SUDDILIVE || SHIVAMOGGA
ಇಎಸ್ಐ ಕಾರ್ಮಿಕರಿಗೆ ಆದ್ಯತೆಯ ಚಿಕಿತ್ಸೆ, ಎಂಆರ್ಐ–ಸಿಟಿ ಸ್ಕ್ಯಾನ್ಗೆ 3ರಿಂದ 5 ದಿನಗಳಲ್ಲಿ ಅವಕಾಶ: ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಮಹತ್ವದ ಸಭೆ-Priority treatment for ESI workers, MRI-CT scan within 3 to 5 days: Important meeting led by MP B.Y. Raghavendra
ಶಿವಮೊಗ್ಗ: ಇಎಸ್ಐ (ಕಾರ್ಮಿಕರ ರಾಜ್ಯ ವಿಮಾ ಯೋಜನೆ) ಅಡಿಯಲ್ಲಿ ಚಿಕಿತ್ಸೆ ಪಡೆಯುವ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾಡಳಿತ, ಮೆಗ್ಗಾನ್ ಆಸ್ಪತ್ರೆ, ಇಎಸ್ಐ ಚಿಕಿತ್ಸಾಲಯಗಳ ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಮತ್ತು ವೈದ್ಯರು ಭಾಗವಹಿಸಿ ಕಾರ್ಮಿಕರಿಗೆ ಚಿಕಿತ್ಸೆ ದೊರೆಯುವಲ್ಲಿ ಉಂಟಾಗುತ್ತಿರುವ ತೊಂದರೆಗಳು ಹಾಗೂ ರೆಫರಲ್ ವ್ಯವಸ್ಥೆಯಲ್ಲಿನ ಗೊಂದಲಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಇಎಸ್ಐ ಕಾರ್ಮಿಕರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯಬೇಕು. ರೆಫರಲ್ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ತಪ್ಪಬೇಕು. ಆಸ್ಪತ್ರೆಗಳಲ್ಲಿ ಅವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಆದ್ಯತೆಯ ಚಿಕಿತ್ಸೆ ನೀಡಬೇಕು ಎಂಬುದು ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಯಿತು.
ಎಂಆರ್ಐ, ಸಿಟಿ ಸ್ಕ್ಯಾನ್ಗೆ ಆದ್ಯತೆ
ಇಎಸ್ಐ ಫಲಾನುಭವಿಗಳಿಗೆ ಎಂಆರ್ಐ ಮತ್ತು ಸಿಟಿ ಸ್ಕ್ಯಾನ್ ಮಾಡಿಸಲು ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಸಾಮಾನ್ಯವಾಗಿ ಇಂತಹ ಪರೀಕ್ಷೆಗಳಿಗೆ ಎರಡು ಮೂರು ತಿಂಗಳವರೆಗೂ ಕಾಯುವಂತಾಗುತ್ತಿದೆ ಎಂಬ ವಿಚಾರ ಸಭೆಯಲ್ಲಿ ಚರ್ಚೆಯಾಯಿತು.
ಇಎಸ್ಐ ಕಾರ್ಮಿಕರಿಗಾಗಿ ವಿಶೇಷ ಆದ್ಯತೆಯ ವ್ಯವಸ್ಥೆ ರೂಪಿಸಿ, ತುರ್ತು ಪ್ರಕರಣಗಳು ಹಾಗೂ ಒಳರೋಗಿಗಳಿಗೆ ತಕ್ಷಣವೇ ಪರೀಕ್ಷೆ ನಡೆಸಬೇಕು. ಆಯ್ದ ಪ್ರಕರಣಗಳಿಗೆ ಮೂರುರಿಂದ ಐದು ದಿನಗಳೊಳಗೆ ಎಂಆರ್ಐ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯ ಕಲ್ಪಿಸುವಂತೆ ಪ್ರತ್ಯೇಕ ವ್ಯವಸ್ಥೆ ರೂಪಿಸುವ ಕುರಿತು ಚರ್ಚಿಸಲಾಯಿತು. ತುರ್ತು ಮತ್ತು ಒಳರೋಗಿಗಳ ಪರೀಕ್ಷೆಗಳನ್ನು ತಕ್ಷಣ ನಡೆಸಲಾಗುತ್ತಿದ್ದು, ಎಲೆಕ್ಟಿವ್ ಪ್ರಕರಣಗಳು ಮಾತ್ರ ಬಾಕಿ ಪಟ್ಟಿಯಲ್ಲಿರುತ್ತವೆ ಎಂದು ಆಸ್ಪತ್ರೆಯ ವೈದ್ಯರು ಸಭೆಯಲ್ಲಿ ವಿವರಿಸಿದರು.
ಈ ವ್ಯವಸ್ಥೆ ಜಾರಿಯಾದರೆ ಅನಗತ್ಯ ವಿಳಂಬ ತಪ್ಪುವುದರ ಜತೆಗೆ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್ ನೀಡುವ ಒತ್ತಡವೂ ಕಡಿಮೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಆಸ್ಪತ್ರೆಗಳಲ್ಲಿ ಪ್ರತ್ಯೇಕ ಇಎಸ್ಐ ಕೌಂಟರ್
ಇಎಸ್ಐ ರೆಫರಲ್ ಹೊಂದಿರುವ ಕಾರ್ಮಿಕರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಬಂದಾಗ ಅವರಿಗೆ ಪ್ರತ್ಯೇಕ ಕೌಂಟರ್, ಕ್ಯಾಬಿನ್ ಮತ್ತು ಸಿಬ್ಬಂದಿ ವ್ಯವಸ್ಥೆ ಕಲ್ಪಿಸಬೇಕು. ರೆಫರಲ್ ಪತ್ರ ಪರಿಶೀಲನೆ, ನೋಂದಣಿ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಆದ್ಯತೆಯ ಚಿಕಿತ್ಸೆ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಕಾರ್ಮಿಕರು ಈಗಾಗಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಾಗ ರೆಫರಲ್ ಪತ್ರಕ್ಕಾಗಿ ವಿವಿಧ ಕಚೇರಿಗಳಿಗೆ ಅಲೆದಾಡಬೇಕಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಕಳುಹಿಸುವ ಪ್ರಕ್ರಿಯೆಯಲ್ಲಿಯೂ ತೊಂದರೆ ಎದುರಾಗುತ್ತಿದೆ. ಇದರಿಂದ ಕಾರ್ಮಿಕರು ಮಾನಸಿಕ ಹಾಗೂ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ಅಳಲನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಸುಬಯ್ಯ ವೈದ್ಯಕೀಯ ಕಾಲೇಜಿನಿಂದ ಸೇವೆ ಕಡಿಮೆಯಾಗಿರುವ ಬಗ್ಗೆ ಕಳವಳ
ಸಭೆಯಲ್ಲಿ ಮಾತನಾಡಿದ ಸುಬಯ್ಯ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ. ಕೌಶಿಕ್, ಇಎಸ್ಐ ಫಲಾನುಭವಿಗಳಿಗೆ ತಮ್ಮ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೌಂಟರ್, ಇಎಸ್ಐ ಸಂಯೋಜಕರು ಹಾಗೂ ವಾರ್ಡ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸುಮಾರು ಏಳೆಂಟು ತಿಂಗಳ ಹಿಂದೆ ದಿನವೊಂದಕ್ಕೆ ಸರಾಸರಿ 85ರಿಂದ 90 ಇಎಸ್ಐ ಫಲಾನುಭವಿಗಳು ಹೊರರೋಗಿಗಳಾಗಿ (ಒಪಿಡಿ) ಆಸ್ಪತ್ರೆಗೆ ಬರುತ್ತಿದ್ದರು. ಒಳರೋಗಿಗಳ ದಾಖಲಾತಿಯೂ ತಿಂಗಳಿಗೆ ಸುಮಾರು 390ರಿಂದ 400ರಷ್ಟಿತ್ತು. ಆದರೆ ಇತ್ತೀಚಿನ ಎಂಟು ತಿಂಗಳಲ್ಲಿ ಹೊರರೋಗಿಗಳ ಸಂಖ್ಯೆ ತಿಂಗಳಿಗೆ ಸುಮಾರು 20ಕ್ಕೆ ಇಳಿದಿದ್ದು, ಒಳರೋಗಿಗಳ ದಾಖಲಾತಿ ತಿಂಗಳಿಗೆ 90ರ ಆಸುಪಾಸಿಗೆ ಕುಸಿದಿದೆ ಎಂದು ಮಾಹಿತಿ ನೀಡಿದರು.
ಇಎಸ್ಐ ಫಲಾನುಭವಿಗಳ ರೆಫರಲ್ ಹಾಗೂ ಚಿಕಿತ್ಸಾ ವ್ಯವಸ್ಥೆಯಲ್ಲಿ ಉಂಟಾಗಿರುವ ಸಮಸ್ಯೆಗಳಿಂದ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಮ್ಮ ಆಸ್ಪತ್ರೆಯಲ್ಲಿ ಹೃದ್ರೋಗ, ಮೂತ್ರಪಿಂಡ ಸಂಬಂಧಿತ ಚಿಕಿತ್ಸೆ, ಮೂತ್ರಶಾಸ್ತ್ರ ಸೇರಿದಂತೆ ಸೂಪರ್ ಸ್ಪೆಷಾಲಿಟಿ ಸೇವೆಗಳೂ ಲಭ್ಯವಿವೆ. ಆದರೆ ಪ್ರಸ್ತುತ ಇಎಸ್ಐ ಅಡಿಯಲ್ಲಿ ದ್ವಿತೀಯ ಹಂತದ ಚಿಕಿತ್ಸೆಗಳಿಗೆ ಮಾತ್ರ ಅನುಮೋದನೆ ದೊರೆತಿದ್ದು, ತೃತೀಯ ಹಂತದ ಹಾಗೂ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಳಿಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭೆಯಲ್ಲಿದ್ದವರು, ತೃತೀಯ ಹಂತದ ಚಿಕಿತ್ಸೆಗೆ ಅಗತ್ಯವಿರುವ ಅನುಮೋದನೆ ಹಾಗೂ ಎಂಪ್ಯಾನೆಲ್ಮೆಂಟ್ ಕುರಿತು ಪರಿಶೀಲಿಸುವ ಅಗತ್ಯವಿದೆ ಎಂದು ಚರ್ಚಿಸಿದರು.
ಏಳು ಗಂಭೀರ ಕಾಯಿಲೆಗಳಿಗೆ ರೆಫರಲ್ ವ್ಯವಸ್ಥೆ
ಹಿಂದೆ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಳಿಗೆ ರೆಫರಲ್ ನೀಡುವ ವಿಚಾರದಲ್ಲಿ ನಿರ್ಬಂಧಗಳಿರಲಿಲ್ಲ. ಆದರೆ ಈಗ ಕೆಲವು ಚಿಕಿತ್ಸೆಗಳಿಗಷ್ಟೇ ಅವಕಾಶ ನೀಡಲಾಗುತ್ತಿದೆ. ಹೃದಯ ಸಂಬಂಧಿತ ಚಿಕಿತ್ಸೆ ಸೇರಿದಂತೆ ಕನಿಷ್ಠ ಐದು ಕಾರ್ಡಿಯಾಕ್ ಪ್ರಕರಣಗಳು ಹಾಗೂ ಏಳು ದೀರ್ಘಕಾಲೀನ ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸೆಗಳ ವಿಚಾರದಲ್ಲಿ ಸ್ಪಷ್ಟ ನೀತಿ ರೂಪಿಸಬೇಕೆಂಬ ಚರ್ಚೆಯೂ ನಡೆಯಿತು.
ಇಎಸ್ಐ ಫಲಾನುಭವಿಗಳನ್ನು ಯಾವ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಹಾಗೂ ಯಾವ ಸಂದರ್ಭದಲ್ಲಿ ಎಂಪ್ಯಾನೆಲ್ಡ್ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಅಗತ್ಯವಿದೆ. ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವಾಗ ಗೊಂದಲ ಉಂಟಾಗದಂತೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಡುವೆ ಸಮನ್ವಯ ಇರಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು.
ತುರ್ತು ದಾಖಲಾತಿಗೆ 24 ಗಂಟೆಗಳ ಅವಕಾಶ
ತುರ್ತು ಪರಿಸ್ಥಿತಿಯಲ್ಲಿ ಕಾರ್ಮಿಕರು ಖಾಸಗಿ ಆಸ್ಪತ್ರೆಗೆ ದಾಖಲಾದಾಗ ಇಎಸ್ಐ ರೆಫರಲ್ ಪತ್ರ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ವಿಳಂಬವಾಗಬಾರದು ಎಂಬ ವಿಚಾರ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಯಿತು.
ಕಾರ್ಮಿಕರು ತುರ್ತು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ, 24 ಗಂಟೆಗಳ ಒಳಗಾಗಿ ಅಗತ್ಯ ರೆಫರಲ್ ಅಥವಾ ಅನುಮೋದನೆ ಪತ್ರವನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ವ್ಯವಸ್ಥೆ ಕುರಿತು ಚರ್ಚಿಸಲಾಯಿತು. ಈ ಅವಧಿಯಲ್ಲಿ ಆಸ್ಪತ್ರೆಗಳು ಕಾರ್ಮಿಕರಿಂದ ಹಣ ವಸೂಲಿ ಮಾಡದೆ ಚಿಕಿತ್ಸೆ ನೀಡಬೇಕು ಎಂಬ ಅಭಿಪ್ರಾಯವನ್ನು ಸಂಸದರು ಮುಂದಿಟ್ಟರು.
ಕಾರ್ಮಿಕರ ಬಳಿ ತುರ್ತು ಸಂದರ್ಭದಲ್ಲಿ ₹50 ಸಾವಿರದಿಂದ ₹70 ಸಾವಿರದವರೆಗೆ ಹಣ ಪಾವತಿಸುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಇಎಸ್ಐ ಕಾರ್ಡ್ ಹೊಂದಿರುವವರು ಆಸ್ಪತ್ರೆಗೆ ಬಂದಾಗ ಹಣದ ಕಾರಣಕ್ಕೆ ಚಿಕಿತ್ಸೆ ನಿರಾಕರಿಸುವ ಅಥವಾ ವಿಳಂಬ ಮಾಡುವ ಪರಿಸ್ಥಿತಿ ಬರಬಾರದು ಎಂದು ಒತ್ತಿಹೇಳಲಾಯಿತು.
ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದ (ಎಂಒಯು) ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಎಸ್ಐ ವ್ಯಾಪ್ತಿಗೆ ಒಳಪಡುವ ಚಿಕಿತ್ಸೆಗೆ ಹೆಚ್ಚುವರಿ ಹಣ ವಸೂಲಿ ಮಾಡಬಾರದು. ಇಎಸ್ಐ ವ್ಯಾಪ್ತಿಗೆ ಸೇರದ ವಿಶೇಷ ಚಿಕಿತ್ಸೆ ಅಥವಾ ಔಷಧಿ ಅಗತ್ಯವಿದ್ದರೆ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯಬೇಕು. ರೋಗಿಗೆ ಅಗತ್ಯವಿರುವ ಕನಿಷ್ಠ ಚಿಕಿತ್ಸೆಯನ್ನೂ ನಿರಾಕರಿಸಬಾರದು ಎಂದು ಸಭೆಯಲ್ಲಿ ಸೂಚಿಸಲಾಯಿತು.
ಚಿಕಿತ್ಸಾ ದರ ಹೆಚ್ಚಳದ ಬಗ್ಗೆಯೂ ಪ್ರಸ್ತಾಪ
ಸಭೆಯಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಇಎಸ್ಐ ಯೋಜನೆಯಡಿ ಕೆಲವು ಪ್ರಮುಖ ಚಿಕಿತ್ಸೆಗಳ ದರಗಳನ್ನು ಹೆಚ್ಚಿಸಿರುವುದನ್ನು ಉದಾಹರಣೆಯಾಗಿ ವಿವರಿಸಿದರು.
ಹೃದಯ ಕಸಿ ಚಿಕಿತ್ಸೆಯ ದರ ಹಿಂದೆ ₹2,85,660 ಇದ್ದದ್ದು ಈಗ ₹12 ಲಕ್ಷಕ್ಕೆ ಹೆಚ್ಚಳವಾಗಿದೆ. ಪೇಸ್ಮೇಕರ್ ಚಿಕಿತ್ಸೆಯ ದರ ₹22 ಸಾವಿರದಿಂದ ₹37 ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಿಂಗಲ್ ಚೇಂಬರ್ ಪರ್ಮನೆಂಟ್ ಪೇಸ್ಮೇಕರ್ ದರ ₹15 ಸಾವಿರದಿಂದ ₹28 ಸಾವಿರಕ್ಕೆ ಹಾಗೂ ಆರ್ಎಫ್ ಅಬ್ಲೇಷನ್ ದರ ₹36 ಸಾವಿರದಿಂದ ₹77 ಸಾವಿರಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.
ಇಂತಹ ಸೌಲಭ್ಯಗಳ ಬಗ್ಗೆ ಕಾರ್ಮಿಕರಿಗೆ ಅರಿವು ಮೂಡಿಸುವುದರ ಜತೆಗೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಸ್ಥಳೀಯ ಮಟ್ಟದಲ್ಲೇ ರೆಫರಲ್ ಸಮಸ್ಯೆ ಬಗೆಹರಿಸಲು ಚರ್ಚೆ
ಇಎಸ್ಐ ಚಿಕಿತ್ಸಾಲಯಗಳಲ್ಲಿ ರೆಫರಲ್ ನೀಡುವ ಪ್ರಕ್ರಿಯೆಯಲ್ಲಿರುವ ಗೊಂದಲಗಳನ್ನು ನಿವಾರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಚಿಕಿತ್ಸಾಲಯಗಳು ಹಾಗೂ ದಾವಣಗೆರೆ ವಿಭಾಗದ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಿ, ಅಗತ್ಯ ಅನುಮೋದನೆ ಪಡೆಯುವ ವ್ಯವಸ್ಥೆ ರೂಪಿಸುವ ವಿಚಾರ ಪ್ರಸ್ತಾಪವಾಯಿತು.
ಸ್ಥಳೀಯವಾಗಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅನಗತ್ಯವಾಗಿ ರೋಗಿಗಳನ್ನು ದೂರದ ಆಸ್ಪತ್ರೆಗಳಿಗೆ ಕಳುಹಿಸುವುದನ್ನು ತಪ್ಪಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಕಾರ್ಮಿಕರ ಆರೋಗ್ಯ ಸೇವೆಯಲ್ಲಿ ಉಂಟಾಗಿರುವ ಗೊಂದಲಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು, ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಯವರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಮುಖಂಡರು, ಜಿಲ್ಲಾಡಳಿತದ ಅಧಿಕಾರಿಗಳು, ಮೆಗ್ಗಾನ್ ಆಸ್ಪತ್ರೆಯ ವೈದ್ಯರು, ಇಎಸ್ಐ ಚಿಕಿತ್ಸಾಲಯಗಳ ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮೆಗ್ಗಾನ್ ನಲ್ಲಿ ಒಪಿಡಿ ರೆಫರೆನ್ಸ್ ಮಾಡಲಾಗಿದ್ದು ಇನ್ನು ಮುಂದೆ ಒಪಿಡಿ ರೆಫರೆನ್ಸ್ ನೀಡಲಾಗುತ್ತಿದ್ದು, ಮತ್ತೊಂದು ಅದ್ವಾನಕ್ಕೆ ಕಾರಣವಾಗುವ ಸಂಭವನೀಯ ಹೆಚ್ಚಿದೆ. ಎಂಆರ್ಐ ಅಲ್ಲೇ ನೀಡಬೇಕಿದ್ದು ಅಲ್ಲಿಗೆ ಬರುವ ರೋಗಿಗಳಿಗೆ ಎಂಆರ್ ಐ ಸಿಗಲು ನಾಲ್ಕೈದು ತಿಂಗಳು ಕಾಯಬೇಕಿರುವುದರಿಂದ ಮತ್ತೊಂದು ಅವಾಂತರಕ್ಕೆ ಕಾರಣವಾಗಲಿದೆಯಾ ಕಾದುನೋಡಬೇಕಿದೆ.
Priority treatment for ESI workers, MRI-CT scan within 3 to 5 days: Important meeting led by MP B.Y. Raghavendra



0 ಕಾಮೆಂಟ್ಗಳು