SUDDILIVE || SHIVAMOGGA
ಶಿವಮೊಗ್ಗ ವಿಮಾನ ಸಂಚಾರಕ್ಕೆ ರಾಜಕೀಯ ಬಣ್ಣ ಬೆರೆಸಬೇಡಿ: ಸಂಸದ ರಾಘವೇಂದ್ರ ವಿರುದ್ಧ ಯೋಗೀಶ್ ವಾಗ್ದಾಳಿ- Don't add political colour to Shivamogga air traffic: Yogish attacks MP Raghavendra
ರಾಜ್ಯ ಸರ್ಕಾರದಿಂದ ₹5.60 ಕೋಟಿ ನೆರವು, ನೈಟ್ ಲ್ಯಾಂಡಿಂಗ್‌ಗೆ ₹12.5 ಕೋಟಿ ಅನುದಾನ ನೀಡಲಾಗಿದೆ; ವಿಮಾನ ಹಾರಾಟ ಪುನರಾರಂಭಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಿ ಎಂದು ಆಗ್ರಹ
ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿರುವ ವಿಚಾರಕ್ಕೆ ರಾಜಕೀಯ ಬಣ್ಣ ಬೆರೆಸಬಾರದು. ರಾಜ್ಯ ಸರ್ಕಾರದ ಮೇಲೆ ಅನಗತ್ಯವಾಗಿ ಹೊಣೆ ಹೊರಿಸುವುದು ಸರಿಯಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೀಶ್ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ಸಂಚಾರದ ವಿಚಾರದಲ್ಲಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಸಂಸದರ ಆರೋಪಕ್ಕೆ ತಿರುಗೇಟು ನೀಡಿದರು.
ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿ, ವಿಮಾನಗಳ ಹಾರಾಟ ಹಾಗೂ ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ರಾಜ್ಯ ಸರ್ಕಾರ ನೀಡಿರುವ ನೆರವನ್ನು ಸಂಸದರು ಮರೆತಿದ್ದಾರೆ. ಉಡಾನ್ ಯೋಜನೆ ಕುರಿತು ಉಡಾಫೆಯಾಗಿ ಮಾತನಾಡುವ ಬದಲು ವಾಸ್ತವಾಂಶಗಳನ್ನು ಅರಿತುಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರದಿಂದ ಕೋಟ್ಯಂತರ ರೂಪಾಯಿ ನೆರವು
ಉಡಾನ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಸುಮಾರು 5.60 ಕೋಟಿ ರೂ. ಅನುದಾನ ನೀಡಿದೆ. ಪ್ರತಿ ದಿನದ 156 ವಿಮಾನ ಸಂಚಾರಗಳಿಗೆ ಪ್ರತಿ ಸಂಚಾರಕ್ಕೆ 500 ರೂ.ನಂತೆ ಪ್ರೋತ್ಸಾಹಧನ ನೀಡಲಾಗಿದೆ. ನೈಟ್ ಲ್ಯಾಂಡಿಂಗ್ ವ್ಯವಸ್ಥೆಗಾಗಿ 12.5 ಕೋಟಿ ರೂ. ಬಿಡುಗಡೆ ಮಾಡಿದ್ದು, ಶೇ.99ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇಷ್ಟೆಲ್ಲ ನೆರವು ನೀಡಿದ್ದರೂ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕಕ್ಕೆ ಅನುದಾನ ನೀಡಿರುವುದನ್ನು ಸಂಸದರು ಪ್ರಶ್ನಿಸಿದ್ದಾರೆ. ಆ ಭಾಗಕ್ಕೆ ಅನುದಾನ ನೀಡುವುದು ಸರ್ಕಾರದ ಅನಿವಾರ್ಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ವಿಮಾನಯಾನ ಸಂಸ್ಥೆಗಳು ಹಾರಾಟ ನಿಲ್ಲಿಸಿದ್ದೇಕೆ?
ಉಡಾನ್ ಯೋಜನೆಯಡಿ ವಿಮಾನ ಸೇವೆ ಒದಗಿಸುತ್ತಿದ್ದ ಸ್ಟಾರ್ ಮತ್ತು ಇಂಡಿಗೋ ಸಂಸ್ಥೆಗಳು ಒಂದು ವರ್ಷ ಮುಂಚಿತವಾಗಿಯೇ ತಮ್ಮ ಹಾರಾಟವನ್ನು ಸ್ಥಗಿತಗೊಳಿಸಿದ್ದೇಕೆ ಎಂಬುದನ್ನು ಸಂಸದರು ಪ್ರಶ್ನಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಈಗಾಗಲೇ 13 ಮಾರ್ಗಗಳಿಗೆ ಆರ್ಥಿಕ ನೆರವು ನೀಡಿದೆ ಎಂದು ತಿಳಿಸಿದರು.
ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ದೊಡ್ಡದು ಎಂದು ಹೇಳುವ ಸಂಸದರು, ರೈತರಿಗೆ ಪರಿಹಾರ ನೀಡಿದ್ದು ರಾಜ್ಯ ಸರ್ಕಾರ ಎಂಬುದನ್ನು ಮರೆಯಬಾರದು. ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ 100ಕ್ಕೂ ಹೆಚ್ಚು ಸಿಬ್ಬಂದಿಗೆ ಕೆಲಸ ಇಲ್ಲದಿದ್ದರೂ ವೇತನ ನೀಡುತ್ತಿರುವುದು ರಾಜ್ಯ ಸರ್ಕಾರವೇ ಎಂದು ಹೇಳಿದರು.
ವಿಮಾನ ನಿಲ್ದಾಣ ಆರಂಭಿಸುವ ಸಂದರ್ಭದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯನ್ನೂ ಕೇಂದ್ರ ಸರ್ಕಾರದ ಮೂಲಕವೇ ಪೂರ್ಣಗೊಳಿಸಲು ಸಾಧ್ಯವಿತ್ತು. ಆದರೆ, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದ ಅವರು, ವಿಮಾನ ನಿಲ್ದಾಣವನ್ನು ಕಮಲದಂತೆ ಶೃಂಗಾರಗೊಳಿಸಿರುವ ಸಂಸದರಿಗೆ ಈಗ ವಿಮಾನ ಸಂಚಾರದ ವಿಚಾರದಲ್ಲಿ ಕಮಲ ಅರಳಿಸಲು ಸಾಧ್ಯವಾಗುತ್ತಿಲ್ಲವೇ ಎಂದು ವ್ಯಂಗ್ಯವಾಡಿದರು.
ಕೇಂದ್ರ ವಿಮಾನಯಾನ ಸಚಿವರನ್ನು ಸಂಪರ್ಕಿಸಲಿ
ಇಂಡಿಗೋ ಸಂಸ್ಥೆಯಲ್ಲಿ ಪೈಲಟ್‌ಗಳ ಕೊರತೆ ಇದ್ದು, ಉದ್ಯೋಗಿಗಳಿಗೆ ವೇತನ ನೀಡುವುದೂ ಕಷ್ಟಕರವಾಗಿದೆ. ಇಂತಹ ಸಮಸ್ಯೆಗಳ ನಡುವೆ ವಿಮಾನ ಸೇವೆ ಸ್ಥಗಿತಗೊಂಡಿರುವುದಕ್ಕೆ ರಾಜ್ಯ ಸರ್ಕಾರವನ್ನೇ ಹೊಣೆ ಮಾಡುವುದು ಸರಿಯಲ್ಲ. ಸಂಸದರು ಕೇಂದ್ರ ವಿಮಾನಯಾನ ಸಚಿವರನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ಉಡಾನ್ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಪಾಲುದಾರಿಕೆಯೂ ಇದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರವನ್ನು ದೂಷಿಸುವುದನ್ನು ಬಿಟ್ಟು ಶಿವಮೊಗ್ಗಕ್ಕೆ ವಿಮಾನ ಸಂಚಾರ ಪುನರಾರಂಭಿಸಲು ಸಂಸದರು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ರಾಜ್ಯ ಸರ್ಕಾರ ತನ್ನ ಪಾಲಿನ ನೆರವು ನೀಡಲು ಸಿದ್ಧವಿದೆ. ಆದರೆ, ಕೇಂದ್ರ ಸರ್ಕಾರ ಮುಂದಿನ ಕನಿಷ್ಠ ಐದು ವರ್ಷಗಳಿಗಾದರೂ ಉಡಾನ್ ಯೋಜನೆಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ವಿಮಾನ ನಿಲ್ದಾಣದ ವಿಚಾರದಲ್ಲಿ ಯಾವುದೇ ರಾಜಕೀಯ ಬಣ್ಣ ಬೆರೆಸಬಾರದು. ಅಲ್ಲದೆ, ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ವಹಿಸುವ ಪ್ರಯತ್ನವನ್ನೂ ಮಾಡಬಾರದು ಎಂದು ಯೋಗೀಶ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಟಿ. ಹಾಲಪ್ಪ, ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್ ಹಾಗೂ ಕಲೀಂ ಪಾಷಾ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಒ. ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಎಸ್. ಗಿರೀಶ್ ರಾವ್, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಹೆಚ್.ಪಿ. ಗಿರೀಶ್, ಯು. ಶಿವಾನಂದ್, ವಿಶ್ವನಾಥಕಾಶಿ, ಶ್ಯಾಮಸುಂದರ್, ಜಗನ್ನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



0 ಕಾಮೆಂಟ್‌ಗಳು