SUDDILIVE || SHIVAMOGGA
ಶಿವಮೊಗ್ಗದಲ್ಲಿ ದೀಪಾವಳಿ ಧಮಾಕಾ ಶುರು; ಪಟಾಕಿ ಖರೀದಿ ಜೋರು, ದರದಲ್ಲಿ ಗೊಂದಲ-Diwali boom begins in Shivamogga; firecracker purchases surge, prices confused!
ಶಿವಮೊಗ್ಗ: ನರಕ ಚತುರ್ದಶಿ, ಬಲಿಪಾಡ್ಯಮಿಯ ಬಲೀಂದ್ರ ಪೂಜೆ, ಲಕ್ಷ್ಮೀ ಪೂಜೆ, ಗೋಪೂಜೆ ಸೇರಿದಂತೆ ಸಾಲು ಸಾಲು ಹಬ್ಬಗಳನ್ನು ಹೊತ್ತು ತಂದಿರುವ ದೀಪಾವಳಿ ಶಿವಮೊಗ್ಗದಲ್ಲಿ ಸಡಗರ ಮತ್ತು ಸಂಭ್ರಮದ ವಾತಾವರಣ ಮೂಡಿಸಿದೆ. ಹಬ್ಬದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಪಟಾಕಿ ಮಳಿಗೆಗಳಲ್ಲಿಯೂ ಜನರು ಮುಗಿಬಿದ್ದಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಖರೀದಿ ಜೋರಾಗಿದೆ. ಕಳೆದ ಬಾರಿ ಪಟಾಕಿ ಮಾರಾಟ ಹಿಂದಿನ ವರ್ಷಕ್ಕಿಂತ ಶೇ.15ರಷ್ಟು ಹೆಚ್ಚಳವಾಗಿತ್ತು. ಈ ಬಾರಿ ಪಟಾಕಿಗಳ ದರದಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದಿಲ್ಲ ಎನ್ನಲಾಗುತ್ತಿದ್ದರೂ, ಕೆಲವು ಮಳಿಗೆಗಳಲ್ಲಿ ಮಾರಾಟದ ದರದ ವಿಚಾರವಾಗಿ ಗ್ರಾಹಕರಲ್ಲಿ ಗೊಂದಲ ಕಂಡುಬರುತ್ತಿದೆ.
₹700ಕ್ಕೆ ಹೇಳಿದ ಫ್ಯಾಮಿಲಿ ಪ್ಯಾಕ್ ₹400ಕ್ಕೆ ಮಾರಾಟ!
ಕೆಲವು ಪಟಾಕಿ ಮಳಿಗೆಗಳಲ್ಲಿ ಫ್ಯಾಮಿಲಿ ಪ್ಯಾಕ್ಗೆ ಆರಂಭದಲ್ಲಿ ₹700 ದರ ಹೇಳಿ, ಬಳಿಕ ₹400ಕ್ಕೆ ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಇದೇ ರೀತಿಯಾಗಿ, 70 ಪಟಾಕಿಗಳಿರುವ ಗಿಫ್ಟ್ ಪ್ಯಾಕ್ ಬಾಕ್ಸ್ಗಳನ್ನು ಕೆಲವು ಮಳಿಗೆಗಳಲ್ಲಿ ₹1,100ಕ್ಕೆ ಮಾರಾಟ ಮಾಡಲಾಗುತ್ತಿದ್ದರೆ, ಇನ್ನು ಕೆಲವು ಗ್ರಾಹಕರು ಅದೇ ಪ್ಯಾಕ್ಗೆ ₹1,700 ನೀಡಿ ಖರೀದಿಸಿರುವುದು ಕಂಡುಬಂದಿದೆ.
ಇದರಿಂದ ಒಂದೇ ರೀತಿಯ ಪಟಾಕಿ ಪ್ಯಾಕ್ಗಳಿಗೆ ವಿವಿಧ ಮಳಿಗೆಗಳಲ್ಲಿ ವಿಭಿನ್ನ ದರಗಳು ಇರುವುದರಿಂದ ಗ್ರಾಹಕರು ಬೆಲೆ ಪರಿಶೀಲಿಸಿ ಖರೀದಿ ಮಾಡುವಂತಾಗಿದೆ. ಒಟ್ಟಿನಲ್ಲಿ, ಪಟಾಕಿ ಮಾರಾಟದಲ್ಲಿ ಈ ಬಾರಿಯೂ ದರದ ಸ್ಥಿರತೆ ಕಾಣಿಸಿಕೊಳ್ಳದಿರುವುದು ಗಮನ ಸೆಳೆದಿದೆ.
ಕಳೆದ ವರ್ಷ 94 ಮಳಿಗೆ; ಈ ಬಾರಿ 90 ಮಳಿಗೆಗಳಲ್ಲಿ ವ್ಯಾಪಾರ
ಕಳೆದ ವರ್ಷ ಶಿವಮೊಗ್ಗದಲ್ಲಿ ಒಟ್ಟು 94 ಪಟಾಕಿ ಮಳಿಗೆಗಳಲ್ಲಿ ವ್ಯಾಪಾರ ನಡೆಸಲಾಗಿತ್ತು. ಈ ಬಾರಿ 90 ಮಳಿಗೆಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಳೆದ ಬಾರಿ ಕಂಡುಬಂದಿದ್ದ ಸಿಂಧೂರ ಅಂಗಡಿ ಈ ಬಾರಿಯೂ ಮುಂದುವರಿದಿದೆ. ಕಳೆದ ವರ್ಷ ಅಯೋಧ್ಯೆ ಹೆಸರಿನ ಮಳಿಗೆ ಕಂಡುಬಂದಿದ್ದರೆ, ಈ ಬಾರಿ ಆ ಮಳಿಗೆ ಕಾಣಿಸಿಲ್ಲ. ಅದರ ಬದಲಿಗೆ ವೀರ ಸಾವರ್ಕರ್ ಹೆಸರಿನ ಮಳಿಗೆ ಕಂಡುಬಂದಿದ್ದು, ಈ ಮಳಿಗೆ ಕಳೆದ ವರ್ಷವೂ ಇತ್ತು.
ಫ್ರೀಡಂ ಪಾರ್ಕ್ ಎದುರು ಹಬ್ಬದ ಖರೀದಿ ಭರಾಟೆ
ಇನ್ನು ಫ್ರೀಡಂ ಪಾರ್ಕ್ ಎದುರು ಹಬ್ಬಕ್ಕೆ ಅಗತ್ಯವಾದ ಹೂವು, ಮಾವಿನ ಸೊಪ್ಪು, ಕುಂಬಳಕಾಯಿ, ಬಾಳೆದಿಂಡು ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಜೋರಾಗಿದೆ.
ದೀಪಾವಳಿ ಪೂಜೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ. ಹಬ್ಬದ ಖರೀದಿಯಲ್ಲಿ ಜನರ ಆಸಕ್ತಿ ಹೆಚ್ಚಾಗಿದ್ದು, ಫ್ರೀಡಂ ಪಾರ್ಕ್ ಎದುರಿನ ಮಾರುಕಟ್ಟೆಯಲ್ಲಿ ಜನಸಂದಣಿ ಕಂಡುಬಂದಿದೆ.
ಸುರಕ್ಷತಾ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ?
ಪಟಾಕಿ ಮಳಿಗೆಗಳಲ್ಲಿ ಸುರಕ್ಷತಾ ವ್ಯವಸ್ಥೆಯ ವಿಚಾರವೂ ಗಮನ ಸೆಳೆದಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೆಲವು ಮಳಿಗೆಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ಕಂಡುಬಂದಿರುವ ಆರೋಪಗಳಿವೆ.
ಮಳಿಗೆಗಳಲ್ಲಿ ನೀರು ತುಂಬಿದ ಡ್ರಮ್ಗಳನ್ನು ಇರಿಸಲಾಗಿದ್ದರೂ, ಅಗತ್ಯವಿರುವ ಕಡೆಗಳಲ್ಲಿ ಬಕೆಟ್ಗಳಲ್ಲಿ ಮರಳು ತುಂಬಿಸಿ ಇಟ್ಟಿರುವುದು ಕಂಡುಬಂದಿಲ್ಲ.
ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಖರೀದಿ ಮತ್ತು ಮಾರಾಟ ಜೋರಾಗಿರುವ ಹಿನ್ನೆಲೆಯಲ್ಲಿ, ಮಳಿಗೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸುವುದು ಅಗತ್ಯವಾಗಿದೆ.
ಒಟ್ಟಿನಲ್ಲಿ, ಶಿವಮೊಗ್ಗದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಹೂವು, ಪೂಜಾ ಸಾಮಗ್ರಿ ಹಾಗೂ ಪಟಾಕಿ ಖರೀದಿಯಲ್ಲಿ ಜನರು ತೊಡಗಿಸಿಕೊಂಡಿದ್ದಾರೆ. ಆದರೆ ಪಟಾಕಿಗಳ ದರದಲ್ಲಿನ ವ್ಯತ್ಯಾಸ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರ ಗಮನವೂ ಹರಿದಿದೆ.




ಕಾಮೆಂಟ್ ಪೋಸ್ಟ್ ಮಾಡಿ