SUDDILIVE || SHIVAMOGGA
ಲಂಗ್ಡಾ ಅಂಡ್ ಬಬ್ಲು ಬಂಧನ-Langda and Bablu arrested
ಶಿವಮೊಗ್ಗ: ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪಂಪ್ ಸೆಟ್ ಮೋಟಾರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಟ್ಟು ₹4,23,000 ಮೌಲ್ಯದ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಶಿವಮೊಗ್ಗದ ಅಶೋಕ ನಗರದ ನಿವಾಸಿ ಮಹಮದ್ ಅಫ್ಜಲ್ ಅಲಿಯಾಸ್ ಲಂಗ್ಡ (19) ಹಾಗೂ ಮಿಳ್ಳಘಟ್ಟದ ನಿವಾಸಿ ಮನ್ಸೂರ್ ಅಹಮ್ಮದ್ ಅಲಿಯಾಸ್ ಬಬ್ಲು (27) ಎಂದು ಗುರುತಿಸಲಾಗಿದೆ.
ಹರಕೆರೆ ಗ್ರಾಮದಲ್ಲಿ ಪಂಪ್ ಸೆಟ್ ಮೋಟಾರ್ ಕಳ್ಳತನ
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹರಕೆರೆ ಗ್ರಾಮದ ಕಾನೆಹಳ್ಳದ ಪಕ್ಕದಲ್ಲಿರುವ ಮೋಟಾರ್ ಮನೆಯಿಂದ ಪಂಪ್ ಸೆಟ್ ಮೋಟಾರ್ ಕಳ್ಳತನವಾಗಿತ್ತು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 683/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 331(3), 331(4) ಮತ್ತು 305ರ ಪ್ರಕಾರ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳುವಾದ ಮಾಲು ಹಾಗೂ ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.
ಐದು ಬೈಕ್ ಸೇರಿದಂತೆ ಹಲವು ಪ್ರಕರಣಗಳ ಪತ್ತೆ
ಪೊಲೀಸ್ ತನಿಖಾ ತಂಡವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರಿಂದ ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಂದ ಅಂದಾಜು ₹4 ಲಕ್ಷ ಮೌಲ್ಯದ ಡ್ಯೂಕ್, ಎಕ್ಸ್ಪಲ್ಸ್, ಫ್ಯಾಷನ್ ಪ್ರೊ, ಡಿಸ್ಕವರಿ ಮತ್ತು ಸ್ಪ್ಲೆಂಡರ್ ಬೈಕ್ಗಳು, ₹5,000 ಮೌಲ್ಯದ ಪಂಪ್ ಸೆಟ್ ಮೋಟಾರ್ ಹಾಗೂ ₹18,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಒಟ್ಟು ₹4,23,000 ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ಬಂಧನದಿಂದ ತುಂಗಾನಗರ ಪೊಲೀಸ್ ಠಾಣೆಯ ಒಂದು ಬೈಕ್ ಕಳ್ಳತನ ಪ್ರಕರಣ, ಒಂದು ಮನೆ ಕಳ್ಳತನ ಪ್ರಕರಣ ಹಾಗೂ ಎರಡು ಮೋಟಾರ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಇದರ ಜೊತೆಗೆ ಅರಸಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಐದು ಬೈಕ್ಗಳನ್ನೂ ಪತ್ತೆಹಚ್ಚಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ ಎ.ಜಿ. ಅವರ ಮೇಲ್ವಿಚಾರಣೆಯಲ್ಲಿ ಹಾಗೂ ಶಿವಮೊಗ್ಗ ಎ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶೀಲವಂತ್ ಅವರ ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕೆ.ಟಿ. ಗುರುರಾಜ್ ನೇತೃತ್ವದಲ್ಲಿ ಪಿಎಸ್ಐ ಎನ್. ಮಂಜುನಾಥ್, ಹೆಡ್ ಕಾನ್ಸ್ಟೇಬಲ್ ಕಿರಣ್ ಮೋರೆ ಹಾಗೂ ಪೊಲೀಸ್ ಸಿಬ್ಬಂದಿಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ್, ಹರೀಶ್, ನಿತಿನ್ ಕೆ., ತಮ್ಮಣ್ಣ ಜಂಬಗಿ ಮತ್ತು ಪ್ರಶಾಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ ತನಿಖಾ ತಂಡದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
Langda and Bablu arrested



0 ಕಾಮೆಂಟ್ಗಳು