭ್ಯವಿರಲಿದೆ.
Comedy play 'Bayibudki' to be performed in Shivamogga on November 16



0 ಕಾಮೆಂಟ್ಗಳು