SUDDILIVE || SHIVAMOGGA
ಮಾರಿ ಹಬ್ಬಕ್ಕೆ ವಾಹನಗಳ ಮಾರ್ಗ ಬದಲಾವಣೆ-Vehicle routes changed for Mari festival
ನಗರದ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವವು ಫೆಬ್ರವರಿ 24 ರಿಂದ 28 ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಈ ಸಂದರ್ಭದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಸಂಚಾರ ಮಾರ್ಗಗಳಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಆದೇಶಿಸಿದ್ದಾರೆ.
ಜಾತ್ರಾ ಮಹೋತ್ಸವದ ಅಂಗವಾಗಿ ರಾಜಬೀದಿ ಉತ್ಸವ, ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದರಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದೇವಸ್ಥಾನದ ಸುತ್ತಮುತ್ತಲ 500 ಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಫೆಬ್ರವರಿ 24 ರಿಂದ 28 ರವರೆಗೆ ಹೊಳೆಬಸ್ ಸ್ಟಾಪ್‌ನಿಂದ ಬೆಕ್ಕಿನ ಕಲ್ಮಠದ ಮೂಲಕ ರಾಮಣ್ಣ ಶ್ರೇಷ್ಠಿ ಪಾರ್ಕ್ ವರೆಗೆ ವಾಹನ ಸಂಚಾರ ಮತ್ತು ನಿಲುಗಡೆಗೆ ಅವಕಾಶವಿರುವುದಿಲ್ಲ.
ಫೆಬ್ರವರಿ 24 ರಂದು ಮುಂಜಾನೆ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಗಾಂಧಿ ಬಜಾರ್ ಹಾಗೂ ಶಿವಪ್ಪ ನಾಯಕ ಸರ್ಕಲ್ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಭಾರಿ ವಾಹನಗಳಿಗೆ ಮಾರ್ಗ ಬದಲಾವಣೆ
ಬೆಂಗಳೂರು, ಭದ್ರಾವತಿ ಮತ್ತು ಚಿತ್ರದುರ್ಗ ಕಡೆಯಿಂದ ಬರುವ ಭಾರಿ ವಾಹನಗಳು ಹಾಗೂ ಬಸ್‌ಗಳು ಎಂಆರ್‌ಎಸ್ ಸರ್ಕಲ್ ಬೈಪಾಸ್ ಮೂಲಕ ನಗರ ಪ್ರವೇಶಿಸಬೇಕು. ಸವಳಂಗ ಮತ್ತು ಶಿಕಾರಿಪುರ ಕಡೆಯಿಂದ ಬರುವ ವಾಹನಗಳು ಆಲ್ಕೊಳ ಹಾಗೂ ಸಾಗರ ರಸ್ತೆ ಮೂಲಕ ಸಂಚರಿಸಲು ಸೂಚಿಸಲಾಗಿದೆ.
ಈ ಸಂಚಾರ ನಿಯಮಗಳು ಪೋಲಿಸ್ ವಾಹನಗಳಿಗೆ ಆಂಬುಲೆನ್ಸ್ ಇನ್ನಿತರೆ ತುರ್ತು ಸೇವೆಗಳ ವಾಹನನಗಳಿಗೆ ಅನ್ವಯಿಸುವುದಿಲ್ಲವೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Vehicle routes changed for Mari festival
