SUDDILIVE || SHIVAMOGGA
ಶರಾವತಿ ಯೋಜನೆಗೆ ಎಂಟನೇ ಯೋಜನೆಯ ಅವಕಾಶ ನೀಡುವುದಿಲ್ಲ; ಪ್ರಾಣ ತೆತ್ತಾದರೂ ನದಿ ಉಳಿಸುತ್ತೇವೆ: ಮಾರುತಿ ಗುರೂಜಿ- Sharavati project will not be given the opportunity of the eighth plan; we will save the river even if we sacrifice our lives: Maruti Guruji
ನಿಯಾಸ್ ವರದಿಯಲ್ಲೇ ಪರಿಸರ ಅಧ್ಯಯನದ ಲೋಪಗಳ ಉಲ್ಲೇಖ; ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಭೇಟಿ ಮಾಡಲು ನಿಯೋಗ ಸಿದ್ಧತೆ
ಶಿವಮೊಗ್ಗ: ಶರಾವತಿ ನದಿ ಪ್ರದೇಶದಲ್ಲಿ ಪ್ರಸ್ತಾವಿತ ಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈಗಾಗಲೇ ಶರಾವತಿ ನದಿಯಲ್ಲಿ ಏಳು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದು ಎಂಟನೇ ಯೋಜನೆಯಾಗಿದ್ದು, ಪ್ರಾಣ ತೆತ್ತಾದರೂ ಶರಾವತಿ ನದಿಯನ್ನು ಉಳಿಸುತ್ತೇವೆ ಎಂದು ಬಂಗಾರುಮಕ್ಕಿ ಮಠದ ಮಾರುತಿ ಗುರೂಜಿ ಎಚ್ಚರಿಕೆ ನೀಡಿದರು.
ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರ ಆಸಕ್ತರ ಬಳಗ, ರಾಷ್ಟ್ರಭಕ್ತರ ಬಳಗ, ಪರಿಸರಕ್ಕಾಗಿ ನಾವು ಸಂಘಟನೆ ಸೇರಿದಂತೆ ವಿವಿಧ ಪರಿಸರಪರ ಸಂಘಟನೆಗಳ ಪ್ರಮುಖರೊಂದಿಗೆ ಶರಾವತಿ ಯೋಜನೆಯ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು.
ನಿಯಾಸ್ ವರದಿಯಲ್ಲೇ ಪರಿಸರ ಅಧ್ಯಯನದ ಲೋಪಗಳ ಉಲ್ಲೇಖ
ನಿಯಾಸ್ ವರದಿಯಲ್ಲಿ ಪರಿಸರ ಮತ್ತು ಪ್ರಕೃತಿಗೆ ಸಂಬಂಧಿಸಿದಂತೆ ಸರಿಯಾದ ಅಧ್ಯಯನ ನಡೆದಿಲ್ಲ ಎಂಬುದನ್ನು ವರದಿಯ 14 ಮತ್ತು 15ನೇ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. ಭೂಮಿಯ ಸ್ವರೂಪ, ಪ್ರಕೃತಿದತ್ತ ವಿಶೇಷತೆಗಳು ಹಾಗೂ ಪರಿಸರದ ವಿವಿಧ ಅಂಶಗಳ ಕುರಿತು ಸಮಗ್ರ ಅಧ್ಯಯನ ನಡೆಸಿಲ್ಲ ಎಂದು ವರದಿಯಲ್ಲೇ ಹೇಳಲಾಗಿದೆ ಎಂದು ಮಾರುತಿ ಗುರೂಜಿ ತಿಳಿಸಿದರು.
ಕೆಪಿಸಿ ನೀಡಿದ ಮಾಹಿತಿಯನ್ನು ಆಧರಿಸಿ ವರದಿ ಸಲ್ಲಿಸಲಾಗಿದೆ ಎಂದು ನಿಯಾಸ್ ಉಲ್ಲೇಖಿಸಿದೆ. ಆದರೆ ಸ್ವತಂತ್ರವಾಗಿ ಅಧ್ಯಯನ ನಡೆಸಿರುವುದಾಗಿ ವರದಿಯಲ್ಲಿ ಹೇಳಿಲ್ಲ. ಇದರಿಂದ ಪರಿಸರದ ಕುರಿತು ಸಮರ್ಪಕ ಅಧ್ಯಯನ ನಡೆಸದೆ, ಕಚೇರಿಯಲ್ಲಿ ಕುಳಿತು ವರದಿ ಸಿದ್ಧಪಡಿಸಿರುವುದು ಸ್ಪಷ್ಟವಾಗುತ್ತದೆ ಎಂದು ಅವರು ಟೀಕಿಸಿದರು.
ಪಶ್ಚಿಮ ಘಟ್ಟದ ಪರಿಸರ ಧಾರಣಾ ಶಕ್ತಿಯ ಕುರಿತು ಸಮಗ್ರ ಅಧ್ಯಯನ ನಡೆಸದೆ ಇಂತಹ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಖಂಡನೀಯ. ಇದು ಕೇವಲ ಮನುಕುಲಕ್ಕೆ ಮಾತ್ರವಲ್ಲದೆ, ಪರಿಸರ ಮತ್ತು ಜೀವಸಂಕುಲಕ್ಕೂ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಕೃತಿಯನ್ನು ಕಳೆದುಕೊಂಡರೆ ಮತ್ತೆ ಪಡೆಯಲು ಸಾಧ್ಯವಿಲ್ಲ
ಹತ್ತಾರು ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿ ಪ್ರಕೃತಿಯ ಮಡಿಲನ್ನು ಒಡೆಯುವಂತಹ ಯೋಜನೆಯ ಅಗತ್ಯವೇನು ಎಂದು ಪ್ರಶ್ನಿಸಿದ ಮಾರುತಿ ಗುರೂಜಿ, ವಿದ್ಯುತ್ ಅಗತ್ಯವನ್ನು ಪೂರೈಸಲು ಪರಿಸರಕ್ಕೆ ಹಾನಿಯಾಗದ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸಬೇಕು ಎಂದರು.
ಅಭಿವೃದ್ಧಿಯ ವಿಚಾರದಲ್ಲಿ ಅಮೆರಿಕ, ಜರ್ಮನಿ ಹಾಗೂ ಸಿಂಗಾಪುರದಂತಹ ದೇಶಗಳನ್ನು ಮಾದರಿಯಾಗಿ ಪರಿಗಣಿಸುವ ನಾವು, ಪರಿಸರ ಸಂರಕ್ಷಣೆಯಲ್ಲಿ ಆ ದೇಶಗಳು ಅನುಸರಿಸುವ ಮಾದರಿಗಳನ್ನು ಏಕೆ ಅಳವಡಿಸಿಕೊಳ್ಳಬಾರದು ಎಂದು ಪ್ರಶ್ನಿಸಿದರು.
"ಹತ್ತಾರು ಸಾವಿರ ಕೋಟಿ ರೂಪಾಯಿಗಳನ್ನು ಸಾಲದ ರೂಪದಲ್ಲಾದರೂ ಪಡೆಯಬಹುದು. ಆದರೆ, ಅಷ್ಟೇ ಹಣ ಖರ್ಚು ಮಾಡಿದರೂ ಕಳೆದುಕೊಂಡ ಪ್ರಕೃತಿಯನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಪ್ರಕೃತಿಯನ್ನು ನಾಶ ಮಾಡಿದ ನಂತರ ಪಶ್ಚಾತ್ತಾಪ ಪಟ್ಟರೂ ಪ್ರಯೋಜನವಿಲ್ಲ" ಎಂದು ಹೇಳಿದರು.
ಭೂಪೇಂದ್ರ ಯಾದವ್ ಭೇಟಿ ಮಾಡಲು ನಿಯೋಗ ಸಿದ್ಧತೆ
ಶರಾವತಿ ಯೋಜನೆ ವಿರೋಧಿಸಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಲು ಈಗಾಗಲೇ ಸಮಯ ಕೋರಲಾಗಿದೆ. ಡಿಸೆಂಬರ್ 16ರಿಂದ 20-22ರ ನಡುವಿನ ಅವಧಿಯಲ್ಲಿ ಭೇಟಿಗೆ ಅಧಿಕೃತ ಲಿಖಿತ ಅನುಮತಿ ಸಿಗುವ ನಿರೀಕ್ಷೆಯಿದೆ ಎಂದು ಮಾರುತಿ ಗುರೂಜಿ ತಿಳಿಸಿದರು.
ರಾಷ್ಟ್ರಭಕ್ತರ ಬಳಗ, ಪರಿಸರಕ್ಕಾಗಿ ನಾವು ಸಂಘಟನೆ ಹಾಗೂ ಸ್ಥಳೀಯ ಪರಿಸರ ಹಿತಚಿಂತಕರನ್ನು ಒಳಗೊಂಡ ನಿಯೋಗವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಯೋಜನೆಯಿಂದ ಉಂಟಾಗಬಹುದಾದ ಪರಿಸರ ಹಾನಿ ಹಾಗೂ ತಮ್ಮ ಆಕ್ಷೇಪಣೆಗಳನ್ನು ಮಂಡಿಸಲಿದೆ.
ಇದಲ್ಲದೆ, ರಾಷ್ಟ್ರಪತಿಗಳನ್ನು ಭೇಟಿ ಮಾಡುವ ಪ್ರಯತ್ನವೂ ನಡೆಯುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತವಾಗಿ ಖಚಿತಪಡಿಸಲು ಸಾಧ್ಯವಿಲ್ಲ. ಆದರೆ, ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು.
ಲಾವಾಸ ಯೋಜನೆಯ ಉದಾಹರಣೆ ಉಲ್ಲೇಖ
ಮಹಾರಾಷ್ಟ್ರದ ಪುಣೆ ಸಮೀಪದ ಲಾವಾಸ ಯೋಜನೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಮಾರುತಿ ಗುರೂಜಿ, ಬೃಹತ್ ಮೊತ್ತದ ಹಣ ಹೂಡಿಕೆ ಮಾಡಿದರೂ ಯೋಜನೆ ವಿಫಲವಾಗಿ, ಇಂದು ಅದು 'ಡೆಡ್ ಸಿಟಿ'ಯಾಗಿ ಉಳಿದಿದೆ ಎಂದು ಹೇಳಿದರು.
ಅದೇ ರೀತಿ ಶರಾವತಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ₹376 ಕೋಟಿ ವ್ಯಯಿಸಲಾಗಿದೆ ಎಂದು ಆರೋಪಿಸಿದ ಅವರು, ಯೋಜನೆ ಪೂರ್ಣಗೊಳ್ಳುವ ಮುನ್ನವೇ ಇಷ್ಟೊಂದು ಹಣ ಖರ್ಚು ಮಾಡಿರುವುದು ಯಾರ ಹಣ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯು ಯೋಜನೆಗೆ ಹಣಕಾಸು ಒದಗಿಸಲು ಸಾಧ್ಯವಿಲ್ಲ ಎಂದು ಲಿಖಿತವಾಗಿ ತಿಳಿಸಿರುವುದಾಗಿ ಹೇಳಿದ ಅವರು, ಇಂತಹ ಸಂದರ್ಭದಲ್ಲಿ ಜರ್ಮನಿಯಂತಹ ವಿದೇಶಗಳಿಂದ ಸಾಲ ಪಡೆದು ಯೋಜನೆ ಕೈಗೆತ್ತಿಕೊಳ್ಳುವ ಪ್ರಸ್ತಾಪ ಸರಿಯಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಗುತ್ತಿಗೆದಾರರಿಗೆ ಸುಮಾರು ₹32 ಸಾವಿರ ಕೋಟಿ ಬಾಕಿ ಉಳಿದಿದೆ. ಬಸ್ಗಳಿಗೆ ಡೀಸೆಲ್ ಖರೀದಿಸಲು ಹಣವಿಲ್ಲ ಎಂದು ಸರ್ಕಾರ ಹೇಳುತ್ತಿರುವಾಗ, ಯೋಜನೆಗೆ ಮುಂಗಡವಾಗಿ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿರುವುದು ಪ್ರಶ್ನಾರ್ಹ ಎಂದು ಅಭಿಪ್ರಾಯಪಟ್ಟರು.
ಹಿರಿಯರನ್ನೊಳಗೊಂಡ ನಿಯೋಗ
ಯೋಜನೆ ವಿರೋಧಿಸಿ ನಡೆಯುವ ನಿಯೋಗದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ನ್ಯಾಯಮೂರ್ತಿ ಗೋಪಾಲಗೌಡ, ಎ.ಟಿ. ರಾಮಸ್ವಾಮಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮಾರುತಿ ಗುರೂಜಿ ತಿಳಿಸಿದರು.
ಸ್ಥಳೀಯ ಶಾಸಕರು ಹಾಗೂ ಕೇಂದ್ರ ಸಂಸದರು ಕೂಡ ನಿಯೋಗದೊಂದಿಗೆ ಕೈಜೋಡಿಸಿ, ಯೋಜನೆಯ ವಾಸ್ತವಾಂಶಗಳನ್ನು ಅರಿತುಕೊಂಡು ಜನರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಜನರ ಹೃದಯ ಗೆಲ್ಲುವ ಆಡಳಿತ ನೀಡಬೇಕೇ ಹೊರತು, ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಪರಿಸರ ಸಂರಕ್ಷಣೆಯ ಹೋರಾಟ ನಿರಂತರವಾಗಿದ್ದು, ಶರಾವತಿ ನದಿಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.
Sharavati project will not be given the opportunity of the eighth plan; we will save the river even if we sacrifice our lives: Maruti Guruji




0 ಕಾಮೆಂಟ್ಗಳು