Advertisement

ಭದ್ರಾ ಜಲಾಶಯದ ಎರಡೂ ನಾಲೆಗಳಿಗೆ 20 ದಿನ ನೀರು ಹರಿಸುವಂತೆ ಆಗ್ರಹ; ಡಿಸಿ ಕಚೇರಿ ಎದುರು ರೈತರ ಬೃಹತ್ ಪ್ರತಿಭಟನೆ-Demand to release water into both canals of the Bhadra Reservoir for 20 days; massive protest by farmers in front of the DC office.

SUDDILIVE || SHIVAMOGGA

ಭದ್ರಾ ಜಲಾಶಯದ ಎರಡೂ ನಾಲೆಗಳಿಗೆ 20 ದಿನ ನೀರು ಹರಿಸುವಂತೆ ಆಗ್ರಹ; ಡಿಸಿ ಕಚೇರಿ ಎದುರು ರೈತರ ಬೃಹತ್ ಪ್ರತಿಭಟನೆ-Demand to release water into both canals of the Bhadra Reservoir for 20 days; massive protest by farmers in front of the DC office.    

ಐಸಿಸಿ ನೀರಾವರಿ ಸಲಹಾ ಸಮಿತಿ ರದ್ದುಪಡಿಸಿರುವ ಸರ್ಕಾರದ ಕ್ರಮಕ್ಕೆ ಕೆ.ಟಿ. ಗಂಗಾಧರ್ ಆಕ್ರೋಶ; ಅಡಿಕೆ, ತೆಂಗು, ಬಾಳೆ ಬೆಳೆ ರಕ್ಷಣೆಗೆ ರೈತರ ಒತ್ತಾಯ

ಶಿವಮೊಗ್ಗ: ಭದ್ರಾ ಜಲಾಶಯದ ಎಡದಂಡೆ ಹಾಗೂ ಬಲದಂಡೆ ನಾಲೆಗಳ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಅಡಿಕೆ, ತೆಂಗು, ಬಾಳೆ ಸೇರಿದಂತೆ ಇತರೆ ಬೆಳೆಗಳ ರಕ್ಷಣೆಗಾಗಿ ತಕ್ಷಣ 20 ದಿನಗಳ ಕಾಲ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತರು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಭದ್ರಾವತಿ ಶಾಖೆ ಮತ್ತು ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಗಳ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ (ನ.16) ಈ ಪ್ರತಿಭಟನೆ ಹಾಗೂ ರೈತರ ಜಾಗೃತಿ ಸಭೆ ನಡೆಯಿತು. ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಶಾಸಕಿ ಶಾರದಾ ಪೂರ್ಯನಾಯ್ಕ್ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕೆ.ಟಿ. ಗಂಗಾಧರ್, ರಾಜ್ಯ ಸರ್ಕಾರ ಭದ್ರಾ ಜಲಾಶಯದ ನೀರಿನ ನಿರ್ವಹಣೆ ಹಾಗೂ ಐಸಿಸಿ (ನೀರಾವರಿ ಸಲಹಾ ಸಮಿತಿ) ವ್ಯವಸ್ಥೆಯನ್ನು ರದ್ದುಪಡಿಸಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಆಕ್ಷೇಪಿಸಿದರು.

ಸರ್ಕಾರ ಏಕಪಕ್ಷೀಯವಾಗಿ ನೀರು ಬಿಡುವುದು ಹಾಗೂ ನಿಲ್ಲಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದರಿಂದ ರೈತರ ಬೆಳೆ ಪದ್ಧತಿ ಮತ್ತು ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ತಕ್ಷಣ ಮುಖ್ಯಮಂತ್ರಿಗಳು ಐಸಿಸಿ ಸಭೆ ಕರೆದು, ಬೆಳೆಗಳ ಅವಶ್ಯಕತೆಗೆ ಅನುಗುಣವಾಗಿ ನೀರು ಬಿಡುವ ಮತ್ತು ನಿಲ್ಲಿಸುವ ವೈಜ್ಞಾನಿಕ ವೇಳಾಪಟ್ಟಿಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಭತ್ತ ಬೆಳೆಯದೆ ರೈತರು ತ್ಯಾಗ ಮಾಡಿದ್ದಾರೆ

ಕಳೆದ ಮಳೆಗಾಲದಲ್ಲಿ ಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಉಂಟಾಗಬಹುದೆಂಬ ಕಾರಣಕ್ಕೆ ಜಲಾಶಯದ ನೀರನ್ನು ನಂಬಿ ಭತ್ತ ಬೆಳೆಯಬೇಡಿ ಎಂದು ರೈತರಿಗೆ ಮನವಿ ಮಾಡಲಾಗಿತ್ತು. ಸರ್ಕಾರದ ಮನವಿಗೆ ಸ್ಪಂದಿಸಿದ ರೈತರು ಭತ್ತ ಬೆಳೆಯದೆ ತ್ಯಾಗ ಮಾಡಿದ್ದಾರೆ. ಆದರೆ ಆ ನೀರನ್ನು ಅಪ್ಪರ್ ಭದ್ರಾ ಯೋಜನೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಗಂಗಾಧರ್ ಅಸಮಾಧಾನ ವ್ಯಕ್ತಪಡಿಸಿದರು.

ಅಪ್ಪರ್ ಭದ್ರಾ ಯೋಜನೆಗೆ ನೀರು ಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ತುಂಗಾ ನದಿಯಿಂದ ನೀರನ್ನು ಭದ್ರಾ ಜಲಾಶಯಕ್ಕೆ ತಂದು, ಅಲ್ಲಿಂದ ಅಪ್ಪರ್ ಭದ್ರಾ ಯೋಜನೆ ಹಾಗೂ ಬಯಲುಸೀಮೆಯ ಪ್ರದೇಶಗಳಿಗೆ ನೀರು ಒದಗಿಸಲಿ. ಇದಕ್ಕೆ ರೈತರ ಸಹಕಾರವಿದೆ. ಆದರೆ ಭದ್ರಾ ಜಲಾಶಯವನ್ನೇ ನಂಬಿಕೊಂಡು ಬೆಳೆ ಬೆಳೆದಿರುವ ರೈತರ ಬೆಳೆಗಳನ್ನು ನಾಶಮಾಡಿ, ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಅಪಾಯಕಾರಿ ಮತ್ತು ಅವೈಜ್ಞಾನಿಕ ಎಂದು ಆರೋಪಿಸಿದರು.

ರೈತರು ಎಲ್ಲರೂ ನಮ್ಮವರೇ. ಅವರಿಗೂ ಕಾಲಕಾಲಕ್ಕೆ ನೀರು ಒದಗಿಸುವ ಜವಾಬ್ದಾರಿ ಸರ್ಕಾರಕ್ಕಿದೆ. ನೀರಿನ ನಿರ್ವಹಣೆಯಲ್ಲಿ ಸರ್ಕಾರ ವೈಜ್ಞಾನಿಕ ಹಾಗೂ ಕಾರ್ಯಕ್ಷಮತೆಯ ವಿಧಾನ ಅನುಸರಿಸುತ್ತಿಲ್ಲ ಎಂದು ಟೀಕಿಸಿದರು.

ತುಂಗಾದಿಂದ ಭದ್ರಕ್ಕೆ ನೀರು ಹರಿಸಲು ಆಗ್ರಹ

ಕೇಂದ್ರ ಸರ್ಕಾರ ಅಪ್ಪರ್ ಭದ್ರಾ ಯೋಜನೆಗೆ ಘೋಷಿಸಿರುವ 5,300 ಕೋಟಿ ರೂ. ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಈ ಹಣ ಬಿಡುಗಡೆಯಾದರೆ ತುಂಗಾ ನದಿಯಿಂದ ನೀರನ್ನು ಹರಿಸಿ ಅಪ್ಪರ್ ಭದ್ರಾ ಯೋಜನೆಗೆ ಒದಗಿಸುವ ವ್ಯವಸ್ಥೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ನೀರಾವರಿ ಸಚಿವರನ್ನು ಶಿವಮೊಗ್ಗಕ್ಕೆ ಕಳುಹಿಸಿ, ತುಂಗಾದಿಂದ ಭದ್ರಾ ಜಲಾಶಯಕ್ಕೆ ಹಾಗೂ ಅಲ್ಲಿಂದ ಅಪ್ಪರ್ ಭದ್ರಾ ಯೋಜನೆಗೆ ನೀರು ಹರಿಸುವ ಸಾಧ್ಯತೆಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ಅಡಿಕೆ ತೋಟಗಳಲ್ಲಿ ಬೆಳೆದು ನಿಂತಿರುವ ಬೆಳೆಗೆ ನೀರು ಅತ್ಯಗತ್ಯವಾಗಿದೆ. ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಗಳ ವ್ಯಾಪ್ತಿಯ ರೈತರಿಗೆ ಮುಂದಿನ 20 ದಿನಗಳ ಕಾಲ ನೀರು ಒದಗಿಸುವ ಅಗತ್ಯವಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಇತರ ಶಾಸಕರನ್ನು ಭೇಟಿ ಮಾಡಿ, ಮುಖ್ಯಮಂತ್ರಿಗಳ ಬಳಿ ರೈತರ ನಿಯೋಗ ಕರೆದೊಯ್ಯುವಂತೆ ಮನವಿ ಮಾಡಲಾಗಿದೆ ಎಂದರು.

ಜಲಾಶಯದ ನೀರನ್ನು ಜೋಪಾನವಾಗಿ ಸಂರಕ್ಷಿಸಿ, ಸಮರ್ಪಕವಾಗಿ ಬಳಕೆ ಮಾಡುವುದು ರೈತರ ಹೋರಾಟದ ಉದ್ದೇಶವಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ರೈತರ ಬದುಕು ಮತ್ತು ಬೆಳೆಗಳನ್ನು ಉಳಿಸುವುದೇ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸರ್ಕಾರದ ಆದೇಶದ ಪತ್ರವನ್ನು ಓದಿ, ರೈತರ ಅಭಿಪ್ರಾಯಗಳನ್ನು ಆಲಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

36 ಟಿಎಂಸಿ ನೀರಿನ ಅಗತ್ಯ; 7 ಟಿಎಂಸಿ ಕೊರತೆ

ರೈತ ಸಂಘದ ಮುಖಂಡರು ನೀಡಿರುವ ಮಾಹಿತಿಯ ಪ್ರಕಾರ, ಬೇಸಿಗೆ ಹಂಗಾಮಿನ ಭತ್ತದ ಬೆಳೆಗೆ ಭದ್ರಾ ಎಡದಂಡೆ, ಬಲದಂಡೆ ಹಾಗೂ ಗೋಂದಿ ನಾಲೆಗಳ ವ್ಯಾಪ್ತಿಗೆ ಒಟ್ಟು 36 ಟಿಎಂಸಿ ನೀರಿನ ಅಗತ್ಯವಿದೆ. ಆದರೆ ಜಲಾಶಯದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ 120 ದಿನಗಳ ಕಾಲ ನೀರು ಹರಿಸಲು ಸುಮಾರು 7 ಟಿಎಂಸಿ ನೀರಿನ ಕೊರತೆಯಿದೆ.

ಇಂತಹ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ಮೂರು ಟಿಎಂಸಿ ನೀರು ಹರಿಸಿದ ಬಳಿಕ ಹೆಚ್ಚುವರಿಯಾಗಿ ಮತ್ತೊಂದು ಟಿಎಂಸಿ ನೀರು ಹರಿಸಲಾಗುತ್ತಿದೆ ಎಂದು ರೈತ ಮುಖಂಡರು ಆಕ್ಷೇಪಿಸಿದ್ದಾರೆ.

ಇದನ್ನು ವಿರೋಧಿಸಿ ಅಕ್ಟೋಬರ್ 30ರಿಂದ ಭದ್ರಾ ಜಲಾಶಯದ ಬಿ.ಆರ್. ಪ್ರಾಜೆಕ್ಟ್‌ನಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆಯ ಅಧೀಕ್ಷಕ ಎಂಜಿನಿಯರ್ ಕಚೇರಿ ಎದುರು ರೈತರು ಹಲವು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ್ದರು. ಆದರೂ ಸರ್ಕಾರ ತನ್ನ ನಿರ್ಧಾರ ಬದಲಿಸದ ಹಿನ್ನೆಲೆಯಲ್ಲಿ ರೈತರು ಜಲಾಶಯದ ಗೇಟುಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಚಳವಳಿಗಾರರನ್ನು ಬಂಧಿಸಿ ಬಿಡುಗಡೆಗೊಳಿಸಿದ್ದರು ಎಂದು ಪ್ರತಿಭಟನಾಕಾರರು ವಿವರಿಸಿದ್ದಾರೆ.

ನಂತರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಪ್ರತಿ ತಾಲೂಕು ಹಾಗೂ ಗ್ರಾಮ ಘಟಕಗಳಲ್ಲಿ ರೈತ ಜಾಗೃತಿ ಸಭೆಗಳನ್ನು ನಡೆಸಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಅಡಿಕೆ, ಬಾಳೆ, ತೆಂಗು ಬೆಳೆಗಳು, ಜಾನುವಾರುಗಳು ಹಾಗೂ ಕೆರೆ-ಕುಂಟೆಗಳ ಸಂರಕ್ಷಣೆಗಾಗಿ ನವೆಂಬರ್ ತಿಂಗಳಲ್ಲಿ 20 ದಿನ ನೀರು ಹರಿಸುವಂತೆ ಒತ್ತಾಯಿಸಲಾಗುತ್ತಿದೆ.

ರೈತರ ಐದು ಪ್ರಮುಖ ಹಕ್ಕೊತ್ತಾಯಗಳು

ಪ್ರತಿಭಟನೆಯಲ್ಲಿ ರೈತ ಸಂಘಟನೆಗಳು ಸರ್ಕಾರದ ಮುಂದೆ ಐದು ಪ್ರಮುಖ ಬೇಡಿಕೆಗಳನ್ನು ಮಂಡಿಸಿವೆ.

1\. ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಸ್ತುತ ಹರಿಸಲಾಗುತ್ತಿರುವ ನೀರನ್ನು ತಕ್ಷಣ ಸ್ಥಗಿತಗೊಳಿಸಬೇಕು.

2\. ತುಂಗಾ ಮೇಲ್ದಂಡೆ ಯೋಜನೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ, ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು.

3\. ಭದ್ರಾ ಜಲಾಶಯದ ಎಡದಂಡೆ ಹಾಗೂ ಬಲದಂಡೆ ನಾಲೆಗಳ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಅಡಿಕೆ, ತೆಂಗು, ಬಾಳೆ ಹಾಗೂ ಇತರೆ ಬೆಳೆಗಳು, ಮೇವಿನ ಬೆಳೆಗಳು, ಜಾನುವಾರುಗಳು ಮತ್ತು ಕೆರೆ-ಕುಂಟೆಗಳಿಗಾಗಿ ನವೆಂಬರ್ ತಿಂಗಳಲ್ಲಿ 20 ದಿನಗಳ ಕಾಲ ನೀರು ಹರಿಸಬೇಕು.

4\. ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿಯನ್ನು ಪುನರ್‌ರಚಿಸಿ, ಮುಂದಿನ ದಿನಗಳಲ್ಲಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವ ವೇಳಾಪಟ್ಟಿಯನ್ನು ಮುಂಚಿತವಾಗಿ ಪ್ರಕಟಿಸಬೇಕು.

5\. ಮುಖ್ಯಮಂತ್ರಿಗಳ ಮನವಿಯಂತೆ ಭತ್ತದ ಬೆಳೆ ಬೆಳೆಯದೆ ಸರ್ಕಾರದ ಸೂಚನೆಯನ್ನು ಪಾಲಿಸಿರುವ ಅಚ್ಚುಕಟ್ಟು ಪ್ರದೇಶದ ರೈತ ಕುಟುಂಬಗಳ ನಿರ್ವಹಣೆಗಾಗಿ ಭತ್ತದ ಬೆಳೆಯ ಲಾಭಾಂಶಕ್ಕೆ ಅನುಗುಣವಾಗಿ ಪರಿಹಾರ ನೀಡಬೇಕು.

ರೈತರ ಬದುಕಿನ ಹೋರಾಟ ಎಂದ ಮುಖಂಡರು

ಇದು ಕೇವಲ ನೀರಿಗಾಗಿ ನಡೆಯುತ್ತಿರುವ ಹೋರಾಟವಲ್ಲ. ರೈತರ ಭೂಮಿ, ಹಕ್ಕು, ಕೃಷಿ, ಉದ್ಯೋಗ ಹಾಗೂ ಮುಂದಿನ ಭವಿಷ್ಯವನ್ನು ಉಳಿಸಿಕೊಳ್ಳುವ ಹೋರಾಟವಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ರೈತ ಮುಖಂಡರು ಮನವಿ ಮಾಡಿದರು. ಈಗಾಗಲೇ ಜಲಾಶಯದಿಂದ ಎರಡೂ ನಾಲೆಗೆ ನೀರು ಬಿಡುವ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದ್ದರೂ ಆದೇಶ ಕಾಪಿಯನ್ನ ಪ್ರತಿಭಟನಾಸ್ಥಳಕ್ಕೆ ತಂದು ತೋರಿಸುವ ತನಕ ಪ್ರತಿಭಟನೆ ಮಾಡುವುದಾಗಿ ಗಂಗಾಧರ್ ಇದೇ ವೇಳೆ ತಿಳಿಸಿದ್ದಾರೆ. 

ಪ್ರತಿಭಟನೆಯಲ್ಲಿ ಶಿವಮೊಗ್ಗ ಜಿಲ್ಲಾ ಹಾಗೂ ಭದ್ರಾವತಿ ತಾಲೂಕು ರೈತ ಸಂಘದ ಪದಾಧಿಕಾರಿಗಳು, ಹಸಿರು ಸೇನೆಯ ಸದಸ್ಯರು, ಮಹಿಳಾ ಘಟಕದ ಪದಾಧಿಕಾರಿಗಳು, ಕೃಷಿಕರು ಸೇರಿದಂತೆ ಹಲವರು ಭಾಗವಹಿಸಿದ್ದರು.

Demand to release water into both canals of the Bhadra Reservoir for 20 days; massive protest by farmers in front of the DC office.    

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು