SUDDILIVE || BHADRAVATHI
ಭದ್ರಾವತಿ-192 ಎಕರೆ ಸರ್ಕಾರಿ ಜಮೀನನ್ನ ಖಾಸಗಿಯವರಿಗೆ ಪೋಡಿ ದುರಸ್ಥಿ ಮಾಡಿಕೊಟ್ಟ ಭೂಮಾಪನ ಅಧಿಕಾರಿಗಳು-ಐವರ ವಿರುದ್ಧ ಎಫ್ಐಆರ್-Survey officials facilitated the podi durasti (subdivision and rectification) of 192 acres of government land for private individuals; FIR registered against five persons
ವರ್ಗಾವಣೆಗೊಂಡ ದಿನವೇ ಕಡತಕ್ಕೆ ಹಸಿರು ನಿಶಾನೆ? ಮಂಜೂರಿ ದಾಖಲೆಗಳೇ ಇಲ್ಲದೆ ಖಾಸಗಿ ವ್ಯಕ್ತಿಯ ಹೆಸರಿಗೆ 192 ಎಕರೆ ಜಮೀನು ದಾಖಲು; ಪೋಡಿ ದಾಖಲೆ ನಾಶಪಡಿಸಿದ ಆರೋಪವೂ ಬೆಳಕಿಗೆ
ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಬಾಳೆಮಾರನಹಳ್ಳಿ ಗ್ರಾಮದ ಕೋಟ್ಯಂತರ ರೂಪಾಯಿ ಮೌಲ್ಯದ 192 ಎಕರೆಗೂ ಅಧಿಕ ಸರ್ಕಾರಿ ಜಮೀನನ್ನು ಯಾವುದೇ ಮಂಜೂರಿ ದಾಖಲೆಗಳಿಲ್ಲದೆ ಖಾಸಗಿ ವ್ಯಕ್ತಿಯ ಹೆಸರಿಗೆ ಅಕ್ರಮವಾಗಿ 'ಪೋಡಿ ದುರಸ್ತಿ' ಮಾಡಿರುವ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂದಾಖಲೆಗಳ ಇಲಾಖೆಯ ಐವರು ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಸರ್ಕಾರಿ ಭೂಮಿಯ ದಾಖಲೆಗಳನ್ನು ನಿಯಮಬಾಹಿರವಾಗಿ ಬದಲಾಯಿಸಿ, ಖಾಸಗಿ ವ್ಯಕ್ತಿಯ ಹೆಸರಿಗೆ ಜಮೀನು ವರ್ಗಾಯಿಸಲು ಅನುಕೂಲ ಮಾಡಿಕೊಟ್ಟಿರುವುದು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಪೋಡಿ ದಾಖಲೆಗಳನ್ನು ನಾಶಪಡಿಸಿರುವ ಆರೋಪ ಈ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
ಬೆಂಗಳೂರು ವಿಭಾಗದ ಪ್ರಾದೇಶಿಕ ಭೂದಾಖಲೆಗಳ ಜಂಟಿ ನಿರ್ದೇಶಕ ಎಸ್. ನಿಸಾರ್ ಅಹಮದ್ ಅವರು ನೀಡಿದ ದೂರಿನ ಆಧಾರದ ಮೇಲೆ ಐವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
237 ಎಕರೆ ಸರ್ಕಾರಿ ಜಮೀನಿನ ಹಿನ್ನೆಲೆ
ಶಿವಮೊಗ್ಗ ಜಿಲ್ಲೆ, ಭದ್ರಾವತಿ ತಾಲ್ಲೂಕಿನ ಕಸಬಾ ಹೋಬಳಿಯ ಬಾಳೆಮಾರನಹಳ್ಳಿ ಗ್ರಾಮದ ಸರ್ವೆ ನಂಬರ್ 37ರಲ್ಲಿ ಆಕಾರ್ ಬಂದ್ ದಾಖಲೆಯ ಪ್ರಕಾರ ಒಟ್ಟು 237 ಎಕರೆ 03 ಗುಂಟೆ ಸರ್ಕಾರಿ ಜಮೀನು ಇತ್ತು.
ಈ ಪೈಕಿ 1956ರಲ್ಲಿ ಹೊಸ ಸರ್ವೆ ನಂಬರ್ 86ರಿಂದ 93ರವರೆಗೆ ಒಟ್ಟು 40 ಎಕರೆ ಜಮೀನಿಗೆ ಆಕಾರ್ ಬಂದ್ ದುರಸ್ತಿ ಮಾಡಲಾಗಿತ್ತು. ಉಳಿದ 197 ಎಕರೆ 03 ಗುಂಟೆ ಜಮೀನು ಎಲ್.ಆರ್. ಟಿಪ್ಪಣಿಯ ಪ್ರಕಾರ ಖರಾಬ್ ಕಾಲಂನಲ್ಲಿ ದಾಖಲಾಗಿತ್ತು.
1951ರ ಸರ್ಕಾರದ ಆದೇಶವು 1956ರಲ್ಲಿ ದುರಸ್ತಿಯಾದ 40 ಎಕರೆ ಜಮೀನಿಗೆ ಮಾತ್ರ ಅನ್ವಯವಾಗುತ್ತಿತ್ತು ಎನ್ನಲಾಗಿದೆ. ಆದರೆ ಈ ಆದೇಶದ ವ್ಯಾಪ್ತಿಯನ್ನು ಮೀರಿ, ಯಾವುದೇ ಅಧಿಕೃತ ಮಂಜೂರಾತಿ ದಾಖಲೆಗಳಿಲ್ಲದಿದ್ದರೂ ಉಳಿದ ಸರ್ಕಾರಿ ಜಮೀನಿನ ಪೈಕಿ 192 ಎಕರೆ 03 ಗುಂಟೆಯನ್ನು ಪಾಲಾಕ್ಷಪ್ಪ ಬಿನ್ ನಂಜಪ್ಪ ಎಂಬುವವರ ಹೆಸರಿಗೆ ಅಕ್ರಮವಾಗಿ ಅಳತೆ ಮಾಡಿ ಪೋಡಿ ದುರಸ್ತಿ ಮಾಡಲಾಗಿದೆ ಎಂಬುದು ದೂರಿನ ಪ್ರಮುಖ ಆರೋಪವಾಗಿದೆ.
ಈ ಮೂಲಕ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ದಾಖಲಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ಮೌಲ್ಯದ ಆರ್ಥಿಕ ನಷ್ಟ ಉಂಟಾಗಿರುವ ಸಾಧ್ಯತೆಯಿದೆ ಎಂದು ಆರೋಪಿಸಲಾಗಿದೆ.
ವರ್ಗಾವಣೆಯಾದ ದಿನವೇ ಕಡತಕ್ಕೆ ಸಹಿ
ಈ ಪ್ರಕರಣದಲ್ಲಿ ಭದ್ರಾವತಿಯ ಅಂದಿನ ಭೂದಾಖಲೆಗಳ ಸಹಾಯಕ ನಿರ್ದೇಶಕರಾಗಿದ್ದ ದೊಳ್ಳೇಗೌಡ (ಹಾಲಿ ನಾಗಮಂಗಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ) ಅವರ ಪಾತ್ರದ ಕುರಿತು ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.
2025ರ ಮೇ 31ರಂದು ಮಂಜೂರಾತಿ ದಾಖಲೆಗಳು ತಂತ್ರಾಂಶದಲ್ಲಿ ಅಪ್ಲೋಡ್ ಆಗಿಲ್ಲ ಎಂಬ ಕಾರಣ ನೀಡಿ ಅವರು ಕಡತವನ್ನು ಹಿಂದಿರುಗಿಸಲಾಗಿತ್ತು. ಜೂನ್ 17ರಂದು ತಹಶೀಲ್ದಾರ್ ಅವರು ಕಡತವನ್ನು ಮರು ರವಾನಿಸಿದ ಬಳಿಕ, ನಾಗಮಂಗಲಕ್ಕೆ ವರ್ಗಾವಣೆಯಾಗಿದ್ದ ಅದೇ ದಿನ ದೊಳ್ಳೇಗೌಡ ಅವರು ಪ್ರಕರಣವನ್ನು ಭೂಮಾಪಕರ ಹಂಚಿಕೆ ಪಟ್ಟಿಗೆ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಲ್ಲದೆ, ವರ್ಗಾವಣೆಯಾದ ಬಳಿಕವೂ ಜೂನ್ 26ರಂದು ಪೋಡಿ ದುರಸ್ತಿಯನ್ನು ಕಾನೂನುಬಾಹಿರವಾಗಿ ಅನುಮೋದಿಸಿ ಚೆಕ್ ರಿಜಿಸ್ಟರ್ನಲ್ಲಿ ದೃಢೀಕರಿಸಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ.
ತಂತ್ರಾಂಶದಲ್ಲಿ ಪ್ರಕರಣ ಸ್ವೀಕಾರಕ್ಕೂ ಮುನ್ನವೇ ಅಳತೆ?
ಭೂಮಾಪಕ ಟಿ.ಹೆಚ್. ಲೋಹಿತ್ ಅವರು ತಂತ್ರಾಂಶದಲ್ಲಿ ಪ್ರಕರಣ ಅಧಿಕೃತವಾಗಿ ಸ್ವೀಕೃತವಾಗುವುದಕ್ಕೂ ಮುನ್ನವೇ ಸ್ಥಳದಲ್ಲಿ ಭೌತಿಕವಾಗಿ ಅಳತೆ ನಡೆಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಳತೆಯ ಆಧಾರದ ಮೇಲೆ ಎಲ್.ಆರ್. ಟಿಪ್ಪಣಿ ಹಾಗೂ ಎಲ್.ಆರ್. ಪಕ್ಕಾ ದಾಖಲೆಗಳನ್ನು ಸಿದ್ಧಪಡಿಸಿ ನೀಡಲಾಗಿತ್ತು ಎನ್ನಲಾಗಿದೆ.
ಮತ್ತೊಂದೆಡೆ, ಭೂಮಾಪಕಿ ರಮಾದೇವಿ ಅವರು ಪೋಡಿ ದುರಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಿ, ಅಂದಿನ ಪರ್ಯಾವೇಕ್ಷಕ ಯತೀಶ (ಹಾಲಿ ಚನ್ನಗಿರಿ) ಅವರಿಗೆ ಮಂಡಿಸಿದ್ದರು. ಯತೀಶ ಅವರು ಆ ಕಡತವನ್ನು ಅನುಮೋದನೆಗಾಗಿ ದೊಳ್ಳೇಗೌಡ ಅವರಿಗೆ ಕಳುಹಿಸಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಹೀಗೆ ಪ್ರಕರಣದ ವಿವಿಧ ಹಂತಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಸ್ಪರ ಕಡತಗಳನ್ನು ಮುಂದಕ್ಕೆ ಸಾಗಿಸಿ, ನಿಯಮಬಾಹಿರ ದುರಸ್ತಿಗೆ ಸಹಕರಿಸಿದ್ದಾರೆ ಎಂಬುದು ದೂರಿನ ಸಾರಾಂಶವಾಗಿದೆ.
ಪೋಡಿ ದಾಖಲೆಗಳನ್ನೇ ನಾಶಪಡಿಸಿದ ಆರೋಪ
ಈ ಪ್ರಕರಣದಲ್ಲಿ ದಾಖಲೆಗಳ ನಾಶದ ಆರೋಪವೂ ಪ್ರಮುಖವಾಗಿದೆ. ಭೂಮಾಪಕಿ ರಮಾದೇವಿ ಅವರು ಚೆಕ್ ರಿಜಿಸ್ಟರ್ ಅನ್ನು ಪಡೆದು ಪೋಡಿ ವಿಷಯ ನಿರ್ವಾಹಕರ ಮೂಲಕ ದಾಖಲಾತಿ ಮಾಡಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಪೋಡಿ ದಾಖಲೆಗಳ ಸುಪರ್ದುದಾರರಾಗಿದ್ದ ಅಭಿಲೇಖಾಲಯದ ಭೂಮಾಪಕಿ ಮಮತಾ ಅವರು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ದುರಸ್ತಿಗೆ ಸಂಬಂಧಿಸಿದ ಪೋಡಿ ದಾಖಲೆಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಸ್ತುತ ಅಭಿಲೇಖಾಲಯದಲ್ಲಿ ದುರಸ್ತಿಗೆ ಸಂಬಂಧಿಸಿದ ಚೆಕ್ ರಿಜಿಸ್ಟರ್ ಮಾತ್ರ ಲಭ್ಯವಿದ್ದು, ಇತರ ಪೋಡಿ ದಾಖಲೆಗಳು ಲಭ್ಯವಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸರ್ಕಾರಿ ಜಮೀನಿನ ದಾಖಲೆಗಳನ್ನು ಅಕ್ರಮವಾಗಿ ಬದಲಾಯಿಸಿದ ಆರೋಪದ ಜೊತೆಗೆ, ಆ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನೇ ನಾಶಪಡಿಸಿರುವ ಆರೋಪವೂ ತನಿಖೆಯ ವ್ಯಾಪ್ತಿಗೆ ಬಂದಿದೆ.
ಐವರು ಅಧಿಕಾರಿ, ಸಿಬ್ಬಂದಿ ವಿರುದ್ಧ ಪ್ರಕರಣ
- ದೊಳ್ಳೇಗೌಡ (A1): ಭೂದಾಖಲೆಗಳ ಅಂದಿನ ಸಹಾಯಕ ನಿರ್ದೇಶಕರು, ಹಾಲಿ ನಾಗಮಂಗಲ.
- ಯತೀಶ (A2): ಅಂದಿನ ಪರ್ಯಾವೇಕ್ಷಕರು, ಹಾಲಿ ಚನ್ನಗಿರಿ.
- ಟಿ.ಹೆಚ್. ಲೋಹಿತ್ (A3): ಭೂಮಾಪಕರು.
- ರಮಾದೇವಿ (A4): ಭೂಮಾಪಕಿ.
- ಮಮತಾ (A5): ಅಭಿಲೇಖಾಲಯದ ಭೂಮಾಪಕಿ ಹಾಗೂ ಪೋಡಿ ದಾಖಲೆಗಳ ಸುಪರ್ದುದಾರರು.
ಜೀರೋ ಎಫ್ಐಆರ್ನಿಂದ ಭದ್ರಾವತಿಯಲ್ಲಿ ಪ್ರಕರಣ ದಾಖಲು
ಬೆಂಗಳೂರು ವಿಭಾಗದ ಪ್ರಾದೇಶಿಕ ಭೂದಾಖಲೆಗಳ ಜಂಟಿ ನಿರ್ದೇಶಕ ಎಸ್. ನಿಸಾರ್ ಅಹಮದ್ ಅವರು 2026ರ ನವೆಂಬರ್ 13ರಂದು ಈ ಸಂಬಂಧ ದೂರು ನೀಡಿದ್ದಾರೆ.
ಮೊದಲು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್ಐಆರ್ ಸಂಖ್ಯೆ 04/2026 ದಾಖಲಿಸಲಾಗಿತ್ತು. ನಂತರ ಪ್ರಕರಣವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, 2026ರ ನವೆಂಬರ್ 17ರಂದು ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 122/2026ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 238, 316(5), 318(3), 336(2), 336(3), 340(2) ಹಾಗೂ 61(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ತನಿಖೆಯಿಂದ ಹೊರಬರಬೇಕಿರುವ ಪ್ರಮುಖ ಅಂಶಗಳು
ಸುಮಾರು 237 ಎಕರೆ ಸರ್ಕಾರಿ ಜಮೀನಿನ ಮೂಲ ದಾಖಲೆಗಳು, 40 ಎಕರೆ ಜಮೀನಿಗೆ ಸಂಬಂಧಿಸಿದ 1951ರ ಸರ್ಕಾರದ ಆದೇಶ, ಉಳಿದ ಜಮೀನಿನ ಖರಾಬ್ ದಾಖಲಾತಿಗಳು ಹಾಗೂ 192 ಎಕರೆ 03 ಗುಂಟೆ ಜಮೀನಿನ ಪೋಡಿ ದುರಸ್ತಿ ಪ್ರಕ್ರಿಯೆ ಇದೀಗ ತನಿಖೆಯಲ್ಲಿ ಮಹತ್ವ ಪಡೆದುಕೊಂಡಿವೆ.
ಯಾವ ಆಧಾರದ ಮೇಲೆ ಸರ್ಕಾರಿ ಜಮೀನನ್ನು ಪಾಲಾಕ್ಷಪ್ಪ ಬಿನ್ ನಂಜಪ್ಪ ಅವರ ಹೆಸರಿಗೆ ದಾಖಲಿಸಲಾಯಿತು? ಮಂಜೂರಾತಿ ದಾಖಲೆಗಳಿಲ್ಲದಿದ್ದರೂ ಪೋಡಿ ದುರಸ್ತಿ ಪ್ರಕ್ರಿಯೆ ಹೇಗೆ ಪೂರ್ಣಗೊಂಡಿತು? ವರ್ಗಾವಣೆಯಾದ ದಿನವೇ ಕಡತ ಮುಂದಕ್ಕೆ ಸಾಗಿದ್ದು ಹಾಗೂ ನಂತರ ಅನುಮೋದನೆ ನೀಡಿದ್ದು ಹೇಗೆ? ನಾಶಪಡಿಸಲಾಗಿದೆ ಎನ್ನಲಾದ ಪೋಡಿ ದಾಖಲೆಗಳು ಎಲ್ಲಿಗೆ ಹೋದವು? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.
ಸರ್ಕಾರಿ ಭೂಮಿಯ ರಕ್ಷಣೆಯ ಜವಾಬ್ದಾರಿ ಹೊಂದಿರುವ ಭೂದಾಖಲೆಗಳ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ.
Survey officials facilitated the podi durasti (subdivision and rectification) of 192 acres of government land for private individuals; FIR registered against five persons



0 ಕಾಮೆಂಟ್ಗಳು