Advertisement

ಶಿವಮೊಗ್ಗ: ಒಂಟಿ ವೃದ್ಧೆಯ ಚಿನ್ನದ ಓಲೆ ಕಳವುಗೆ ಯತ್ನ; ನೆರೆಮನೆಯ ವ್ಯಕ್ತಿ ಬಂಧನ-Shivamogga: Attempt to steal gold chain from single elderly woman; Neighbor arrested

 SUDDILIVE || SHIVAMOGGA

ಶಿವಮೊಗ್ಗ: ಒಂಟಿ ವೃದ್ಧೆಯ ಚಿನ್ನದ ಓಲೆ ಕಳವುಗೆ ಯತ್ನ; ನೆರೆಮನೆಯ ವ್ಯಕ್ತಿ ಬಂಧನ-Shivamogga: Attempt to steal gold chain from single elderly woman; Neighbor arrested 
Jewellery, theft


ಶಿವಮೊಗ್ಗ:
ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ಗುರಿಯಾಗಿಸಿಕೊಂಡು ಚಿನ್ನದ ಕಿವಿಯೋಲೆ ಕಳವು ಮಾಡಲು ಯತ್ನಿಸಿದ ಆರೋಪದ ಮೇಲೆ ನೆರೆಮನೆಯ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಜಗದೀಶ್ ಎಂದು ಗುರುತಿಸಲಾಗಿದ್ದು, ಘಟನೆ ನವೆಂಬರ್ 12ರಂದು ಶಿವಮೊಗ್ಗದ ರಾಜೇಂದ್ರ ನಗರದಲ್ಲಿ ನಡೆದಿದೆ.

ರಾಜೇಂದ್ರ ನಗರದ ನಿವಾಸಿ ಸಾವಿತ್ರಮ್ಮ ಎಂಬ ವೃದ್ಧೆ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನ.12ರಂದು ಬೆಳಗ್ಗೆ ಸುಮಾರು 10.30ರ ವೇಳೆಗೆ ಸಾವಿತ್ರಮ್ಮ ಅವರ ಅಕ್ಕನ ಮಗಳು ಅರ್ಚಿತ ಮನೆಗೆ ಬಂದಿದ್ದರು. ಈ ವೇಳೆ ಸಾವಿತ್ರಮ್ಮ ಡೋಲೋ ಮಾತ್ರೆ ತಂದುಕೊಡುವಂತೆ ಕೇಳಿದ್ದರಿಂದ ಅರ್ಚಿತ ಮೆಡಿಕಲ್ ಶಾಪ್‌ಗೆ ತೆರಳಿದ್ದರು.

ಮಾತ್ರೆ ತೆಗೆದುಕೊಂಡು ಬೆಳಗ್ಗೆ 11.30ರ ಸುಮಾರಿಗೆ ವಾಪಸ್ ಬಂದಾಗ ಮನೆಯ ಬಾಗಿಲಿಗೆ ಒಳಗಿನಿಂದ ಬೋಲ್ಟ್ ಹಾಕಲಾಗಿತ್ತು. ಹಲವು ಬಾರಿ ಬಾಗಿಲು ಬಡಿದರೂ ತೆರೆಯದಿದ್ದಾಗ ಕಿಟಕಿಯಿಂದ ಒಳಗೆ ನೋಡಿದ್ದಾರೆ. ಈ ವೇಳೆ ಸಾವಿತ್ರಮ್ಮ ಹಾಲ್‌ನ ಮಂಚದ ಮೇಲೆ ಮಲಗಿದ್ದು, ಅವರ ಬಳಿ ಅಪರಿಚಿತ ವ್ಯಕ್ತಿಯೊಬ್ಬ ನಿಂತಿರುವುದು ಕಂಡುಬಂದಿದೆ.

ತಕ್ಷಣವೇ ಕೂಗಿಕೊಂಡ ಅರ್ಚಿತ, ತನ್ನ ಪತಿ ಯಶವಂತ ಹಾಗೂ ಪಕ್ಕದ ಮನೆಯ ವಿನಾಯಕ ಅವರ ನೆರವಿನಿಂದ ಮನೆಯ ಬಾಗಿಲನ್ನು ಬಲವಂತವಾಗಿ ತೆರೆದು ಒಳಗೆ ಪ್ರವೇಶಿಸಿದ್ದಾರೆ. ಅಷ್ಟರಲ್ಲಾಗಲೇ ಮನೆಯೊಳಗಿದ್ದ ವ್ಯಕ್ತಿ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ.

ಮಂಚದ ಮೇಲೆ ಅಸ್ವಸ್ಥರಾಗಿ ಮಲಗಿದ್ದ ಸಾವಿತ್ರಮ್ಮ ಅವರನ್ನು ವಿಚಾರಿಸಿದಾಗ, ಅಪರಿಚಿತ ವ್ಯಕ್ತಿ ಮನೆಗೆ ನುಗ್ಗಿ ಪ್ರಸಾದ ಎಂದು ಹೇಳಿ ಬಲವಂತವಾಗಿ ಏನನ್ನೋ ತಿನ್ನಿಸಿದ್ದಾನೆ. ಬಳಿಕ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಬಿಚ್ಚಿಕೊಳ್ಳಲು ಯತ್ನಿಸಿದ್ದಾನೆ. ತಾನು ಕೂಗಿಕೊಳ್ಳಲು ಮುಂದಾದಾಗ ತಲೆದಿಂಬನ್ನು ಮುಖದ ಮೇಲೆ ಒತ್ತಿ ಉಸಿರುಗಟ್ಟಿಸಲು ಪ್ರಯತ್ನಿಸಿದ್ದಾನೆ ಎಂದು ಸಾವಿತ್ರಮ್ಮ ತಿಳಿಸಿದ್ದಾರೆ.

ಘಟನೆಯಿಂದ ಕಿವಿಯಲ್ಲಿ ನೋವು ಹಾಗೂ ತೀವ್ರ ಸುಸ್ತು ಕಾಣಿಸಿಕೊಂಡಿದ್ದರಿಂದ ಅವರನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವೃದ್ಧೆ ಅಸ್ವಸ್ಥರಾಗಿದ್ದ ಕಾರಣ ಆರಂಭದಲ್ಲಿ ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.

ಇನ್ನೊಂದೆಡೆ, ಆರೋಪಿಯು ಮನೆಯಿಂದ ಪರಾರಿಯಾಗುವ ವೇಳೆ ತನ್ನ ಮೊಬೈಲ್ ಫೋನ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದ ಎನ್ನಲಾಗಿದೆ. ಇದು ಆರೋಪಿಯ ಪತ್ತೆಗೆ ಪೊಲೀಸರಿಗೆ ಪ್ರಮುಖ ಸುಳಿವಾಗಿದೆ.

ಸಾಲ ತೀರಿಸಲು ಕೃತ್ಯಕ್ಕೆ ಯತ್ನ?

ಪೊಲೀಸ್ ಮೂಲಗಳ ಪ್ರಕಾರ, ಸಾವಿತ್ರಮ್ಮ ಅವರ ನೆರೆಮನೆಯವನಾದ ಜಗದೀಶ್ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಿಕೊಳ್ಳಲು ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ಗುರಿಯಾಗಿಸಿಕೊಂಡಿದ್ದ ಎನ್ನಲಾಗಿದೆ. ಚಿನ್ನದ ಓಲೆಗಳನ್ನು ಕಳವು ಮಾಡಲು ಯತ್ನಿಸಿದ ಸಂದರ್ಭದಲ್ಲಿ ಸಂಬಂಧಿಕರು ಮನೆಗೆ ಬಂದಿದ್ದರಿಂದ ಕೃತ್ಯ ಪೂರ್ಣಗೊಳಿಸಲಾಗದೆ ಪರಾರಿಯಾಗಿದ್ದಾನೆ.

ಈ ಪ್ರಕರಣದಲ್ಲಿ ಚಿನ್ನಾಭರಣ ಕಳುವಾಗಿಲ್ಲ. ಕಳವು ಮಾಡಲು ಯತ್ನ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂಬಂಧ ಸಾವಿತ್ರಮ್ಮ ಅವರ ಕುಟುಂಬದವರು ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Shivamogga: Attempt to steal gold chain from single elderly woman; Neighbor arrested 

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು