SUDDILIVE || SHIVAMOGGA
ಬೆಂಗಳೂರು, ಹೈದರಾಬಾದ್ ಸೇರಿದಂತೆ ನಾಲ್ಕು ಮಾರ್ಗಗಳಲ್ಲಿ ಸೇವೆಗೆ ಸ್ಟಾರ್ ಏರ್ಲೈನ್ಸ್ ಸಿದ್ಧ-ಬಿವೈಆರ್-Star Airlines ready to serve four routes including Bengaluru, Hyderabad - BYR
ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಿಂದ ನವೆಂಬರ್ 21ರ ಬಳಿಕ ಸ್ಥಗಿತಗೊಳ್ಳಲಿರುವ ವಿಮಾನ ಸೇವೆಗಳನ್ನು ಮುಂದುವರಿಸಲು ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ಕನಿಷ್ಠ ಐದಾರು ತಿಂಗಳ ಅವಧಿಗೆ ವೈಯಬಿಲಿಟಿ ಗ್ಯಾಪ್ ಫಂಡಿಂಗ್ (VGF) ಮೂಲಕ ವಿಮಾನಯಾನ ಸಂಸ್ಥೆಗಳಿಗೆ ರಿಯಾಯಿತಿ ನೀಡಬೇಕು. ಶಿವಮೊಗ್ಗದಿಂದ ಬೆಂಗಳೂರು ಮತ್ತು ಹೈದರಾಬಾದ್ಗೆ ವಿಮಾನ ಸೇವೆ ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದ ವಿಮಾನ ಸೇವೆಗಳ ಸ್ಥಗಿತಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ವಿಮಾನಯಾನ ಸಂಸ್ಥೆಗಳ ಒಪ್ಪಂದದ ಅವಧಿ, ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ನಿಯಮಗಳು ಹಾಗೂ ರಾಜ್ಯ ಸರ್ಕಾರದ ನೆರವಿನ ಅಗತ್ಯತೆಗಳ ಕುರಿತು ವಿವರಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣ ರಾಜ್ಯ ಸರ್ಕಾರದ ಆಡಳಿತದಡಿ ಕಾರ್ಯನಿರ್ವಹಿಸುತ್ತಿರುವ ವಿಮಾನ ನಿಲ್ದಾಣವಾಗಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಮೂರು ವರ್ಷಗಳ ಹಿಂದೆ ಮೂರು ಮಾರ್ಗಗಳಿಗೆ ಟೆಂಡರ್ ಕರೆಯಲಾಗಿತ್ತು. ಈ ಪೈಕಿ ಎರಡು ಮಾರ್ಗಗಳ ಟೆಂಡರ್ ಅಂತಿಮಗೊಂಡು ಸ್ಟಾರ್ ಏರ್ಲೈನ್ಸ್ ಮತ್ತು ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆಗಳು ಸೇವೆ ಆರಂಭಿಸಿದ್ದವು. ಸ್ಟಾರ್ ಏರ್ಲೈನ್ಸ್ ತನ್ನ ಮೂರು ವರ್ಷದ ಒಪ್ಪಂದದ ಅವಧಿಯನ್ನು ಪೂರ್ಣಗೊಳಿಸಿದ್ದು, ಸ್ಪೈಸ್ಜೆಟ್ ಎರಡರಿಂದ ಎರಡೂವರೆ ವರ್ಷಗಳಲ್ಲೇ ಸೇವೆ ಸ್ಥಗಿತಗೊಳಿಸಿ ಹಿಂದೆ ಸರಿದಿತ್ತು ಎಂದು ತಿಳಿಸಿದರು.
ಇದರ ಜತೆಗೆ ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆ ಕಾರ್ಯಾಚರಣೆ ನಡೆಸುತ್ತಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ರಾಜ್ಯ ಸರ್ಕಾರವು ಇಂಡಿಗೋ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಶೇಕಡಾ 100ರಷ್ಟು ವೈಯಬಿಲಿಟಿ ಗ್ಯಾಪ್ ಫಂಡಿಂಗ್ (VGF) ನೆರವು ನೀಡುವ ಮೂಲಕ ಮೂರು ವರ್ಷಗಳ ಕಾಲ ವಿಮಾನ ಸೇವೆ ಮುಂದುವರಿಯಲು ಸಹಕರಿಸಿತ್ತು ಎಂದು ವಿವರಿಸಿದರು.
ನವೆಂಬರ್ 26ರಿಂದ ಸ್ಟಾರ್ ಏರ್ಲೈನ್ಸ್ ಸೇವೆ ಸ್ಥಗಿತದ ಆತಂಕ
ಉಡಾನ್ ಯೋಜನೆಯಡಿ ಕಾರ್ಯಾಚರಣೆ ನಡೆಸುತ್ತಿರುವ ಸ್ಟಾರ್ ಏರ್ಲೈನ್ಸ್ನ ಮೂರು ವರ್ಷದ ಅವಧಿ ನವೆಂಬರ್ 25-26ರ ವೇಳೆಗೆ ಪೂರ್ಣಗೊಳ್ಳಲಿದ್ದು, ನಂತರ ಸೇವೆ ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗಿದೆ. ಈಗಿರುವ ಸೇವೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂಬುದು ಪಕ್ಷಾತೀತವಾಗಿ ಜಿಲ್ಲೆಯ ಜನಪ್ರತಿನಿಧಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಚೇಂಬರ್ ಆಫ್ ಕಾಮರ್ಸ್ ಸೇರಿದಂತೆ ವಿವಿಧ ವಲಯಗಳ ಒತ್ತಾಯವಾಗಿದೆ ಎಂದರು.
ಆದರೆ ಕೇಂದ್ರ ಸರ್ಕಾರದ ಉಡಾನ್ 6.0 ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ವಿಮಾನ ನಿಲ್ದಾಣಗಳನ್ನು 'ಅನ್ಸರ್ವ್ಡ್' ಮತ್ತು 'ಅಂಡರ್ಸರ್ವ್ಡ್' ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಪ್ರಯಾಣಿಕರು ಸಂಚರಿಸಿರುವ ವಿಮಾನ ನಿಲ್ದಾಣಗಳನ್ನು ಅಂಡರ್ಸರ್ವ್ಡ್ ವಿಭಾಗದಲ್ಲಿ ಪರಿಗಣಿಸಲಾಗಿದೆ. ಈ ಮಾನದಂಡದಡಿ ಮೈಸೂರು ವಿಮಾನ ನಿಲ್ದಾಣ ಸೇರ್ಪಡೆಯಾಗಿದ್ದು, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇದೇ ಅವಧಿಯಲ್ಲಿ ಸುಮಾರು 4.20 ಲಕ್ಷ ಪ್ರಯಾಣಿಕರು ಪ್ರಯಾಣಿಸಿರುವುದರಿಂದ ಆ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮೈಸೂರು ವಿಮಾನ ನಿಲ್ದಾಣದ ಹೆಸರನ್ನು ಅನೆಕ್ಸರ್-1ರಲ್ಲಿ ಕೇಂದ್ರಕ್ಕೆ ಕಳುಹಿಸಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಮುಂದಿನ ದಿನಗಳಲ್ಲಿ ಸೇವೆಗಳಿಲ್ಲದೆ ಅಂಡರ್ಸರ್ವ್ಡ್ ಆಗುವ ಸಾಧ್ಯತೆಯನ್ನು ಪರಿಗಣಿಸಿ ಅನೆಕ್ಸರ್-2ರಲ್ಲಿ ಸೇರಿಸುವಂತೆ ತಾವು ಪ್ರಯತ್ನಿಸಿರುವುದಾಗಿ ತಿಳಿಸಿದರು.
ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕೇಂದ್ರಕ್ಕೆ ಮನವಿ
ಶಿವಮೊಗ್ಗ ವಿಮಾನ ನಿಲ್ದಾಣದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿ ಅನೆಕ್ಸರ್-2ರಲ್ಲಿಯೂ ಶಿವಮೊಗ್ಗವನ್ನು ಪರಿಗಣಿಸುವಂತೆ ಮುಖ್ಯ ಕಾರ್ಯದರ್ಶಿ ಹಾಗೂ ಮೂಲಸೌಕರ್ಯ ಇಲಾಖೆಯ ಕಾರ್ಯದರ್ಶಿ ವಿಶಾಲ್ ಅವರಿಗೆ ಮನವಿ ಮಾಡಿದ್ದೇನೆ. ತಮ್ಮ ಪತ್ರದ ಆಧಾರದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆದಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದ ಸೇವೆಗಳು ಸ್ಥಗಿತಗೊಳ್ಳುತ್ತಿರುವುದರಿಂದ ಉಂಟಾಗುವ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತರಲಾಗಿದೆ ಎಂದರು.
ಉಡಾನ್ ಯೋಜನೆಯಡಿ ಮೂರು ವರ್ಷಗಳ ಸೇವೆಯ ನಂತರ ಒಂದು ವರ್ಷದ 'ಕಮರ್ಷಿಯಲ್ ಬ್ರೇಕ್' ನೀಡುವ ನಿಯಮವಿದೆ. ಈ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳು ಯಾವುದೇ VGF ಅಥವಾ ರಿಯಾಯಿತಿ ಇಲ್ಲದೆ ವಾಣಿಜ್ಯ ಆಧಾರದಲ್ಲಿ ಸೇವೆ ನಡೆಸಬೇಕಾಗುತ್ತದೆ. ಆ ಒಂದು ವರ್ಷದಲ್ಲಿ ಸೇವೆ ಮುಂದುವರಿಸಲು ಸಾಧ್ಯವಾಗದಿದ್ದರೆ ಮತ್ತೆ ಉಡಾನ್ ಯೋಜನೆಯಡಿ ಮಾರ್ಗಗಳನ್ನು ಪರಿಗಣಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ವಿವರಿಸಿದರು.
ಬೆಂಗಳೂರು, ಹೈದರಾಬಾದ್ ಸೇರಿದಂತೆ ನಾಲ್ಕು ಮಾರ್ಗಗಳಲ್ಲಿ ಸೇವೆಗೆ ಸ್ಟಾರ್ ಏರ್ಲೈನ್ಸ್ ಸಿದ್ಧ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸೇವೆ ಮುಂದುವರಿಸುವ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಟಾರ್ ಏರ್ಲೈನ್ಸ್ ಮಾಲೀಕ ಗೋಡಾವತ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ತಾನೂ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದು, ಶಿವಮೊಗ್ಗದಿಂದ ಬೆಂಗಳೂರು, ಹೈದರಾಬಾದ್, ಗೋವಾ ಮತ್ತು ತಿರುಪತಿ ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭಿಸಲು ಸಿದ್ಧರಿರುವುದಾಗಿ ಸ್ಟಾರ್ ಏರ್ಲೈನ್ಸ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ರಾಘವೇಂದ್ರ ತಿಳಿಸಿದರು.
ಆದರೆ ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಇಂಧನ ಬೆಲೆ ಏರಿಕೆಯಾಗಿದ್ದು, ವಿಮಾನ ಕಾರ್ಯಾಚರಣೆಯಲ್ಲಿ ನಷ್ಟ ಉಂಟಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ರಿಯಾಯಿತಿ ನೀಡಿದರೆ ಸೇವೆ ಆರಂಭಿಸಲು ಸಿದ್ಧವಿರುವುದಾಗಿ ಸಂಸ್ಥೆ ಪತ್ರದಲ್ಲಿ ತಿಳಿಸಿದೆ ಎಂದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಎರಡು ದಿನ ಪ್ರಯತ್ನಿಸಿದ್ದರೂ ಅವರ ಕಾರ್ಯನಿರತ ವೇಳಾಪಟ್ಟಿಯಿಂದಾಗಿ ಭೇಟಿ ಸಾಧ್ಯವಾಗಿಲ್ಲ. ತಮ್ಮ ಮನವಿಪತ್ರವನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದೇನೆ. ಯಡಿಯೂರಪ್ಪ ಅವರೂ ದೂರವಾಣಿ ಮೂಲಕ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ವಿಮಾನ ಸೇವೆ ಮುಂದುವರಿಸಲು ನೆರವು ನೀಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು.
ಎರಡು ಮಾರ್ಗಗಳಿಗೆ ತಲಾ ₹14 ಕೋಟಿ VGF ನೆರವಿನ ಬೇಡಿಕೆ
ತಕ್ಷಣದ ಪರಿಹಾರವಾಗಿ ಕನಿಷ್ಠ ಐದಾರು ತಿಂಗಳ ಅವಧಿಗೆ ಶಿವಮೊಗ್ಗ-ಬೆಂಗಳೂರು ಮತ್ತು ಶಿವಮೊಗ್ಗ-ಹೈದರಾಬಾದ್ ಮಾರ್ಗಗಳಲ್ಲಿ ವಿಮಾನ ಸೇವೆ ಮುಂದುವರಿಸಲು ರಾಜ್ಯ ಸರ್ಕಾರ VGF ನೆರವು ನೀಡಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆಯಾಗಿದೆ. ಈ ಎರಡು ಮಾರ್ಗಗಳಿಗೆ ತಲಾ ಸುಮಾರು ₹14 ಕೋಟಿ ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ ಅಗತ್ಯ ಅನುಮೋದನೆ ನೀಡಿದರೆ ಸ್ಟಾರ್ ಏರ್ಲೈನ್ಸ್ ಸೇವೆ ಮುಂದುವರಿಸಲು ಸಿದ್ಧವಿದೆ ಎಂದು ತಿಳಿಸಿದರು.
ಗುಲ್ಬರ್ಗ ಮತ್ತು ಬೀದರ್ ವಿಮಾನ ನಿಲ್ದಾಣಗಳಿಗೆ ರಾಜ್ಯ ಸರ್ಕಾರ ವಿಶೇಷ ಆರ್ಥಿಕ ನೆರವು ನೀಡಿರುವ ಮಾದರಿಯಲ್ಲೇ ಶಿವಮೊಗ್ಗಕ್ಕೂ ನೆರವು ನೀಡಬೇಕು. ಕಲ್ಯಾಣ ಕರ್ನಾಟಕದ ವಿಮಾನ ನಿಲ್ದಾಣಗಳಿಗೆ ನೀಡಿರುವ ಸೌಲಭ್ಯಗಳನ್ನು ಶಿವಮೊಗ್ಗಕ್ಕೂ ವಿಸ್ತರಿಸಬೇಕು. ಯಡಿಯೂರಪ್ಪ ಅವರ ಅವಧಿಯಲ್ಲಿ ಬೆಂಗಳೂರು-ಶಿವಮೊಗ್ಗ ವಿಮಾನ ಸೇವೆಗೆ ನೀಡಿದ್ದ ಶೇಕಡಾ 100ರಷ್ಟು VGF ನೆರವಿನ ಮಾದರಿಯನ್ನು ಪುನರಾವರ್ತಿಸಬೇಕು ಎಂದು ಒತ್ತಾಯಿಸಿದರು.
ಇದು ರಾಜಕೀಯ ಮಾಡುವ ವಿಚಾರವಲ್ಲ. ಜಿಲ್ಲೆಯ ಜನರ ಅನುಕೂಲಕ್ಕಾಗಿ ಹಾಗೂ ಈಗಾಗಲೇ ನಿರ್ಮಾಣವಾಗಿರುವ ವಿಮಾನ ನಿಲ್ದಾಣದ ಪ್ರಯೋಜನವನ್ನು ಉಳಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕಿದೆ. ತಾತ್ಕಾಲಿಕವಾಗಿ ಐದಾರು ತಿಂಗಳ ನೆರವು ದೊರೆತರೆ ಈ ನಡುವೆ ಕೇಂದ್ರದ ಉಡಾನ್ 6.0 ಯೋಜನೆಯಡಿ ಮುಂದಿನ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು ಎಂದರು.
ರಾತ್ರಿ ವಿಮಾನ ಇಳಿಯುವ ವ್ಯವಸ್ಥೆಗೂ ಸಿದ್ಧತೆ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಇಳಿಯುವ ವ್ಯವಸ್ಥೆ (Night Landing) ಕಲ್ಪಿಸುವ ನಿಟ್ಟಿನಲ್ಲಿಯೂ ಪ್ರಗತಿಯಾಗಿದೆ ಎಂದು ರಾಘವೇಂದ್ರ ತಿಳಿಸಿದರು.
ರನ್ವೇ ಕೊನೆಯ ಭಾಗದಲ್ಲಿ ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆಗೆ ಅಗತ್ಯವಿದ್ದ ಸುಮಾರು 42 ಎಕರೆ ಅರಣ್ಯ ಭೂಮಿಗೆ ಪರ್ಯಾಯವಾಗಿ 100 ಎಕರೆ ಕಂದಾಯ ಭೂಮಿಯನ್ನು ನೀಡುವ ಮೂಲಕ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಸಂಬಂಧಿತ ನಾಗರಿಕ ಕಾಮಗಾರಿಗಳೂ ಮುಗಿದಿವೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಏರ್ಪೋರ್ಟ್ ಅಥಾರಿಟಿ ಅಧಿಕಾರಿಗಳು ಆಗಮಿಸಿ ಆಂಟೆನಾ ಅಳವಡಿಸಿದ್ದಾರೆ ಎಂದು ಹೇಳಿದರು.
ದೀಪಾವಳಿ ನಂತರ ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆಯ ಪರೀಕ್ಷಾರ್ಥ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಆದೇಶ ಹೊರಬೀಳುವ ನಿರೀಕ್ಷೆಯಿದೆ. ಮುಂದಿನ ವಾರದಲ್ಲಿಯೇ ಅನುಮತಿ ದೊರೆಯುವ ಸಾಧ್ಯತೆಯಿದ್ದು, ಸಂಜೆ ವೇಳೆಯಲ್ಲಿ ವಿಮಾನವನ್ನು ಇಳಿಸಿ ವ್ಯವಸ್ಥೆಯ ಪರೀಕ್ಷೆ ನಡೆಸುವ ಪ್ರಕ್ರಿಯೆ ನಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ವಿಮಾನಯಾನ ಸಂಸ್ಥೆ ರಚನೆಗೆ ಸ್ವಾಗತ
ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಅವಕಾಶ ನೀಡಬಾರದು. ಜಿಲ್ಲೆಗೆ ಉತ್ತಮ ವಿಮಾನ ನಿಲ್ದಾಣವಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಮುಖ್ಯ. ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ಪ್ರತ್ಯೇಕ ನಿಗಮ ರಚಿಸುವ ಕುರಿತು ಸಚಿವ ಎಂ.ಬಿ. ಪಾಟೀಲ್ ನೀಡಿರುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅವರು ಯಾವ ರೀತಿಯಲ್ಲಿ ಅದನ್ನು ಕಾರ್ಯಗತಗೊಳಿಸುತ್ತಾರೋ ನೋಡಬೇಕು ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣದ ಸಮಸ್ಯೆ ಪರಿಹರಿಸುವ ಕುರಿತು ರಾಜ್ಯ ಸರ್ಕಾರದಿಂದ ತಮ್ಮನ್ನು ಯಾವುದೇ ಸಭೆಗೂ ಆಹ್ವಾನಿಸಿಲ್ಲ. ಆದರೂ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಚುನಾಯಿತ ಪ್ರತಿನಿಧಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದರು.
ಯಾವುದೇ ವಿಮಾನಯಾನ ಸಂಸ್ಥೆ ಮುಂದೆ ಬಂದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ಸ್ಟಾರ್ ಏರ್ಲೈನ್ಸ್ನಿಂದಲೂ ಸೇವೆ ಮುಂದುವರಿಸಲು ಸಿದ್ಧವಿರುವ ಪತ್ರ ಪಡೆದುಕೊಂಡಿದ್ದೇನೆ. ತಕ್ಷಣ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡರೆ ನವೆಂಬರ್ 26ರ ನಂತರವೂ ಕನಿಷ್ಠ ಐದಾರು ತಿಂಗಳ ಕಾಲ ವಿಮಾನ ಸೇವೆ ಮುಂದುವರಿಸಲು ಅವಕಾಶವಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
Star Airlines ready to serve four routes including Bengaluru, Hyderabad - BYR



0 ಕಾಮೆಂಟ್ಗಳು