SUDDILIVE || SHIVAMOGGA
ಹಿಂಜರಿಕೆ ಬೇಡ, ದೈನಂದಿನ ಬದುಕಿನಲ್ಲಿ ಕನ್ನಡ ಬಳಸಿ: ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಕರೆ-Don't hesitate, use Kannada in daily life: Senior journalist Gopal Yadagere calls
ಶಿವಮೊಗ್ಗ: ಕನ್ನಡ ಭಾಷೆಯ ಬಳಕೆಯ ಬಗ್ಗೆ ಯಾರೂ ಹಿಂಜರಿಕೆ ತೋರಬಾರದು. ದೈನಂದಿನ ಮಾತುಕತೆ ಹಾಗೂ ಸಂವಹನದಲ್ಲಿ ಸಾಧ್ಯವಾದಷ್ಟು ಕನ್ನಡ ಪದಗಳನ್ನು ಬಳಸುವ ಮೂಲಕ ಭಾಷೆಯನ್ನು ನಮ್ಮ ಬದುಕಿನ ಅಭಿವ್ಯಕ್ತಿಯನ್ನಾಗಿ ರೂಪಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಹೇಳಿದರು.
ನಗರದ ಸಿ. ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವನ್ನು ತಿದ್ದುವ ಕಾರ್ಯದಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಅವರು ಬಳಸುವ ಮಾತು ಹಾಗೂ ಸಂವಹನದ ಭಾಷೆ ಕೂಡ ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಮಾತುಕತೆಯಲ್ಲಿ ಸಹಜವಾಗಿಯೇ ಇಂಗ್ಲಿಷ್ ಪದಗಳು ಸೇರಿಕೊಂಡಿವೆ. ಇಂಗ್ಲಿಷ್ ಬಳಸುವುದು ತಪ್ಪು ಎಂಬುದಕ್ಕಿಂತ, ಆಯಾ ಸಂದರ್ಭಗಳಲ್ಲಿ ಕನ್ನಡದ ಪದಗಳನ್ನು ಬಳಸಲು ಪ್ರಯತ್ನಿಸಬಹುದಲ್ಲವೇ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಇಂದು ಬಹುತೇಕ ಕುಟುಂಬಗಳಲ್ಲಿ ಮಕ್ಕಳೊಂದಿಗೆ ಸಂವಹನ ನಡೆಸುವಾಗ ಪೋಷಕರು ಇಂಗ್ಲಿಷ್ ಭಾಷೆಯನ್ನೇ ಬಳಸುವ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಇದರಿಂದ ಮಕ್ಕಳು ಮಾತೃಭಾಷೆಯ ಪದಸಂಪತ್ತಿನಿಂದ ದೂರವಾಗುವ ಸಾಧ್ಯತೆಯಿದೆ. ಕೆಲವೊಮ್ಮೆ ಯಾವುದೇ ಭಾಷೆಯಲ್ಲಿಯೂ ಸಮರ್ಪಕ ಪರಿಣಿತಿ ಪಡೆಯದ ಸ್ಥಿತಿಯೂ ನಿರ್ಮಾಣವಾಗಬಹುದು. ಆದ್ದರಿಂದ ಮಕ್ಕಳಲ್ಲಿ ಮಾತೃಭಾಷೆಯ ಪದಸಂಪತ್ತು ಮತ್ತು ಭಾಷಾ ಪ್ರೀತಿಯನ್ನು ಬೆಳೆಸುವ ಜವಾಬ್ದಾರಿ ಮನೆಗಳಿಂದಲೇ ಆರಂಭವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಮಾತನಾಡಿ, ಒಂದು ಜನಾಂಗದ ಸಂಸ್ಕೃತಿಯನ್ನು ಗುರುತಿಸುವಲ್ಲಿ ಭಾಷೆ, ಕಲೆ ಮತ್ತು ಆಹಾರ ಪದ್ಧತಿಗಳು ಪ್ರಮುಖ ಮಾನದಂಡಗಳಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಅದರ ಬಳಕೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಕನ್ನಡ ಕಲಿಯದೆಯೂ ಬದುಕು ಸಾಗಿಸಬಹುದು ಎಂಬ ಪರಿಸ್ಥಿತಿ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದರು.
ಇತರ ಭಾಷೆ ಅಥವಾ ಸಂಸ್ಕೃತಿಯನ್ನು ಗೌರವಿಸಬಾರದು ಎಂಬ ಸಂಕುಚಿತ ಮನೋಭಾವ ನಮ್ಮದಾಗಬಾರದು. ಎಲ್ಲ ಭಾಷೆಗಳನ್ನೂ ಗೌರವಿಸುವ ವಿಶಾಲ ಮನೋಭಾವದೊಂದಿಗೆ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಹೇಳಿದರು.
ಕನ್ನಡ ಅತ್ಯಂತ ಶ್ರೀಮಂತ ಹಾಗೂ ವೈಜ್ಞಾನಿಕ ಭಾಷೆಯಾಗಿದೆ. ಅನೇಕ ಭಾಷೆಗಳ ಪದಗಳನ್ನು ತನ್ನೊಳಗೆ ಅಳವಡಿಸಿಕೊಂಡು ಕನ್ನಡ ಸಮೃದ್ಧವಾಗಿ ಬೆಳೆದಿದೆ. ಕನ್ನಡ ಭಾಷೆಯ ಉಚ್ಚಾರಣೆ, ಪದಗಳ ಬಳಕೆ ಹಾಗೂ ಅದರಲ್ಲಿರುವ ಸೂಕ್ಷ್ಮತೆಗಳನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಅನಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕ ಡಾ. ಕಾಂತರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Don't hesitate, use Kannada in daily life: Senior journalist Gopal Yadagere calls



0 ಕಾಮೆಂಟ್ಗಳು