Advertisement

ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ದರ ಪ್ರಕಟಣೆ ಕಡ್ಡಾಯ; ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ: ಆರೋಗ್ಯ ಸಚಿವ ಯು.ಟಿ. ಖಾದರ್- Private Hospitals Must Display Treatment Charges; Action Against Hospitals Violating Rules: Health Minister U.T. Khader

SUDDILIVE || SHIVAMOGGA

ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ದರ ಪ್ರಕಟಣೆ ಕಡ್ಡಾಯ; ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ: ಆರೋಗ್ಯ ಸಚಿವ ಯು.ಟಿ. ಖಾದರ್-  Private Hospitals Must Display Treatment Charges; Action Against Hospitals Violating Rules: Health Minister U.T. Khader 

Health, minister

ಶಿವಮೊಗ್ಗ:ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ನೀಡುವ ಪ್ರತಿಯೊಂದು ಚಿಕಿತ್ಸೆಯ ದರವನ್ನು ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರಕಟಿಸಬೇಕು. ಯಾವ ಆಸ್ಪತ್ರೆಗಳು ಈಗಾಗಲೇ ಚಿಕಿತ್ಸಾ ದರಗಳ ಪಟ್ಟಿಯನ್ನು ಪ್ರದರ್ಶಿಸಿವೆ ಎಂಬುದನ್ನು ಪರಿಶೀಲಿಸಿ, ಉಳಿದ ಆಸ್ಪತ್ರೆಗಳಲ್ಲೂ ದರಪಟ್ಟಿ ಪ್ರಕಟಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.

ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರ ಪ್ರಕಟಣೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಸ್ಪಷ್ಟ ಸೂಚನೆ ನೀಡಿದೆ. ಎಲ್ಲಾ ಆಸ್ಪತ್ರೆಗಳೂ ಚಿಕಿತ್ಸಾ ದರಗಳನ್ನು ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ದರಪಟ್ಟಿ ಪ್ರಕಟಿಸಿರುವ ಆಸ್ಪತ್ರೆಗಳ ಮಾಹಿತಿ ಪಡೆದು, ಅವು ಯಾವ ಮಾದರಿಯಲ್ಲಿ ದರಗಳನ್ನು ಪ್ರದರ್ಶಿಸಿವೆ ಎಂಬುದನ್ನು ಪರಿಶೀಲಿಸಲಾಗುವುದು. ಅದನ್ನೇ ಮಾದರಿಯಾಗಿಟ್ಟುಕೊಂಡು ದರಪಟ್ಟಿ ಪ್ರಕಟಿಸದ ಆಸ್ಪತ್ರೆಗಳಲ್ಲಿ ಅದನ್ನು ಅಳವಡಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಯಾವ ಆಸ್ಪತ್ರೆಗಳು ಚಿಕಿತ್ಸಾ ದರಗಳನ್ನು ಪ್ರಕಟಿಸಿವೆ ಎಂಬುದನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ದರಪಟ್ಟಿ ಪ್ರಕಟಿಸಿರುವ ಆಸ್ಪತ್ರೆಗಳನ್ನು ಪರಿಶೀಲಿಸಿ, ಉಳಿದ ಆಸ್ಪತ್ರೆಗಳಿಗೂ ಅದೇ ಮಾದರಿಯಲ್ಲಿ ದರಪಟ್ಟಿ ಪ್ರಕಟಿಸುವಂತೆ ಮಾಡಲಾಗುವುದು ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಸರಿಪಡಿಸಲು ಕ್ರಮ

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಎದುರಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲವು ಔಷಧಿಗಳ ಖರೀದಿ ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಸಮಸ್ಯೆ ಉಂಟಾಗಿದೆ. ಟೆಂಡರ್ ಪ್ರಕ್ರಿಯೆಯ ನಂತರ ಔಷಧ ತಯಾರಿಕೆ, ಪೂರೈಕೆ ಹಾಗೂ ಗುಣಮಟ್ಟ ಪರಿಶೀಲನೆಗೆ ಸಮಯ ಬೇಕಾಗುತ್ತದೆ. ಇದರಿಂದ ಪೂರೈಕೆಯಲ್ಲಿ ವಿಳಂಬವಾಗಿದೆ ಎಂದರು.

ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಅಗತ್ಯ ಔಷಧಿಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ABRK) ಯೋಜನೆಯಡಿ ಖರೀದಿಸಿ ಒದಗಿಸುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಔಷಧಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಇಲಾಖೆಯಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಹಾವು ಕಡಿತದ ಔಷಧ ಎಲ್ಲ ಆಸ್ಪತ್ರೆಗಳಲ್ಲೂ ಇರಬೇಕು


ಹಾವು ಕಡಿತಕ್ಕೆ ನೀಡುವ ಔಷಧ ಕೆಲವು ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ 10 ವೈಲ್, ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ 30 ವೈಲ್ ಹಾಗೂ ಜಿಲ್ಲಾ ಮಟ್ಟದ ಔಷಧ ಉಗ್ರಾಣಗಳಲ್ಲಿ ಅಗತ್ಯ ಪ್ರಮಾಣದ ದಾಸ್ತಾನು ಇರಬೇಕು ಎಂಬ ವ್ಯವಸ್ಥೆಯಿದೆ. ಯಾವುದಾದರೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧದ ಕೊರತೆಯಾದರೆ ತಕ್ಷಣವೇ ಉಗ್ರಾಣದಿಂದ ತರಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದರು.

ಶಿವಮೊಗ್ಗದಲ್ಲಿ ಹಾವು ಕಡಿತದ ಔಷಧ ಕೊರತೆ ಇದೆ ಎಂಬ ಮಾಹಿತಿ ಇದೇ ಮೊದಲ ಬಾರಿಗೆ ತಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದರು.

ಶಿವಮೊಗ್ಗಕ್ಕೆ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ನಿರ್ಮಾಣದ ಚರ್ಚೆ

ಶಿವಮೊಗ್ಗದಲ್ಲಿ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ಇಲ್ಲದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದೆ ಜಿಲ್ಲಾ ಆಸ್ಪತ್ರೆ ಇದ್ದ ಜಾಗವನ್ನು ವೈದ್ಯಕೀಯ ಶಿಕ್ಷಣದ ಉದ್ದೇಶಕ್ಕಾಗಿ ಮೆಡಿಕಲ್ ಕಾಲೇಜಿಗೆ ಬಿಟ್ಟುಕೊಡಲಾಗಿದೆ. ಇದೀಗ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ನಿರ್ಮಿಸುವ ಉದ್ದೇಶ ಸರ್ಕಾರದ ಮುಂದಿದೆ ಎಂದರು.

ಆದರೆ ಜಿಲ್ಲಾ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜು ಇರುವ ತಾಲೂಕಿನಲ್ಲಿ ನಿರ್ಮಿಸಬೇಕೇ ಅಥವಾ ಜಿಲ್ಲೆಯ ಎಲ್ಲ ಭಾಗದ ಜನರಿಗೆ ಅನುಕೂಲವಾಗುವಂತಹ ಮಧ್ಯವರ್ತಿ ಸ್ಥಳದಲ್ಲಿ ನಿರ್ಮಿಸಬೇಕೇ ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಿರ್ಧಾರ ಕೈಗೊಂಡು ಮುಂದಿನ ಹಂತದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ನಕಲಿ ವೈದ್ಯರ ವಿರುದ್ಧ ಕಾರ್ಯತಂತ್ರ

ಶಿವಮೊಗ್ಗ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿರುವ ಕುರಿತು ಸಚಿವರ ಗಮನ ಸೆಳೆದಾಗ, ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿಗಳು (DHO), ಜಿಲ್ಲಾ ಆಯುಷ್ ಅಧಿಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಿಗೆ ಈ ಕುರಿತು ಸ್ಪಷ್ಟ ಸೂಚನೆ ನೀಡಲಾಗಿದೆ. ಯಾವುದೇ ಪ್ರದೇಶದಲ್ಲಿ ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬರಬೇಕು. ಮುಂದಿನ ದಿನಗಳಲ್ಲಿ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಅರ್ಹತೆ ಇಲ್ಲದೆ ವೈದ್ಯಕೀಯ ಸೇವೆ ನೀಡುತ್ತಿರುವವರು ರಾಜ್ಯವನ್ನು ತೊರೆಯಬೇಕು. ಇಲ್ಲದಿದ್ದರೆ ನಿಯಮಾನುಸಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆಯುರ್ವೇದ ವೈದ್ಯರು ಮತ್ತು ನಕಲಿ ವೈದ್ಯರನ್ನು ಒಂದೇ ರೀತಿಯಲ್ಲಿ ಪರಿಗಣಿಸಬಾರದು. ಆಯುರ್ವೇದ ವೈದ್ಯರಿಗೆ ನಿಯಮ ಹಾಗೂ ಮಾರ್ಗಸೂಚಿಗಳ ಪ್ರಕಾರ ಕೆಲವು ಔಷಧಗಳನ್ನು ನೀಡಲು ಅವಕಾಶವಿದೆ. ಆದರೆ ತಮ್ಮ ವ್ಯಾಪ್ತಿಯನ್ನು ಮೀರಿ ಇಂಜೆಕ್ಷನ್ ಸೇರಿದಂತೆ ಇತರ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವಂತಿಲ್ಲ. ಅವರಿಗೆ ಇರುವ ಕಾನೂನುಬದ್ಧ ಅಧಿಕಾರದ ಮಿತಿಯಲ್ಲೇ ಕಾರ್ಯನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿದರು.

ಆಶಾ ಕಾರ್ಯಕರ್ತೆಯರಿಗೆ ಅಧಿವೇಶನದ ಅಂತ್ಯದಲ್ಲಿ ಸಿಹಿಸುದ್ದಿ?

ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಮಾತನಾಡಿದ ಸಚಿವರು, ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ಆರಂಭದಲ್ಲಿ ಕೆಲಸಕ್ಕೆ ಅನುಗುಣವಾಗಿ ಪ್ರೋತ್ಸಾಹಧನ ನೀಡುವ ವ್ಯವಸ್ಥೆ ಇತ್ತು. 2014ರಲ್ಲಿ ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡುವ ಮೊತ್ತಕ್ಕೆ ಸಮಾನವಾಗಿ ರಾಜ್ಯ ಸರ್ಕಾರವೂ ಮ್ಯಾಚಿಂಗ್ ಗ್ರಾಂಟ್ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ವಿವರಿಸಿದರು.

ನಂತರ ಕೇಂದ್ರ ಸರ್ಕಾರದ ನೆರವು ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ನೇರವಾಗಿ ಪ್ರೋತ್ಸಾಹಧನ ನೀಡುತ್ತಿದೆ. ಪ್ರಸ್ತುತ ಕನಿಷ್ಠ ₹8,000 ಪ್ರೋತ್ಸಾಹಧನ ದೊರೆಯುತ್ತಿದ್ದು, ಲಸಿಕೆ, ಹೆರಿಗೆ ಹಾಗೂ ವಿವಿಧ ಆರೋಗ್ಯ ಯೋಜನೆಗಳಡಿ ರೋಗಿಗಳ ಆರೈಕೆ ಸೇರಿದಂತೆ ಹೆಚ್ಚಿನ ಕೆಲಸ ನಿರ್ವಹಿಸುವ ಕಾರ್ಯಕರ್ತೆಯರಿಗೆ ₹13,000ರಿಂದ ₹16,000ವರೆಗೂ ದೊರೆಯುತ್ತಿದೆ ಎಂದರು.

ಆದರೆ ಕೆಲಸದ ಪ್ರಮಾಣವನ್ನು ಪರಿಗಣಿಸದೆ ಎಲ್ಲರಿಗೂ ಕನಿಷ್ಠ ₹15,000 ನಿಗದಿಪಡಿಸಬೇಕು ಎಂಬುದು ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಯಾಗಿದೆ ಎಂದು ತಿಳಿಸಿದರು.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳು ಸುಮಾರು ಒಂದು ಗಂಟೆ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಅವರ ಬೇಡಿಕೆಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದು, ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಅಧಿವೇಶನ ಮುಕ್ತಾಯದ ಸಂದರ್ಭದಲ್ಲಿ ಸಿಹಿಸುದ್ದಿ ನೀಡುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವರು ಹೇಳಿದರು.

ಆಶಾ ಕಾರ್ಯಕರ್ತೆಯರು ಸರ್ಕಾರದ ಮೇಲೆ ಹಾಗೂ ಮುಖ್ಯಮಂತ್ರಿಗಳ ಮೇಲೆ ವಿಶ್ವಾಸವಿಟ್ಟು ತಮ್ಮ ಕರ್ತವ್ಯಕ್ಕೆ ಮರಳಬೇಕು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸರ್ಕಾರದ ನಿರ್ಧಾರಕ್ಕೂ ಮುನ್ನ ಲಿಖಿತ ಭರವಸೆ ನೀಡಬೇಕೆಂದು ಒತ್ತಾಯಿಸುವ ಬದಲು ಪರಸ್ಪರ ವಿಶ್ವಾಸದಿಂದ ಚರ್ಚೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ₹1,500 ನೀಡುವುದಾಗಿ ಭರವಸೆ ನೀಡಿದ್ದರೂ ಅದನ್ನು ಈಡೇರಿಸಿಲ್ಲ ಎಂಬ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಗುತ್ತಿಗೆ ಕಾರ್ಮಿಕರ ವೇತನ ಬಾಕಿ ಇಟ್ಟರೆ ಕ್ರಮ

ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಗ್ರೂಪ್‌ ಡಿ ಸಿಬ್ಬಂದಿಗೆ ವೇತನ ಪಾವತಿಯಾಗದಿರುವ ಕುರಿತು ಮಾತನಾಡಿದ ಅವರು, ಗುತ್ತಿಗೆ ಪಡೆದ ಕೆಲವು ಸಂಸ್ಥೆಗಳು ಕಾರ್ಮಿಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ ಎಂದರು.

ಇಂತಹ ಗುತ್ತಿಗೆ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು ಮಾತ್ರವಲ್ಲದೆ, ಅಗತ್ಯವಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಒಂದು ತಿಂಗಳ ವೇತನ ಸಿಗದಿದ್ದರೂ ಕಾರ್ಮಿಕರ ಜೀವನ ನಿರ್ವಹಣೆಗೆ ತೊಂದರೆಯಾಗುತ್ತದೆ. ಗುತ್ತಿಗೆದಾರರು ಕಾರ್ಮಿಕರಿಗೆ ಅನ್ಯಾಯ ಮಾಡುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಮಂಗನ ಕಾಯಿಲೆ ಲಸಿಕೆ ಪ್ರಯೋಗ ಹಂತದಲ್ಲಿದೆ

ಮಂಗನ ಕಾಯಿಲೆ (KFD) ಲಸಿಕೆ ಡಿಸೆಂಬರ್ ವೇಳೆಗೆ ಲಭ್ಯವಾಗಲಿದೆ ಎಂಬ ನಿರೀಕ್ಷೆಯ ಕುರಿತು ಕೇಳಿದಾಗ, ಲಸಿಕೆ ಇನ್ನೂ ಪ್ರಯೋಗದ ಹಂತದಲ್ಲಿದೆ ಎಂದು ಸಚಿವರು ತಿಳಿಸಿದರು.

ಐಸಿಎಂಆರ್ ಅಧಿಕಾರಿಗಳು ಈ ಹಿಂದೆ ಡಿಸೆಂಬರ್ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸುವ ನಿರೀಕ್ಷೆ ವ್ಯಕ್ತಪಡಿಸಿದ್ದರು. ಆದರೆ ಪ್ರಸ್ತುತ ಲಸಿಕೆಯ ಪ್ರಯೋಗ ಯಾವ ಹಂತದಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ. ಈ ಕುರಿತು ಐಸಿಎಂಆರ್ ಹಾಗೂ ಕೇಂದ್ರ ಆರೋಗ್ಯ ಇಲಾಖೆಯೊಂದಿಗೆ ಮತ್ತೆ ಚರ್ಚಿಸುವುದಾಗಿ ಹೇಳಿದರು.

ಒಟ್ಟಾರೆ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರ ಪ್ರಕಟಣೆ, ಸರ್ಕಾರಿ ಆಸ್ಪತ್ರೆಗಳ ಔಷಧ ಪೂರೈಕೆ, ಹಾವು ಕಡಿತದ ಔಷಧ ಲಭ್ಯತೆ, ಶಿವಮೊಗ್ಗಕ್ಕೆ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ, ನಕಲಿ ವೈದ್ಯರ ನಿಯಂತ್ರಣ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ವಿಚಾರಗಳ ಕುರಿತು ಸಚಿವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.

Private Hospitals Must Display Treatment Charges; Action Against Hospitals Violating Rules: Health Minister U.T. Khader 

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು