SUDDILIVE || SHIVAMOGGA
ಬಸವಣ್ಣನವರ ಕುರಿತು ವಿವಾದಾತ್ಮಕ ಕೃತಿ: ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ- Controversial work on Basavanna: Demand for legal action against Ravi Hanj, Vishweshwar Bhat
ಶಿವಮೊಗ್ಗ: 12ನೇ ಶತಮಾನದ ಮಹಾನ್ ಶರಣರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಗುರು ಬಸವಣ್ಣನವರ ಕುರಿತು ವಿವಾದಾತ್ಮಕ ಕೃತಿ ರಚಿಸಿ ಪ್ರಕಟಿಸಿರುವ ರವಿ ಹಂಜ್ ಹಾಗೂ ಕೃತಿಯ ಪ್ರಕಾಶಕ ವಿಶ್ವೇಶ್ವರ ಭಟ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಬಸವದಳ ಟ್ರಸ್ಟ್ (ರಿ.) ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಂಧಿ ಪಾರ್ಕ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಸವಭಕ್ತರು, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ, ಗುರು ಬಸವಣ್ಣನವರು ಅಹಿಂಸೆ, ದಯೆ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಮೂಲಕ ಸಮಾಜದಲ್ಲಿ ಮಹತ್ತರ ಪರಿವರ್ತನೆ ತಂದ ಮಹಾನ್ ಸಂತರು. ದಲಿತೋದ್ಧಾರಕ ಹಾಗೂ ಸ್ತ್ರೀ ಸಮಾನತೆಯ ಪ್ರತಿಪಾದಕರಾಗಿದ್ದ ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ವಿವಾದಾತ್ಮಕ ಕೃತಿ ರಚಿಸಲಾಗಿದೆ ಎಂದು ಆರೋಪಿಸಲಾಗಿದೆ.
ಲೇಖಕ ರವಿ ಹಂಜ್ ಅವರು 12ನೇ ಶತಮಾನದ ಇತಿಹಾಸ ಪ್ರಜ್ಞೆ, ಕಲ್ಯಾಣ ಕ್ರಾಂತಿಯ ಆಶಯಗಳು ಹಾಗೂ 770 ಅಮರಗಣಗಳ ವಚನ ಸಾಹಿತ್ಯದ ಮೌಲ್ಯ ಮತ್ತು ಸಂದೇಶಗಳನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳದೆ ಸಂಶೋಧನೆಯ ಹೆಸರಿನಲ್ಲಿ ಬಸವತತ್ತ್ವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.
ಅಲ್ಲದೆ, ಇಂತಹ ಕೃತಿಗೆ ಪ್ರೇರಣೆ ನೀಡಿ ಪ್ರಕಟಿಸಿರುವ ವಿಶ್ವೇಶ್ವರ ಭಟ್ ಅವರ ಮೇಲೂ ಕ್ರಮ ಕೈಗೊಳ್ಳಬೇಕು. ಸಂಶೋಧನೆಗಳು ಮಾನವ ಬದುಕಿನ ವಿಕಾಸಕ್ಕೆ ಪೂರಕವಾಗಿರಬೇಕೇ ಹೊರತು ದ್ವೇಷ ಮತ್ತು ಅಸೂಯೆಗಳಿಗೆ ವೇದಿಕೆಯಾಗಬಾರದು. ಗುರು ಬಸವಣ್ಣನವರ ವ್ಯಕ್ತಿತ್ವದ ಘನತೆಗೆ ಅವರ ವಚನಗಳೇ ಸಾಕ್ಷಿಯಾಗಿವೆ ಎಂದು ಬಸವದಳದ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಬಸವಣ್ಣನವರ ದಯೆ ಮತ್ತು ಕರುಣೆಯ ತತ್ತ್ವವನ್ನು ಉಲ್ಲೇಖಿಸಿರುವ ಪ್ರತಿಭಟನಾಕಾರರು, ಕೋಟ್ಯಂತರ ಬಸವಭಕ್ತರ ಭಾವನೆಗಳಿಗೆ ನೋವುಂಟು ಮಾಡಿರುವ ಕೃತಿಯ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Controversial work on Basavanna: Demand for legal action against Ravi Hanj, Vishweshwar Bhat



0 ಕಾಮೆಂಟ್ಗಳು