SUDDILIVE || SHIVAMOGGA
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2027: ಅರ್ಜಿ ಸಲ್ಲಿಕೆಗೆ ಜಿಲ್ಲಾಧಿಕಾರಿ ಕರೆ-Special Comprehensive Revision of Voter List-2027: District Collector calls for application submission
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ 01-01-2027 ನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ, ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಎಸ್ಆರ್-2027) ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಅರ್ಹ ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ 01-01-2027ಕ್ಕೆ 18 ವರ್ಷ ಪೂರ್ಣಗೊಳಿಸುವ ಯುವಕರು ಮತ್ತು ಇದುವರೆಗೆ ಪಟ್ಟಿಯಲ್ಲಿ ಹೆಸರು ನೋಂದಾಯಿಸದ ಅರ್ಹ ನಾಗರಿಕರು ಹೆಸರು ಸೇರ್ಪಡೆ ಮಾಡಬಹುದು.
2027ರ ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ರಂದು 18 ವರ್ಷ ಪೂರ್ಣಗೊಳಿಸಲಿರುವ ಯುವ ಮತದಾರರಿಂದಲೂ ಮುಂಗಡ ಅರ್ಜಿಗಳನ್ನು ಸ್ವೀಕರಿಸಲಾಗುವುದು.
ಪರಿಷ್ಕರಣೆಯ ಪ್ರಮುಖ ವೇಳಾಪಟ್ಟಿ:
ಮತಗಟ್ಟೆಗಳ ಮರುಹೊಂದಾಣಿಕೆ: ನವೆಂಬರ್ 23, 2026, ಕರಡು ಮತದಾರರ ಪಟ್ಟಿ ಪ್ರಕಟಣೆ: ಡಿಸೆಂಬರ್ 1, 2026, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ಅವಧಿ: ಡಿಸೆಂಬರ್ 1 ರಿಂದ ಡಿಸೆಂಬರ್ 31, 2026, ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ: ಜನವರಿ 14, 2027 ರೊಳಗೆ ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಜನವರಿ 20, 2027 ಆಗಿದೆ.
ಅರ್ಜಿ ಸಲ್ಲಿಕೆ ಹೇಗೆ? (ಪ್ರಮುಖ ನಮೂನೆಗಳು)
ಮತದಾರರು voter.eci.gov.in ಪೋರ್ಟಲ್ ಅಥವಾ ECINET ಆ್ಯಪ್ ಮೂಲಕ ಆಧಾರ್ ಆಧಾರಿತ ಇ-ಸೈನ್ ಬಳಸಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು:
ನಮೂನೆ-6: ಹೊಸದಾಗಿ ಹೆಸರು ಸೇರ್ಪಡೆಗಾಗಿ.
ನಮೂನೆ-6ಎ: ಅನಿವಾಸಿ ಭಾರತೀಯ ಮತದಾರರ ನೋಂದಣಿಗಾಗಿ.
ನಮೂನೆ-7: ಹೆಸರು ತೆಗೆದುಹಾಕಲು ಅಥವಾ ಸೇರ್ಪಡೆಗೆ ಆಕ್ಷೇಪಣೆ ಸಲ್ಲಿಸಲು.
ನಮೂನೆ-8: ವಿಳಾಸ ಬದಲಾವಣೆ, ತಿದ್ದುಪಡಿ, ಬದಲಿ ಗುರುತಿನ ಚೀಟಿ ಹಾಗೂ ಅಂಗವೈಕಲ್ಯ ಗುರುತಿಸುವಿಕೆಗಾಗಿ.
ವಿಶೇಷ ಅಭಿಯಾನ ಮತ್ತು ಸಹಾಯ ಕೇಂದ್ರ:
ವಲಸೆ ಕಾರ್ಮಿಕರು, ನಿರಾಶ್ರಿತರು ಹಾಗೂ ದುರ್ಬಲ ವರ್ಗದವರ ಅನುಕೂಲಕ್ಕಾಗಿ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗುವುದು. ಅಲ್ಲದೆ, ಕಾರ್ಮಿಕರ ಕಾಲೋನಿಗಳು ಮತ್ತು ರಾತ್ರಿ ಆಶ್ರಯ ತಾಣಗಳಲ್ಲಿ ವಿಶೇಷ ನೋಂದಣಿ ಶಿಬಿರಗಳನ್ನು ಆಯೋಜಿಸಲಾಗುವುದು.
ಸಾರ್ವಜನಿಕರು ತಮ್ಮ ಕುಟುಂಬದ ಅರ್ಹ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡು, ಯಾವುದೇ ಹೆಸರು ಬಿಟ್ಟುಹೋಗದಂತೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
Special Comprehensive Revision of Voter List-2027: District Collector calls for application submission



0 ಕಾಮೆಂಟ್ಗಳು