SUDDILIVE || SHIKARIPURA
ಇಬ್ಬರು ಪುಟ್ಟ ಮಕ್ಕಳನ್ನು ಅನಾಥರನ್ನಾಗಿಸಿದ ಅಂಜಲಿ ಸಾವು; ಕಪ್ಪನಹಳ್ಳಿಯಲ್ಲಿ ಮಡುಗಟ್ಟಿದ ಶೋಕ- Anjali's death, leaving two young children orphaned; Mourning engulfs Kappanahalli
ಶಿವಮೊಗ್ಗ: ಸಾಲದ ಹೊರೆ ಹಾಗೂ ಆರ್ಥಿಕ ಸಂಕಷ್ಟದಿಂದ ಮನನೊಂದು ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಅಂಜಲಿ (30) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅಂಜಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅಂಜಲಿ ಅವರು ಹಲವು ವರ್ಷಗಳ ಹಿಂದೆ ಮಂಜುನಾಥ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿ ಕಪ್ಪನಹಳ್ಳಿ ಗ್ರಾಮದಲ್ಲಿ ಸಣ್ಣ ಹೋಟೆಲ್ ಹಾಗೂ ಕಬಾಬ್ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ವ್ಯಾಪಾರವನ್ನು ಬೆಳೆಸುವ ಉದ್ದೇಶದಿಂದ ದಂಪತಿ ಹಲವರ ಬಳಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆದರೆ ವ್ಯಾಪಾರದಲ್ಲಿ ಎದುರಾದ ಆರ್ಥಿಕ ಸಂಕಷ್ಟ ಹಾಗೂ ಸಾಲದ ಒತ್ತಡದಿಂದ ಕುಟುಂಬ ತೊಂದರೆ ಅನುಭವಿಸುತ್ತಿತ್ತು ಎನ್ನಲಾಗಿದ್ದು, ಇದೇ ಕಾರಣಕ್ಕೆ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ಇನ್ನೂ ಅಂಜಲಿ ಅವರಿಗೆ ಕೇವಲ ನಾಲ್ಕು ವರ್ಷದ ಹಾಗೂ ಏಳು ತಿಂಗಳ ಇಬ್ಬರು ಗಂಡು ಮಕ್ಕಳಿದ್ದಾರೆ. ತಾಯಿ ಆತ್ಮಹತ್ಯೆಯಿಂದ ಇಬ್ಬರು ಪುಟ್ಟ ಮಕ್ಕಳು ತಾಯಿಯನ್ನು ಕಳೆದುಕೊಂಡಿದ್ದು, ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಚಿಕ್ಕ ಮಕ್ಕಳನ್ನು ಅಗಲಿದ ತಾಯಿಯ ದುರಂತ ಗ್ರಾಮಸ್ಥರ ಮನಕಲಕಿದೆ.
ಘಟನೆಗೆ ಸಂಬಂಧಿಸಿದಂತೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Anjali's death, leaving two young children orphaned; Mourning engulfs Kappanahalli



0 ಕಾಮೆಂಟ್ಗಳು