Advertisement

ಶಿವಮೊಗ್ಗದಲ್ಲಿ ಸಂವಿಧಾನ ಸಮರ್ಪಣಾ ದಿನ ಆಚರಣೆ: ಡಿಎಸ್‌ಎಸ್‌ನಿಂದ ವಿಚಾರ ಸಂಕಿರಣ, ಜಿಲ್ಲಾ ಸಮಿತಿ ಸಭೆ-Constitution Dedication Day celebrated in Shivamogga: DSS holds seminar, district committee meeting

SUDDILIVE || SHIVAMOGGA

ಶಿವಮೊಗ್ಗದಲ್ಲಿ ಸಂವಿಧಾನ ಸಮರ್ಪಣಾ ದಿನ ಆಚರಣೆ: ಡಿಎಸ್‌ಎಸ್‌ನಿಂದ ವಿಚಾರ ಸಂಕಿರಣ, ಜಿಲ್ಲಾ ಸಮಿತಿ ಸಭೆ-Constitution Dedication Day celebrated in Shivamogga: DSS holds seminar, district committee meeting     

Shivamogga, dss



ಶಿವಮೊಗ್ಗ: ಭಾರತದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ವತಿಯಿಂದ ಶಿವಮೊಗ್ಗ ನಗರದ ಸರ್ಕಿಟ್ ಹೌಸ್ (ಪ್ರವಾಸಿ ಮಂದಿರ)ದಲ್ಲಿ ವಿಚಾರ ಸಂಕಿರಣ ಹಾಗೂ ಜಿಲ್ಲಾ ಸಮಿತಿಯ ಸಭೆ ನಡೆಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಆರ್. ಮೋಹನ್‌ರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹರಮಘಟ್ಟ ರಂಗಪ್ಪ ಮಾತನಾಡಿ, ನವೆಂಬರ್ 26 ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಮಹತ್ವದ ದಿನವಾಗಿದೆ. ಸಂವಿಧಾನ ಸಮರ್ಪಣಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಪದಾಧಿಕಾರಿಗಳು ಒಗ್ಗೂಡಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪ ಹಾಗೂ ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳನ್ನು ಸಮಾಜದ ಬಡವರು, ದಲಿತರು ಮತ್ತು ಶೋಷಿತ ಸಮುದಾಯಗಳಿಗೆ ತಲುಪಿಸುವುದು ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಡಿಎಸ್‌ಎಸ್ ಸಮಾಜದ ಸ್ವತ್ತು

ದಲಿತ ಸಂಘರ್ಷ ಸಮಿತಿಯ ಮಹತ್ವವನ್ನು ವಿವರಿಸಿದ ಹರಮಘಟ್ಟ ರಂಗಪ್ಪ, ಸಮಾಜದಲ್ಲಿ ಅನ್ಯಾಯ, ದಬ್ಬಾಳಿಕೆ ಹಾಗೂ ದೌರ್ಜನ್ಯಗಳು ನಡೆದಾಗ ಶೋಷಿತರ ಪರವಾಗಿ ಧ್ವನಿ ಎತ್ತುವ ಸಂಘಟನೆಯಾಗಿ ಡಿಎಸ್‌ಎಸ್ ಕಾರ್ಯನಿರ್ವಹಿಸುತ್ತಿದೆ. ಬಡವರ ಭೂಮಿ ಅತಿಕ್ರಮಣ, ಕಾನೂನು ಹೋರಾಟ ಸೇರಿದಂತೆ ಹಲವು ಸಂದರ್ಭಗಳಲ್ಲಿ ಸಂಘಟನೆಯ ಕಾರ್ಯಕರ್ತರು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ ಎಂದು ತಿಳಿಸಿದರು.

ಡಿಎಸ್‌ಎಸ್ ಯಾವುದೇ ವ್ಯಕ್ತಿ ಅಥವಾ ನಾಯಕನ ಸ್ವತ್ತಲ್ಲ. ಅದು ಇಡೀ ಸಮಾಜದ ಸ್ವತ್ತು, ಶೋಷಿತ ಸಮುದಾಯಗಳ ಹಕ್ಕು ಮತ್ತು ಗೌರವವನ್ನು ಕಾಪಾಡುವ ಸಂಘಟನೆಯಾಗಿದೆ. ಸಂಘಟನೆಯ ಕಾರ್ಯಕರ್ತರು ಸಮಾಜದ ಎಲ್ಲ ವರ್ಗಗಳ ಜನರ ಹಿತಕ್ಕಾಗಿ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

1976ರಲ್ಲಿ ಚಂದ್ರಗುತ್ತಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿದ್ದ ಅಮಾನವೀಯ ಬೆತ್ತಲೆ ಸೇವೆ ಪದ್ಧತಿಯನ್ನು ತಡೆಗಟ್ಟಲು ಪ್ರೊ. ಬಿ. ಕೃಷ್ಣಪ್ಪ ಅವರು ನಡೆಸಿದ ಹೋರಾಟವನ್ನು ಸ್ಮರಿಸಿದ ಅವರು, ಸಿದ್ಲಿಪುರ ಭೂ ಹೋರಾಟ ಸೇರಿದಂತೆ ಹಲವು ಚಳವಳಿಗಳ ಮೂಲಕ ಬಡವರು ಹಾಗೂ ಭೂಹೀನರ ಹಕ್ಕುಗಳಿಗಾಗಿ ಡಿಎಸ್‌ಎಸ್ ಹೋರಾಟ ನಡೆಸಿದೆ ಎಂದು ಹೇಳಿದರು.

ಸಂವಿಧಾನದ ಪೀಠಿಕೆ ವಾಚನ

ಕಾರ್ಯಕ್ರಮದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಅವರ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ನಡೆಸಿ ಗೌರವ ಸಲ್ಲಿಸಲಾಯಿತು. ಬಳಿಕ ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸಲಾಯಿತು.

ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನ ಅವಕಾಶ ಮತ್ತು ವ್ಯಕ್ತಿಗೌರವವನ್ನು ಖಾತರಿಪಡಿಸುವ ಮಹತ್ವದ ದಾಖಲೆಯಾಗಿದೆ. ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಅಗತ್ಯವಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಂಘಟನೆಯನ್ನು ಬಲಪಡಿಸಲು ಕರೆ

ಸಭೆಯನ್ನ ಉದ್ಘಾಟಿಸಿ ಮಾತನಾಡಿದ ರಾಜ್ಯ ಸಂಚಾಲಕ ಆರ್. ಮೋಹನ್‌ರಾಜ್ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಡಿಎಸ್‌ಎಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಜಿಲ್ಲಾ ಸಂಚಾಲಕ ಹರಮಘಟ್ಟ ರಂಗಪ್ಪ ಅವರಿಗೆ ಮನವಿ ಮಾಡಿದರು.

ಶಿವಮೊಗ್ಗ ಮಾತ್ರವಲ್ಲದೆ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಪಕ್ಕದ ಜಿಲ್ಲೆಗಳಲ್ಲಿಯೂ ಸಾಮಾಜಿಕ ಚಳವಳಿಯನ್ನು ವಿಸ್ತರಿಸಿ, ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲರು ಹಾಗೂ ಸಂಘಟನೆಯ ಕಾನೂನು ಸಲಹೆಗಾರರಾದ ಪಿ.ಎಲ್. ರಮೇಶ್, ಸುನೀತಾ ರಾಜ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Constitution Dedication Day celebrated in Shivamogga: DSS holds seminar, district committee meeting

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು