SUDDILIVE || SHIKARIPURA
ಶಿಕಾರಿಪುರ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಆರೋಪಿಗಳಿಗೆ ತಲಾ 20 ವರ್ಷ ಕಠಿಣ ಶಿಕ್ಷೆ- Shikaripura: Sexual assault case against minor girl; Three accused get 20 years rigorous imprisonment each
ಶಿವಮೊಗ್ಗ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಮನೆಯಿಂದ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಹಾಗೂ ಆತನಿಗೆ ಸಹಕರಿಸಿದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಪ್ರಕರಣದಲ್ಲಿ 28 ವರ್ಷದ ಯುವಕನೊಬ್ಬ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಮನೆಯಿಂದ ಕರೆದುಕೊಂಡು ಹೋಗಿದ್ದನು. ಈ ಕೃತ್ಯಕ್ಕೆ 33 ವರ್ಷದ ಮತ್ತೊಬ್ಬ ವ್ಯಕ್ತಿ ಕಾರು ಒದಗಿಸಿ ಸಹಕರಿಸಿದ್ದರೆ, 28 ವರ್ಷದ ಮೂರನೇ ವ್ಯಕ್ತಿ ತನ್ನ ಜಾಗದಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿದ್ದನು.
ಬಳಿಕ ಮೊದಲನೇ ಆರೋಪಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಮೂವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಕೆ
ಪ್ರಕರಣದ ತನಿಖೆ ನಡೆಸಿದ ಶಿಕಾರಿಪುರ ಟೌನ್ ಪೊಲೀಸ್ ವೃತ್ತ ನಿರೀಕ್ಷಕ ರುದ್ರೇಶ್ ಕೆ.ಪಿ. ಅವರು ತನಿಖೆ ಪೂರ್ಣಗೊಳಿಸಿ, ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಪ್ರಮುಖ ಆರೋಪಿ ಹಾಗೂ ಆತನಿಗೆ ಸಹಕರಿಸಿದ ಇಬ್ಬರು ಸೇರಿದಂತೆ ಮೂವರ ವಿರುದ್ಧ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1)ಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀಧರ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ನಿಂಗನಗೌಡ ಭ. ಪಾಟೀಲ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೂ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಜೊತೆಗೆ ಮೂವರು ಆರೋಪಿಗಳು ಒಟ್ಟು 3,29,000 ರೂ. ದಂಡ ಪಾವತಿಸುವಂತೆ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ 3 ಲಕ್ಷ ರೂ.ಗಳನ್ನು ನೊಂದ ಬಾಲಕಿಗೆ ನೀಡಲು ಹಾಗೂ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 4 ಲಕ್ಷ ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.
Shikaripura: Sexual assault case against minor girl; Three accused get 20 years rigorous imprisonment each

ಕಾಮೆಂಟ್ ಪೋಸ್ಟ್ ಮಾಡಿ