Advertisement

ಹಾಳಾದ ಜಾಮೂನ್ ನೀಡಿದ ಆರೋಪ: ಕೈಲಾಸ ಪರ್ವತ ಹೋಟೆಲ್ ಮುಂದೆ ಕರವೇ ಸಿಂಹಸೇನೆ ಪ್ರತಿಭಟನೆ-Accused of giving spoiled jamuns: Karave Simha Sena protests in front of Kailash Parvata Hotel

 SUDDILIVE || SHIVAMOGGA

ಹಾಳಾದ ಜಾಮೂನ್ ನೀಡಿದ ಆರೋಪ: ಕೈಲಾಸ ಪರ್ವತ ಹೋಟೆಲ್ ಮುಂದೆ ಕರವೇ ಸಿಂಹಸೇನೆ ಪ್ರತಿಭಟನೆ-Accused of giving spoiled jamuns: Karave Simha Sena protests in front of Kailash Parvata Hotel   

Kailash, parvath

ಶಿವಮೊಗ್ಗ: ಹೋಟೆಲ್‌ನಲ್ಲಿ ಗ್ರಾಹಕರಿಗೆ ನೀಡಿದ ಜಾಮೂನ್ ಹಾಳಾಗಿದ್ದು, ಇದನ್ನು ಪ್ರಶ್ನಿಸಿದ ಗ್ರಾಹಕರೊಂದಿಗೆ ಹೋಟೆಲ್ ಮಾಲೀಕರು ಉಡಾಫೆಯಾಗಿ ವರ್ತಿಸಿ ದಬ್ಬಾಳಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸಿಂಹಸೇನೆ ಕಾರ್ಯಕರ್ತರು ಶಿವಮೊಗ್ಗದ ಗೋಪಾಳದಲ್ಲಿರುವ ಕೈಲಾಸ ಪರ್ವತ ಹೋಟೆಲ್ ಮುಂಭಾಗ ಪ್ರತಿಭಟನೆ ನಡೆಸಿದರು.

ನವೆಂಬರ್ 23ರ ರಾತ್ರಿ ಗೋಪಾಳದ ನಿವಾಸಿ ಹೇಮಂತ್ ಗೌಡ ಅವರು ತಮ್ಮ ಕುಟುಂಬದೊಂದಿಗೆ ಕೈಲಾಸ ಪರ್ವತ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಊಟ ಮುಗಿದ ಬಳಿಕ ಮಗು ಜಾಮೂನ್ ಕೇಳಿದ ಹಿನ್ನೆಲೆಯಲ್ಲಿ ಹೋಟೆಲ್‌ನಲ್ಲಿ ಜಾಮೂನ್ ತರಿಸಿಕೊಡಲಾಗಿತ್ತು. ಆದರೆ, ನೀಡಿದ ಜಾಮೂನ್ ಹಾಳಾಗಿದ್ದು, ಅದನ್ನು ಸೇವಿಸಿದ ಬಳಿಕ ಮಗುವಿಗೆ ಸ್ವಲ್ಪ ಅಸ್ವಸ್ಥತೆ ಉಂಟಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಜಾಮೂನ್ ಹಾಳಾಗಿರುವ ವಿಚಾರವನ್ನು ಹೋಟೆಲ್ ಸಿಬ್ಬಂದಿ ಹಾಗೂ ಮ್ಯಾನೇಜ್‌ಮೆಂಟ್ ಗಮನಕ್ಕೆ ತಂದಾಗ, ಅದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ ಗ್ರಾಹಕರೊಂದಿಗೆ ಹೋಟೆಲ್ ಮಾಲೀಕರು ಸೌಜನ್ಯದಿಂದ ವರ್ತಿಸುವ ಬದಲು ಉಡಾಫೆಯ ಉತ್ತರ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಶ್ನಿಸಿದ ಗ್ರಾಹಕರಿಗೆ ದಬ್ಬಾಳಿಕೆ, ಬೆದರಿಕೆ?

ಹಾಳಾದ ಆಹಾರ ನೀಡಿರುವುದನ್ನು ಪ್ರಶ್ನಿಸಿದಾಗ ಹೋಟೆಲ್ ಮಾಲೀಕರು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಬೆದರಿಕೆ ಹಾಕುವ ಧಾಟಿಯಲ್ಲಿ ಮಾತನಾಡಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ. 'ನಾನು ಕರ್ನಾಟಕದವನೇ, ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ' ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಗ್ರಾಹಕರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಕನಿಷ್ಠ ಸೌಜನ್ಯವನ್ನೂ ಹೋಟೆಲ್ ನಿರ್ವಹಣೆ ಮರೆತಿದೆಯೇ ಎಂಬ ಆಕ್ರೋಶ ವ್ಯಕ್ತವಾಗಿದೆ.

ಕನ್ನಡ ನಾಮಫಲಕ ಇಲ್ಲದಿರುವುದಕ್ಕೂ ಆಕ್ಷೇಪ

ಹೋಟೆಲ್‌ನಲ್ಲಿ ಕನ್ನಡ ನಾಮಫಲಕ ಅಳವಡಿಸದಿರುವ ಬಗ್ಗೆಯೂ ಕರವೇ ಸಿಂಹಸೇನೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ನಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿ ಇಲ್ಲದೆ, ಹಿಂದಿ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕನ್ನಡ ನಾಮಫಲಕದ ಬದಲಿಗೆ ಇಂಗ್ಲಿಷ್‌ನಲ್ಲಿ ಫಲಕ ಅಳವಡಿಸಲಾಗಿತ್ತು. ಇದನ್ನು ಪ್ರಶ್ನಿಸಿದಾಗ ಕಾರ್ಯಕರ್ತರೇ ಮಾಲೀಕರಿಗೆ ಹೇಳಿ ಇಂಗ್ಲಿಷ್ ಫಲಕವನ್ನು ತೆರವುಗೊಳಿಸುವಂತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ಥಳಕ್ಕೆ ಬರದ ಆರೋಪ

ಘಟನೆ ಸಂಬಂಧ ಕರವೇ ಕಾರ್ಯಕರ್ತರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆಹಾರ ಸುರಕ್ಷತಾ ಇಲಾಖೆಯ ಪ್ರಭಾರ ಅಧಿಕಾರಿಗಳು ರಜೆಯಲ್ಲಿರುವುದಾಗಿ ತಿಳಿಸಿದ್ದು, ತಹಸೀಲ್ದಾರ್ ಅವರ ಗಮನಕ್ಕೂ ವಿಷಯ ತರಲಾಗಿದೆ. ತಹಸೀಲ್ದಾರ್ ಅವರು ತಾವು ಸಿವಿಲ್ ನ್ಯಾಯಾಲಯದಲ್ಲಿ ಇರುವುದಾಗಿ ತಿಳಿಸಿ, ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸುವುದಾಗಿ ಹೇಳಿದ್ದರೂ ಯಾರೂ ಸ್ಥಳಕ್ಕೆ ಬಂದಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ನಂತರ ಅಧಿಕಾರಿಗಳಿಗೆ ಮತ್ತೆ ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡಲಾಗಿದ್ದು, ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ ಎನ್ನಲಾಗಿದೆ. ಈ ಸಂಬಂಧ ಯಾವುದೇ ಲಿಖಿತ ದೂರು ಅಥವಾ ಮನವಿ ಸಲ್ಲಿಸದೆ ಮೌಖಿಕವಾಗಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ. ಕೆಲ ಹೋಟೆಲ್ ಮೇಲೆ ದಾಳಿ ನಡೆಸಿದ್ದ ಆಹಾರ ಸುರಕ್ಷಿತ ಅಧಿಕಾರಿಗಳು ಈ ಪ್ರತಿಭಟನೆಯ ಬಗ್ಗೆ ಮೌನವಹಿಸಿರುವುದೇಕೆ ಎಂಬುದು ಕುತೂಹಲ ಮೂಡಿಸಿದೆ. 

ಹೋಟೆಲ್ ಮುಂಭಾಗ ಪ್ರತಿಭಟನೆ

ಗ್ರಾಹಕರಿಗೆ ಹಾಳಾದ ಆಹಾರ ನೀಡಿರುವುದು ಹಾಗೂ ಅದನ್ನು ಪ್ರಶ್ನಿಸಿದಾಗ ಉಡಾಫೆಯಿಂದ ವರ್ತಿಸಿರುವುದನ್ನು ಖಂಡಿಸಿ ಕರವೇ ಸಿಂಹಸೇನೆ ಕಾರ್ಯಕರ್ತರು ಹೋಟೆಲ್ ಮುಂಭಾಗ ಪ್ರತಿಭಟನೆ ನಡೆಸಿದರು. ಆಹಾರದ ಗುಣಮಟ್ಟವನ್ನು ಕಾಪಾಡುವುದು ಹೋಟೆಲ್‌ಗಳ ಜವಾಬ್ದಾರಿಯಾಗಿದ್ದು, ಗ್ರಾಹಕರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು. ಇಂತಹ ಘಟನೆಗಳು ಮರುಕಳಿಸದಂತೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರವೇ ಸಿಂಹಸೇನೆಯ ರಾಜ್ಯಾಧ್ಯಕ್ಷ ರವಿಪ್ರಸಾದ್ ಹಾಗೂ ಜಿಲ್ಲಾಧ್ಯಕ್ಷ ಮಧುಸೂದನ್ ಸೇರಿದಂತೆ ಕಾರ್ಯಕರ್ತರು, ಹಾಗೂ ಬಜರಂಗದಳದ ಅಂಕುಶ್ ಮೊದಲಾದವರು ಭಾಗವಹಿಸಿದ್ದರು.

Accused of giving spoiled jamuns: Karave Simha Sena protests in front of Kailash Parvata Hotel 

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು