Advertisement

ಕ್ಲಸ್ಟರ್ ಕಿಚನ್ ಯೋಜನೆ ಕೈಬಿಡಿ; ಬಿಸಿಯೂಟದ ಸಂಪೂರ್ಣ ಜವಾಬ್ದಾರಿ ಅಡುಗೆ ಸಿಬ್ಬಂದಿಗೆ ವಹಿಸಿ – ಅಕ್ಷರ ದಾಸೋಹ ನೌಕರರ ಸಂಘ ಆಗ್ರಹ-Abandon the 'cluster kitchen' scheme; entrust full responsibility for the hot meal program to the kitchen staff – Akshara Dasoha Employees' Association demands.

 SUDDILIVE || SHIVAMOGGA

ಕ್ಲಸ್ಟರ್ ಕಿಚನ್ ಯೋಜನೆ ಕೈಬಿಡಿ; ಬಿಸಿಯೂಟದ ಸಂಪೂರ್ಣ ಜವಾಬ್ದಾರಿ ಅಡುಗೆ ಸಿಬ್ಬಂದಿಗೆ ವಹಿಸಿ – ಅಕ್ಷರ ದಾಸೋಹ ನೌಕರರ ಸಂಘ ಆಗ್ರಹ-Abandon the 'cluster kitchen' scheme; entrust full responsibility for the hot meal program to the kitchen staff – Akshara Dasoha Employees' Association demands.    
Kitchen, cluster



ಶಿವಮೊಗ್ಗ : ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕ್ಲಸ್ಟರ್ ಕಿಚನ್ ವ್ಯವಸ್ಥೆಯಡಿ ಜಾರಿಗೆ ತರಲು ಮುಂದಾಗಿರುವ ಶಿಕ್ಷಣ ಇಲಾಖೆಯ ಕ್ರಮಕ್ಕೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ತೀವ್ರ ವಿರೋಧ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ಕ್ಲಸ್ಟರ್ ಕಿಚನ್ ವ್ಯವಸ್ಥೆಯನ್ನು ಜಾರಿಗೆ ತರಬಾರದು. ಬದಲಾಗಿ ಈಗಾಗಲೇ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗೆ ಬಿಸಿಯೂಟ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಈ ಸಂಬಂಧ ಶಿವಮೊಗ್ಗದಲ್ಲಿ ಸಿಐಟಿಯು ಹನುಮಂತಮ್ಮ ನೇತೃತ್ವದಲ್ಲಿ ಮಹಾವೀರ ವೃತ್ತದಿಂದ ಜಿಲ್ಲಾ ಪಂಚಾಯತ್ ವರೆಗೆ ಮೆರವಣಿಗೆ ನಡೆಸಿ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಯಿತು.   ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ ಜಂಟಿ ನಿರ್ದೇಶಕರು 2026ರ ನವೆಂಬರ್ 7ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು ಹಾಗೂ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಬಿಸಿಯೂಟ ಯೋಜನೆಗೆ ಕ್ಲಸ್ಟರ್ ಕಿಚನ್ ವ್ಯವಸ್ಥೆ ರೂಪಿಸುವ ಕುರಿತು ಮತ್ತು ಅದರ ಸಾಧಕ-ಬಾಧಕಗಳ ಬಗ್ಗೆ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಕ್ರಮವು ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಕರ ಸಂಘದ ಮೂಲಕ ಚರ್ಚೆಗೆ ಬಂದಿರುವುದನ್ನು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಖಂಡಿಸಿದೆ.

ಮಕ್ಕಳಿಗೆ ಶಾಲೆಯಲ್ಲೇ ತಾಜಾ ಬಿಸಿಯೂಟ ನೀಡುವುದು ಯೋಜನೆಯ ಉದ್ದೇಶ

ಬಿಸಿಯೂಟ ಯೋಜನೆ 1920ರಲ್ಲಿ ಆರಂಭವಾಗಿ, 2001ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಹತ್ವದ ರೂಪ ಪಡೆದುಕೊಂಡ ಐತಿಹಾಸಿಕ ಯೋಜನೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು, ಮಧ್ಯಾಹ್ನದ ನಂತರದ ಶಾಲಾ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಶಾಲೆಯಿಂದ ಹೊರಗುಳಿಯುವಿಕೆ ಹಾಗೂ ಗೈರುಹಾಜರಾತಿ ತಡೆಯುವುದು, ಲಿಂಗ ತಾರತಮ್ಯ ಮತ್ತು ಜಾತಿ ಆಧಾರಿತ ಅಸಮಾನತೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ ಎಂದು ಸಂಘ ಮನವಿಯಲ್ಲಿ ತಿಳಿಸಿದೆ.

ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಅವರು ಕಲಿಯುವ ಶಾಲೆಯಲ್ಲಿಯೇ ತಯಾರಿಸಿ, ತಾಜಾ ಹಾಗೂ ಬಿಸಿಬಿಸಿಯಾಗಿ ನೀಡಬೇಕು ಎಂಬುದು ಸುಪ್ರೀಂ ಕೋರ್ಟ್‌ನ ಆದೇಶದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಶಾಲಾ ಆವರಣಗಳಲ್ಲಿ ಅಡುಗೆ ಕೋಣೆಗಳನ್ನು ನಿರ್ಮಿಸಿದ್ದು, ಅಡುಗೆ ಪಾತ್ರೆಗಳು, ಗ್ಯಾಸ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿವೆ. ಯೋಜನೆಯ ಮೇಲ್ವಿಚಾರಣೆಗಾಗಿ ಪ್ರತ್ಯೇಕ ನಿರ್ದೇಶನಾಲಯವನ್ನೂ ರಚಿಸಲಾಗಿದೆ. ಇಷ್ಟೆಲ್ಲ ವ್ಯವಸ್ಥೆ ಇರುವಾಗ ಕ್ಲಸ್ಟರ್ ಕಿಚನ್ ಪದ್ಧತಿ ಜಾರಿಗೆ ತರುವ ಅಗತ್ಯವೇನಿದೆ ಎಂದು ಸಂಘ ಪ್ರಶ್ನಿಸಿದೆ.

ಶಿಕ್ಷಕರ ಮೇಲಿನ ಹೊರೆ ಕಡಿಮೆ ಮಾಡಿ, ಅಡುಗೆ ಸಿಬ್ಬಂದಿಗೆ ಜವಾಬ್ದಾರಿ ನೀಡಿ

ಶಾಲಾ ಶಿಕ್ಷಕರಿಗೆ ಬಿಸಿಯೂಟ ಯೋಜನೆಯ ಆಡಳಿತಾತ್ಮಕ ಜವಾಬ್ದಾರಿ ವಹಿಸುವುದನ್ನು ಸಂಘಟನೆ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಶಿಕ್ಷಕರು ಮುಖ್ಯವಾಗಿ ಪಠ್ಯಕ್ರಮ, ಬೋಧನೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಯತ್ತ ಗಮನಹರಿಸಬೇಕು. ಅಡುಗೆ ಮತ್ತು ಬಿಸಿಯೂಟ ನಿರ್ವಹಣೆಯ ಜವಾಬ್ದಾರಿಯನ್ನು ಅಡುಗೆ ಸಿಬ್ಬಂದಿಗೆ ನೀಡುವುದರಿಂದ ಶಿಕ್ಷಕರ ಮೇಲಿನ ಹೆಚ್ಚುವರಿ ಹೊರೆ ಕಡಿಮೆಯಾಗಲಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

2012ರ ಜೂನ್ 4ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಸಿಯೂಟ ಯೋಜನೆಯನ್ನು ಸ್ವಯಂಸೇವಾ ಸಂಸ್ಥೆಗಳಿಗೆ ವಹಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿರುವುದನ್ನೂ ಸಂಘ ಉಲ್ಲೇಖಿಸಿದೆ.

ಅದೇ ರೀತಿ 2012ರ ಡಿಸೆಂಬರ್ 17ರ ಶಿಕ್ಷಣ ಇಲಾಖೆಯ ನಡಾವಳಿಯಂತೆ ಅಕ್ಷರ ದಾಸೋಹ ಯೋಜನೆಯ ಜಂಟಿ ಖಾತೆಯನ್ನು ಮುಖ್ಯ ಅಡುಗೆಯವರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ (SDMC) ಪದನಿಮಿತ್ತ ಮುಖ್ಯೋಪಾಧ್ಯಾಯರು ನಿರ್ವಹಿಸುವ ವ್ಯವಸ್ಥೆಯನ್ನು ಮುಂದುವರಿಸಬಹುದು. ಮುಖ್ಯೋಪಾಧ್ಯಾಯರು ಜವಾಬ್ದಾರಿ ನಿರ್ವಹಿಸಲು ಇಚ್ಛಿಸದಿದ್ದಲ್ಲಿ ಮುಖ್ಯ ಅಡುಗೆಯವರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರ ಹೆಸರಿನಲ್ಲಿ ಜಂಟಿ ಖಾತೆ ತೆರೆಯುವ ಅವಕಾಶವಿದೆ ಎಂದು ಸಂಘ ತಿಳಿಸಿದೆ.

ಅಡುಗೆ ಸಿಬ್ಬಂದಿಗೆ ಶೈಕ್ಷಣಿಕ ಅರ್ಹತೆ ಮತ್ತು ಅನುಭವವಿದೆ

ಸರ್ಕಾರಿ ಶಾಲೆಗಳು ಇರುವವರೆಗೂ ಬಿಸಿಯೂಟ ಮಕ್ಕಳ ಮೂಲಭೂತ ಹಕ್ಕಾಗಿರಬೇಕು. ಬಿಸಿಯೂಟ ನೌಕರರ ಪ್ರಮುಖ ಕೆಲಸ ಅಡುಗೆ ತಯಾರಿಸಿ ಮಕ್ಕಳಿಗೆ ಬಡಿಸುವುದಾಗಿದೆ. ಹೀಗಾಗಿ ಯೋಜನೆಯ ಸಂಪೂರ್ಣ ನಿರ್ವಹಣಾ ಜವಾಬ್ದಾರಿಯನ್ನು ಅಡುಗೆ ಸಿಬ್ಬಂದಿಗೆ ವಹಿಸಬಹುದು ಎಂದು ಸಂಘ ಆಗ್ರಹಿಸಿದೆ.

ಬಿಸಿಯೂಟ ಅಡುಗೆ ಸಿಬ್ಬಂದಿಯಲ್ಲಿ ಎಸ್‌ಎಸ್‌ಎಲ್‌ಸಿ, ಕೆಲವು ಕಡೆ ಪಿಯುಸಿ ಹಾಗೂ ಪದವೀಧರರೂ ಇದ್ದಾರೆ. ಯೋಜನೆಯ ನಿರ್ವಹಣೆಗೆ ಅಗತ್ಯವಾದ ಅನುಭವ ಮತ್ತು ಸಾಮರ್ಥ್ಯ ಅವರಿಗಿದೆ. ಇಲಾಖೆಯು ಅವರ ಅನುಭವವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಅಡುಗೆ ಸಿಬ್ಬಂದಿಯ ಕೆಲಸದ ಅವಧಿಯನ್ನು ವಿಸ್ತರಿಸುವ ಮೂಲಕ ಯೋಜನೆಯನ್ನು ಸುಗಮವಾಗಿ ನಿರ್ವಹಿಸಬಹುದು ಎಂದು ಸಲಹೆ ನೀಡಿದೆ.

ಮೊಟ್ಟೆ ಪೂರೈಕೆ ಸಮಸ್ಯೆಗೂ ಪರಿಹಾರ ಸೂಚನೆ

ಶಿಕ್ಷಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಕೋಳಿ ಮೊಟ್ಟೆಗಳ ಬೆಲೆ ಏರಿಕೆಯೂ ಒಂದಾಗಿದೆ. ಶಾಲೆಗಳಿಗೆ ಮೊಟ್ಟೆ ಪೂರೈಕೆಯಾಗುವಂತೆ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡುವ ಮಹಾಮಂಡಳಿಯ ಮೂಲಕವೇ ಶಾಲೆಗಳಿಗೂ ಮೊಟ್ಟೆ ಪೂರೈಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬಹುದು ಎಂದು ಸಂಘ ಸಲಹೆ ನೀಡಿದೆ.

ಕ್ಲಸ್ಟರ್ ಕಿಚನ್‌ನಿಂದ ಖಾಸಗೀಕರಣಕ್ಕೆ ಅವಕಾಶ: ಸಂಘದ ಆತಂಕ

ಕೇಂದ್ರೀಕೃತ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ಬಂದರೆ ಮುಂದಿನ ದಿನಗಳಲ್ಲಿ ಬಿಸಿಯೂಟ ಯೋಜನೆಯಲ್ಲಿ ಧಾರ್ಮಿಕ ಸಂಸ್ಥೆಗಳು, ಜಾತಿ ಆಧಾರಿತ ಸಂಘಟನೆಗಳು ಹಾಗೂ ಖಾಸಗಿ ಸಂಸ್ಥೆಗಳ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ಆತಂಕವನ್ನು ಸಂಘ ವ್ಯಕ್ತಪಡಿಸಿದೆ.

ಮಕ್ಕಳ ಪೌಷ್ಟಿಕತೆ, ಸಾಮಾಜಿಕ ಸಮಾನತೆ ಮತ್ತು ಸರ್ಕಾರಿ ಶಾಲೆಗಳ ಶೈಕ್ಷಣಿಕ ವಾತಾವರಣದೊಂದಿಗೆ ನೇರ ಸಂಬಂಧ ಹೊಂದಿರುವ ಬಿಸಿಯೂಟ ಯೋಜನೆಯನ್ನು ಖಾಸಗೀಕರಣದತ್ತ ಕೊಂಡೊಯ್ಯಬಾರದು. ಈಗಿರುವ ಶಾಲಾ ಮಟ್ಟದ ಅಡುಗೆ ವ್ಯವಸ್ಥೆಯನ್ನೇ ಮುಂದುವರಿಸಬೇಕು. ಕ್ಲಸ್ಟರ್ ಕಿಚನ್ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಸರ್ಕಾರ ಹಾಗೂ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದೆ.

ಈ ಕುರಿತು ಸಂಘದ ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಪರವಾಗಿ ಭಾಗ್ಯಮ್ಮ ಜಾನಕಮ್ಮ ಜಯಮ್ಮ ಶಿಕಾರಿಪುರ ವಿಜಯಲಕ್ಷ್ಮಿ ಗೀತಾ ಸೂರ್ಯ ಬಾನು ಮಮತಾ ಮೀನಾಕ್ಷಿ ರೂಪ ಬಾಯಿ ಶಾರದಮ್ಮ ಹೊಳೆ ಹೊನ್ನೂರು, ಸೂರ್ಯ ಬಾನು ದಾನಮ್ಮ ಮೆರವಣಿಗೆ ವೇಳೆ ಉಪಸ್ಥಿತರಿದ್ದರು.

Abandon the 'cluster kitchen' scheme; entrust full responsibility for the hot meal program to the kitchen staff – Akshara Dasoha Employees' Association demands

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು