Advertisement

ಭದ್ರಾವತಿ: ಬೈಕ್ ಪಲ್ಟಿಯಾಗಿ ಹಿಂಬದಿ ಸವಾರ ಸಾವು; ಬೈಕ್ ಚಾಲಕನ ವಿರುದ್ಧ ಪ್ರಕರಣ ದಾಖಲು- Bhadravathi: Pillion rider dies after bike overturns; case registered against the rider.

 SUDDILIVE || SHIVAMOGGA

ಭದ್ರಾವತಿ: ಬೈಕ್ ಪಲ್ಟಿಯಾಗಿ ಹಿಂಬದಿ ಸವಾರ ಸಾವು; ಬೈಕ್ ಚಾಲಕನ ವಿರುದ್ಧ ಪ್ರಕರಣ ದಾಖಲು- Bhadravathi: Pillion rider dies after bike overturns; case registered against the rider.  
Bike, accident
ಸಾಂದರ್ಭಿಕ ಚಿತ್ರ


ಭದ್ರಾವತಿ:
ಬೈಕ್‌ನಲ್ಲಿ ಲಿಫ್ಟ್ ಪಡೆದು ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಬೈಕ್ ಪಲ್ಟಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಸೀತಾರಾಮಪುರ ಗ್ರಾಮದ ಸಮೀಪ ಸಂಭವಿಸಿದೆ.

ಕೂಡ್ಲಿಗೆರೆ ಗ್ರಾಮದ ಸುಬ್ರಹ್ಮಣ್ಯ ಬೀದಿಯ ನಿವಾಸಿ ಚಿದಾನಂದ ಕೆ. (48) ಮೃತಪಟ್ಟವರು. ಇವರು ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ರಸ್ತೆಯ ದಿಣ್ಣೆ ಬಳಿ ನಿಯಂತ್ರಣ ತಪ್ಪಿದ ಬೈಕ್

ಘಟನೆಯ ವಿವರದ ಪ್ರಕಾರ, ನವೆಂಬರ್ 14ರ ರಾತ್ರಿ ಭದ್ರಾವತಿಯಲ್ಲಿ ಲಾರಿ ಚಾಲಕನ ಕೆಲಸ ಮುಗಿಸಿಕೊಂಡು ಚಿದಾನಂದ ಅವರು ತಮ್ಮ ಮನೆಗೆ ತೆರಳುತ್ತಿದ್ದರು. ಈ ವೇಳೆ ಭದ್ರಾವತಿಯಿಂದ ಕೂಡ್ಲಿಗೆರೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಕೋಡಿಹೊಸೂರು ಗ್ರಾಮದವರ ಬಳಿ ಲಿಫ್ಟ್ ಕೇಳಿದ್ದಾರೆ. ನಾಗೇಂದ್ರ ಅವರು ತಮ್ಮ KA-14-HE-0785 ನೋಂದಣಿ ಸಂಖ್ಯೆಯ ಬೈಕ್‌ನಲ್ಲಿ ಚಿದಾನಂದ ಅವರನ್ನು ಹಿಂಬದಿ ಸವಾರರನ್ನಾಗಿ ಕೂರಿಸಿಕೊಂಡು ಪ್ರಯಾಣ ಮುಂದುವರಿಸಿದ್ದಾರೆ.

ನವೆಂಬರ್ 15ರ ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ಭದ್ರಾವತಿ-ಚನ್ನಗಿರಿ ರಸ್ತೆಯ ಸೀತಾರಾಮಪುರ ಗ್ರಾಮದ ಬಂಡೆ ತಿಪ್ಪೇಶ್ ಅವರ ಮನೆಯ ಸಮೀಪ ಬರುತ್ತಿದ್ದಾಗ, ರಸ್ತೆಯಲ್ಲಿದ್ದ ದಿಣ್ಣೆಯ ಬಳಿ ಬೈಕ್ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ.

ಬೈಕ್ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಬೈಕ್ ಸವಾರ ಅವರು ದಿಣ್ಣೆಯ ಬಳಿ ವಾಹನವನ್ನು ನಿಯಂತ್ರಿಸಲಾಗದೆ ರಸ್ತೆಯ ಮೇಲೆಯೇ ಬೈಕ್ ಪಲ್ಟಿ ಹೊಡೆಸಿದ್ದಾರೆ. ಪರಿಣಾಮ ಬೈಕ್ ಚಾಲಕ  ಹಾಗೂ ಹಿಂಬದಿ ಸವಾರ ಚಿದಾನಂದ ಇಬ್ಬರೂ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಸ್ಪತ್ರೆಗೆ ದಾಖಲಿಸಿದರೂ ಉಳಿಯದ ಜೀವ

ಅಪಘಾತದ ಬಳಿಕ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಗಾಯಾಳುಗಳಿಗೆ ನೆರವಾಗಿದ್ದಾರೆ. ಇದೇ ವೇಳೆ ನಾಗೇಂದ್ರ ಅವರ ಮೊಬೈಲ್‌ಗೆ ಸ್ನೇಹಿತ ಪ್ರಶಾಂತ ಕರೆ ಮಾಡಿದ್ದು, ಅಪಘಾತದ ವಿಚಾರ ತಿಳಿದ ಬಳಿಕ ನಾಗೇಂದ್ರ ಅವರ ಅಣ್ಣ ಮುರುಗ ಅವರಿಗೆ ಮಾಹಿತಿ ನೀಡಿದ್ದಾರೆ.

ನಂತರ ಪ್ರಶಾಂತ, ಮುರುಗ ಹಾಗೂ ಅವರ ಸ್ನೇಹಿತರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳಿಬ್ಬರನ್ನೂ ವಾಹನದ ಮೂಲಕ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಅಪಘಾತದಲ್ಲಿ ಚಿದಾನಂದ ಅವರ ತಲೆ ಹಾಗೂ ಮುಖಕ್ಕೆ ಗಂಭೀರ ಪೆಟ್ಟು ಬಿದ್ದಿದ್ದು, ಮೈಕೈಗಳಿಗೂ ಗಾಯಗಳಾಗಿದ್ದವು. ಬೈಕ್ ಚಾಲಕ ನಾಗೇಂದ್ರ ಅವರಿಗೂ ತಲೆ ಹಾಗೂ ದೇಹದ ಭಾಗಗಳಿಗೆ ತೀವ್ರ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇತ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿದಾನಂದ ಅವರು ಚಿಕಿತ್ಸೆಗೆ ಸ್ಪಂದಿಸದೆ ನವೆಂಬರ್ 15ರ ಬೆಳಿಗ್ಗೆ ಸುಮಾರು 10.20ಕ್ಕೆ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಪತ್ನಿಗೆ ಮಾಹಿತಿ ನೀಡಿದ ಸ್ನೇಹಿತರು

ಅಪಘಾತದ ಬಳಿಕ ಮುರುಗ ಅವರು ಚಿದಾನಂದ ಅವರ ಕುಟುಂಬದವರ ಮಾಹಿತಿ ಪಡೆದು, ಅವರ ಪತ್ನಿ ಪುಷ್ಪಾ ಅವರ ಮೊಬೈಲ್ ಸಂಖ್ಯೆಯನ್ನು ಪಡೆದು ಕರೆ ಮಾಡಿ ಘಟನೆ ಕುರಿತು ತಿಳಿಸಿದ್ದಾರೆ. ಬೆಳಿಗ್ಗೆ ಸುಮಾರು 5 ಗಂಟೆಗೆ ಪುಷ್ಪಾ ಅವರು ಮೆಗ್ಗಾನ್ ಆಸ್ಪತ್ರೆಗೆ ತೆರಳಿದ್ದು, ಅಲ್ಲಿದ್ದ ಮುರುಗ ಹಾಗೂ ಪ್ರಶಾಂತ ಅವರಿಂದ ಅಪಘಾತದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಮೃತ ಚಿದಾನಂದ ಅವರ ಅಣ್ಣ ಕೆ.ಎಚ್. ಮಹಾರುದ್ರಪ್ಪ (52) ಅವರು ನವೆಂಬರ್ 15ರಂದು ಮಧ್ಯಾಹ್ನ 1.10ಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದಾರೆ.

ಬೈಕ್ ಚಾಲಕ ನಾಗೇಂದ್ರ ಅವರು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿ ಅಪಘಾತಕ್ಕೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 237/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 125(a) ಹಾಗೂ 106(1)ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Bhadravathi: Pillion rider dies after bike overturns; case registered against the rider.

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು