Advertisement

ಶಿವಮೊಗ್ಗ: ಜಮೀನು ವಿವಾದದಲ್ಲಿ ಸಹೋದರರಿಂದ ಮೋಸ ಆರೋಪ; ಮನನೊಂದು ವಿಷ ಸೇವಿಸಿ ವ್ಯಕ್ತಿ ಸಾವು- Shivamogga: Man dies after consuming poison after being accused of cheating by brothers in land dispute

SUDDILIVE || SHIKARIPURA

ಶಿವಮೊಗ್ಗ: ಜಮೀನು ವಿವಾದದಲ್ಲಿ ಸಹೋದರರಿಂದ ಮೋಸ ಆರೋಪ; ಮನನೊಂದು ವಿಷ ಸೇವಿಸಿ ವ್ಯಕ್ತಿ ಸಾವು- Shivamogga: Man dies after consuming poison after being accused of cheating by brothers in land dispute  

Land, dispute


ಶಿವಮೊಗ್ಗ: ಜಮೀನಿನಲ್ಲಿ ಪಾಲು ನೀಡದೆ, ಖರೀದಿಗೆ ನೀಡಿದ್ದ ಹಣವನ್ನೂ ವಾಪಸ್ ಕೊಡದೆ ಸಹೋದರರು ಮೋಸ ಮಾಡಿದ್ದಾರೆ ಎಂದು ಮನನೊಂದು ವ್ಯಕ್ತಿಯೊಬ್ಬರು ವಿಷ ಸೇವಿಸಿ ಮೃತಪಟ್ಟಿರುವ ಘಟನೆ ಶಿಕಾರಿಪುರ ತಾಲೂಕಿನ ಇನಾಂ ಅಗ್ರಹಾರ ಮುಚಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವಾನಂದಪ್ಪ ಬಾಳೇರ (60) ಮೃತಪಟ್ಟವರು. ಇವರ ಪತ್ನಿ ಎರಮ್ಮ (50) ನೀಡಿದ ದೂರಿನ ಮೇರೆಗೆ ಶಿವಾನಂದಪ್ಪ ಅವರ ನಾಲ್ವರು ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದೆ.

ಜಮೀನು ಪಾಲಿಗಾಗಿ ಕೌಟುಂಬಿಕ ಕಲಹ

ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಇನಾಂ ಅಗ್ರಹಾರ ಮುಚಡಿ ಗ್ರಾಮದ ಜಂಟಿ ಸರ್ವೆ ನಂ. 86/2ರಲ್ಲಿ ಒಂದು ಎಕರೆ ಜಮೀನು ಇತ್ತು. ಈ ಜಮೀನನ್ನು ಈ ಹಿಂದೆ ಕುಟುಂಬದವರು ಖರೀದಿಸಿದ್ದು, ಶಿವಾನಂದಪ್ಪ ಸೇರಿದಂತೆ ಐವರು ಸಹೋದರರಿಗೆ ಸೇರಬೇಕಾಗಿತ್ತು ಎನ್ನಲಾಗಿದೆ.

ಆದರೆ, ಶಿವಾನಂದಪ್ಪ ಅವರ ಹೆಸರನ್ನು ಕೈಬಿಟ್ಟು ಜಮೀನಿನ ಪಹಣಿ ಹಾಗೂ ಜಂಟಿ ಖಾತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿ ಶಿವಾನಂದಪ್ಪ ಅವರು ತಮ್ಮ ಸಹೋದರರ ಬಳಿ ಜಮೀನಿನಲ್ಲಿ ಪಾಲು ನೀಡುವಂತೆ ಕೇಳಿಕೊಂಡಿದ್ದರು. ಆದರೆ, ಸಹೋದರರು ಪಾಲು ನೀಡಲು ಒಪ್ಪಿರಲಿಲ್ಲ ಎನ್ನಲಾಗಿದೆ.

ಜಮೀನು ಖರೀದಿಗಾಗಿ ತಾವು ನೀಡಿದ್ದ 1.10 ಲಕ್ಷ ರೂ. ಹಣವನ್ನು ವಾಪಸ್ ನೀಡುವಂತೆ ಅಥವಾ ಜಮೀನಿನಲ್ಲಿ ಪಾಲು ಕೊಡುವಂತೆ ಶಿವಾನಂದಪ್ಪ ಕೇಳಿಕೊಂಡಿದ್ದರು. ಈ ವಿಚಾರವಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯಿತಿ ಕೂಡ ನಡೆದಿತ್ತು. ಹಣ ವಾಪಸ್ ನೀಡುವಂತೆ ಅಥವಾ ಜಮೀನಿನಲ್ಲಿ ಪಾಲು ಕೊಡುವಂತೆ ಪಂಚಾಯಿತಿಯಲ್ಲಿ ಸೂಚಿಸಲಾಗಿತ್ತು. ಆದರೆ, ಸಹೋದರರು ಇದಕ್ಕೆ ಒಪ್ಪದೆ ಪಂಚಾಯಿತಿಯಿಂದ ಹೊರನಡೆದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದಲ್ಲೂ ನಡೆಯುತ್ತಿದೆ ವ್ಯಾಜ್ಯ

ಕುಟುಂಬದ ಒಟ್ಟು ಆಸ್ತಿಯಲ್ಲಿ ಪಾಲು ಕೋರಿ ಶಿವಾನಂದಪ್ಪ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಇತ್ತ ಸಹೋದರರು ಜಮೀನಿನ ಪಾಲು ಅಥವಾ ತಾವು ನೀಡಿದ್ದ ಹಣವನ್ನು ವಾಪಸ್ ನೀಡದಿರುವುದರಿಂದ ಶಿವಾನಂದಪ್ಪ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ಈ ವಿಚಾರವಾಗಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಳ್ಳುತ್ತಿದ್ದ ಅವರನ್ನು ಕುಟುಂಬದವರು ಸಮಾಧಾನಪಡಿಸುತ್ತಿದ್ದರು ಎಂದು ಪತ್ನಿ ದೂರಿನಲ್ಲಿ ವಿವರಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ವಿಷ ಸೇವಿಸಿದ್ದ ಸ್ಥಿತಿಯಲ್ಲಿ ಪತ್ತೆ

ನವೆಂಬರ್ 13ರಂದು ಸಂಜೆ ಸುಮಾರು 6 ಗಂಟೆಗೆ ಮನೆಯಿಂದ ಹೊರಹೋದ ಶಿವಾನಂದಪ್ಪ ರಾತ್ರಿ 9 ಗಂಟೆಯಾದರೂ ಮನೆಗೆ ಮರಳಿರಲಿಲ್ಲ. ಕುಟುಂಬದವರು ಹುಡುಕಾಟ ನಡೆಸಿದಾಗ ಗ್ರಾಮದ ಬಸ್ ನಿಲ್ದಾಣದ ಒಳಭಾಗದಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಹತ್ತಿರ ಹೋಗಿ ಪರಿಶೀಲಿಸಿದಾಗ ವಿಷದ ವಾಸನೆ ಬಂದಿದ್ದು, ವಿಚಾರಿಸಿದಾಗ ಸಹೋದರರು ಜಮೀನಿನಲ್ಲಿ ಪಾಲು ನೀಡದಿರುವುದು ಹಾಗೂ ಖರೀದಿಗೆ ನೀಡಿದ್ದ ಹಣ ವಾಪಸ್ ಕೊಡದಿರುವುದರಿಂದ ಮನನೊಂದು ವಿಷ ಸೇವಿಸಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ತಕ್ಷಣ 108 ಆಂಬುಲೆನ್ಸ್ ಮೂಲಕ ಶಿರಾಳಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 13ರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಮೃತಪಟ್ಟಿದ್ದಾರೆ.

ಪತ್ನಿ ಎರಮ್ಮ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರು ಸಹೋದರರಾದ ಪರಮೇಶಪ್ಪ ಬಾಳೇರ, ಲೋಕಪ್ಪ, ಮಲ್ಲೇಶಪ್ಪ ಹೆಚ್.ವಿ. ಹಾಗೂ ಮಂಜಪ್ಪ ಎಸ್.ವಿ. ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು