SUDDILIVE || SHIVAMOGGA
ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ ಆರೋಪ: ವಿಡಿಯೋ ಇಟ್ಟುಕೊಂಡು ಬೆದರಿಕೆ, ಜಾತಿ ನಿಂದನೆ; 57 ವರ್ಷದ ವ್ಯಕ್ತಿ ವಿರುದ್ಧ ದೂರು-Allegations of repeated rape of a young woman: Threats using a video and caste-based abuse; complaint filed against a 57-year-old man.
ಶಿವಮೊಗ್ಗ: ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಘಟನೆಯ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಹಲವು ವರ್ಷಗಳಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ 22 ವರ್ಷದ ಯುವತಿಯೊಬ್ಬರು 57 ವರ್ಷದ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಚಿಕ್ಕಮಳಲಿ ಗ್ರಾಮದ ಜಗದೀಶ್ (57) ಎಂಬಾತನ ವಿರುದ್ಧ ಯುವತಿ ದೂರು ನೀಡಿದ್ದಾರೆ. ಯುವತಿಯ ತಂದೆ-ತಾಯಿ ಆತನ ತೋಟ ಹಾಗೂ ಫಾರಂ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದರು.
ಯುವತಿ ಕೆಲಸದ ನಿಮಿತ್ತ ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿರುವ ಭುವನ್ ಇಂಡಸ್ಟ್ರಿಗೆ ಬಂದಿದ್ದ ಸಂದರ್ಭದಲ್ಲಿ, ಒಂದರಿಂದ ಎರಡು ವರ್ಷಗಳ ಹಿಂದೆ ಕಚೇರಿಯ ಪಕ್ಕದ ಕೋಣೆಗೆ ಕರೆದೊಯ್ದು ಜಗದೀಶ್ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯವನ್ನು ವಿಡಿಯೋ ಮಾಡಿಕೊಂಡು, ವಿಷಯವನ್ನು ಯಾರಿಗಾದರೂ ತಿಳಿಸಿದರೆ ತಂದೆ-ತಾಯಿಯನ್ನು ಕೆಲಸದಿಂದ ತೆಗೆದುಹಾಕಿ ಕುಟುಂಬವನ್ನು ಬೀದಿಗೆ ತಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹಾಗೂ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವಿಡಿಯೋವನ್ನು ಇಟ್ಟುಕೊಂಡು ಯುವತಿಯನ್ನು ನಿರಂತರವಾಗಿ ಬ್ಲ್ಯಾಕ್ಮೇಲ್ ಮಾಡಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಯುವತಿ ಆರೋಪಿ ಜಗದೀಶನಿಗೆ ಮೊಮ್ಮಗಳ ವಯಸ್ಸಿನವಳಾಗಿದ್ದು, ಇಂತಹ ಕೃತ್ಯ ಮಾಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಆರೋಪಿ ಬಿಡದೆ ದೌರ್ಜನ್ಯ ಮುಂದುವರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಕರೆದಾಗ ಹೋಗಲು ನಿರಾಕರಿಸಿದ ಸಂದರ್ಭದಲ್ಲಿ ಯುವತಿಯನ್ನು ಜಾತಿ ಹೆಸರಿನಿಂದ ಅವಾಚ್ಯವಾಗಿ ನಿಂದಿಸುತ್ತಿದ್ದ. 'ನೀವು ನಮ್ಮ ಮೇಲ್ಜಾತಿಯವರಿಗೆ ಸುಖ ನೀಡಲು ಹುಟ್ಟಿರುವವರು' ಎಂಬ ಅರ್ಥದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಯೂ ಜಾತಿ ನಿಂದನೆ ಮಾಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾರೆ.
ಶಿವಮೊಗ್ಗದ ವಿವಿಧ ರೆಸಾರ್ಟ್ಗಳು ಹಾಗೂ ಹೋಟೆಲ್ಗಳಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಮದ್ಯಪಾನ ಮಾಡಿಸಿ ಅತ್ಯಾಚಾರ ಎಸಗಿದ್ದಾನೆ. ಇದರಿಂದಾಗಿ ಎರಡು ಬಾರಿ ಯುವತಿ ಗರ್ಭಿಣಿಯಾಗಿದ್ದು, ಆ ಸಂದರ್ಭದಲ್ಲಿ ಆರೋಪಿ ಗರ್ಭಪಾತದ ಔಷಧಿಗಳನ್ನು ನೀಡಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಗಸ್ಟ್ 27ರಂದು ಮತ್ತೆ ಅತ್ಯಾಚಾರ ಆರೋಪ
2026ರ ಆಗಸ್ಟ್ 27ರಂದು ಯುವತಿಗೆ ಬೆದರಿಕೆ ಹಾಕಿ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಲ್ನಾಡ್ ರೆಸಾರ್ಟ್ಗೆ ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮಧ್ಯರಾತ್ರಿ ಸುಮಾರು 12ರಿಂದ 12.30ರ ವೇಳೆಗೆ ಮತ್ತೆ ಶಿವಮೊಗ್ಗದ ಭುವನ್ ಇಂಡಸ್ಟ್ರಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಮದ್ಯಪಾನ ಮಾಡಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸದ್ಯ ತಾನು ಮೂರು ತಿಂಗಳ ಗರ್ಭಿಣಿಯಾಗಿದ್ದು, ಈ ಗರ್ಭಧಾರಣೆಗೆ ಜಗದೀಶನೇ ಕಾರಣ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಮತ್ತೆ ಗರ್ಭಪಾತದ ಔಷಧಿಗಳನ್ನು ತಂದು ಸೇವಿಸುವಂತೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.
ತನ್ನ ಮೇಲೆ ಅತ್ಯಾಚಾರ ಎಸಗಿರುವುದು, ಜಾತಿ ನಿಂದನೆ ಮಾಡಿರುವುದು ಹಾಗೂ ಜೀವ ಬೆದರಿಕೆ ಹಾಕಿರುವ ಆರೋಪದಡಿ ಜಗದೀಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ಪೊಲೀಸರಿಗೆ ಗಣಕೀಕೃತ ದೂರು ನೀಡಿದ್ದಾರೆ.
ಬಲತ್ಕಾರ ಹಾಗೂ ಜಾತಿ ನಿಂದನೆ ಪ್ರಕರಣ ಶಿವಮೊಗ್ಗದ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ದಾಖಲಾಗಿ ಇವತ್ತಿ 11 ದಿನವಾದರೂ ಆರೋಪಿಯನ್ನ ಇನ್ನೂ ಬಂಧಿಸಿಲ್ಲ ಎಂದು ನೊಂದ ಯುವತಿ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ.



0 ಕಾಮೆಂಟ್ಗಳು