Advertisement

ಹಾಲಿನ ಬೆಲೆ ಏರಿಕೆಗೆ ಪ್ರಶ್ನೆ ಕೇಳುವವರು ಇತರೆ ವಸ್ತುಗಳ ಬೆಲೆ ಏರಿಕೆ ಬಗ್ಗೆ ಏಕೆ ಮೌನ? – ಸಚಿವ ಲಕ್ಷ್ಮಣ ಸವದಿ-Why are those who question the price hike of milk silent about the price hike of other items? – Minister Lakshman Savadi

 SUDDILIVE || SHIVAMOGGA

ಹಾಲಿನ ಬೆಲೆ ಏರಿಕೆಗೆ ಪ್ರಶ್ನೆ ಕೇಳುವವರು ಇತರೆ ವಸ್ತುಗಳ ಬೆಲೆ ಏರಿಕೆ ಬಗ್ಗೆ ಏಕೆ ಮೌನ? – ಸಚಿವ ಲಕ್ಷ್ಮಣ ಸವದಿ-Why are those who question the price hike of milk silent about the price hike of other items? – Minister Lakshman Savadi   

ಶಿವಮೊಗ್ಗ: ಹಾಲಿನ ಬೆಲೆ ಪ್ರತಿ ಲೀಟರ್‌ಗೆ 7 ರೂ. ಹೆಚ್ಚಳವಾದಾಗ ಮಾತ್ರ ಸಾರ್ವಜನಿಕವಾಗಿ ಪ್ರಶ್ನೆಗಳು ಕೇಳಿಬರುತ್ತವೆ. ಆದರೆ ಚಿಪ್ಸ್, ಶಾಂಪೂ, ಪೌಡರ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರೆ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾದಾಗ ಯಾರೂ ಪ್ರಶ್ನಿಸುವುದಿಲ್ಲ. ರೈತರ ಬೆವರು ಮತ್ತು ಶ್ರಮಕ್ಕೆ ಬೆಲೆ ನೀಡುವ ವಿಚಾರದಲ್ಲಿ ಮಾತ್ರ ಇಷ್ಟೊಂದು ಚರ್ಚೆ ನಡೆಯುತ್ತಿರುವುದು ಏಕೆ ಎಂದು ಸಹಕಾರ ಖಾತೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಪ್ರಶ್ನಿಸಿದರು.

ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ 73ನೇ ರಾಜ್ಯಮಟ್ಟದ ಸಹಕಾರ ಸಪ್ತಾಹ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಹಗಲು-ರಾತ್ರಿ ಶ್ರಮಿಸಿ, ಹಸುಗಳನ್ನು ಸಾಕಿ, ಅವುಗಳಿಗೆ ಮೇವು ಮತ್ತು ನೀರುಣಿಸಿ ಹಾಲು ಉತ್ಪಾದಿಸುತ್ತಾರೆ. ಇಂತಹ ರೈತರ ಹಾಲಿಗೆ ಲೀಟರ್‌ಗೆ 7 ರೂ. ಹೆಚ್ಚಳ ಮಾಡಿದಾಗ ಅದನ್ನು ದೊಡ್ಡ ವಿಷಯವನ್ನಾಗಿ ಮಾಡಲಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಇತರೆ ಉತ್ಪನ್ನಗಳ ಬೆಲೆಗಳು ಹೆಚ್ಚಾದಾಗ ಗ್ರಾಹಕರು ಪ್ರಶ್ನಿಸುವುದಿಲ್ಲ ಎಂದು ಹೇಳಿದರು.

ರೈತರಿಂದ ಕಡಿಮೆ ಬೆಲೆಗೆ ಆಲೂಗಡ್ಡೆ ಖರೀದಿಸಿ ಅದನ್ನು ಸಂಸ್ಕರಿಸಿ ಚಿಪ್ಸ್ ರೂಪದಲ್ಲಿ ಪ್ಯಾಕೆಟ್ ಮಾಡಿ 50-60 ರೂ.ಗೆ ಮಾರಾಟ ಮಾಡಲಾಗುತ್ತದೆ. ಒಂದು ಪ್ಯಾಕೆಟ್‌ ಚಿಪ್ಸ್‌ಗೆ ಇಷ್ಟೊಂದು ಬೆಲೆ ಏಕೆ ಎಂದು ಯಾರೂ ಕೇಳುವುದಿಲ್ಲ. ಅದೇ ರೀತಿ ಜೋಳವನ್ನು ಹುರಿದು ಮಸಾಲೆ ಹಾಕಿ ಪ್ಯಾಕೆಟ್‌ನಲ್ಲಿ ಮಾರಾಟ ಮಾಡುವಾಗ 80 ರೂ. ಬೆಲೆ ನಿಗದಿಪಡಿಸಿದರೂ ಪ್ರಶ್ನಿಸುವವರಿಲ್ಲ. ಶಾಂಪೂ, ಮುಖಕ್ಕೆ ಹಚ್ಚುವ ಪೌಡರ್ ಸೇರಿದಂತೆ ಇತರೆ ವಸ್ತುಗಳ ಬೆಲೆ ಏರಿಕೆಯ ಬಗ್ಗೆಯೂ ಇದೇ ರೀತಿಯ ಮೌನವಿದೆ ಎಂದು ಉದಾಹರಣೆ ನೀಡಿದರು.

ಹಾಲಿನ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವವರು ನಂತರ ಪಕ್ಕದ ಫೈವ್‌ಸ್ಟಾರ್ ಹೋಟೆಲ್‌ಗೆ ತೆರಳಿ ಚಹಾ ಕುಡಿಯುತ್ತಾರೆ. ಹತ್ತು ಮಂದಿ ತಲಾ 500 ರೂ. ಬೆಲೆಯ ಚಹಾ ಕುಡಿದರೂ ಅದರ ಬೆಲೆ ಬಗ್ಗೆ ಪ್ರಶ್ನಿಸುವುದಿಲ್ಲ. ಒಂದು ಚಮಚ ಹಾಲು, ಸಕ್ಕರೆ, ಟೀ ಪುಡಿ ಹಾಗೂ ನೀರು ಬಳಸಿ ತಯಾರಿಸುವ ಒಂದು ಕಪ್ ಚಹಾಕ್ಕೆ 500 ರೂ. ಪಡೆಯುವುದನ್ನು ಪ್ರಶ್ನಿಸದವರು, ಹಸು ಸಾಕುವ ಬಡ ರೈತ ಮಹಿಳೆಯರಿಗೆ ನೀಡುವ ಹೆಚ್ಚುವರಿ ಹಣದ ಬಗ್ಗೆ ಮಾತ್ರ ಪ್ರಶ್ನಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾದಾಗಲೂ ಇದೇ ರೀತಿಯ ಪ್ರಶ್ನೆಗಳು ಕೇಳಿಬರುವುದಿಲ್ಲ. ಪೆಟ್ರೋಲ್ ಪಂಪ್‌ಗಳಿಗೆ ತೈಲ ಪೂರೈಕೆ ಮಾಡುವ ವ್ಯವಸ್ಥೆಯ ಬಗ್ಗೆ ಸಾಮಾನ್ಯ ಜನರು ವಿಚಾರಿಸುವುದಿಲ್ಲ. ಆದರೆ ಹಾಲು ಮತ್ತು ಸಕ್ಕರೆಯ ಬೆಲೆ ವಿಚಾರ ಬಂದಾಗ ಮಾತ್ರ ಎಲ್ಲರ ಗಮನ ಸೆಳೆಯುತ್ತದೆ. ರೈತರ ಶ್ರಮ ಮತ್ತು ಬೆವರಿಗೂ ಬೆಲೆ ಇದೆ ಎಂಬುದನ್ನು ಸಮಾಜ ಅರ್ಥಮಾಡಿಕೊಳ್ಳಬೇಕು ಎಂದರು.

ವಿರೋಧ ಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಗತ್ಯ. ಆಡಳಿತದಲ್ಲಿನ ಲೋಪದೋಷಗಳನ್ನು ಗುರುತಿಸಿ ಸರ್ಕಾರವನ್ನು ತಿದ್ದುವ ಜವಾಬ್ದಾರಿ ಪ್ರತಿಪಕ್ಷಗಳ ಮೇಲಿದೆ. ಆದರೆ ರೈತರ ಶ್ರಮಕ್ಕೆ ಸಿಗುವ ಪ್ರತಿಫಲದ ವಿಚಾರದಲ್ಲಿಯೂ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಹಾಲಿನ ಬೆಲೆ ಹೆಚ್ಚಳದ ಹಿಂದೆ ರೈತರ ಹಿತಾಸಕ್ತಿ ಇದೆ. ಸಹಕಾರ ಕ್ಷೇತ್ರವನ್ನು ನಿರ್ಮಿಸಿರುವುದೇ ರೈತರಿಗಾಗಿ. ಹೀಗಾಗಿ ಸಹಕಾರಿಗಳು ರೈತರಿಗಾಗಿ ಏನು ಮಾಡುತ್ತಿದ್ದಾರೆ, ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ತಮ್ಮ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು.

ರೈತರ ಸಾಲ ಸೌಲಭ್ಯ ವಿಸ್ತರಣೆಗೆ ಸಹಕಾರಿ ಸಂಘಗಳ ಬಲವರ್ಧನೆ ಅಗತ್ಯ: ಸಚಿವ ಲಕ್ಷ್ಮಣ ಸವದಿ, 30 ಲಕ್ಷ ಕುಟುಂಬಗಳಿಗೆ ₹27 ಸಾವಿರ ಕೋಟಿ ಶೂನ್ಯ ಬಡ್ಡಿದರದ ಸಾಲ ವಿತರಣೆ – 60 ಲಕ್ಷ ಕುಟುಂಬಗಳಿಗೆ ಸೌಲಭ್ಯ ತಲುಪಿಸುವ ಗುರಿ

ಶಿವಮೊಗ್ಗ: ರಾಜ್ಯದಲ್ಲಿ ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಮೂಲಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವುದರ ಜೊತೆಗೆ, ಸಹಕಾರಿ ಸಂಘಗಳ ವ್ಯಾಪ್ತಿಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಸಹಕಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದ ಸುಮಾರು 30 ಲಕ್ಷ ಕುಟುಂಬಗಳಿಗೆ 27 ಸಾವಿರ ಕೋಟಿ ರೂ. ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು 60 ಲಕ್ಷ ಕುಟುಂಬಗಳಿಗೆ ತಲುಪಿಸುವ ಸಂಕಲ್ಪ ಹೊಂದಲಾಗಿದೆ ಎಂದರು.

ಗದಗ ಜಿಲ್ಲೆಯ ಕಣಗಿನಾಳ ಗ್ರಾಮದಲ್ಲಿ ಜನಿಸಿದ ಸಹಕಾರಿ ಕ್ಷೇತ್ರದ ಭೀಷ್ಮ ಸಿದ್ದನಗೌಡ ಸಂಗನಗೌಡ ಪಾಟೀಲರನ್ನು ಸ್ಮರಿಸಿದ ಸಚಿವರು, 121 ವರ್ಷಗಳ ಇತಿಹಾಸ ಹೊಂದಿರುವ ಸಹಕಾರಿ ಕ್ಷೇತ್ರ ಇಂದು ದೇಶಕ್ಕೆ ನೆರಳು ನೀಡುವ ಬೃಹತ್ ಹೆಮ್ಮರವಾಗಿ ಬೆಳೆದಿದೆ. ಅನೇಕ ಮಹನೀಯರ ಪರಿಶ್ರಮದಿಂದ ಈ ಕ್ಷೇತ್ರ ಅಭಿವೃದ್ಧಿ ಹೊಂದಿದೆ ಎಂದು ಹೇಳಿದರು.

ಸಹಕಾರಿ ಕ್ಷೇತ್ರದಲ್ಲಿ ಒಗ್ಗಟ್ಟಿನ ಮಹತ್ವವನ್ನು ವಿವರಿಸಿದ ಅವರು, ಕಾರ್ಯಕ್ರಮದ ಉದ್ಘಾಟನೆ ವೇಳೆ ಐದು ದೀಪಗಳನ್ನು ಒಟ್ಟಿಗೆ ಸೇರಿಸಿ ಬೆಳಗಿಸಿದ ಉದಾಹರಣೆ ನೀಡಿದರು. ಪ್ರತ್ಯೇಕವಾಗಿದ್ದರೆ ಬೇಗ ನಶಿಸುತ್ತೇವೆ, ಒಟ್ಟಾಗಿ ಇದ್ದರೆ ಶಾಶ್ವತವಾಗಿ ಉಳಿಯುತ್ತೇವೆ ಎಂಬ ಸಂದೇಶವನ್ನು ಈ ದೀಪಗಳು ಸಾರುತ್ತವೆ. ಸಹಕಾರಿ ಕ್ಷೇತ್ರದಲ್ಲಿಯೂ ಇದೇ ಒಗ್ಗಟ್ಟು ಅಗತ್ಯ ಎಂದು ತಿಳಿಸಿದರು.

ಪ್ರತಿ ಹಳ್ಳಿಗೂ ಕೃಷಿ ಪತ್ತಿನ ಸಹಕಾರಿ ಸಂಘ

ರಾಜ್ಯದಲ್ಲಿ ಪ್ರಸ್ತುತ 31 ಜಿಲ್ಲೆಗಳಿದ್ದರೂ 21 ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕೆಲವು ಕಡೆ ಎರಡು ಅಥವಾ ಮೂರು ಜಿಲ್ಲೆಗಳಿಗೆ ಒಂದೇ ಡಿಸಿಸಿ ಬ್ಯಾಂಕ್ ಇದೆ. ಸಾಧ್ಯವಿರುವ ಕಡೆ ಪ್ರತಿ ಜಿಲ್ಲೆಗೂ ಪ್ರತ್ಯೇಕ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಸ್ಥಾಪಿಸುವ ಚಿಂತನೆ ಇದೆ. ಕೃಷಿ ಪತ್ತಿನ ಸಹಕಾರಿ ಸಂಘಗಳಿಲ್ಲದ ಹಳ್ಳಿಗಳಲ್ಲಿ ಹೊಸ ಸಂಘಗಳನ್ನು ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ನಿರ್ದೇಶಕರಿಗೆ ಗುರಿ ನಿಗದಿಪಡಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗುವುದು ಎಂದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ವಿದ್ಯುತ್ ಸಹಕಾರಿ ಸಂಘದ ಕಾರ್ಯವೈಖರಿಯನ್ನು ಉದಾಹರಿಸಿದ ಸಚಿವರು, ಸುಮಾರು 1.79 ಲಕ್ಷ ಸದಸ್ಯರನ್ನು ಹೊಂದಿರುವ ಈ ಸಂಘವು ತಾಲೂಕಿನ ಮನೆಗಳಿಗೆ ವಿದ್ಯುತ್ ಸಂಪರ್ಕ, ಮೀಟರ್ ಅಳವಡಿಕೆ, ಬಿಲ್ ವಿತರಣೆ ಹಾಗೂ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿದೆ. ದೇಶದಲ್ಲೇ ವಿಶಿಷ್ಟ ಮಾದರಿಯಾಗಿರುವ ಈ ಸಂಘದ ಕಾರ್ಯವೈಖರಿ ಸಹಕಾರಿ ಕ್ಷೇತ್ರದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.


ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕತೆ ಅಗತ್ಯ

ಸಹಕಾರಿ ಕ್ಷೇತ್ರದಲ್ಲಿ ಸಾರ್ವಜನಿಕರ ವಿಶ್ವಾಸವನ್ನು ದ್ವಿಗುಣಗೊಳಿಸುವುದು ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವುದು ತಮ್ಮ ಪ್ರಮುಖ ಉದ್ದೇಶವಾಗಿದೆ. ಸಹಕಾರಿ ಬ್ಯಾಂಕ್‌ಗಳಲ್ಲಿ ಸಾರ್ವಜನಿಕರು ಠೇವಣಿ ಇಡುವಂತೆ ವಿಶ್ವಾಸ ಮೂಡಿಸಬೇಕು. ಠೇವಣಿ ಸಂಗ್ರಹ ಹೆಚ್ಚಾದರೆ ರೈತರಿಗೆ ಸಾಲ ನೀಡುವ ಸಾಮರ್ಥ್ಯವೂ ಹೆಚ್ಚಲಿದೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳ ಠೇವಣಿ ಹೆಚ್ಚಾಗಲು ನಿರ್ದೇಶಕರು ಹಾಗೂ ಬ್ಯಾಂಕ್ ಅಧಿಕಾರಿಗಳು ಕೈಗೊಂಡ ಸಂಘಟಿತ ಪ್ರಯತ್ನವೇ ಕಾರಣ. ಪ್ರತಿಯೊಬ್ಬ ನಿರ್ದೇಶಕರಿಗೆ ಠೇವಣಿ ಸಂಗ್ರಹದ ಜವಾಬ್ದಾರಿ ನೀಡಲಾಗಿತ್ತು. ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಗೂ ಗುರಿ ನಿಗದಿಪಡಿಸಲಾಗಿತ್ತು. ಸಾರ್ವಜನಿಕರ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳ ಬದಲಿಗೆ ತಮ್ಮ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಂತೆ ಮನವೊಲಿಸಲಾಗಿತ್ತು ಎಂದರು.

ತಮ್ಮ ಊರಿನಲ್ಲಿ ಸುಮಾರು 1,800 ಜನಸಂಖ್ಯೆಯಿದ್ದು, 1,200 ಸದಸ್ಯರನ್ನು ಹೊಂದಿರುವ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 60 ಕೋಟಿ ರೂ. ಠೇವಣಿ ಇದೆ. ಗ್ರಾಮದ ಜನರು ತಮ್ಮ ಸಂಘವನ್ನು ತಮ್ಮದೇ ಸಂಸ್ಥೆ ಎಂದು ಭಾವಿಸಿ ವಿಶ್ವಾಸದಿಂದ ಹಣ ಠೇವಣಿ ಇಡುತ್ತಿದ್ದಾರೆ. ಇದೇ ಮಾದರಿ ಎಲ್ಲೆಡೆ ಬೆಳೆಯಬೇಕು ಎಂದು ತಿಳಿಸಿದರು.

ನಬಾರ್ಡ್‌ನಿಂದ ಕೃಷಿ ಸಾಲದ ನೆರವು ಇಳಿಕೆ

ರೈತರಿಗೆ ಸಾಲ ಒದಗಿಸುವಲ್ಲಿ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮೂರು ಹಂತದ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿಂದೆ ಕೃಷಿ ಸಾಲಕ್ಕೆ ನಬಾರ್ಡ್‌ನಿಂದ ಹೆಚ್ಚಿನ ಪ್ರಮಾಣದ ನೆರವು ದೊರೆಯುತ್ತಿತ್ತು. ಆದರೆ ಹಂತ ಹಂತವಾಗಿ ನೆರವಿನ ಪ್ರಮಾಣ ಕಡಿಮೆಯಾಗಿದ್ದು, ಈಗ ಶೇ.12ಕ್ಕೆ ಇಳಿದಿದೆ. ಇದರಿಂದ ರೈತರಿಗೆ ಸಾಲ ಒದಗಿಸುವಲ್ಲಿ ಸಹಕಾರಿ ಸಂಸ್ಥೆಗಳಿಗೆ ಸವಾಲು ಎದುರಾಗಿದೆ ಎಂದು ಸಚಿವರು ಹೇಳಿದರು. ಈ ವೇಳೆ ಎಂಎಲ್ ಸಿ ಡಿಎಸ್  ಅರುಣ್ ಅವರು ವೇದಿಕೆ ಮೇಲಿಗಮದ್ದು ವೇದಿಕೆಯ ಮೇಲಿದ್ದ ಗಣ್ಯರು ಮಾತನಾಡಿಸುತ್ತಿದ್ದನ್ನ ಕಂಡ ಸಚಿವರು ಕೇಂದ್ರ ಸರ್ಕಾರ ಮಕೃಷಿ ಕ್ಷೇತ್ರಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ಕೇಳಿಸಿಕೊಳ್ಳಲು ಬಿಡಿ ಎಂದರು‌ 

ಪ್ರಸ್ತುತ ರೈತರಿಗೆ ನೀಡುತ್ತಿರುವ ಸಾಲದಲ್ಲಿ ಸಾರ್ವಜನಿಕರ ಠೇವಣಿಯ ಹಣವೂ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗಾಗಿ ಸಹಕಾರಿ ಸಂಸ್ಥೆಗಳು ಸ್ವಾವಲಂಬಿಯಾಗಬೇಕು. ಸಾರ್ವಜನಿಕರ ವಿಶ್ವಾಸ ಗಳಿಸಿ ಹೆಚ್ಚಿನ ಠೇವಣಿ ಸಂಗ್ರಹಿಸುವ ಮೂಲಕ ರೈತರಿಗೆ ನಿರಂತರವಾಗಿ ಶೂನ್ಯ ಬಡ್ಡಿದರದ ಸಾಲ ನೀಡಲು ಸಾಧ್ಯವಾಗಬೇಕು ಎಂದರು.

ಸಹಕಾರಿ ಶಿಕ್ಷಣ ಸಂಸ್ಥೆ ಮತ್ತು ಉದ್ಯೋಗಾವಕಾಶಗಳ ಚಿಂತನೆ

ಸಹಕಾರಿ ಕ್ಷೇತ್ರದ ಮೂಲಕ ಆಸ್ಪತ್ರೆಗಳು, ಶಾಲೆಗಳು ಸೇರಿದಂತೆ ಹಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಮತ್ತು ತರಬೇತಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಎಂಬಿಎ, ಬಿಕಾಂ, ಬಿಬಿಎ ಸೇರಿದಂತೆ ವಿವಿಧ ಪದವಿಗಳನ್ನು ಪಡೆದಿರುವ ಯುವಜನರು ಉದ್ಯೋಗವಿಲ್ಲದೆ ಇರುವುದನ್ನು ಗಮನಿಸಿ, ಸಹಕಾರಿ ಕ್ಷೇತ್ರದಲ್ಲಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವ ಹೊಸ ಚಿಂತನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿಯೂ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು, ಗುಜರಾತ್ ಮೊದಲ ಸ್ಥಾನದಲ್ಲಿದೆ. ಗ್ರಾಮೀಣ ಭಾಗದ ಅನೇಕ ತಾಯಂದಿರು ಹಸು ಸಾಕಾಣಿಕೆ ಹಾಗೂ ಹಾಲು ಉತ್ಪಾದನೆಯನ್ನೇ ಕುಟುಂಬ ನಿರ್ವಹಣೆಯ ಆಧಾರವಾಗಿಸಿಕೊಂಡಿದ್ದಾರೆ. ಎರಡು ವರ್ಷಗಳ ಬರಗಾಲದ ಪರಿಸ್ಥಿತಿಯಿಂದ ಗ್ರಾಮೀಣ ಜನರ ಜೀವನೋಪಾಯದ ಮೇಲೆ ಪರಿಣಾಮ ಉಂಟಾಗಿದ್ದು, ಇಂತಹ ಸಂದರ್ಭದಲ್ಲಿ ಹೈನುಗಾರಿಕೆ ಮತ್ತು ಸಹಕಾರಿ ಕ್ಷೇತ್ರ ರೈತ ಕುಟುಂಬಗಳಿಗೆ ಆಸರೆಯಾಗಬೇಕು ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.

Why are those who question the price hike of milk silent about the price hike of other items? – Minister Lakshman Savadi  

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು